Advertisement

ಯಾರಿಗಿದೆ ಕಪ್‌ ಎತ್ತುವ ಲಕ್‌?

08:36 AM May 30, 2019 | Team Udayavani |

ಈ ಬಾರಿಯ ವಿಶ್ವಕಪ್‌ ಕೂಟದ ನೆಚ್ಚಿನ ತಂಡ ಯಾವುದು? ಯಾವ ತಂಡಕ್ಕೆ ಕಪ್‌ ಎತ್ತುವ ಲಕ್‌ ಇದೆ? ಅಚ್ಚರಿಯ ಫ‌ಲಿತಾಂಶ ದಾಖಲಾದೀತೇ? ತಂಡಗಳ ಗೆಲುವಿನ ಸಾಧ್ಯತೆ ಎಷ್ಟು? ಬಲಾಬಲ ಅವಲೋಕನ…

Advertisement

 ಇಂಗ್ಲೆಂಡ್‌: 9/10
ಈ ಬಾರಿ ಗೆಲ್ಲದಿದ್ದರೆ ಇನ್ನೆಂದೂ ಇಲ್ಲ!
ಕಳೆದ ಸಲ ಲೀಗ್‌ನಲ್ಲೇ ಆಘಾತಕಾರಿಯಾಗಿ ನಿರ್ಗಮಿಸಿದ ಬಳಿಕ ಏಕದಿನದಲ್ಲಿ ಇಂಗ್ಲೆಂಡ್‌ ಬೆಳೆದು ನಿಂತ ಪರಿ ಬೆರಗು ಹುಟ್ಟಿಸುವಂಥದ್ದು. ಇದೊಂದು ಸಾಟಿಯಿಲ್ಲದ ತಂಡ. ಆರಂಭದಿಂದ 8ನೇ ಕ್ರಮಾಂಕದ ವರೆಗೆ ಹಬ್ಬಿರುವ ಅಮೋಘ ಬ್ಯಾಟಿಂಗ್‌ ಲೈನ್‌ಅಪ್‌ ಆಂಗ್ಲರ ಸಾಮರ್ಥ್ಯದ ದ್ಯೋತಕ. ರಾಯ್‌, ಬೇರ್‌ಸ್ಟೊ, ರೂಟ್‌, ಮಾರ್ಗನ್‌, ಸ್ಟೋಕ್ಸ್‌, ಬಟ್ಲರ್‌, ವೋಕ್ಸ್‌, ಅಲಿ, ಕರನ್‌ ಅವರ ಪ್ರಚಂಡ ಬ್ಯಾಟಿಂಗ್‌ ಫಾರ್ಮ್ ಎದುರಾಳಿ ಬೌಲಿಂಗ್‌ ಪಡೆಗೆ ಸಿಂಹಸ್ವಪ್ನ. ಒನ್‌ಡೇಗೆ ಹೇಳಿಮಾಡಿಸಿದಂತಿರುವ ಆಲ್‌ರೌಂಡರ್‌ಗಳ ಸಂಖ್ಯೆಯೂ ಸಾಕಷ್ಟಿದೆ. ಇಂಗ್ಲೆಂಡ್‌ ಕ್ರೀಸಿಗಿಳಿದರೆ 350 ರನ್ನಿಗೇನೂ ಕೊರತೆ ಇಲ್ಲ ಎಂಬುದು ಸದ್ಯದ ಸ್ಥಿತಿ. ಎದುರಾಳಿ 350 ರನ್‌ ಪೇರಿಸಿದರೂ ಮಾರ್ಗನ್‌ ಪಡೆಗೆ ಅದು ಲೆಕ್ಕಕ್ಕಿಲ್ಲ. ಆದರೆ ಇದೇ ಸಾಮರ್ಥ್ಯದ ಬೌಲಿಂಗ್‌ ಪಡೆಯನ್ನು ಇಂಗ್ಲೆಂಡ್‌ ಹೊಂದಿಲ್ಲ ಎಂಬುದನ್ನು ಒಪ್ಪಲೇಬೇಕು! ಜಗತ್ತಿಗೆ ಕ್ರಿಕೆಟ್‌ ಪಾಠ ಹೇಳಿಕೊಟ್ಟರೂ ಈವರೆಗೆ ವಿಶ್ವಕಪ್‌ ಟ್ರೋಫಿ ಎತ್ತಲಾಗದಿದ್ದುದು ಇಂಗ್ಲೆಂಡ್‌ ಪಾಲಿನ ದೊಡ್ಡ ದುರಂತ. ತನ್ನಲ್ಲೇ 4 ವಿಶ್ವಕಪ್‌ ನಡೆದರೂ, 3 ಸಲ ಫೈನಲಿಗೆ ನೆಗೆದರೂ ಪ್ರತೀ ಸಲವೂ ಸೋಲೇ ಸಂಗಾತಿಯಾಗಿದೆ. ಈ ಬಾರಿ ತವರಿನ ಲಾಭವಿದೆ. ಈ ಸಲ ಗೆಲ್ಲದಿದ್ದರೆ ಇನ್ನೆಂದೂ ಗೆಲ್ಲದು ಎಂಬಷ್ಟರ ಮಟ್ಟಿಗೆ ಇಂಗ್ಲೆಂಡ್‌ ಮೇಲೆ ಭರವಸೆ ಇಡಬಹುದು.
* ಪ್ಲಸ್‌ ಪಾಯಿಂಟ್‌: ಪ್ರಚಂಡ ಫಾರ್ಮ್ನಲ್ಲಿರುವ ಬ್ಯಾಟಿಂಗ್‌ ಲೈನ್‌ಅಪ್‌.
* ಮೈನಸ್‌ ಪಾಯಿಂಟ್‌: ಬ್ಯಾಟಿಂಗ್‌ನಷ್ಟು ಬಲಿಷ್ಠವಿಲ್ಲದ ಬೌಲಿಂಗ್‌ ಯೂನಿಟ್‌.
* ವಿಶ್ವಕಪ್‌ ಸಾಧನೆ: 1975, 1983 ಸೆಮೀಸ್‌; 1979, 1987, 1992 ರನ್ನರ್‌ ಅಪ್‌.

