Advertisement

ಇರುವ ಅರ್ಧಂಬರ್ಧ ರಸ್ತೆಗೆ ದುಬಾರಿ ಸುಂಕ ಯಾಕೆ ಕಟ್ಟಬೇಕು?

10:59 PM Jul 15, 2019 | Sriram |

ಸುರತ್ಕಲ್‌: ಸುರತ್ಕಲ್‌, ಮುಕ್ಕ, ಕೊಟ್ಟಾರ ಚೌಕಿ ವರೆಗಿನ ಮಾರ್ಗದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುಂಕ ವಸೂಲಿ ಮಾಡುವುದು ಮಾತ್ರ ಕಾಣುತ್ತದೆಯೇ ಹೊರತು ಒಳ್ಳೆಯ ಗುಣಮಟ್ಟದ ರಸ್ತೆಯಲ್ಲ.

Advertisement

ಟೋಲ್‌ಗೇಟ್‌ನಿಂದ ಹುಡುಕಿಕೊಂಡು ಹೊರಟರೆ ಕೊಟ್ಟಾರ ಚೌಕಿವರೆಗೆ ಕನಿಷ್ಠ ಎಂದರೂ ಒಂದು ಸಾವಿರ ಗುಂಡಿಗಳಿವೆ (ಚಿಕ್ಕದು-ದೊಡ್ಡದು ಸೇರಿ). ಮಳೆಗಾಲದಲ್ಲಂತೂ ಅವುಗಳಲ್ಲಿ ನೀರು ನಿಂತು ವಾಹನ ಸವಾರರಿಗೆ ತಿಳಿಯದೆ ಕೆಳಗಿಳಿಸಿ ಅಪಘಾತಕ್ಕೀಡಾಗುವ ಸಂಭವವೇ ಹೆಚ್ಚು. ಹಾಗೆಂದು ಬೇಸಗೆಯಲ್ಲೇನೂ ಈ ರಸ್ತೆ ಚೆನ್ನಾಗಿರಲಿಲ್ಲ. ಪ್ರತಿ ಬಾರಿಯೂ ಈ ರಸ್ತೆಯಲ್ಲಿ ಸಂಚರಿಸುವುದೇ ತ್ರಾಸದಾಯಕವಾಗಿದೆ. ಹೆದ್ದಾರಿಯ ಇಕ್ಕೆಲಗಳಲ್ಲಿ ಫ‌ುಟ್‌ಪಾತ್‌ಗಳಿಲ್ಲ. ಜನರು ಗುಂಡಿಗಳಲ್ಲಿ ತುಂಬಿಕೊಂಡ ನೀರಿನಲ್ಲೇ ಮುಳುಗಿ ಎದ್ದು ಸಾಗಬೇಕು. ಅಚ್ಚರಿ ಅಂದರೆ ಪ್ರತೀ ವರ್ಷ ಡಾಮರು ಹಾಕಿದ ಎರಡು ತಿಂಗಳೊಳಗೆ ರಸ್ತೆ ಹಾಳಾಗುತ್ತದೆ. ಹಾಗಾದರೆ ಇದರ ಗುಣಮಟ್ಟ ಎಷ್ಟರಮಟ್ಟಿನದು ಎಂಬುದು ಸಾರ್ವಜನಿಕರ ಪ್ರಶ್ನೆ.

