Advertisement

ನೀವು ರೆಸಾರ್ಟ್‌ಗೆ ಹೋಗಿದ್ದೇಕೆ?

06:37 AM Jan 20, 2019 | |

ಬೆಂಗಳೂರು: ಬಿಜೆಪಿ ಶಾಸಕರ ರೆಸಾರ್ಟ್‌ ವಾಸ್ತವ್ಯದ ಬಗ್ಗೆ ಕಾಂಗ್ರೆಸ್‌ನವರು ಟೀಕಿಸುತ್ತಿದ್ದರು. ನಮ್ಮ ಶಾಸಕರ ರಕ್ಷಣೆಗೆ ನಾವು ರೆಸಾರ್ಟ್‌ಗೆ ಕರೆದೊಯ್ದಿದ್ದೆವು. ಯಾವುದೇ ಭಯವಿಲ್ಲದ ಕಾಂಗ್ರೆಸ್‌ಗೆ ರೆಸಾರ್ಟ್‌ ರಾಜಕಾರಣವೇಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪ್ರಶ್ನಿಸಿದರು.

Advertisement

ನಗರದಲ್ಲಿ ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಜನರ ಬಗ್ಗೆ ಕಾಳಜಿಯಿರುವ ಕಾಂಗ್ರೆಸ್‌ನವರು ರೆಸಾರ್ಟ್‌ಗೆ ಹೋಗಿದ್ದಾದರೂ ಏಕೆ. ಯಾವುದೇ ಅಸಮಾಧಾನವಿಲ್ಲದಿದ್ದರೆ ಕಾಂಗ್ರೆಸ್‌ ಶಾಸಕರು ಮುಂಬೈಗೆ ಹೋಗಿದ್ದೇಕೆ. ಬಿಜೆಪಿ ಕಾದು ನೋಡುವ ತಂತ್ರ ಅನುಸರಿಸುತ್ತದೆ. ನಾವು ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ. ಪ್ರತಿಪಕ್ಷದಲ್ಲಿ ಕುರಿತು ಕೆಲಸ ಮಾಡುತ್ತೇವೆ. ಕಾಂಗ್ರೆಸ್‌, ಜೆಡಿಎಸ್‌ನವರಿಗೆ ಭಯವೇಕೆ ಎಂದು ಹೇಳಿದರು.

ಬರ ಅಧ್ಯಯನ ಪ್ರವಾಸ: ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಮಾಜಿ ಸಚಿವ ಬಿ.ಎನ್‌.ಬಚ್ಚೇಗೌಡ, ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು, ಮುಖಂಡರಾದ ಜಯದೇವ್‌, ಮರಿಸ್ವಾಮಿ, ವೆಂಕಟಮುನಿಯಪ್ಪ  ಇತರರು ಸೋಮವಾರದಿಂದ ಎರಡು ಬರಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದು, ವಿವರ ಹೀಗಿದೆ.

ಸೋಮವಾರ ಬೆಳಗ್ಗೆ 11ಕ್ಕೆ ಮುಳಬಾಗಿಲಿನಲ್ಲಿ ಕುರುಡುಮಲೈ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ. ಮಧ್ಯಾಹ್ನ 12ಕ್ಕೆ ಕೋಲಾರ ಬರಪೀಡಿತ ಪ್ರದೇಶಗಳ ವೀಕ್ಷಣೆ. ಮಧ್ಯಾಹ್ನ 1 ಗಂಟೆಗೆ ಕೋಲಾರ ಜಿಲ್ಲಾಧಿಕಾರಿಯೊಂದಿಗೆ ಸಭೆ. ಸಂಜೆ 4ಕ್ಕೆ  ಚಿಕ್ಕಬಳ್ಳಾಪುರ ಜಿಲ್ಲೆ ಬರಪೀಡಿತ ಪ್ರದೇಶಗಳ ವೀಕ್ಷಣೆ. ಸಂಜೆ 5ಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ.

ಮಂಗಳವಾರ ಮಧ್ಯಾಹ್ನ 12ಕ್ಕೆ ಚಾಮರಾಜನಗರ ಜಿಲ್ಲೆಯ ಬರಪೀಡಿತ ಪ್ರದೇಶಗಳ ವೀಕ್ಷಣೆ. ಮಧ್ಯಾಹ್ನ 1ಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿಯೊಂದಿಗೆ ಸಭೆ. ಸಂಜೆ 4ಕ್ಕೆ ಮೈಸೂರು ಜಿಲ್ಲೆಯ ನಂಜನಗೂಡು ಹಾಗೂ ಬರಪೀಡಿತ ಪ್ರದೇಶಗಳ ವೀಕ್ಷಣೆ.

