ಬೆಂಗಳೂರು: ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶದ ಬೆನ್ನಲ್ಲೆ ರಾಜ್ಯ ಬಿಜೆಪಿಯಲ್ಲಿ ಹಲವು ವಿದ್ಯಮಾನಗಳು ಸದ್ದಿಲ್ಲದೇ ನಡೆಯುತ್ತಿದೆ. ಬಿಜೆಪಿಯ ಆಗುಹೋಗುಗಳ ವಿಚಾರದಲ್ಲಿ ಪ್ರಧಾನ ಪಾತ್ರ ವಹಿಸುವ ಸಂಘ-ಪರಿವಾರದ ಪ್ರಭಾವಿಯೊಬ್ಬರು ಶುಕ್ರವಾರ ಎರಡು ಬಾರಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿರುವುದು ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸರ್ಕಾರ, ಸಂಘಟನೆಯಲ್ಲಿ ಬದಲಾವಣೆ, ಪುನಾರ್ರಚನೆ ಸಂದರ್ಭ ಎದುರಾದಾಗಲೆಲ್ಲ ಬಿಜೆಪಿ ಹೈಕಮಾಂಡ್ ಬಹುವಾಗಿ ನೆಚ್ಚಿಕೊಳ್ಳುವುದು ಸಂಘ-ಪರಿವಾರದ ಹಿರಿಯರಾದ ಮುಕುಂದ್ ಅವರ ಅಭಿಪ್ರಾಯವನ್ನು. ಹೀಗಾಗಿ ರಾಜ್ಯ ಬಿಜೆಪಿ ವಲಯದಲ್ಲಿ ಮುಕುಂದ್ ಪ್ರಭಾವಿ ಸ್ಥಾನ ಹೊಂದಿದ್ದಾರೆ. ಅವರು ಶುಕ್ರವಾರ ಎರಡು ಬಾರಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ.
ಉಭಯ ಕುಶಲೋಪರಿ ಸಾಂಪ್ರತಕ್ಕಾಗಿ ಮುಕುಂದ್ ಜಿ ಯಾರನ್ನೂ ಭೇಟಿ ಮಾಡುವುದಿಲ್ಲ. ಹೀಗಾಗಿ ಶುಕ್ರವಾರ ಬೆಳಗ್ಗೆ ಸಿಎಂ ನಿವಾಸದಲ್ಲಿ ಹಾಗೂ ರಾತ್ರಿ ಪ್ರಭಾವಿ ಸಚಿವರ ನಿವಾಸದಲ್ಲಿ ಸುದೀರ್ಘ ಚರ್ಚೆ ನಡೆಸಿರುವ ಕಾರಣವೇನು? ಎಂಬ ಪ್ರಶ್ನೆ ಉದ್ಭವಿಸಿದೆ.
ಇದನ್ನೂ ಓದಿ:ಇಮ್ರಾನ್ ಖೇಡವಾಲಾ.. ಗುಜರಾತ್ ನ 182 ಶಾಸಕರಲ್ಲಿ ಇವರೊಬ್ಬರೇ ಮುಸ್ಲಿಂ ಶಾಸಕ
ಈ ಭೇಟಿಯ ಹಿಂದಿರುವ ಕಾರಣ ಇನ್ನೂ ಬಯಲಾಗಿಲ್ಲ. ಆದರೆ ಸಂಘಟನಾತ್ಮಕವಾಗಿ ಯಾವುದೋ ಮಹತ್ವದ ಬದಲಾವಣೆಯಾಗಲಿದೆ ಎಂಬ ಗುಸುಗುಸು ಈಗ ಬಿಜೆಪಿಯಲ್ಲಿ ಪ್ರಾರಂಭವಾಗಿದೆ. ಚುನಾವಣಾ ದೃಷ್ಟಿಯಿಂದಲೇ ಈ ಭೇಟಿ ನಡೆದಿದೆ ಎಂಬುದರಲ್ಲಿ ಎರಡು ಮಾತಿಲ್ಲ ಎನ್ನಲಾಗುತ್ತಿದೆ.
ಇದೆಲ್ಲದರ ಮಧ್ಯೆ ಸಿಎಂ ಬಸವರಾಜ್ ಬೊಮ್ಮಾಯಿ ಡಿಸೆಂಬರ್ 14ರಂದು ದಿಲ್ಲಿಗೆ ತೆರಳುತ್ತಿದ್ದಾರೆ. ಮಹಾರಾಷ್ಟ್ರ ಜತೆಗಿನ ಗಡಿ ವಿವಾದ ಸಂಬಂಧ ಗೃಹ ಸಚಿವ ಅಮಿತ್ ಶಾ ಅವರ ಜತೆಗೆ ಸಭೆ ನಡೆಯಲಿದೆ. ಆದರೆ ಮುಕುಂದ್ ಭೇಟಿಗೂ ಸಿಎಂ ದಿಲ್ಲಿ ಪ್ರವಾಸಕ್ಕೂ ಯಾವುದಾದರೂ ಸಂಬಂಧವಿದೆಯೇ? ಎಂಬುದು ಸದ್ಯಕ್ಕೆ ಕುತೂಹಲ ಉಳಿಸಿಕೊಂಡಿದೆ.