ಈಗಾಗಲೇ ಎರಡು ಟೋಲ್‌ಗೇಟ್‌ ಇರುವುದೇ ಜನರಿಗೆ ಸಂಕಷ್ಟ ತಂದೊಡ್ಡಿದೆ. ಇಂಥದ್ದರ ಮಧ್ಯೆ ಗುತ್ತಿಗೆದಾರರ ನಷ್ಟ ತುಂಬಿಕೊಡಲು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಸ್ಥಳೀಯರಿಂದಲೂ ಸುಂಕ ವಸೂಲಿಗೆ ಅವಕಾಶ ಕಲ್ಪಿಸಿದೆ. ಎಷ್ಟು ವಿಚಿತ್ರ ವೆಂದರೆ, ಸುಂಕ ವಸೂಲು ಮಾಡುವ ಕಂಪೆನಿ ಒದಗಿಸ ಬೇಕಾದ ಒಂದೂ ಸೌಲಭ್ಯ ಒದಗಿಸಿಲ್ಲ ; ಸರ್ವಿಸ್‌ ರಸ್ತೆ ಕೇಳುವಂತಿಲ್ಲ. ಟೋಲ್‌ಗೇಟ್‌ನಿಂದ ಹಿಡಿದು ಕೊಟ್ಟಾರ ಚೌಕಿವರೆಗೂ ಇರುವ ರಸ್ತೆ ಸಂಚಾರ ಯೋಗ್ಯವಾಗಿಲ್ಲ. ಇದರ ಬದಲು ಉತ್ತಮ ಗುಣಮಟ್ಟದ ರಸ್ತೆ ಕಲ್ಪಿಸಿ ಎಂದು ಯಾವ ಸರಕಾರಿ ಇಲಾಖೆಯೂ ಕಂಪೆನಿಗೆ ಹೇಳಿಲ್ಲ. ಟೋಲ್‌ ಸಂಗ್ರಹಕ್ಕೆ ಸರಕಾರದ ಆದೇಶದಂತೆ ಪೊಲೀಸ್‌ ಭದ್ರತೆ ಒದಗಿಸುವ ಜಿಲ್ಲಾಡಳಿತವೂ ತಿಳಿ ಹೇಳಿಲ್ಲ. ಹಾಗಾದರೆ ಇಷ್ಟೊಂದು ಹಾಳಾದ ರಸ್ತೆಯಲ್ಲಿ ಓಡಾಡುವ ಜನರು ತಮ್ಮ ವಾಹನಗಳನ್ನು ಹಾಳು ಮಾಡಿಕೊಂಡು ಸುಂಕ ಯಾಕೆ ಕಟ್ಟಬೇಕು? ಸ್ಥಳೀಯರ್ಯಾಕೆ ಸುಂಕ ಪಾವತಿಸಬೇಕು? ಸಂಕಷ್ಟ ಇರುವುದು ಕೇವಲ ಕಂಪೆನಿಗಳಿಗೆ ಮಾತ್ರವೇ? ನಮಗಿಲ್ಲವೇ?- ಇದು ಜಿಲ್ಲಾಡಳಿತಕ್ಕೆ, ಸರಕಾರಕ್ಕೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ, ಸಚಿವಾಲಯಕ್ಕೆ ಸಾರ್ವಜನಿಕರು ಕೇಳುತ್ತಿರುವ ಪ್ರಶ್ನೆ.

ಸರ್ವಿಸ್‌ ರಸ್ತೆ ಹುಡುಕಬೇಡಿ
ಬೈಕಂಪಾಡಿ ಪಣಂಬೂರು ಪ್ರದೇಶದಲ್ಲಿ ಸರ್ವಿಸ್‌ ರಸ್ತೆಯೇ ಮಾಯವಾಗಿದೆ. ಯಾಕೆಂದರೆ ಇರುವ ರಸ್ತೆಗೆ ಡಾಮರು ಹಾಕದೆ ಹಲವು ವರ್ಷಗಳೇ ಸಂದಿವೆ. ಇದರೊಂದಿಗೆ ಕೈಗಾರಿಕಾ ಪ್ರದೇಶವಾದ ಕೂಳೂರಿನಿಂದ ಪಣಂಬೂರುವರೆಗೆ ಸರ್ವಿಸ್‌ ರಸ್ತೆಯನ್ನೇ ಅರೆ ಬರೆಯಾಗಿ ನಿರ್ಮಿಸಲಾಗಿದೆ. ಆದ ಕಾರಣದಿಂದ ನಿತ್ಯವೂ ಸಾವಿರಾರು ಕಾರ್ಮಿಕರು ಜೀವ ಕೈಯಲ್ಲಿ ಹಿಡಿದು ಹೆದ್ದಾರಿಯಲ್ಲಿಯೇ ದ್ವಿಮುಖವಾಗಿ ಸಂಚರಿಸಬೇಕು. ಸ್ವಲ್ಪ ಹೆಚ್ಚು ಕಡಿಮೆಯಾದರೂ ಜೀವಕ್ಕೆ ಕುತ್ತು ಖಚಿತ.
ಸಾವಿರಾರು ಅ ಧಿಕ ಭಾರದ ಲಾರಿಗಳು ನಿತ್ಯ ಬಂದರು, ವಿವಿಧ ಕಂಪೆನಿಗಳಿಗೆ ಆಗಮಿಸಿ ಸರಕು ಕೊಂಡೊಯ್ಯತ್ತವೆ. ಇಲ್ಲಿ ವಾಹನಗಳೂ ವೇಗವಾಗಿ ಸಾಗುತ್ತವೆ. ಮಾತ್ರವಲ್ಲ ಇದು ಕೆರೆ, ಹಳ್ಳ ಕೊಳ್ಳಗಳ ಪ್ರದೇಶವಾದ ಕಾರಣ ಮಳೆಗಾಲದಲ್ಲಿ ತೇವಾಂಶ ಹೆಚ್ಚಾಗಿ ಹೆದ್ದಾರಿ ಶಿಥಿಲವಾಗುವುದುಂಟು. ಅದಕ್ಕೆ ವಿಶೇಷವಾದ ನಿರ್ವಹಣೆ ಅವಶ್ಯ. ಆ ಬಗ್ಗೆ ಯಾವ ಮುತುವರ್ಜಿಯನ್ನೂ ಕಂಪೆನಿ ವಹಿಸಿಲ್ಲ ಎಂಬುದು ಕೇಳಿಬರುತ್ತಿರುವ ಟೀಕೆ.