ಆಸ್ಟ್ರೇಲಿಯ: 8/10
* ಮತ್ತೆ ಪ್ರಶಸ್ತಿ ಎತ್ತುವ ಯೋಜನೆ…
ಹಾಲಿ ಚಾಂಪಿಯನ್‌ ಹಣೆಪಟ್ಟಿ ಹೊತ್ತಿರುವ ಆಸ್ಟ್ರೇಲಿಯ ಕೂಟದ ಪ್ರಬಲ ತಂಡಗಳಲ್ಲಿ ಒಂದು. ಈ ಬಾರಿ ಆರನ್‌ ಫಿಂಚ್‌ ನೇತೃತ್ವದಲ್ಲಿ ಕಣಕ್ಕಿಳಿಯಲಿದೆ. ನಿಷೇಧಕ್ಕೊಳಗಾಗದೇ ಇದ್ದಿದ್ದರೆ ಸ್ಟೀವನ್‌ ಸ್ಮಿತ್‌ ಅವರೇ ನಾಯಕತ್ವದಲ್ಲಿ ಮುಂದುವರಿಯುತ್ತಿದ್ದರು. ಫಿಂಚ್‌ ನಾಯಕನಾಗಿ ಫಿಂಚ್‌ ಅನುಭವ ಕಡಿಮೆ. ಜತೆಗೆ ಇನ್ನಿಂಗ್ಸ್‌ ಆರಂಭಿಸುವ ಒತ್ತಡವೂ ಅವರ ಮೇಲಿದೆ. ಡೇವಿಡ್‌ ವಾರ್ನರ್‌ ಅವರ ಪ್ರಚಂಡ ಫಾರ್ಮ್ ಆಸೀಸ್‌ಗೆ ವರದಾನವಾಗುವುದು ಖಂಡಿತ. ವರ್ಷಾರಂಭದಲ್ಲಿ ತವರಿನಲ್ಲೇ ಭಾರತಕ್ಕೆ ಶರಣಾಗಿದ್ದ ಆಸ್ಟ್ರೇಲಿಯ ಈಗ ಲಯಕ್ಕೆ ಮರಳಿದೆ. ಎಷ್ಟೇ ಕಳಪೆ ಫಾರ್ಮ್ನಲ್ಲಿದ್ದರೂ ಪ್ರತಿಷ್ಠಿತ ಪಂದ್ಯಾವಳಿಯ ವೇಳೆಗೆ ಸರಿಯಾಗಿ ಚಿಗುರುವುದು ಕಾಂಗರೂಗಳ ವೈಶಿಷ್ಟ. ತಂಡದ ಬೌಲಿಂಗ್‌ ಘಾತಕ. ಇಂಗ್ಲೆಂಡ್‌ ನೆಲದಲ್ಲಿ ಆಡಿದ ಧಾರಾಳ ಅನುಭವವಿದೆ. ಈವರೆಗೆ ಅತೀ ಹೆಚ್ಚು 5 ಸಲ ಕಪ್‌ ಎತ್ತಿದ ಕಾಂಗರೂ ಪಡೆ, 6ನೇ ಟ್ರೋಫಿಯ ಮೇಲೆ ಕಣ್ಣಿಟ್ಟಿದೆ. ಸೆಮಿಫೈನಲ್‌ ದಾಟಿ ಫೈನಲ್‌ ಪ್ರವೇಶಿಸಿದರೆ ಆಸ್ಟ್ರೇಲಿಯವನ್ನು ಖಂಡಿತ ತಡೆಯಲಾಗದು!
* ಶಕ್ತಿ: ನಿಷೇಧ ಮುಗಿಸಿ ತಂಡ ಸೇರಿಕೊಂಡಿರುವ ವಾರ್ನರ್‌, ಸ್ಟೀವನ್‌ ಸ್ಮಿತ್‌.
* ದೌರ್ಬಲ್ಯ: ಫಾರ್ಮ್ನಲ್ಲಿರುವ ವಾರ್ನರ್‌ ಮೇಲಿದೆ ಅತಿಯಾದ ಒತ್ತಡ.
* ವಿಶ್ವಕಪ್‌ ಸಾಧನೆ: 1987, 1999, 2003, 2007, 2015ರಲ್ಲಿ ಚಾಂಪಿಯನ್‌.

