Advertisement

Siddaramaiah ತಪ್ಪು ಮಾಡಿಲ್ಲಂದ್ರೆ ರಾಜ್ಯಪಾಲರನ್ನೇಕೆ ಪ್ರಶ್ನಿಸುತ್ತೀರಿ: ಆರ್‌. ಅಶೋಕ್‌

10:32 PM Aug 03, 2024 | Team Udayavani |

ಬೆಂಗಳೂರು: ತಪ್ಪು ಮಾಡಿಲ್ಲ ಎನ್ನುವುದಾದರೆ ನೋಟಿಸ್‌ ಕೊಟ್ಟ ರಾಜ್ಯಪಾಲರನ್ನೇಕೆ ಪ್ರಶ್ನಿಸುತ್ತೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮರುಪ್ರಶ್ನೆ ಹಾಕಿರುವ ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್‌, ರಾಜ್ಯಪಾಲರ ನೋಟಿಸ್‌ಗೆ ನಡುಗುತ್ತಿರುವ ನೀವು ಅಭಿಯೋಜನೆಗೆ (ಪ್ರಾಸಿಕ್ಯೂಷನ್‌) ಅನುಮತಿ ನೀಡಿದರೆ ಹೇಗೆ ಸಹಿಸಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.

Advertisement

ಬೆಂಗಳೂರಿನ ಕೆಂಗೇರಿ ಬಳಿ ಶನಿವಾರದಂದು “ಮೈಸೂರು ಚಲೋ’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್‌ ಈ ಪಾದಯಾತ್ರೆಯನ್ನ ಏಕೆ ಮಾಡುತ್ತಿದೆ ಎಂದು ಕಾಂಗ್ರೆಸಿನವರು ನಮ್ಮನ್ನು ಪ್ರಶ್ನಿಸಿದ್ದಾರೆ. ಜನ ನಮ್ಮನ್ನು ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ಸರ್ಕಾರ ತಪ್ಪು ಮಾಡಿದರೆ ಪ್ರಶ್ನಿಸಿ ಎಂದಿದ್ದಾರೆ. ನೀವು ತಪ್ಪು ಮಾಡಿದ್ದೀರಿ. ಅದನ್ನು ಪ್ರಶ್ನಿಸಲು ಈ ಪಾದಯಾತ್ರೆ ಮಾಡುತ್ತಿದ್ದೇವೆ ಎಂದರು.

ವಾಲ್ಮೀಕಿ ನಿಗಮದಲ್ಲಿ ಹಣ ವರ್ಗಾವಣೆಯಾದ ಬಗ್ಗೆ ಸದನದಲ್ಲಿ ಚರ್ಚಿಸಲು ಅವಕಾಶ ಕೊಡುವ ನೀವು, ಮುಡಾ ವಿಷಯ ಬಂದ ಕೂಡಲೇ ತಪ್ಪಿಸಿಕೊಂಡಿರಿ. ಭ್ರಷ್ಟಾಚಾರಿ ಅಲ್ಲ ಎನ್ನುವ ನಿಮಗೆ ಮನೆ ಕಟ್ಟಲು 14 ನಿವೇಶನ ಬೇಕೆ? ಜನ ಸಾಮಾನ್ಯರಿಗೆ ಮನೆ ಕಟ್ಟಲು ಎಷ್ಟು ನಿವೇಶನ ಬೇಕು? ಕೆಂಗೇರಿಯಲ್ಲಿ ಜಮೀನು ತೆಗೆದುಕೊಂಡು, ಅದಕ್ಕೆ ಪರ್ಯಾಯವಾಗಿ ಎಂ.ಜಿ. ರಸ್ತೆಯಲ್ಲಿ ನಿವೇಶನ ಕೊಟ್ಟರೆ ಒಪ್ಪಬಹುದೆ? ನಿಮ್ಮ ಕುಟುಂಬಕ್ಕೆ 14 ನಿವೇಶನ ಸಾಲದು ಎಂದು ಬೆಂಬಲಿಗರಿಗೆ 300 ನಿವೇಶನ ಪಡೆದಿದ್ದೀರಿ. ಇದು ತಪ್ಪಲ್ಲವೇ? ಎಂದು ಕೇಳಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಇದ್ದಾಗ ಅಂದಿನ ರಾಜ್ಯಪಾಲರು ಹೇಗೆ ಅಭಿಯೋಜನೆಗೆ ಅನುಮತಿ ಕೊಟ್ಟಿದ್ದರು? ಅಂದು ಇದ್ದದ್ದೂ ಅಂಬೇಡ್ಕರ್‌ ಸಂವಿಧಾನವೇ, ಇಂದಿರುವುದೂ ಅದೇ ಅಂಬೇಡ್ಕರರ ಸಂವಿಧಾನವೇ. ರಾಜ್ಯಪಾಲರ ನೋಟಿಸ್‌ಗೆà ಗಡಗಡ ನಡುಗುತ್ತೀರಿ ಎನ್ನುವುದಾದರೆ, ಅಭಿಯೋಜನೆಗೆ ಅನುಮತಿ ಕೊಟ್ಟರೆ ಸಹಿಸುತ್ತೀರಾ? ಇದನ್ನೆಲ್ಲ ಪ್ರಶ್ನಿಸಿಯೇ ನಾವು ಪಾದಯಾತ್ರೆ ಕೈಗೊಂಡಿದ್ದೇವೆ. ಕಾಂಗ್ರೆಸಿಗರು ನಮಗೆ ದಾರಿ ಮಾಡಿಕೊಡಲು ಮುಂದೆ ಸಾಗಿದ್ದಾರೆ. ಅವರದ್ದು ಒಡೆದ ಮನೆಯಾಗಿದೆ ಎಂದು ಆರ್‌.ಅಶೋಕ್‌ ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next