ಬೆಂಗಳೂರು: ಕೆರೆ ಸಂರಕ್ಷಣೆ ಸಂಬಂಧ ಸರ್ಕಾರ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ. ಆದರೂ, ನಗರಗಳಲ್ಲಿರುವ ಕೆರೆಗಳ ಅವಸಾನ ಮಾತ್ರ ನಿಂತಿಲ್ಲ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಯುನೈಟೆಡ್ ಬೆಂಗಳೂರು ಸಂಘಟನೆ ಶುಕ್ರವಾರ ಹಮ್ಮಿಕೊಂಡಿದ್ದ ಕೆರೆಗಳ ವೀಕ್ಷಣೆ ಕಾರ್ಯಕ್ರಮದಲ್ಲಿ ಜಾಲಹಳ್ಳಿ ಸಮೀಪದ ಮಲ್ಲಸಂದ್ರ ಗುಡ್ಡೆ ಕೆರೆ ದುಃಸ್ಥಿತಿ ಕಂಡು ಅಸಮಾಧಾನ ವ್ಯಕ್ತಪಡಿಸಿದ ಅವರು, ಕೆರೆ ಸಂರಕ್ಷಣೆಗಾಗಿ ಸ್ಥಳೀಯ ಪ್ರಾಧಿಕಾರಗಳ ಜತೆಗೆ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಆದರೂ ಕೆರೆಗಳ ಅವನತಿ ನಿಂತಿಲ್ಲ.
ಹೀಗಾದರೆ ಕೆರೆ ಅಭಿವೃದ್ಧಿ ಪ್ರಾಧಿಕಾರವಾದರೂ ಏಕೆ ಬೇಕು ಎಂದು ಸರ್ಕಾರವನ್ನು ಪ್ರಶ್ನಿಸಿದರು. ಬೆಂಗಳೂರಿನ ಕೆರೆಗಳನ್ನು ಉಳಿಸುವ ಸಂಬಂಧ ಉಸ್ತುವಾರಿ ಸಚಿವರೂ ಹಾಗೂ ಉಪ ಮುಖ್ಯಮಂತ್ರಿಯೂ ಆಗಿರುವ ಡಾ.ಜಿ.ಪರಮೇಶ್ವರ್ ಹಿರಿಯ ಅಧಿಕಾರಿಗಳ ಸಭೆ ಕರೆದು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಯುನೈಟೆಡ್ ಬೆಂಗಳೂರು ಸಂಚಾಲಕ ಎನ್.ಆರ್.ಸುರೇಶ್ ಮಾತನಾಡಿ, ಎರಡು ವರ್ಷಗಳ ಹಿಂದೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದ ವೇಳೆ ಒತ್ತುವರಿ ತೆರವುಗೊಳಿಸುವಂತೆ ಸೂಚನೆ ನೀಡಿತ್ತು. ಇದೀಗ ಮತ್ತೆ ಹೊಸದಾಗಿ ಒತ್ತುವರಿ ಆರಂಭವಾಗಿದೆ.
ಎನ್‌ಜಿಟಿ ಆದೇಶಗಳು ಕೇವಲ ಪತ್ರದಲ್ಲಿ ಇವೆಯೇ ಹೊರತು ಜಾರಿಯಾಗುತ್ತಿಲ್ಲ ಎಂದು ದೂರಿದರು. ಮಲ್ಲಸಂದ್ರ ಪಾಲಿಕೆ ಸದಸ್ಯ ಲೋಕೇಶ್ ಮಾತನಾಡಿ, ಕೆರೆಗಳ ಸಂರಕ್ಷಣೆ ಸಂಬಂಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದರು. ಸ್ಥಳೀಯ ಪ್ರಾಧಿಕಾರಿಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.