ಪಾಕಿಸ್ಥಾನ-6/10
* ಸಾಮರ್ಥ್ಯವಿದೆ, ಗೆಲ್ಲುವುದನ್ನು ಮರೆತಿದೆ!
1992ರಲ್ಲಿ ಇಮ್ರಾನ್‌ ಖಾನ್‌ ನೇತೃತ್ವದಲ್ಲಿ ಒಂದು ಸಲ ಏಕದಿನ ವಿಶ್ವಕಪ್‌ ಎತ್ತಿರುವ ಪಾಕಿಸ್ತಾನ ಆ ಬಳಿಕ ಕಪ್‌ ಎತ್ತಿಲ್ಲ. ಪ್ರಸಕ್ತ ವಿಶ್ವಕಪ್‌ಗೆ ರೆಡಿಯಾಗುತ್ತಿರುವ ಪಾಕ್‌ ತಂಡದ ಇತ್ತೀಚಿನ ಏಕದಿನ ಕ್ರಿಕೆಟ್‌ ಸರಣಿಗಳ ಫ‌ಲಿತಾಂಶ ನೋಡಿದರೆ ಶಾಕ್‌ ಆಗುತ್ತದೆ. ಏಕೆಂದರೆ ಮಾರ್ಚ್‌ನಲ್ಲಿ ಪಾಕ್‌ ಯುಎಇಯಲ್ಲಿ ಆಸ್ಟ್ರೇಲಿಯ ವಿರುದ್ಧ ಆಡಿದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ವೈಟ್‌ವಾಶ್‌ಗೆ ತುತ್ತಾಗಿತ್ತು. ಇತ್ತೀಚೆಗಷ್ಟೇ ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಸರಣಿಯನ್ನೂ 4-0 ಅಂತರದಿಂದ ಕಳೆದುಕೊಂಡಿದೆ. ನಿಜಕ್ಕಾದರೆ ಇಲ್ಲಿ ಕೆಲವು ಪಂದ್ಯಗಳನ್ನಾದರೂ ಗೆದ್ದು ವಿಶ್ವಕಪ್‌ಗೆ ಹೊಸ ಸ್ಫೂರ್ತಿ ಪಡೆಯಬೇಕಿತ್ತು. ಆದರೆ  ಪಾಕಿಸ್ಥಾನ ಸಮತೋಲಿತ ತಂಡವನ್ನು ಹೊಂದಿದ್ದರೂ ತನ್ನ ಸಾಧನೆಯನ್ನು ಗೆಲುವಾಗಿ ಪರಿವರ್ತಿಸಲು ವಿಫ‌ಲವಾಗುತ್ತಲೇ ಇದೆ. ವಿಶ್ವಕಪ್‌ನಲ್ಲಿ ಇದು ಹಿನ್ನಡೆಗೆ ಕಾರಣವಾಗಬಹುದು. ಸೆಮಿಫೈನಲ್‌ ಪ್ರವೇಶವೇ ದೊಡ್ಡ ಸಾಧನೆಯಾದೀತು.
-ಬಲ: ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಅಮೋಘ ಫಾರ್ಮ್.
-ದೌರ್ಬಲ್ಯ: ಇತ್ತೀಚೆಗೆ ಆಸ್ಟ್ರೇಲಿಯ, ಇಂಗ್ಲೆಂಡ್‌ ವಿರುದ್ಧ ಅನುಭವಿಸಿದ ಸರಣಿ ಸೋಲು.
-ವಿಶ್ವಕಪ್‌ ಸಾಧನೆ: 1979, 1983, 1987, 2011-ಸೆಮಿಫೈನಲ್‌, 1992-ಚಾಂಪಿಯನ್‌, 1999-ರನ್ನರ್‌ಅಪ್‌.

