ಮಾತು ವಿಚಿತ್ರವಾಗಿತ್ತು. ಮಾತಿನಂತೆಯೇ ಸುಬ್ಬು ಸಹ ವಿಚಿತ್ರದವನು. ಸುಬ್ಬು ನನ್ನ ಚಡ್ಡಿ ದೋಸ್ತ್ ಮತ್ತು ನನ್ನ ಆಪತ್ತಿನ ಎಟಿಎಮ್ಮು. ಅವನ ಮಾತುಗಳಿಗೆ ಕಿವಿಗೊಟ್ಟು ಅವನ ತಿಕ್ಕಲುತನ ಸಹಿಸಬೇಕಾಗಿತ್ತು.
Advertisement
ಲಂಚ್ ಸಮಯ. ಫ್ಯಾಕ್ಟ್ರಿ ಕ್ಯಾಂಟೀನು. ಎರಡನೆಯ ಸಲ ನುಗ್ಗೇಕಾಯಿ ಹುಳಿಯಲ್ಲಿ ಸುಬ್ಬು ಅನ್ನ ಕಲೆಸುತ್ತಿದ್ದ. ಆಗಲೇ ಈ ವಿಚಿತ್ರ ಪ್ರಶ್ನೆ ಮುಂದಿಟ್ಟ. ಅರ್ಥವಾಗಲಿಲ್ಲ.””ಹೀಗೇ ಇಪ್ಪತ್ತು ಸಲ ಹೇಳಿದ್ರೂ ಅರ್ಥವಾಗೊಲ್ಲ” ಎಂದೆ. “”ಹೋಗ್ಲೀ ಪಾಪಾಂತ ಹೇಳ್ತೀನಿ, ಸರಿಯಾಗಿ ಕೇಳಿಸ್ಕೋ. ಸ್ವಲ್ಪ ಉಪ್ಪು ಹಾಕು ಅಂತ ನಿಮ್ಮನೆಯವಳು ಹೇಳಿದ್ರೆ ಎಷ್ಟು ಹಾಕ್ತೀಯ?” “”ಯಾವುದಕ್ಕೆ?” ಕೇಳಿದೆ.“”ವಾಪಸು ನನಗೇ ಪ್ರಶ್ನೆ ಹಾಕ್ತೀಯಾ?” ಸುಬ್ಬು ಗುರ್ರೆಂದ. “”ಅನಿವಾರ್ಯ. ನಿನ್ನ ಪ್ರಶ್ನೆಗೆ ಹಿನ್ನೆಲೆ ಬೇಕು. ಅದಿಲೆª ಉತ್ತರ ಹೇಗೆಹೇಳ್ಲಿ?”
“”ಎಷ್ಟು ಉಪ್ಪು ಹಾಕಬೇಕು ಹೇಳ್ಳೋ ಅಂದ್ರೆ ಹರಿಕತೆ ಮಾಡ್ತಿದ್ದೀಯ?” ಸುಬ್ಬು ಹಂಗಿಸಿದ. “”ಒಂದ್ಕೆಲ್ಸ ಮಾಡು, ಅತ್ತಿಗೆಗೆ ಫೋನು ಮಾಡು” “”ಸಾಧ್ಯವಿಲ್ಲ” “”ಜಗಳವೇನೋ?” ಕ್ಯಾಂಟೀನಿನಲ್ಲಿದ್ದ ಇತರರಿಗೆ ಕೇಳಿಸದಂತೆ ಮೆಲುದನಿಯಲ್ಲಿ ಕೇಳಿದೆ.
“”ಜಗಳವಿಲ್ಲದೆ ಇದ್ದುದು ಯಾವಾಗ? ಮದುವೆ ಆಗೋದು ಜಗಳ ಆಡೋಕೇ ಅಲ್ವೇನೋ?” ಮಾತು ದಿಕ್ಕು ತಪ್ಪುತ್ತಿದೆೆ ಅನ್ನಿಸಿತು.
