Advertisement

ತುರ್ತುಪರಿಸ್ಥಿತಿ ಕರಾಳ ಅಧ್ಯಾಯ@45: ಅಂದು ಯುವಕ ಮೋದಿ ಯಾವ ವೇಷದಲ್ಲಿದ್ರು ಗೊತ್ತಾ?

04:24 PM Jun 25, 2020 | Nagendra Trasi |

ಮಣಿಪಾಲ:ಮಾಜಿ ಪ್ರಧಾನಿ, ಕಾಂಗ್ರೆಸ್ ವರಿಷ್ಠೆಯಾಗಿದ್ದ ದಿ.ಇಂದಿರಾಗಾಂಧಿ 1975ರ ಜೂನ್ 25ರಂದು ದೇಶಾದ್ಯಂತ ತುರ್ತುಪರಿಸ್ಥಿತಿ(ಎಮರ್ಜೆನ್ಸಿ)ಯನ್ನು ಹೇರಿದ್ದು, ಇದು ಭಾರತೀಯ ರಾಜಕೀಯ ಇತಿಹಾಸದಲ್ಲಿ ದಾಖಲಾದ ಕರಾಳ ಅಧ್ಯಾಯವಾಗಿದ್ದು ಇಂದಿಗೆ ಬರೋಬ್ಬರಿ 45 ವರ್ಷಗಳು ಕಳೆದಿದೆ. ಬ್ರಿಟಿಷ್ ರನ್ನು ಓಡಿಸಿ ಸ್ವಾತಂತ್ರ್ಯ ಪಡೆದುಕೊಂಡ ಬಳಿಕವೂ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಜನರು ಅಕ್ಷರಶಃ ಸ್ವಾತಂತ್ರ್ಯವನ್ನು ಕಳೆದುಕೊಂಡು ಬಿಟ್ಟಿದ್ದರು.

Advertisement

ಏನಿದು ಇಂದಿರಾ ಸರ್ವಾಧಿಕಾರ?
1971ರಲ್ಲಿ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಬರೋಬ್ಬರಿ 352 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಇದರೊಂದಿಗೆ 518 ಸದಸ್ಯ ಬಲದ ಲೋಕಸಭೆಯಲ್ಲಿ ಇಂದಿರಾ 352 ಸ್ಥಾನದೊಂದಿಗೆ ಪೂರ್ಣ ಬಹುಮತ ಪಡೆದುಕೊಂಡು ಸರ್ಕಾರ ರಚಿಸಿದ್ದರು.

1973-74ರಲ್ಲಿ ದೇಶಾದ್ಯಂತ ಇಂದಿರಾ ಗಾಂಧಿ ವಿರುದ್ಧ ಪ್ರತಿಭಟನೆಗಳು ನಡೆದು ರಾಜಕೀಯ ಅಶಾಂತಿ ತಲೆದೋರಿತ್ತು. ಗುಜರಾತ್ ನಲ್ಲಿ ನಡೆದ ನವನಿರ್ಮಾಣ್ ಚಳವಳಿಯಂತು ತೀವ್ರ ಸ್ವರೂಪ ಪಡೆದು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಮಾಡಿತ್ತು.

ಮತ್ತೊಂದೆಡೆ 1971ರ ಚುನಾವಣೆಯಲ್ಲಿ ಇಂದಿರಾಗಾಂಧಿ ಎದುರು ಉತ್ತರಪ್ರದೇಶದ ರಾಯ್ ಬರೇಲಿ ಕ್ಷೇತ್ರದಲ್ಲಿ ಪರಾಜಯಗೊಂಡಿದ್ದ ಜನತಾ ಪಕ್ಷದ ಅಭ್ಯರ್ಥಿ ರಾಜ್ ನಾರಾಯಣ್ ಅವರು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಲೋಕಸಭಾ ಚುನಾವಣೆಯಲ್ಲಿ ಇಂದಿರಾಗಾಂಧಿ ಅಧಿಕಾರ ದುರುಪಯೋಗಪಡಿಸಿಕೊಂಡು ಚುನಾವಣೆಯಲ್ಲಿ ಗೆದ್ದಿರುವುದಾಗಿ ದೂರು ದಾಖಲಿಸಿದ್ದರು.

Advertisement

1975ರ ಜೂನ್ 12ರಂದು ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಜಗನ್ ಮೋಹನ್ ಸಿನ್ಹಾ ಅವರು ಇಂದಿರಾಗಾಂಧಿ ತಪ್ಪಿತಸ್ಥೆ ಎಂದು ತೀರ್ಪು ನೀಡಿ, ಇಂದಿರಾ ಗಾಂಧಿ ಆಯ್ಕೆಯನ್ನೇ ಅಸಿಂಧು ಎಂದು ಆದೇಶ ನೀಡಿದ್ದರು. ಅಷ್ಟೇ ಅಲ್ಲ ಆರು ವರ್ಷಗಳ ಕಾಲ ಯಾವುದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ತೀರ್ಪು ನೀಡಿದ್ದರು. ಇದರಂತೆ ಇಂದಿರಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. ಚುನಾವಣಾ ಸಮಯದಲ್ಲಿ
ಅಧಿಕಾರಿಯಾಗಿದ್ದ ಯಶ್ ಪಾಲ್ ಕಪೂರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ತನ್ನ ಆಯ್ಕೆ ಹಾಗೂ ಅಧಿಕಾರವನ್ನು ಮೊಟಕುಗೊಳಿಸಿ ಆದೇಶ ನೀಡಿದ್ದ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಇಂದಿರಾಗಾಂಧಿ ಸುಪ್ರೀಂಕೋರ್ಟ್ ಕಟಕಟೆಗೆ ಏರಿದ್ದರು. ಆದರೆ 1974ರ ಜೂನ್ 24ರಂದು ಸುಪ್ರೀಂ ನ್ಯಾಯಾಧೀಶ ವಿಆರ್ ಕ್ರಿಷ್ಣ ಲಯರ್ ಅವರು ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿದ್ದರು. ಮತದಾನದ ಹಕ್ಕನ್ನು ಇಂದಿರಾ ಕಳೆದುಕೊಂಡರು ಕೂಡಾ ಪ್ರಧಾನಿಯಾಗಿ ಮುಂದುವರಿಯಲು ಅವಕಾಶ ಪಡೆದಿದ್ದರು.