ಬೈಕಂಪಾಡಿ, ಪಣಂಬೂರು ವಾಹನ ದಟ್ಟಣೆ ಅಧಿ ಕವಿರುವ ಪ್ರದೇಶ. ಹೊಂಡ ಗುಂಡಿ ತಪ್ಪಿಸಿ ಬದಿಗೆ ಸಾಗಲು ಸರ್ಕಸ್‌ ಮಾಡಬೇಕು. ಇದರಿಂದ ಹಲವು ಬಾರಿ ವಾಹನಗಳು ಪರಸ್ಪರ ಢಿಕ್ಕಿ ಹೊಡೆಯುವ ಸಂಭವವೂ ಉಂಟು. ಗುಂಡಿ ತಪ್ಪಿಸಿ ಸಾಗಲು ದ್ವಿಚಕ್ರ ವಾಹನ ಸವಾರರು ಪಡುವ ಹರಸಾಹಸವನ್ನು ಕಣ್ಣಾರೆ ನೋಡಬೇಕು. ರಾತ್ರಿ ವೇಳೆ ಈ ಮಾರ್ಗದಲ್ಲಿ ಸಂಚರಿಸುವುದೇ ಕಷ್ಟ. ಬಸ್‌, ಕಾರು ಇತ್ಯಾದಿ ವಾಹನಗಳು ವೇಗವಾಗಿ ಬಂದು ಒಮ್ಮೆಲೆ ಬ್ರೇಕ್‌ ಒತ್ತಿ ಸಾಗುವುದು ಸಾಮಾನ್ಯವಾಗಿದೆ. ಯಾಕೆಂದರೆ, ಬೃಹತ್‌ ಹೊಂಡಗಳೇ ತೋರುವುದೇ ಇಲ್ಲ. ಆದರೂ ರಸ್ತೆಯನ್ನು ನಿರ್ವಹಿಸಬೇಕಾದ ಕಂಪೆನಿಗೆ ಬೇಸರವೇ ಇಲ್ಲವೆಂಬಂತಾಗಿದೆ.

Advertisement

ಪಾಲಿಕೆ ವ್ಯಾಪ್ತಿಗೂ ಸುಂಕ ?
ಇಷ್ಟೊಂದು ಅವ್ಯವಸ್ಥೆಯ ಗೂಡಾಗಿದ್ದರೂ ಟೋಲ್‌ ಪಡೆಯುವುದಕ್ಕಾಗಿಯೇ ಈ ರಸ್ತೆಯನ್ನು ನ್ಯೂ ಮಂಗಳೂರು ಪೋರ್ಟ್‌ ರೋಡ್‌ ಕಂಪೆನಿ ಎಂದು ಹೆದ್ದಾರಿ ಇಲಾಖೆಯೇ ಕಾನೂನಿನಲ್ಲಿ ಅಲ್ಪ ಬದಲಾವಣೆ ಮಾಡಿ ಪಾಲಿಕೆ ವ್ಯಾಪ್ತಿಯನ್ನೂ ಸುಂಕ ವ್ಯಾಪ್ತಿಗೆ ಸೇರಿಸಿದೆ.

