Advertisement

ಹೋರಾಟವನ್ನು ವಿಸ್ತರಿಸಿದ ಕುಸ್ತಿಪಟುಗಳು: ಮಹಿಳಾ, ರೈತ ಸಂಘಟನೆಗಳಿಗೂ ಜತೆ ನೀಡುವಂತೆ ಕರೆ

01:18 AM Apr 25, 2023 | Team Udayavani |

ಹೊಸದಿಲ್ಲಿ: ಭಾರತೀಯ ಕುಸ್ತಿ ಸಂಸ್ಥೆ ಅಧ್ಯಕ್ಷ ಬ್ರಿಜ್‌ಭೂಷಣ ಶರಣ್‌ ಸಿಂಗ್‌ ವಿರುದ್ಧ ಮುಗಿಬಿದ್ದಿರುವ ಕುಸ್ತಿಪಟುಗಳು ಹೋರಾಟವನ್ನು ಮತ್ತೊಂದು ಮಜಲಿಗೆ ಒಯ್ದಿದ್ದಾರೆ. ರವಿವಾರ ರಾತ್ರಿಯಿಡೀ ಜಂತರ್‌ ಮಂತರ್‌ನ ಫ‌ುಟ್‌ಪಾತ್‌ನಲ್ಲಿ ಮಲಗಿ ಕಾಲ ಕಳೆದಿದ್ದು, ಈಗ ತಮಗೆ ನೆರವು ನೀಡುವಂತೆ ಸಮಾಜದ ಎಲ್ಲ ವಲಯಗಳಿಗೂ ಕರೆ ನೀಡಿದ್ದಾರೆ.

Advertisement

ಇಲ್ಲಿಯವರೆಗೆ ನಾವು ಹೋರಾಟ ವನ್ನು ರಾಜಕೀಯಮುಕ್ತವಾಗಿಟ್ಟಿದ್ದೆವು. ಆದರೆ ಈಗ ಪೊಲೀಸರು, ರೈತ ಸಂಘಟ ನೆಗಳು, ಮಹಿಳಾ ಸಂಘಟನೆಗಳು ನಮ್ಮ ನೆರವಿಗೆ ಬರುವಂತೆ ಕೇಳಿಕೊಳ್ಳುತ್ತಿದ್ದೇವೆ ಎಂದು ವಿಶ್ವವಿಖ್ಯಾತ ಕುಸ್ತಿಪಟು ಬಜರಂಗ್‌ ಪುನಿಯ ಹೇಳಿದ್ದಾರೆ.

ಇದರ ಬೆನ್ನಲ್ಲೇ ಕೇಂದ್ರ ಕ್ರೀಡಾ ಸಚಿವಾಲಯ ಡಬ್ಲ್ಯುಎಎಫ್ಐನ (ಕುಸ್ತಿ ಸಂಸ್ಥೆ) ಮೇ 7ರ ಚುನಾವಣೆಗೆ ತಡೆ ನೀಡಿದೆ. ಸಂಸ್ಥೆಯ ದಿನನಿತ್ಯದ ಚಟುವಟಿಕೆಯನ್ನು ನೋಡಿಕೊಳ್ಳಲು ಮಧ್ಯಂತರ ಸಮಿತಿಯನ್ನು ರಚಿಸು ವಂತೆ ಐಒಎಗೆ (ಭಾರತೀಯ ಒಲಿಂಪಿಕ್‌ ಸಂಸ್ಥೆ) ಸೂಚಿಸಿದೆ. ಆದರೆ ಇದಕ್ಕೆ ಕುಸ್ತಿಪಟುಗಳು ಬಗ್ಗಿಲ್ಲ. ನಮಗೆ ಈ ಚುನಾವಣೆಯಿಂದ ಆಗಬೇಕಾಗಿದ್ದೇನೂ ಇಲ್ಲ. ಬ್ರಿಜ್‌ಭೂಷಣ್‌ ಸಿಂಗ್‌ ಶರಣ್‌ ವಿರುದ್ಧ ಎಫ್ಐಆರ್‌ ದಾಖಲಾಗಬೇಕು, ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನೆ ನಿಲ್ಲಿಸಿದ್ದು ತಪ್ಪಾಯ್ತು
ಜನವರಿ ತಿಂಗಳಲ್ಲೇ ಕುಸ್ತಿಪಟುಗಳು ಜಂತರ್‌ ಮಂತರ್‌ನಲ್ಲಿ ಹಲವು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು. ಆಗ ಮಧ್ಯರಾತ್ರಿ ನಡೆದ ಸಂಧಾನ ಸಭೆಯ ಅನಂತರ ಕೇಂದ್ರ ಕ್ರೀಡಾಸಚಿವಾಲಯ ಮತ್ತು ಐಒಎಗಳು ತನಿಖಾ ಸಮಿತಿಗಳನ್ನು ರಚಿಸಿದ್ದವು. ಈ ಸಮಿತಿಗಳು ತಮ್ಮ ವಿಚಾರಣೆಯನ್ನು ಮುಗಿಸಿ ಎ. 5ಕ್ಕೆ ವರದಿ ನೀಡಿವೆ. ಇದುವರೆಗೆ ಅದರ ವರದಿ ಬಹಿರಂಗವಾಗಿಲ್ಲ. ಅದನ್ನಿನ್ನೂ ಪರಿಶೀಲಿಸಲಾಗುತ್ತಿದೆ ಎಂದು ಮೂಲ ಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಕುಸ್ತಿಪಟುಗಳು ಮತ್ತೆ ಸಿಡಿದೆದ್ದಿದ್ದಾರೆ.