Advertisement

ಮಾತು ಸಂಸ್ಕೃತಿ ತೋರಿಸುತ್ತದೆ: “ಬಿಜೆಪಿಯವರದ್ದು ಲಫ‌ಂಗ ರಾಜಕಾರಣ’ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್‌ ಸದಸ್ಯ, ಬಿಜೆಪಿಯ ಎನ್‌.ರವಿಕುಮಾರ್‌, ಇದು ಸಿದ್ದರಾಮಯ್ಯ ಅವರ ನಾಗರಿಕತೆಯನ್ನು ತೋರಿಸುತ್ತದೆ. ಅವರ ಹೇಳಿಕೆ ಸಂಸ್ಕೃತಿಗೆ ಧಕ್ಕೆ ತರುವಂತಹದ್ದು. ಕಾಂಗ್ರೆಸ್‌ನಲ್ಲಿ ಅಸಮಾಧಾನ ಇರುವುದು ಸತ್ಯ. ಈ ಸರ್ಕಾರ ಹೆಚ್ಚು ದಿನ ಇರುವುದಿಲ್ಲ. ಸದ್ಯಕ್ಕೆ ನಾವು ರಾಜ್ಯಪಾಲರನ್ನು ಭೇಟಿಯಾಗುವುದಿಲ್ಲ. ಒಂದೆರಡು ದಿನ ರಾಜಕೀಯ ಬೆಳವಣಿಗೆ ನೋಡಿಕೊಂಡು ರಾಜ್ಯಪಾಲರ ಭೇಟಿ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿದರು.

ಶ್ರೀಗಳ ಬಗ್ಗೆ ಮಾಹಿತಿ ಪಡೆದ ರಾಜನಾಥ ಸಿಂಗ್‌: ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರನ್ನು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಶನಿವಾರ ಬಿ.ಎಸ್‌.ಯಡಿಯೂರಪ್ಪ ಬರ ಮಾಡಿಕೊಂಡರು. ಈ ಸಂದರ್ಭದಲ್ಲಿ ಕೆಲ ನಿಮಿಷ ಪ್ರಸಕ್ತ ರಾಜಕೀಯ ಬೆಳವಣಿಗೆ ಹಾಗೂ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ಆರೋಗ್ಯ ಸ್ಥಿತಿಗತಿ ಬಗ್ಗೆಯೂ ರಾಜನಾಥ ಸಿಂಗ್‌ ಮಾಹಿತಿ ಪಡೆದು ಎನ್ನಲಾಗಿದೆ.

ಕಾಂಗ್ರೆಸ್‌-ಜೆಡಿಎಸ್‌ ರೆಸಾರ್ಟ್‌ ಸರ್ಕಾರ: ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರ್ಕಾರ ರೆಸಾರ್ಟ್‌ ಸರ್ಕಾರವಾಗಿದೆ. ವಿಧಾನಸಭೆಯಲ್ಲಿ ಯಾವುದೇ ಕೆಲಸವಾಗುತ್ತಿಲ್ಲ. ಅಧಿಕಾರ ದುರುಪಯೋಗಪಡಿಸಿಕೊಂಡು ಅವರು ನಮ್ಮ ಶಾಸಕರ ಬೆನ್ನತ್ತಿದ್ದರು. ಹಾಗಾಗಿ ನಾವು ರೆಸಾರ್ಟ್‌ಗೆ ಹೋದಾಗ ನಮ್ಮನ್ನು ಟೀಕಿಸಿದರು. ಈಗ ಅವರೇನು ಮಾಡುತ್ತಿದ್ದಾರೆ.

ರೆಸಾರ್ಟ್‌ನಲ್ಲಿ ಕುಳಿತು ಬರದ ಚರ್ಚೆ ಮಾಡುತ್ತಾರಂತೆ. ಮೈತ್ರಿ ಸರ್ಕಾರ ಈ ಮಟ್ಟಕ್ಕೆ ಇಳಿದಿದೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ಬರಗಾಲ ಹೋಗಲಾಡಿಸುವ ಭ್ರಮೆಯಲ್ಲಿ ಸರ್ಕಾರವಿದೆ. ಆದರೆ, ಬಿಜೆಪಿಯ ಎಲ್ಲಾ ಶಾಸಕರು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಆಗ ಅಲ್ಲಿ ಭೂಕಂಪವಾಗಲಿದೆ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ನೀಡಬೇಕೆಂಬ ವಿಚಾರ ಕುರಿತಂತೆ ಪ್ರಧಾನಿಯವರ ಗಮನಕ್ಕೆ ತರಲಾಗಿದೆ. ಅಗತ್ಯಬಿದ್ದರೆ ಮತ್ತೂಮ್ಮೆ ಸಂಸದರೆಲ್ಲಾ ಪ್ರಧಾನಿಯವರನ್ನು ಭೇಟಿಯಾಗಿ ಮತ್ತೂಮ್ಮೆ ಮನವಿ ಮಾಡಲಾಗುವುದು. ಈ ವಿಚಾರದಲ್ಲಿ ಬಿಜೆಪಿಯಿಂದ ಸರ್ವ ಪ್ರಯತ್ನ ನಡೆಯಲಿದೆ.
-ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಬಿಜೆಪಿ ಶಾಸಕ ಸುಭಾಷ್‌ ಗುತ್ತೇದಾರ್‌ ಅವರನ್ನು ಕರೆಸಿ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ತಮ್ಮ ಪಕ್ಷಕ್ಕೆ ಬಂದರೆ ಸಚಿವರನ್ನಾಗಿ ಮಾಡುವ ಆಫ‌ರ್‌ ನೀಡಿದ್ದರು. ಈ ವಿಚಾರ ತಿಳಿದು, ಶಾಸಕರೆಲ್ಲಾ ಒಟ್ಟಿಗಿದ್ದೆವು. ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿಯಾಗುತ್ತಾರೆ.
-ಕೆ.ಎಸ್‌.ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next