Advertisement

ಬೈಕ್‌ ಕ್ಲಚ್‌ ಪ್ಲೇಟ್ ಸಮಸ್ಯೆ ಯಾಕೆ?

01:17 PM Oct 12, 2018 | |

ನಿರೀಕ್ಷಿತ ವೇಗದಲ್ಲಿ ನಿಮ್ಮ ಬೈಕ್‌ ಹೋಗದೇ ಇರಬಹುದು, ಗಿಯರ್‌ ಹಾಕಿದ ತಕ್ಷಣ ಬೈಕ್‌ ಎಗರಿ ಬಿದ್ದಂತೆ ಆಗಬಹುದು. ಇಂತಹ ಸಮಸ್ಯೆ ಇದ್ದರೆ ಅದು ಕ್ಲಚ್‌ ಪ್ಲೇಟ್‌ನದ್ದು. ವಾಹನಗಳಲ್ಲಿ ಗಿಯರ್‌ ಅನ್ನು ಸುಲಭವಾಗಿ ಹಾಕುವಂತೆ ಮಾಡುವ ಸಾಧನ ಕ್ಲಚ್‌. ಬೈಕನಲ್ಲಿ ವೃತ್ತಾಕಾರದ ಕ್ಲಚ್‌ ಪ್ಲೇಟ್‌ಗಳಿದ್ದು, ಇವುಗಳು ಎಂಜಿನ್‌ ಒಳಗಡೆ ಆಯಿಲ್‌ನಲ್ಲಿ ಮುಳುಗಿರುತ್ತವೆ.

Advertisement

ಕ್ಲಚ್‌ ಕೆಲಸವೇನು?
ಬೈಕ್‌ ವಿವಿಧ ವೇಗದಲ್ಲಿ ಸಾಗಲು ಅನುಕೂಲವಾಗುವಂತೆ ಚಕ್ರ ಮತ್ತು ಎಂಜಿನ್‌ಗೆ ಸಂಪರ್ಕ ಕಲ್ಪಿಸುವ ಮಧ್ಯೆ ಕ್ಲಚ್‌ ಇರುತ್ತದೆ. ಬೈಕ್‌ನ ಎಂಜಿನ್‌ ಒಂದು ವೇಗದಲ್ಲಿ ತಿರುಗುತ್ತಿದ್ದರೆ, ಅದಕ್ಕೆ ಸಮನಾಗಿ ಚಕ್ರವನ್ನೂ ತಿರುಗುವಂತೆ ಮಾಡಲು ಸಂಪರ್ಕ ಕಲ್ಪಿಸಲು ಕ್ಲಚ್‌ ನೆರವಾಗುತ್ತದೆ. ಎಂಜಿನ್‌ ಮತ್ತು ಫ್ರೀ ವೀಲ್‌ಗ‌ಳ ಮಧ್ಯೆ ಇದು ಸಂಪರ್ಕ ಕಲ್ಪಿಸಲು ನೆರವಾಗುತ್ತದೆ. ಇದರಿಂದ ಎಂಜಿನ್‌ ವೇಗಕ್ಕೆ ಪೂರಕವಾಗಿ ಫ್ರೀ ವೀಲ್‌ ತಿರುಗುವಂತೆ, ಘರ್ಷಣೆ ತಪ್ಪಿಸಲು ಇವುಗಳು ನೆರವಾಗುತ್ತದೆ.

ಕ್ಲಚ್‌ ಸಮಸ್ಯೆ ಇದ್ದರೆ ಗೊತ್ತಾಗೋದು ಹೇಗೆ?
ಬೈಕ್‌ ಎಗರಿ ಬಿದ್ದಂತೆ ಆಗೋದು, ಟಾಪ್‌ ಎಂಡ್‌ ಸ್ಪೀಡ್‌ ಸಮಸ್ಯೆ, ಪಿಕಪ್‌ ಸಮಸ್ಯೆ, ಗಿಯರ್‌ ಹಾಕೋದು ಕಷ್ಟ ಅನಿಸಿದರೆ ಅದು ಕ್ಲಚ್‌ ಪ್ಲೇಟ್‌ ಸಮಸ್ಯೆ ಇರಬಹುದು. ಸಾಮಾನ್ಯವಾಗಿ ಬೈಕ್‌ ಗಳಲ್ಲಿ ಕ್ಲಚ್‌ ಸಮಸ್ಯೆ ಬರುವುದು ಕಡಿಮೆ. ಆದರೆ ಕೆಲವೊಂದು ಬಾರಿ ನಮ್ಮ ಚಾಲನಾ ಅಭ್ಯಾಸಗಳು, ತಾಂತ್ರಿಕ ಕಾರಣಗಳಿಂದಲೂ ಕ್ಲಚ್‌ ಸಮಸ್ಯೆ ಬರಬಹುದು.

ಕ್ಲಚ್‌ ಆಯಷ್ಯ ಎಷ್ಟು?
ಉತ್ತಮ ಚಾಲನೆಯ ಸಂದರ್ಭ, ಗುಣಮಟ್ಟಕ್ಕೆ ಆಧಾರವಾಗಿ ಬೈಕ್‌ಗಳ ಕ್ಲಚ್‌ 30 ಸಾವಿರ ಕಿ.ಮೀ. ಮೇಲ್ಪಟ್ಟು ಬಾಳಿಕೆ ಬರುತ್ತದೆ. ಕೆಲವೊಮ್ಮೆ ಇದು 50-60 ಸಾವಿರ ಕಿ.ಮೀ. ವರೆಗೂ ಇರಬಹುದು. ಯಾವತ್ತೂ ಟ್ರಾಫಿಕ್‌ ಚಾಲನೆ, ಕೆಟ್ಟ ಚಾಲನಾ ಅಭ್ಯಾಸಗಳು ಇದ್ದ ಸಂದರ್ಭಗಳಲ್ಲಿ ಕ್ಲಚ್‌ ಪ್ಲೇಟ್‌ ಆಯುಷ್ಯ ಕಡಿಮೆಯಾಗುತ್ತದೆ. 6, 12 ಸಾವಿರ ಕಿ.ಮೀ. ವರೆಗೆ ಮಾತ್ರ ಬಾಳಿಕೆ ಬರುವ ಸಾಧ್ಯತೆಗಳೂ ಇವೆ. 

ಹೀಗೆ ಮಾಡಬೇಡಿ
ಸೆಕೆಂಡ್‌ ಗಿಯರ್‌ನಲ್ಲಿ ಹೋಗಬೇಕಾದಲ್ಲಿ ಥರ್ಡ್‌ ಗಿಯರ್‌ನಲ್ಲಿ ಚಾಲನೆ. ವೃಥಾ ಅರ್ಧ ಕ್ಲಚ್‌ ಹಿಡಿದುಕೊಂಡು ವಾಹನ ಚಲಾಯಿಸುವುದು. ಪದೇ ಪದೇ ಕ್ಲಚ್‌ ಬಳಕೆ, ಏಕಾಏಕಿ ಬೈಕ್‌ ಮುನ್ನುಗ್ಗಲು ತತ್‌ಕ್ಷಣ ಗಿಯರ್‌ ಬದಲಾಯಿಸುವುದು ಇತ್ಯಾದಿಗಳನ್ನು ಮಾಡಿದ್ದೇ ಆದಲ್ಲಿ ಕ್ಲಚ್‌ನ ಆಯುಷ್ಯ ಕಡಿಮೆಯಾಗುತ್ತದೆ.

Advertisement

ಈಶ

Advertisement

Udayavani is now on Telegram. Click here to join our channel and stay updated with the latest news.

Next