“”ಅಲ್ಲ ಫೋನು ಮಾಡೋಕಾಗೊಲ್ಲಾಂತೀಯಲ್ಲ? ವಿಚಿತ್ರ?” “”ವಿಚಿತ್ರವಲ್ಲ ಸಚಿತ್ರ. ಅವಳ ಫೋನು ಯಾವಾಗ್ಲೂ ಎಂಗೇಜಾಗಿರುತ್ತೆ. ಯಾರಿಗಾದ್ರೂ ಅವಳು ಫೋನು ಮಾಡ್ತಿರ್ತಾಳೆ ಇಲ್ಲಾ ಯಾರಾದ್ರೂ ಅವಳಿಗೆ ಫೋನು ಮಾಡ್ತಿರ್ತಾರೆ. ಶಾಲಿನಿ ಫೋನು ಸದಾ ಸರ್ವದಾ ಬಿಜಿಯಾಗಿರುತ್ತೆ” ಮಾತು ಮುಂದುವರಿಸಿ ಪ್ರಯೋಜನ ಇಲ್ಲವೆನಿಸಿತು.
Related Articles
ಅವನ ಮಾತಿಗೆ ಇಲ್ಲ ಎನ್ನಲಾಗಲಿಲ್ಲ. ಸಂಜೆ ಸುಬ್ಬು ಮನೆಗೆ ಹೋಗಲೇಬೇಕಾಗಿ ಬಂತು. ಅಡುಗೆಮನೆ ಶಾಲಿನಿಯತ್ತಿಗೆ ಬಿಟ್ಟು ಹೋದಾಗ ಹೇಗಿತ್ತೋ ಹಾಗೇ ಇತ್ತು. ಸ್ಟವ್ ಮೇಲಿನ ಎರಡು ಪಾತ್ರೆಗಳು ಅಲ್ಲಿಯೇ ಇ. ಪುಣ್ಯಕ್ಕೆ ಸ್ಟವ್ ಆಫ್ ಮಾಡಿದ್ದ ಸುಬ್ಬು.
ಸೌಟಿನಿಂದ ನಾಜೂಕಾಗಿ ತಿರುಗಿಸಿ ಎರಡರಲ್ಲಿದ್ದುದನ್ನೂ ಒಂದೊಂದು ತೊಟ್ಟು ತೆಗೆದು ರುಚಿ ನೋಡಿದೆ. ಎಲ್ಲಾ ಸರಿಯಾಗೇ ಇತ್ತು. “”ಎಲ್ಲಾ ಸರಿಯಾಗೇ ಇದೆ” ಎಂದು ಅವನಿಂದಲೂ ರುಚಿ ನೋಡಿಸಿದೆ. “”ಮತ್ತೆ ಉಪ್ಪು ಹಾಕಿ ಅಂತ ಯಾಕೆ ಹೇಳಿದಳು?” ಸುಬ್ಬು ತಲೆ ಕೆರೆದುಕೊಳ್ಳುತ್ತಿರುವಾಗ ನಾನು, “”ಬರಲೆ?” ಎಂದು ಹೇಳಿ ಜಾಗ ಖಾಲಿ ಮಾಡಿದೆ. ಮಾರನೆಯ ದಿನ ಬೆಳಿಗ್ಗೆ ಎಂಟಕ್ಕೇ ಸುಬ್ಬು ಫೋನಾಯಿಸಿದ್ದ. “”ನಿನ್ನಂಥ ಪೆದ್ದ ಜಗತ್ತಿನಲ್ಲೇ ಇಲ್ಲ” ಹಂಗಿಸಿದ.
