Advertisement

ಮೇಘಾಲಯದಲ್ಲಿ ಯಾರ ಮ್ಯಾಜಿಕ್‌?

10:03 AM Mar 30, 2019 | Team Udayavani |

ಈಶಾನ್ಯ ರಾಜ್ಯ ಮೇಘಾಲಯದಲ್ಲಿ ಎರಡು ಲೋಕಸಭಾ ಸ್ಥಾನಗಳಿವೆ. ಶಿಲ್ಲಾಂಗ್‌ ಮತ್ತು ತುರಾ. ಎರಡೂ ಕ್ಷೇತ್ರಗಳಲ್ಲೀಗ ಬಹುಕೋನ ಸ್ಪರ್ಧೆಯೇ ಗೋಚರವಾಗುತ್ತಿದೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಒಂದು ಮತ್ತು ಎನ್‌ಪಿಪಿ ಒಂದು ಸ್ಥಾನ ಪಡೆದಿದ್ದವು. ಶಿಲ್ಲಾಂಗ್‌ ಲೋಕಸಭಾ ಕ್ಷೇತ್ರವು ದಶಕಗಳಿಂದ ಕಾಂಗ್ರೆಸ್‌ನ ಹಿಡಿತದಲ್ಲಿದೆ. ಈ ಕ್ಷೇತ್ರವು ಪರಿಶಿಷ್ಟ ಪಂಗಡದ ಸದಸ್ಯರಿಗೆ ಮೀಸಲಾಗಿದ್ದು, ಕಾಂಗ್ರೆಸ್‌ ನಾಯಕ ವಿನ್ಸೆಂಟ್‌ ಎಚ್‌ ಪಾಲಾ ಕಳೆದ ಎರಡು ಅವಧಿಯಿಂದ ಈ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ಇನ್ನು ಬಿಜೆಪಿಯ ವಿಷಯಕ್ಕೆ ಬಂದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಎರಡು ಸ್ಥಾನಗಳನ್ನು ಪಡೆದಿದ್ದರೂ ಎನ್‌ಪಿಪಿಯೊಂದಿಗೆ ಕೈ ಜೋಡಿಸಿ ಅದೀಗ ರಾಜ್ಯ ಸರ್ಕಾರದ ಭಾಗವಾಗಿದೆ. ಎನ್‌ಪಿಪಿ(ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ) ಪಕ್ಷವು ಎನ್‌ಡಿಎದ ಭಾಗವಾಗಿರುವುದರಿಂದ, ಅದಕ್ಕೆ ಪೂರಕವಾಗಿ ನಡೆದುಕೊಳ್ಳುವುದಕ್ಕೇ ಬಿಜೆಪಿ ಆದ್ಯತೆ ನೀಡುತ್ತಿದೆ.

Advertisement

ಪೌರತ್ವ ತಿದ್ದುಪಡಿ ಮಸೂದೆ: ಈಶಾನ್ಯದ ಬಹುತೇಕ ರಾಜ್ಯಗಳಂತೆ ಮೇಘಾಲಯವೂ ಕೂಡ ಪೌರತ್ವ ತಿದ್ದುಪಡಿ ಮಸೂದೆಯನ್ನು ಪ್ರಬಲವಾಗಿ ವಿರೋಧಿಸುತ್ತದೆ. ಒಂದು ವೇಳೆ ಈ ಬಿಲ್‌ ರಾಜ್ಯಸಭೆಯಲ್ಲೇನಾದರೂ ಒಪ್ಪಿಗೆ ಪಡೆದರೆ ತಾವು ಎನ್‌ಡಿಎ ಸಂಗ ತೊರೆಯುವುದಾಗಿ ಮುಖ್ಯಮಂತ್ರಿ ಕೋನ್ರಾಡ್‌ ಸಾಂಗ್ಮಾ ಬೆದರಿಕೆಯೊಡ್ಡಿ ಸದ್ದು ಮಾಡಿದ್ದರು. ಆದಾಗ್ಯೂ ಪೌರತ್ವ ತಿದ್ದುಪಡಿ ಮಸೂದೆಯೆಡೆಗಿನ ಸಿಟ್ಟು ಬಿಜೆಪಿ ಮತ್ತು ಕೇಂದ್ರದೆಡೆಗೆ ಕೇಂದ್ರೀಕೃತವಾಗಿದೆಯಾದರೂ, ರಾಜ್ಯ ಸರ್ಕಾರವೂ ಅನೇಕ ಕಾರಣಗಳಿಂದ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಕಲ್ಲಿದ್ದಲು ಮತ್ತು ಸುಣ್ಣದ ಕಲ್ಲಿನ ಮೈನಿಂಗ್‌ ಅನ್ನು ನಿಷೇಧಿಸಿದಾಗಿನಿಂದ ಅಲ್ಲಿ ಮೈನಿಂಗ್‌ ಉದ್ಯಮ ತತ್ತರಿಸಿಹೋಗಿದ್ದು, ಈ ವಲಯದ ಉದ್ಯೋಗಗಳಿಗೆಲ್ಲ ಹಾನಿಯಾಗಿದೆ. ಆದರೆ ಈ ಸಂಗತಿ ಚುನಾವಣೆಯ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆಯೋ ತಿಳಿಯದು.

