ಪಣಜಿ: ಕಲಂಗುಟ್ ಮಾಜಿ ಶಾಸಕ ಮೈಕಲ್ ಲೋಬೊ ಅವರನ್ನು ಅಸಮರ್ಥ ಎಂದು ಪರಿಗಣಿಸಿದ್ದ ಕಾಂಗ್ರೆಸ್ ಈಗ ಸಮರ್ಥ ಎಂದು ಭಾವಿಸಿದೆ ಎಂದು ಆಮ್ ಆದ್ಮಿ ಪಕ್ಷದ ಉಪಾಧ್ಯಕ್ಷ ವಾಲ್ಮಿಕಿ ನಾಯ್ಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವೇಸ್ಟ್ ಮಿನಿಸ್ಟರ್ ಎಂದು ಕಾಂಗ್ರೆಸ್ ಪಕ್ಷವು ಈ ಹಿಂದೆ ಮೈಕಲ್ ಲೋಬೊ ರವರನ್ನು ಟೀಕಿಸಿತ್ತು. ಆದರೆ ಇಂದು ಯಾವ ಮಾನದಂಡದ ಮೇಲೆ ವೇಸ್ಟ್ ಮಿನಿಸ್ಟರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ ಎಂದು ವಾಲ್ಮಿಕಿ ನಾಯ್ಕ ಪ್ರಶ್ನಿಸಿದರು.
ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಶೇ 80 ರಷ್ಟು ಹೊಸ ಮುಖಗಳನ್ನು ತರುವುದಾಗಿ ಪಿ.ಚಿದಂಬರಂ ಕಳೆದ ಆರು ತಿಂಗಳ ಹಿಂದೆ ಕಾಂಗ್ರೆಸ್ ಕಾರ್ಯಕರ್ತರಿಗೆ ಭರವಸೆ ನೀಡಿದ್ದರು. ಆದರೆ ಈಗ ಅದೇ ಹಳೇಯ ಮುಖಗಳನ್ನು ಕಾಂಗ್ರೆಸ್ ಪಕ್ಷಕ್ಕೆ ತಂದಿದೆ ಎಂದು ವಾಲ್ಮೀಕಿ ನಾಯ್ಕ ಟೀಕಾ ಪ್ರಹಾರ ನಡೆಸಿದರು.
ಬಿಜೆಪಿಯಂತೆಯೇ ಕಾಂಗ್ರೆಸ್ ಕೂಡ ತಡವಾಗಿ ರಾಜಕೀಯ ಆಟ ಆರಂಭಿಸಿದೆ. ಈ ಹಿಂದೆ ಮೈಕಲ್ ಲೋಬೊ ರವರನ್ನು ಸೋಲಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಅದೇ ಪಕ್ಷ ಈಗ ಮೈಕಲ್ ಲೋಬೊರವರ ಪರ ನಿಂತಿದೆ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿ ಈ ಎರಡೂ ಪಕ್ಷಗಳು ಗೋವಾದ ಜನತೆಗೆ ಉತ್ತಮ ರಸ್ತೆ, ಸಮರ್ಪಕ ವಿದ್ಯುತ್, ಕುಡಿಯುವ ನೀರು ಪೂರೈಕೆ ಮಾಡಲು ವಿಫಲವಾಗಿವೆ. ಈ ಕುರಿತು ರಾಜ್ಯದ ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಎರಡೂ ಪಕ್ಷಗಳು ಚುನಾವಣೆಯ ಪೂರ್ವ ಸೆಟ್ಟಿಂಗ್ ನಲ್ಲಿ ನಿರತವಾಗಿವೆ ಎಂದರು.