ಬಿಹಾರ: ಎಕ್ಸಿಟ್ ಪೋಲ್ ಗಳ ಲೆಕ್ಕಾಚಾರವೆಲ್ಲಾ ತಲೆಕೆಳಗಾಗಿ ಈ ಬಾರಿ ನಿತೀಶ್ ನೇತೃತ್ವದ ಎನ್ ಡಿಎ ಸರಳ ಬಹುಮತ ಪಡೆದಿದೆ. ಮೂರು ಹಂತದ ಮತದಾನದ ಮುಕ್ತಾಯದ ವೇಳೆಗೆ ಬಂದ ಚುನಾವಣೋತ್ತರ ಸಮೀಕ್ಷೆಗಳು ಆರ್ ಜೆಡಿಯ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಾಬಂಧನ್ ಭರ್ಜರಿ ಜಯಗಳಿಸುತ್ತವೆ ಎಂದಿದ್ದವು. ಹಾಗಾದರೇ ಎಕ್ಸಿಟ್ ಪೋಲ್ ಗಳ ಭವಿಷ್ಯ ಸುಳ್ಳಾಗಿರುವುದೇಕೆ ?
ಚುನಾವಣೋತ್ತರ ಸಮೀಕ್ಷೆಗಳು ವಿವಿಧ ಪಕ್ಷಗಳ ಅಭ್ಯರ್ಥಿಗಳಿಗೆ, ಮಾತ್ರವಲ್ಲದೆ ಬೆಂಬಲಿಗರಿಗೂ ನುಂಗಲಾರದ ತುತ್ತಾಗಿದ್ದವು. ಹಲವು ಸಮೀಕ್ಷೆಗಳು ಮಹಾಘಟಬಂಧನ್ ಸ್ಪಷ್ಟ ಬಹುಮತ ಪಡೆಯುತ್ತದೆಯೆಂದು ತಿಳಿಸಿದ್ದವು. ಅದಾಗ್ಯೂ ಮಹಾಘಟಬಂಧನ್ ತೀವ್ರ ಪೈಪೋಟಿ ನೀಡಿ 110 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಪ್ರಮುಖವಾಗಿ ಸಮೀಕ್ಷೆಗಳು ಮತ ಹಂಚಿಕೆಯಲ್ಲಿ ಬಂದ ಅಂಕಿ ಅಂಶಗಳನ್ನು ಅಳೆದು, ಅದನ್ನು ಗೆದ್ದ ಸ್ಥಾನಗಳಾಗಿ ಪರಿವರ್ತಿಸುತ್ತದೆ. ಸಾಮಾನ್ಯವಾಗಿ ಇವೇ ತಪ್ಪಾದ ಫಲಿತಾಂಶಗಳಿಗೆ ಕಾರಣವಾಗುತ್ತದೆ.
ಇದನ್ನೂ ಓದಿ: ವಿಶ್ವದಾಖಲೆ ಬರೆದ ಟೊರ್ನಾಡೋಸ್: 127 ಮೀ. ಬೆಂಕಿ ಸುರಂಗದಲ್ಲಿ ಸಾಗಿದ ಕ್ಯಾ.ಶಿವಂ ಸಿಂಗ್
ಬಿಹಾರದ ಚುನಾವಣೋತ್ತರ ಸಮೀಕ್ಷೆ ನಡೆಸಿದ ವಿವಿಧ ಸಂಸ್ಥೆಗಳು, ಮತ ಹಂಚಿಕೆಯನ್ನು ಅರ್ಥೈಸಿಕೊಳ್ಳುವಲ್ಲಿ ಎಡವಿದ್ದವು. ಪ್ರಮುಖವಾಗಿ ಟುಡೇಸ್ ಚಾಣಕ್ಯ ಪೋಲಿಂಗ್ ಎಜೆನ್ಸಿ ಮಹಾಘಟಾಬಂಧನ್, 44% ಮತ ಹಂಚಿಕೆಯಲ್ಲಿ 180 ಸೀಟು ಗೆಲ್ಲುತ್ತದೆಯೆಂದು ಅಂದಾಜಿಸಿತ್ತು. ಎನ್ ಡಿ ಎ ಮೈತ್ರಿಕೂಟ ಶೇ. 34% ಮತಹಂಚಿಕೆಯನ್ನು ಪಡೆಯುತ್ತದೆಯೆಂದು ತಿಳಿಸಿತ್ತು.