ಶಿಲ್ಲಾಂಗ್‌ನ ಸ್ಥಿತಿ
1977ರಲ್ಲಿ ಶಿಲ್ಲಾಂಗ್‌ ಲೋಕಸಭಾ ಕ್ಷೇತ್ರ ರಚನೆಯಾದ ಬಳಿಕ ಹೋಪಿಂಗ್‌ ಸ್ಟೋನ್‌ ಲಿಂಗೊ ಕ್ಷೇತ್ರದ ಮೊದಲ ಸಂಸದರಾಗಿ ಆಯ್ಕೆಯಾಗಿದ್ದರು. 1980ರಲ್ಲಿ ಆಲ್‌ ಪಾರ್ಟಿ ಹಿಲ್‌ ಲೀಡರ್ಸ್‌ ಕಾನ್ಫರೆನ್ಸ್‌ನ ಬಜುಬಾನ್‌ ಖಾರ್ಲುಖೀ ಗೆದ್ದರು. 1984ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಜಾರ್ಜ್‌ ಗಿಲ್ಬರ್ಟ್‌ ಸ್ವೆಲ್‌ ಜಯಸಾಧಿಸಿದ್ದರು. 1989 ಮತ್ತು 1991ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪೀಟರ್‌ ಜಿ. ಮಾರ್ಬನಿಯಾಂಗ್‌ ಲೋಕಸಭೆಗೆ ಆಯ್ಕೆಯಾಗಿದ್ದರು. 1996ರಲ್ಲಿ ಮತ್ತೆ ಜಾರ್ಜ್‌ ಗಿಲ್ಬರ್ಟ್‌ ಸ್ವೆಲ್‌ ಜಯ ಸಾಧಿಸಿದ್ದರು. 1998, 1999, 2004ರಲ್ಲಿ ಕಾಂಗ್ರೆಸ್‌ನ ಪ್ಯಾಟಿ ರಿಪಲ್‌ ಕಿಂಡಯ್ಯ ಗೆದ್ದಿದ್ದರೆ, 2009 ಮತ್ತು 2014ರಲ್ಲಿ ಕಾಂಗ್ರೆಸ್‌ನ ವಿನ್ಸೆಂಟ್‌ ಎಚ್‌.ಪಾಲಾ ಜಯ ಸಾಧಿಸಿದ್ದರು. ಅವರು ಕೇಂದ್ರದಲ್ಲಿ ಜಲಸಂಪನ್ಮೂಲ ಖಾತೆ, ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಹಾಯಕ ಸಚಿವರಾಗಿಯೂ ಇದ್ದರು. ಈ ಕ್ಷೇತ್ರದಲ್ಲಿ ಇದುವರೆಗೆ ಕಾಂಗ್ರೆಸ್‌ನದ್ದೇ ಪಾರಮ್ಯವಿತ್ತು. ಮೂರನೇ ಬಾರಿಗೆ ಪಾಲಾ ಗೆಲ್ಲಲಿದ್ದಾರೆ ಎನ್ನುವುದು ಕಾಂಗ್ರೆಸ್‌ನ ವಿಶ್ವಾಸ. ಸದ್ಯಕ್ಕೆ ಅಲ್ಲಿ ಹಾಲಿ ಸಂಸದರ ವಿರುದ್ಧ ಪ್ರಬಲ ಎದುರಾಳಿ ಯಾರೂ ಕಾಣುತ್ತಿಲ್ಲ. ಅವರ ವಿರುದ್ಧ ಮೂರು ಬಾರಿ ಶಾಸಕರಾಗಿದ್ದ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿಯ ಸನೂºರ್‌ ಶುಲ್ಲೆ„ ಕಣಕ್ಕೆ ಇಳಿದಿದ್ದಾರೆ. ಬಿಜೆಪಿ ಹೊರತಾಗಿರುವ ಯುನೈಟೆಡ್‌ ಡೆಮಾಕ್ರಾಟಿಕ್‌ ಅಲಯನ್ಸ್‌ನ ಪ್ರಧಾನ ಕಾರ್ಯದರ್ಶಿ ಜೆಮಿನೋ ಮಾÌಥೋ ಕೂಡ ಕಣದಲ್ಲಿದ್ದಾರೆ.