Advertisement
“”ಯಾಕೆ, ಏನಾಯ್ತು?” ಕನಲಿದೆ. “”ಅರ್ಧ ಗಂಟೇಲಿ ಬರ್ತಿàನಿ. ಕಾಫಿ ತರಿಸಿಟ್ಟಿರು” ಇಪ್ಪತ್ತು ನಿಮಿಷದಲ್ಲೇ ಸುಬ್ಬು ಒಕ್ಕರಿಸಿದ. “”ನಿನ್ನಂಥ ದಡ್ಡನ್ನ ನಾನು ನೋಡೇ ಇರಲಿಲ್ಲ” ಕಾಫಿ ಗುಟುಕರಿಸುತ್ತ ಸಾವಕಾಶವಾಗಿ ಹೇಳಿದ. “”ಇಷ್ಟು ವರ್ಷದ ಮೇಲೆ ಗೊತ್ತಾಯ್ತಾ?” ನಾನೂ ವ್ಯಂಗ್ಯವಾಡಿದೆ. “”ಉಪ್ಪು ಹಾಕೂಂತ ಶಾಲಿನಿ ಹೇಳಿದ್ದು ಸ್ಟವ್ ಮೇಲೆ ಇದ್ದ ಸಾಂಬಾರು ಮತ್ತು ಗೊಜ್ಜಿಗಲ್ಲ”“”ಮತ್ತೆ?” “”ಅಲ್ಲೇ ಕಿಚನ್ ಸ್ಲಾಬ್ ಮೇಲೆ ಒಂದು ಪ್ಲ್ಯಾಸ್ಟಿಕ್ ಬೇಸಿನ್ನಿನ ನೀರಲ್ಲಿ ಒಂದು ಬಟ್ಟೆ ಇತ್ತು ಅದಕ್ಕೆ” “”ಏನು ಬಟ್ಟೇಗಾ? ಬಟ್ಟೆಗೆ ಯಾಕೆ ಉಪ್ಪಾಕಬೇಕು?” “”ಅದು ಗೊತ್ತಿಲ್ಲ. ಶಾಲಿನಿ ಹೇಳಿದ್ದು ಅದಕ್ಕಂತೆ. ನಿನ್ನಂಥ ಬೃಹಸ್ಪತಿ ಅಂತ ಕರ್ಕೊಂಡು ಹೋಗಿದ್ದಕ್ಕೆ ನನಗೆ ಮಂಗಳಾರತಿಯಾಯ್ತು” “”ಹೋಗ್ಲಿ ಬಿಡು, ಪ್ರಾಬ್ಲಿಮ್ಮು ಸಾಲ್Ì ಆಯ್ತಲ್ಲ?” “”ಎಲ್ಲಿ ಸಾಲ್Ì ಆಯ್ತು? ಈಗ ಹುಟ್ಟಿಕೊಳ್ತಲ್ಲ?” “”ಏನು?” “ಃಬಟ್ಟೆಗ್ಯಾಕೆ ಉಪ್ಪು ಹಾಕಬೇಕು ಅಂತ ಅವಳನ್ನು ಕೇಳಿದ್ದಕ್ಕೆ ಅಷ್ಟೂ ಗೊತ್ತಾಗೊಲ್ವೆ?” ಅಂತ ಶಾಲಿನಿ ಹಂಗಿಸಿದಳು.
ಸುಬ್ಬು ಮಾತಿಗೆ ನಾನೂ ಬೆಚ್ಚಿದೆ, ಬೆವರಿದೆ. ಬಟ್ಟೆಗೇಕೆ ಉಪ್ಪು$ ಹಾಕಬೇಕು ಎಂದು ನನಗೂ ತಿಳಿದಿರಲಿಲ್ಲ. “”ನಿಮಗೇ ಬಿಟ್ಟರೆ ಅದಕ್ಕೆ ಉಪ್ಪು , ಖಾರ, ಹುಳಿ, ಬೆಲ್ಲ ಎಲ್ಲಾ ಹಾಕಿºಡ್ತೀರ ಅಂತ ಮತ್ತೆ ಹಂಗಿಸಿದಳು. ಇದು ನಮ್ಮ ಗಂಡು ಕುಲಕ್ಕೇ ಅವಮಾನ. ಬಟ್ಟೆಗೆ ಯಾಕೆ ಉಪ್ಪು ಹಾಕ್ತಾರೆ ಅನ್ನೋ ವಿಷಯ ತಿಳ್ಕೊಳ್ಳಲೇಬೇಕು. ಅದಕ್ಕೆ ನೀನೇ ಸರಿ. ಇವತ್ತು ಸಂಜೆಯೊಳಗೆ ಇದಕ್ಕೆ ನನಗೆ ಉತ್ತರ ಬೇಕು” “”ಇದು ನಿಮ್ಮಿಬ್ಬರ ಪ್ರಾಬ್ಲಿಮ್ಮು ನನ್ನನ್ಯಾಕೆ ಇದರಲ್ಲಿ ಸಿಕ್ಕಿಸ್ತೀಯ?” ಅಸಹಾಯಕನಾಗಿ ಬಡಬಡಿಸಿದೆ.