ನಾವು ಹಿಂದೆ ಪ್ರತಿಭಟನೆ ನಿಲ್ಲಿಸಿದ್ದೇ ತಪ್ಪಾಯ್ತು. ಇನ್ನು ಮುಂದೆ ಯಾರ ಮಾತನ್ನೂ ಕೇಳುವುದಿಲ್ಲ. ಇನ್ನು ಮುಂದೆ ಹಿರಿಯರು, ಮೆಂಟರ್‌ಗಳ ಮಾತನ್ನು ಕೇಳಿ ಮುಂದುವರಿಯುತ್ತೇವೆ. ನಮಗೆ ಇನ್ನು ಯಾವ ಮಧ್ಯವರ್ತಿಗಳೂ ಬೇಡ. ಯಾರೂ ನಮ್ಮನ್ನು ವಂಚಿಸಲು ಅವಕಾಶ ನೀಡುವುದಿಲ್ಲ ಎಂದು ವಿನೇಶ್‌ ಫೊಗಾಟ್‌ ಹೇಳಿದ್ದಾರೆ.

Advertisement

ಸರ್ವೋಚ್ಚ ನ್ಯಾಯಾಲಯಕ್ಕೆ…
ಅದೇನೇ ಆಗಲಿ, ಹೊಸದಿಲ್ಲಿಯ ಕನ್ನಾಟ್‌ ಪ್ಲೇಸ್‌ ಪೊಲೀಸ್‌ ಠಾಣೆಯಲ್ಲಿ ಬ್ರಿಜ್‌ಭೂಷಣ್‌ ವಿರುದ್ಧ ಎಫ್ಐಆರ್‌ ದಾಖಲಾಗಲೇಬೇಕು. ಒಂದು ವೇಳೆ ನಾವು ಹೇಳುವುದು ಸುಳ್ಳಾದರೆ ನಮ್ಮ ವಿರುದ್ಧವೇ ಎಫ್ಐಆರ್‌ ದಾಖಲಿಸಿ ತನಿಖೆ ನಡೆಸಲಿ. ನಾವಿನ್ನು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರುತ್ತೇವೆ. ವಿಚಾರಣಾ ಸಮಿತಿ ನಮ್ಮ ವಿರುದ್ಧ ಪೂರ್ವಗ್ರಹಪೀಡಿತವಾಗಿದೆ. ನ್ಯಾಯ ಪಡೆಯುವುದಕ್ಕೆ ನಮಗೆ ಹಲವು ದಾರಿಗಳಿವೆ. ನಾವು ಸರ್ವೋಚ್ಚ ಪೀಠಕ್ಕೆ ಎಲ್ಲ ಮಾಹಿತಿ ಕೊಡುತ್ತೇವೆಂದು ವಿನೇಶ್‌ ಹೇಳಿದ್ದಾರೆ.

ಪ್ರಸ್ತುತ ಲೈಂಗಿಕ ಕಿರುಕುಳಕ್ಕೊಳಗಾಗಿ ರುವ ವ್ಯಕ್ತಿಗಳ ಹೆಸರನ್ನು ನ್ಯಾಯ ಪೀಠಕ್ಕೆ ಮಾತ್ರ ನೀಡುತ್ತೇವೆ. ಬೇರೆ ಕಡೆ ನೀಡಿದರೆ ಅದು ಬ್ರಿಜ್‌ಭೂಷಣಗೆ ಮಾತ್ರ ಸಹಾಯ ಮಾಡುತ್ತದೆ. ಅವರು ಬಿಜೆಪಿಯಿಂದ ಸಂಸದರಾಗಿರುವುದರಿಂದ ಸ್ವತಃ ಸರಕಾರವೇ ಒತ್ತಡದಲ್ಲಿರುವಂತೆ ಕಾಣುತ್ತದೆ. ಇಷ್ಟಾದರೂ ಸರರ್ಕಾರವೇಕೆ ತುಟಿ ಬಿಚ್ಚುತ್ತಿಲ್ಲ? ನಾವು ದೇಶಕ್ಕಾಗಿ ಪದಕ ಗೆದ್ದಾಗ ಎಲ್ಲರೂ ಸಮ್ಮಾನ ಮಾಡಿದ್ದರು. ಈಗ ರಸ್ತೆಯಲ್ಲಿ ನಿಂತು ಹೋರಾಡುತ್ತಿದ್ದರೆ ಒಬ್ಬರೂ ಉಸಿರೆತ್ತುತ್ತಿಲ್ಲ ಎಂದು ಬಜರಂಗ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಬಬಿತಾ ಮೇಲೆ ಅಸಮಾಧಾನ?
ಮಾಜಿ ಕುಸ್ತಿಪಟು ಬಬಿತಾ ಫೊಗಾಟ್‌ ಈಗ ಬಿಜೆಪಿಯಲ್ಲಿದ್ದಾರೆ. ಜನವರಿಯಲ್ಲಿ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದಾಗ ಇವರೇ ಸಂಧಾನ ನಡೆಸಿ ಎಲ್ಲರನ್ನೂ ತಣ್ಣಗೆ ಮಾಡಿದ್ದರು. ಪ್ರಸ್ತುತ ಅವರ ವಿರುದ್ಧವೂ ಕುಸ್ತಿಪಟುಗಳು ಸಿಟ್ಟಾಗಿದ್ದಾರೆ. ಬಹುಶಃ ಬಬಿತಾಗೆ ಈಗ ಕುಸ್ತಿಗಿಂತ ರಾಜಕೀಯವೇ ಪ್ರಿಯವಾಗಿರಬಹುದು ಎಂದು ವಿನೇಶ್‌ ತಣ್ಣಗೆ ಪ್ರತಿಕ್ರಿಯಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next