ಟೈಮ್ಸ್ ನೌ ಸಿ ವೋಟರ್ ಎಕ್ಷಿಟ್ ಪೋಲ್ ಭವಿಷ್ಯ ಕೂಡ ಮಹಾಘಟಾಬಂಧನ್ 120 ಸ್ಥಾನ ಗೆಲ್ಲುತ್ತದೆಯೆಂದರೆ, ರಿಪಬ್ಲಿಕ್ ಜನ್ ಕೀ ಬಾತ್ ಸಮೀಕ್ಷೆ ಕೂಡ ಆರ್ ಜೆಡಿ ಮೈತ್ರಿಕೂಟಕ್ಕೆ 118-138 ಸ್ಥಾನ ಖಚಿತ ಎಂದು ತಿಳಿಸಿತ್ತು.
ಹಾಗಾದರೇ ಎಕ್ಷಿಟ್ ಪೋಲ್ ಗಳ ಭವಿಷ್ಯ ಸುಳ್ಳಾಗಲು ಕಾರಣವೇನು ?
ತಜ್ಞರ ಪ್ರಕಾರ ಮಹಾಘಟಬಂಧನ್ ಗೆ ಮೊದಲ ಹಂತದ ಚುನಾವಣೆಯಲ್ಲಿ ಹೆಚ್ಚು ಅಂಕಗಳು ಲಭಿಸಿದ್ದವು. ಆದರೇ ಎಕ್ಷಿಟ್ ಪೋಲ್ ಸಮೀಕ್ಷೆಯಲ್ಲಿ ಮಹಿಳೆಯರ ಮತಗಳಿಗೆ ಕಡಿಮೆ ಪ್ರಾತಿನಿಧ್ಯ ನೀಡಲಾಗಿತ್ತು. ಕೊನೆಯ ಹಂತದ ಚುನಾವಣೆಯ ವೇಳೆಗೆ ಹೆಚ್ಚಿನ ಮಹಿಳೆಯರು ಎನ್ ಡಿ ಎ ಮೈತ್ರಿಕೂಟಕ್ಕೆ ತಮ್ಮ ಮತವನ್ನು ಚಲಾಯಿಸಿದ್ದರು. ಇದನ್ನು ಅರ್ಥೈಸಿಕೊಳ್ಳುವಲ್ಲಿ ಸಮೀಕ್ಷಾ ಸಂಸ್ಥೆಗಳು ಎಡವಿದ್ದವು. ಹೀಗಾಗಿ ಎನ್ ಡಿ ಮೈತ್ರಿಕೂಟಕ್ಕೆ ಸರಳ ಬಹುಮತ ಲಭಿಸಿದೆ.
ಇದನ್ನೂ ಓದಿ: ಬಿಹಾರದ ಜನರು ಜಗತ್ತಿಗೆ ಪ್ರಜಾಪ್ರಭುತ್ವದ ಪಾಠವನ್ನು ಕಲಿಸಿದ್ದಾರೆ: ಪ್ರಧಾನಿ ಮೋದಿ
ರಾಜಕೀಯ ತಜ್ಞ ನೀಲಾಂಜನ್ ಸಿರ್ಕಾರ್ ಅವರ ಪ್ರಕಾರ, ಚುನಾವಣಾ ಫಲಿತಾಂಶವನ್ನು ಊಹಿಸುವುದು ಕಷ್ಟಸಾಧ್ಯ. ಅದಾಗ್ಯೂ ಕೋವಿಡ್19 ಕಾಲದಲ್ಲಿ ಚುನಾವಣೋತ್ತರ ಸಮೀಕ್ಷೆ ನಡೆಸುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿತ್ತು.. ಸರಿಯಾಗಿ ಅಂಕಿ ಅಂಶಗಳು ಕೂಡ ಲಭಿಸದಿರುವುದು ಇಲ್ಲಿ ಗಮನಿಸಬೇಕಾದ ಅಂಶ. ಚುನಾವಣೆಯಲ್ಲಿ ಬಿಜೆಪಿ ಮತ್ತು ಆರ್ ಜೆಡಿ ಉತ್ತಮವಾಗಿ ಶಕ್ತಿ ಪ್ರದರ್ಶಿಸಿದೆ. ಆದರೇ ಅದರ ಮೈತ್ರಿಕೂಟ ಪಕ್ಷಗಳಾದ ಜೆಡಿಯು ಮತ್ತು ಕಾಂಗ್ರೆಸ್ ನೀರಸ ಸ್ವರ್ಧೆ ನೀಡಿದೆ. ಇವೆಲ್ಲಾ ಕಾರಣಗಳು ಎಕ್ಸಿಟ್ ಪೋಲ್ ಗಳ ಲೆಕ್ಕಾಚಾರ ತಲೆಕೆಳಗಾಗಲೂ ಕಾರಣ ಎಂದಿದ್ದಾರೆ.