ಈ ವೇಳೆ ಇಂದಿರಾ ಆಪ್ತ, ಪಶ್ಚಿಮಬಂಗಾಳದ ಅಂದಿನ ಮುಖ್ಯಮಂತ್ರಿ ಸಿದ್ದಾರ್ಥ ರೇ ಅವರು “ಆಂತರಿಕ ತುರ್ತುಪರಿಸ್ಥಿತಿ” ಘೋಷಿಸುವ ಉಪಾಯ ಹೇಳಿಕೊಟ್ಟಿದ್ದರು. ಅದರಂತೆ ಇಂದಿರಾಗಾಂಧಿ ಏಕಾಏಕಿ 1975ರ ಜೂನ್ 25ರ ಮಧ್ಯರಾತ್ರಿ ಎಮರ್ಜೆನ್ಸಿ ಘೋಷಿಸಿ ಬಿಟ್ಟಿದ್ದರು.

ಇಂದಿರಾ ಸೂಚನೆಯಂತೆ ಆಗಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಮಹಮ್ಮದ್ ಎಮರ್ಜೆನ್ಸಿ ಘೋಷಿಸಿದ್ದರು. ಅದಾದ 3 ಗಂಟೆಯೊಳಗೆ ಜಯ್ ಪ್ರಕಾಶ್ ನಾರಾಯಣ್, ಜಾರ್ಜ್ ಫೆರ್ನಾಂಡಿಸ್, ವಿಜಯಾರಾಜೇ ಸಿಂದೈ, ರಾಜ್ ನಾರಾಯಣ್, ಮೊರಾರ್ಜಿ ದೇಸಾಯಿ, ಚರಣ್ ಸಿಂಗ್, ಕೃಪಲಾನಿ, ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ, ನಾರಾಯಣ್ ಸಿನ್ನಾ ಸೇರಿದಂತೆ ರಾಜಕೀಯ ವಿರೋಧಿಗಳನ್ನು ಜೈಲಿಗೆ ತಳ್ಳಲಾಗಿತ್ತು. ಎಲ್ಲಾ ದಿನಪತ್ರಿಕೆ ಬಂದ್
ಮಾಡಿಸಲಾಗಿತ್ತು. ವಿದ್ಯುಚ್ಛಕ್ತಿ ಸಂಪರ್ಕ ಕಡಿತಗೊಳಿಸಲಾಗಿತ್ತು ಎಂದು ಅಂದಿನ ಕರಾಳ ದಿನದ ಬಗ್ಗೆ ವಿವರಿಸಲಾಗಿದೆ.

ಇಂದಿರಾ ಆಡಳಿತ ವಿರೋಧಿ ಪ್ರಚಾರ-ಅಂದು ಮೋದಿ ಸಿಖ್ ವೇಷದಲ್ಲಿ!
ಸರ್ವಾಧಿಕಾರ ಧೋರಣೆ ತಳೆದಿದ್ದ ಇಂದಿರಾಗಾಂಧಿ ದೇಶದಲ್ಲಿ ಏಕಾಏಕಿ ತುರ್ತುಪರಿಸ್ಥಿತಿ ಘೋಷಿಸಿದ್ದರಿಂದ ಆತಂರಿಕ ದಂಗೆಯಂತಹ ಸ್ಥಿತಿ ನಿರ್ಮಾಣವಾಗಿತ್ತು. ಅಂದು ಆರ್ ಎಸ್ ಎಸ್ ಸಂಘಟನೆಯನ್ನು ನಿಷೇಧಿಸಿ, ಪ್ರಮುಖ ನಾಯಕರನ್ನು ಜೈಲಿಗೆ ಕಳುಹಿಸಲಾಗಿತ್ತು. ಭೂಗತವಾಗಿ ಚಟುವಟಿಕೆ ನಡೆಸುತ್ತಿದ್ದವರನ್ನೂ ಪತ್ತೆ ಹಚ್ಚಿ ಬಂಧಿಸುತ್ತಿದ್ದರು. ಅಂದು ಯುವಕರಾಗಿದ್ದ ನರೇಂದ್ರ ಮೋದಿ ಮತ್ತು ಇಂದಿರಾ ಅವರ ಕಡು ವಿರೋಧಿ ಸುಬ್ರಮಣಿಯನ್ ಸ್ವಾಮಿ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದರು. ಅದಕ್ಕಾಗಿ ಅವರು ಸಿಖ್ ವೇಷ ಧರಿಸಿ ಭೂಗತರಾಗಿ ಕೆಲಸ ಮಾಡುತ್ತಿದ್ದರಂತೆ.

Advertisement

Udayavani is now on Telegram. Click here to join our channel and stay updated with the latest news.

Next