ತುರಾ ಕ್ಷೇತ್ರ ಪರಿಚಯ
1971ರಲ್ಲಿ ರಚನೆಯಾಗಿದ್ದ ತುರಾ ಲೋಕಸಭಾ ಕ್ಷೇತ್ರದಲ್ಲಿ ಕೆ.ಆರ್‌.ಮರಾಕ್‌ ಆಲ್‌ ಪಾರ್ಟಿ ಹಿಲ್‌ ಲೀಡರ್ಸ್‌ ಕಾನ್ಫರೆನ್ಸ್‌ನ ಮೊದಲ ಬಾರಿಗೆ ಗೆದ್ದಿದ್ದರು. 1977, 1980, 1984ರ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕ ಪುರ್ನೋ ಅಗಿತೋಕ್‌ ಸಂಗ್ಮಾ ಜಯಸಾಧಿಸಿದ್ದರು. 1989ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಸ್ಯಾನ್‌ಫೋರ್ಡ್‌ ಮರಾಕ್‌ ಲೋಕಸಭೆಗೆ ಪ್ರವೇಶಿಸಿದ್ದರು. 1991, 1996, 1998, 1999, 2004ರಲ್ಲಿ ಪುರ್ನೋ ಅಗಿತೋಕ್‌ ಸಂಗ್ಮಾ ಕಾಂಗ್ರೆಸ್‌, ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಾರ್ಟಿ, ತೃಣಮೂಲ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದಿದ್ದರು. 2008ರ ಉಪ ಚುನಾವಣೆ, 2009ರ ಚುನಾವಣೆಯಲ್ಲಿ ಅಗಾಥ ಸಂಗ್ಮಾ ರಾಷ್ಟ್ರೀಯ ಕಾಂಗ್ರೆಸ್‌ ಪಾರ್ಟಿ ಅಭ್ಯರ್ಥಿಯಾಗಿ ಗೆದ್ದಿದ್ದರು. 2014ರಲ್ಲಿ ಮತ್ತೆ ಸಂಗ್ಮಾ ಅವರೇ ಗೆದ್ದರು. 2016ರಲ್ಲಿ ಸಂಗ್ಮಾ ನಿಧನದ ಬಳಿಕ ನಡೆದಿದ್ದ ಉಪ ಚುನಾವಣೆಯಲ್ಲಿ ಪುತ್ರ ಕೊನಾರ್ಡ್‌ ಕಾಂಗ್‌ಕಲ್‌ ಸಂಗ್ಮಾ ಜಯಸಾಧಿಸಿದರು. ನಂತರ 2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲೋಸುಗ ಸಂಸತ್‌ ಸದಸ್ಯರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇದೀಗ ಈ ಕ್ಷೇತ್ರದಿಂದ ಆಡಳಿತಾರೂಢ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿಯ ಅಭ್ಯರ್ಥಿಯಾಗಿ ಅಗಾಥಾ ಸಂಗ್ಮಾ ಕಣದಲ್ಲಿದ್ದಾರೆ. ಬಿಜೆಪಿ ಕೂಡ ಸ್ಪರ್ಧೆ ನಡೆಸಲಿದೆ ಎಂದು ಈಶಾನ್ಯ ರಾಜ್ಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಇಡಿಎ) ಸಂಯೋಜಕ ಹಿಮಾಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ. ಅಗಾಥಾ ಸಂಗ್ಮಾ ವಿರುದ್ಧ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ಮುಕುಲ್‌ ಎಂ.ಸಂಗ್ಮಾ ಕಣದಲ್ಲಿದ್ದಾರೆ. ಎರಡೂ ಕ್ಷೇತ್ರಗಳಿಗೆ ಏ.11ರಂದು ಮತದಾನ ನಡೆಯಲಿದೆ. ಮೇ 23ರಂದು ಫ‌ಲಿತಾಶ ಪ್ರಕಟವಾಗಲಿದೆ.