ಪ್ರಥಮ ಮಳೆಗೆ ಹೊಂಡ
ರಸ್ತೆಗೆ ತೇಪೆ ಹಾಕಿದ್ದರೂ ಎರಡು ತಿಂಗಳಲ್ಲಿ ಎದ್ದು ಹೋಗಿ ಪ್ರಥಮ ಮಳೆಗೆ ಹೊಂಡ ಬಿದ್ದಿವೆ. ವಾಹನ ಸವಾರರು ಇನ್ನು ಮಳೆಗಾಲ ಮುಗಿಯುವ ತನಕ ಇದೇ ರಸ್ತೆಯಲ್ಲಿ ಸಾಗಬೇಕು. ಮಳೆಗಾಲ ಮುಗಿದ ಮೇಲಾದರೂ ರಸ್ತೆ ಸಿಕ್ಕೀತೆಂದು ಸಂಭ್ರಮಿಸಬೇಕಿಲ್ಲ. ಆಗ ಗುಂಡಿಗಳಲ್ಲಿ ನೀರಿರುವುದಿಲ್ಲ ಎಂಬುದಷ್ಟೇ ಸಮಾಧಾನ. ಬೃಹತ್‌ ಹೊಂಡ ತಪ್ಪಿಸುವ ಭರದಲ್ಲಿ ವಾಹನಗಳನ್ನು ದಿಢೀರನೇ ತಿರುಗಿಸುವ ಕಾರಣ ಅಪಘಾತದ ಸಾಧ್ಯತೆ ಹೆಚ್ಚು. ಇದಾವುದೂ ಸರಕಾರಿ ಇಲಾಖೆಗಳಿಗಾಗಲೀ, ಜಿಲ್ಲಾಡಳಿತಕ್ಕಾಗಲೀ, ಸರಕಾರಗಳಿ ಗಾಗಲೀ, ಜನಪ್ರತಿನಿಧಿಗಳಿಗಾಗಲೀ ದೊಡ್ಡದೆನಿಸಿಯೇ ಇಲ್ಲ ಎಂಬುದೇ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣ.

ಎಲ್ಲ ಇಲ್ಲಗಳಿಗೆ ಟೋಲ್‌ ವಸೂಲಿ
ಇದು ರಾಷ್ಟ್ರೀಯ ಹೆದ್ದಾರಿ ಎಂದು ಹೆಸರಿಗಷ್ಟೇ ಹೇಳುವಂತಾಗಿದೆ. ಸರ್ವಿಸ್‌ ರಸ್ತೆಯಿಲ್ಲ, ಸರಿಯಾದ ಚರಂಡಿಯಿಲ್ಲ, ಫ‌ುಟ್‌ ಪಾತ್‌ ವ್ಯವಸ್ಥೆಯಿಲ್ಲ. ಇನ್ನು ಸುರತ್ಕಲ್‌ ಟೋಲ್‌ ಕೇಂದ್ರದಲ್ಲಿ ಶೌಚಾಲಯ, ವಾಹನಗಳಿಗೆ ಟೋಯಿಂಗ್‌ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಪಾರ್ಕಿಂಗ್‌ ಯಾವುದೂ ಇಲ್ಲ. ಜೋರಾಗಿ ಗಾಳಿ ಬಂದರೆ ಹಾರಿ ಹೋಗುವ ತಗಡು ಶೀಟ್‌ನಲ್ಲಿ ಟೋಲ್‌ ಕೇಂದ್ರ ಮಾಡಲಾಗಿದೆ. ಇದಕ್ಕೂ ಜನರೇಕೆ ಟೋಲ್‌ ಕಟ್ಟಬೇಕೆಂಬುದಕ್ಕೆ ಯಾವ ಇಲಾಖೆಯೂ ಉತ್ತರಿಸುವುದಿಲ್ಲ.

-ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next