Advertisement

ಸಿಎಎ ಜಾರಿಗೊಳಿಸುವ ಅವಶ್ಯಕತೆ ಏನಿತ್ತು: ರಮೇಶ್‌ ಕುಮಾರ್‌

09:59 AM Jan 13, 2020 | sudhir |

ಬೆಂಗಳೂರು: ದೇಶದಲ್ಲಿ ಸಾಮಾನ್ಯ ಜನ ಎದುರಿಸುವ ಸಮಸ್ಯೆಗಳನ್ನು ಬಗೆಹರಿಸುವುದಕ್ಕಿಂತ ಹೆಚ್ಚಾಗಿ ಕೇಂದ್ರ ಸರ್ಕಾರಕ್ಕೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸುವುದು ಮುಖ್ಯವಾಗಿರುವುದು ಸೋಜಿಗ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್‌. ರಮೇಶ್‌ ಕುಮಾರ್‌ ಬೇಸರ ವ್ಯಕ್ತಪಡಿಸಿದರು.

Advertisement

ಎಂ.ಎಸ್‌.ಕೃಷ್ಣನ್‌ ಸ್ಮರಣ ಸಂಸ್ಥೆ ಹಾಗೂ ನವಕರ್ನಾಟಕ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಭಾನುವಾರ ಗಾಂಧಿ ಭವನದಲ್ಲಿ ನಡೆದ ಬಿ.ವಿ. ಕಕ್ಕಿಲ್ಲಾಯ ನೂರರ ನೆನಪು ಸಂಭ್ರಮ, ಪುಸ್ತಕಗಳ ಲೋಕಾರ್ಪಣೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನರ ಜೀವನ ಗುಣಮಟ್ಟ ಸುಧಾರಿಸುವ, ಜಿಡಿಪಿ- ಉದ್ಯೋಗ ಹೆಚ್ಚಳ, ಸಾರ್ವಜನಿಕ ವಲಯವನ್ನು ಅಭಿವೃದ್ಧಿಪಡಿಸುವುದು ಮುಂತಾದವುಗಳ ಬಗ್ಗೆ ಗಮನಹರಿಸುವುದು ಸರ್ಕಾರದ ಆದ್ಯತೆ ಆಗಬೇಕಿತ್ತು. ಬದಲಾಗಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯಂತಹ ಕಾನೂನುಗಳನ್ನು ಜಾರಿಗೊಳಿಸುವುದು ಆದ್ಯತೆಯಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಇವುಗಳ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ ಅವರು, ಉದ್ದೇಶಿತ ಕಾಯ್ದೆಯು ಕೇವಲ ಮಸಲ್ಮಾನರಿಗೆ ತೊಂದರೆಯುಂಟಾಗುವುದಿಲ್ಲ. ಎಲ್ಲಾ ಜನತೆಗೂ ಸಮಸ್ಯೆಯಾಗಲಿದೆ ಎಂಬುದನ್ನು ಅರಿತು ಯುವಜನತೆ ಬೀದಿಗಿಳಿದಿದ್ದಾರೆ ಎಂದು ಹೇಳಿದರು.

ಸಂಸತ್ತು ಪ್ರವೇಶಿಸಿದ ನಂತರ ರಾಜಕಾರಣಿಗಳ ಆದ್ಯತಾ ವಿಷಯಗಳು ಬದಲಾಗುತ್ತಿವೆ. ಚುನಾವಣೆ ಪೂರ್ವದಲ್ಲಿ ಜನರ ಜೀವನಮಟ್ಟ ಸುಧಾರಿಸುವುದಾಗಿ ಆಶ್ವಾಸನೆ ನೀಡುವ ರಾಜಕಾರಣಿಗಳು, ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ನಿಲುವುಗಳನ್ನು ಬದಲಿಸುತ್ತಿರುವುದು ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಸದೀಯ ಪ್ರಜಾಪ್ರಭುತ್ವದಲ್ಲಿ ಪ್ರಗತಿಪರ ಶಾಸನಗಳನ್ನು ಜಾರಿಗೊಳಿಸಿ ಸಮಾಜದ ಸ್ಥಿತಿಯನ್ನು ಬದಲಾಯಿಸುವುದು ಬಿ.ವಿ.ಕಕ್ಕಿಲ್ಲಾಯ ರಾಜಕೀಯ ಸಿದ್ಧಾಂತವಾಗಿತ್ತು. ಸಾರ್ವಜನಿಕ ಜೀವನ, ಚುನಾವಣೆ ಪ್ರವೇಶಿಸಿ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಜೀವನ ನಡೆಸಿ ರಾಜಕಾರಣಿಗಳಿಗೆ ಮಾದರಿಯಾಗಿದ್ದರು ಎಂದು ಇದೇ ವೇಳೆ ತಿಳಿಸಿದರು.

Advertisement

ಸಮಾರಂಭದಲ್ಲಿ ಬಿ.ವಿ. ಕಕ್ಕಿಲ್ಲಾಯ ಅವರ “ಬಿ.ವಿ. ಕಕ್ಕಿಲ್ಲಾಯ ಇನ್‌ ಪಾರ್ಲಿಮೆಂಟ್‌’, “ಮನುಷ್ಯನ ಮಹಾಯಾನ’ ಕೃತಿಗಳು ಲೋಕಾರ್ಪಣೆಗೊಂಡವು. ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕ ಸಿದ್ಧನಗೌಡ ಪಾಟೀಲ, ಪದಾಧಿಕಾರಿ ಎಂ.ಎಸ್‌. ಕೃಷ್ಣನ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next