Advertisement

ಸದ್ಯ ಮೇಘಾಲಯದಲ್ಲಿ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ ನೇತೃತ್ವದ ಸರ್ಕಾರವಿದೆ. ಕೊನಾರ್ಡ್‌ ಸಂಗ್ಮಾ 2018ರ ಮಾ.6ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮೇಘಾಲಯ, ಅರುಣಾಚಲ ಪ್ರದೇಶ, ಮಣಿಪುರ ವಿಧಾನಸಭೆಗಳಲ್ಲಿ ಗಮನ ಸೆಳೆಯುವ ಸಂಖ್ಯೆಯಲ್ಲಿ ಶಾಸಕರನ್ನು ಹೊಂದಿದೆ ಈ ಪಕ್ಷ. ಮೇಘಾಲಯದಲ್ಲಂತೂ ಅಧಿಕಾರದಲ್ಲಿಯೇ ಇದೆ. ಎರಡೂ ಕ್ಷೇತ್ರಗಳಲ್ಲಿ ಬಹುಕೋನ ಸ್ಪರ್ಧೆ ಇದೆ. ಬಿಜೆಪಿಯಂತೂ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬೇಕೆಂದು ಹೋರಾಡುತ್ತಿದೆ. ಅಲ್ಲಿ ವಿಶೇಷವಾಗಿ ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಮಂಡಿಸಲು ಉದ್ದೇಶಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಮುಖವಾಗಿ ಬಿಜೆಪಿಗೆ ಸವಾಲಾಗಿ ಕಾಡುತ್ತಲಿದೆ.

2014 ಫ‌ಲಿತಾಂಶ
ಶಿಲ್ಲಾಂಗ್‌ ಕ್ಷೇತ್ರ: ವಿನ್ಸೆಂಟ್‌ ಎಚ್‌.ಪಾಲಾ- ಹಾಲಿ ಸಂಸದ (ಕಾಂಗ್ರೆಸ್‌)
ಈಗ ಅಖಾಡದಲ್ಲಿ: ಸನೂºರ್‌ ಶುಲ್ಲೆ- ಎನ್‌ಪಿಪಿ , ಜೆಮಿನೋ ಮಾಥೋ – ಮೇಘಾಲಯ ಯುನೈಟೆಡ್‌ ಡೆಮಾಕ್ರಾಟಿಕ್‌ ಅಲಯನ್ಸ್‌
ತುರಾ ಕ್ಷೇತ್ರ: ಸದ್ಯ ಸಂಸದರಿಲ್ಲ
ಹಿಂದಿನ ಸಂಸದ: ಕೊನಾರ್ಡ್‌ ಸಂಗ್ಮಾ (ಎನ್‌ಪಿಪಿ)
ಈಗ ಅಖಾಡದಲ್ಲಿ: ಅಗಾಥಾ ಸಂಗ್ಮಾ – ಎನ್‌ಪಿಪಿ,
ಮುಕುಲ್‌ ಎಂ.ಸಂಗ್ಮಾ- ಕಾಂಗ್ರೆಸ್‌, ರಿಕ್ಮನ್‌ ಜಿ. ಮೊಮಿನ್‌- ಮೇಘಾಲಯ ಡೆಮಾಕ್ರಾಟಿಕ್‌ ಅಲಯನ್ಸ್‌

Advertisement

Udayavani is now on Telegram. Click here to join our channel and stay updated with the latest news.

Next