“”ನನ್ನ ಸಮಸ್ಯೆ ಅಂದ್ರೆ ಅದು ನಿನ್ನ ಸಮಸ್ಯೆ. ಹೆಚ್ಚಿಗೆ ಮಾತು ಬೇಡ, ಶಿಫ್ಟ್ ಮುಗಿಯೋದೊಳಗೆ ಬಟ್ಟೆಗೆ ಉಪ್ಪು ಯಾಕೆ ಹಾಕ್ತಾರೆ ಅನ್ನೋ ವಿಷಯ ನನಗೆ ತಿಳಿಯಲೇಬೇಕು” ಸುಬ್ಬು ಚಾಲೆಂಜ್ ಮಾಡಿದ. ನಾನು, “”ಉತ್ತರ ಹೇಳಿದರೆ?” ಕನಲಿ ಕೇಳಿದೆ.
“”ನಾನು ತಲೆ ಬೋಳಿಸ್ಕೋತೀನಿ” ಭಯಂಕರ ಚಾಲೆಂಜ್ ಮುಂದಿಟ್ಟು ದೂರ್ವಾಸನಂತೆ ಹೋದ ಸುಬ್ಬು. “”ಸುಬ್ಬು ಸಾರ್ ಯಾಕೆ ಹಾಗೆ ಹೋದರು?” ಎದುರು ನನ್ನ ಆಫೀಸ್ ಪಿ.ಎ. ಮಣಿ ನಿಂತಿದ್ದಳು. “”ಗೊತ್ತಿಲ್ಲಮ್ಮ. ಬಟ್ಟೆಗೆ ಉಪ್ಪು ಯಾಕೆ ಹಾಕ್ತಾರೆ ಅನ್ನೋ ವಿಷಯ ಅವನಿಗೆ ತಿಳೀಬೇಕಂತೆ” “”ಅದಕ್ಕೆ ಯಾಕ್ಸಾರ್ ಅಷ್ಟು ಕೋಪ ಅವರಿಗೆ?” “”ಗೊತ್ತಿಲ್ಲಮ್ಮ. ಬಟ್ಟೆಗೆ ಉಪ್ಪಂತೆ? ಯಾರಿಗೆ ಗೊತ್ತು ಆ ಮಹಾನ್ ಸೀಕ್ರೆಟ್ಟು?” “”ಏನ್ಸಾರ್? ಬಟ್ಟೆಗೆ ಉಪ್ಪಾ? ಹಳೇ ಬಟ್ಟೆಗೊ? ಇಲ್ಲಾ ಹೊಸಾ ಬಟ್ಟೆಗೊ? ಕಾಟನ್ನೋ ಇಲ್ಲಾ ಸಿಂಥೆಟಿಕ್ಕೋ?” ನನ್ನ ತಲೆಯಲ್ಲಿ ಮಿಂಚು ಮಿಂಚಿತು. “”ಅಂದ್ರೆ ಮಣಿ, ಬಟ್ಟೆಗೆ ಉಪ್ಪು ಹಾಕ್ತಾರೆ ಅಲ್ವಾ?” “”ಹೌದು ಸಾರ್. ಕಾಟನ್ ಬಟ್ಟೆ ಹೊಸದಾಗಿ ತಗೊಂಡಾಗ, ಬಣ್ಣ ಬಿಡದೆ ಇರಲಿ ಅಂತಾ ನೀರಲ್ಲಿ ಎರಡು ಸ್ಪೂನ್ ಉಪ್ಪು ಬೆರೆಸಿ ಒಂದು ಅರ್ಧ ದಿವಸ ನೆನಸಿಡುತ್ತಾರೆ. ಹೀಗ್ಮಾಡಿದ್ರೆ ಬಣ್ಣ ಗಟ್ಟಿ ನಿಲ್ಲುತ್ತೆ”
“”ಅರೆ, ಹೌದಾ..? ಥ್ಯಾಂಕ್ಸ್ ಮಣಿ. ಬಚಾವಾದೆ” “”ಯಾಕ್ಸಾರ್? ಬಚಾವಾಗೋ ಅಂಥಾದ್ದು ಏನು ವಿಷಯ?”
