Advertisement

Election Commission; ಚುನಾವಣೆ ಕೆಲವೇ ದಿನ ಮೊದಲು ಆಯುಕ್ತ ಗೋಯಲ್ ರಾಜೀನಾಮೆಗೆ ಕಾರಣವೇನು?

11:00 AM Mar 10, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಚುನಾವಣಾ ಆಯುಕ್ತರಲ್ಲಿ ಒಬ್ಬರಾದ ಅರುಣ್‌ ಗೋಯಲ್‌ ಶನಿವಾರ ಅಚ್ಚರಿಯ ಬೆಳವಣಿಗೆ ಎಂಬಂತೆ ದಿಢೀರ್‌ ರಾಜೀನಾಮೆ ನೀಡಿದ್ದಾರೆ.

Advertisement

ಅವರ ಅಧಿಕಾರಾವಧಿ 2027ರವರೆಗೆ ಇದ್ದರೂ ಏಕಾಏಕಿ ಹುದ್ದೆ ತ್ಯಜಿಸಿರುವುದು ಅಚ್ಚರಿಗೆ ಕಾರಣವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗೋಯಲ್ ರಾಜೀನಾಮೆ ಅಂಗೀಕರಿಸಿದ್ದಾರೆ.

ಆಯೋಗದಲ್ಲಿ ಆಯುಕ್ತರ ಒಂದು ಹುದ್ದೆ ಖಾಲಿ ಇತ್ತು. ಈಗ ಅರುಣ್‌ ರಾಜೀನಾಮೆಯೊಂದಿಗೆ ಆಯೋಗದಲ್ಲಿ ಸಿಇಸಿ ರಾಜೀವ್‌ ಕುಮಾರ್‌ ಮಾತ್ರವೇ ಉಳಿದಂತಾಗಿದೆ.

ಅರುಣ್ ಗೋಯಲ್ ಅವರು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದಾರೆಂದು ಹೇಳಲಾಗಿದೆ. ಅನಾರೋಗ್ಯದಿಂದ ರಾಜೀನಾಮೆ ನೀಡಿದ್ದಾರೆಂಬ ಊಹಾಪೋಹಗಳನ್ನು ತಳ್ಳಿಹಾಕಿದ ಉನ್ನತ ಅಧಿಕಾರಿಗಳು, ಗೋಯೆಲ್ ಅವರು ಪರಿಪೂರ್ಣ ಆರೋಗ್ಯವಾಗಿದ್ದಾರೆ ಎಂದಿದ್ದಾರೆ. ಗೋಯೆಲ್ ಮತ್ತು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಮುಂದಿನ ವಾರ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ಆದಾಗ್ಯೂ, ಗೋಯೆಲ್ ಅವರ ಅನಿರೀಕ್ಷಿತ ರಾಜೀನಾಮೆಯ ಕಾರಣದಿಂದ ಇದು ವಿಳಂಬವಾಗುವ ಸಾಧ್ಯತೆಯಿದೆ.

Advertisement

ಮುಂದೇನು?

ಹೊಸ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯು ಕಾನೂನು ಸಚಿವರ ನೇತೃತ್ವದಲ್ಲಿ ಮತ್ತು ಇಬ್ಬರು ಕೇಂದ್ರ ಕಾರ್ಯದರ್ಶಿಗಳನ್ನು ಒಳಗೊಂಡಂತೆ ಐದು ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡುವ ಹುಡುಕಾಟ ಸಮಿತಿಯನ್ನು ಒಳಗೊಂಡಿರುತ್ತದೆ. ಬಳಿಕ ಪ್ರಧಾನ ಮಂತ್ರಿ ನೇತೃತ್ವದ ಆಯ್ಕೆ ಸಮಿತಿಯು, ಪ್ರಧಾನ ಮಂತ್ರಿಯಿಂದ ನಾಮನಿರ್ದೇಶನಗೊಂಡ ಕೇಂದ್ರ ಕ್ಯಾಬಿನೆಟ್ ಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕರು ಅಂತಿಮ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ರಾಷ್ಟ್ರಪತಿಗಳು ಆಯ್ಕೆಯಾದ ಚುನಾವಣಾ ಆಯುಕ್ತರನ್ನು ಔಪಚಾರಿಕವಾಗಿ ನೇಮಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next