“”ಸಾರಿ, ಏನೇನೋ ಹೇಳ್ತಿದ್ದೆ. ಥ್ಯಾಂಕ್ಸ್” ಮಣಿ ಹೊರಟುಹೋದಳು. ತತ್‌ಕ್ಷಣ ಸುಬ್ಬುವನ್ನು ಹುಡುಕಿಕೊಂಡು ಹೋದೆ. ಚೆೇಂಬರಿನಲ್ಲಿ ಕೂತಿದ್ದ. “”ನಾಳೆ, ನಿನ್ನ ತಲೆಬೋಳು” ಎಂದು ನಕ್ಕೆ. “”ಯಾಕೆ?” ಹುಬ್ಬು ಹಾರಿಸಿದ. “”ಹೊಸಾ ಬಟ್ಟೆಗೆ ಉಪ್ಪು ಹಾಕಿ ನೆನೆಸೋದು, ಅದು ಬಣ್ಣ ಬಿಡದೆ ಇರಲಿ ಅಂತ. ಈಗ ನಿನ್ನ ಬಣ್ಣ ಹೋಯ್ತು. ತಲೆಗೂದಲು ಗೊತ್ತಲ್ಲ?” ಸುಬ್ಬು ಪೆಚ್ಚಾಗಿದ್ದ. ನಾನು ವಿಜಯದ ನಗೆನಕ್ಕು ವಾಪಸಾದೆ. ಸುಬ್ಬು ಮರೆತು ಕೆಲಸದಲ್ಲಿ ಮುಳುಗಿದೆ. ಮಾರನೆಯ ದಿನ ಸುಬ್ಬು ಫ್ಯಾಕ್ಟ್ರಿಯಲ್ಲಿ ಕಾಣಲಿಲ್ಲ. ಅನುಮಾನವಾಯಿತು. ಕೆಲ್ಸ ಜಾಸ್ತಿಯಿತ್ತು ಮರೆತೆ. ಎರಡು ದಿನದ ನಂತರ ಸುಬ್ಬು ಫ್ಯಾಕ್ಟ್ರಿಯಲ್ಲಿ ಕಾಣಿಸಿದ-ಬೋಳು ತಲೆಯೊಂದಿಗೆ ! ಅಂದ್ರೆ ಚಾಲೆಂಜ್ ಗಂಭೀರವಾಗೇ ತೆಗೆದುಕೊಂಡುಬಿಟ್ಟನೆ? ಅವನ ಬೋಳು ಮಂಡೆಗೆ ನಾನೇ ಕಾರಣವಾದೆ ಎಂದು ಬೇಸರಪಟ್ಟೆ.
ಆದರೆ, ಸುಬ್ಬು ಒಲಂಪಿಕ್ಸ್ ಮೆಡಲ್ ಗೆದ್ದವನಂತೆ ಬೀಗುತ್ತಿದ್ದ ! “”ಯಾಕೊ?” ಎಂದೆ.
“”ತಿರುಪತಿಗೆ ಹೋಗಿದ್ದೆ. ಹರಕೆ ತೀರಿಸಿ ಬಂದೆ” ಬೋಳು ತಲೆ ಮೇಲೆ ಕೈಯಾಡಿಸಿ ಗಹಗಹಿಸಿ ನಕ್ಕ. ಸ್ವಾಮಿಕಾರ್ಯ, ಸ್ವಕಾರ್ಯ ಎರಡೂ ಸಾಧಿಸಿದ್ದ! ಎಸ್. ಜಿ. ಶಿವಶಂಕರ್