ದಕ್ಷಿಣ ಆಫ್ರಿಕಾ-7/10
* ಚೋಕರ್ ಕಳಂಕದಿಂದ ಪಾರಾದರೆ ಪವಾಡ!
ನಿಜಕ್ಕಾದರೆ ನಿಷೇಧ ಕಳಚಿ ಜಾಗತಿಕ ಕ್ರಿಕೆಟಿಗೆ ಮರಳಿದ ವರ್ಷದಲ್ಲೇ (1992) ದಕ್ಷಿಣ ಆಫ್ರಿಕಾ ವಿಶ್ವಕಪ್‌ ಎತ್ತಬೇಕಿತ್ತು. ಆದರೆ ಮಳೆ ನಿಯಮಕ್ಕೆ ಬಲಿಯಾದ ಹರಿಣಗಳ ಪಡೆ ಅಲ್ಲಿಂದೀಚೆ ಅಮೋಘ ಪ್ರದರ್ಶನ ನೀಡಿಯೂ ನಾಟಕೀಯ ರೀತಿಯಲ್ಲಿ ಕೂಟದಿಂದ ಹೊರಬೀಳುತ್ತಿದೆ. ಹೀಗಾಗಿ “ಚೋಕರ್’ ಹಣೆಪಟ್ಟಿ ಖಾಯಂ ಆಗಿ ಅಂಟಿಕೊಂಡಿದೆ. ಅದೃಷ್ಟ ಕೈಕೊಡುತ್ತಿದೆ. ಫೇವರಿಟ್‌ ಎನಿಸಿಕೊಂಡರೂ ಕನಿಷ್ಠ ಪ್ರಶಸ್ತಿ ಸುತ್ತ ಪ್ರವೇಶಿಸಲು ಹರಿಣಗಳಿಗೆ ಸಾಧ್ಯವಾಗಿಲ್ಲ. ಈ ಸಲವೂ ನೆಚ್ಚಿನ ತಂಡ ಎನಿಸಿದೆ. ಆದರೆ ಚೋಕರ್ ಕಳಂಕವನ್ನು ಹೊಡೆದೋಡಿಸುವುದು ಅತ್ಯಗತ್ಯ. ಆಗ ಪವಾಡ ನಿರೀಕ್ಷಿಸಲಡ್ಡಿಯಿಲ್ಲ. ಇತ್ತೀಚೆಗೆ ಶ್ರೀಲಂಕಾಕ್ಕೆ 5-0 ಅಂತರದಿಂದ ನೀರು ಕುಡಿಸಿದೆ. ಸಶಕ್ತ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಪಡೆಯೆನ್ನು ಹೊಂದಿದೆ. ಡು ಪ್ಲೆಸಿಸ್‌, ಡಿ ಕಾಕ್‌, ರಬಾಡ, ತಾಹಿರ್‌ ಫಾರ್ಮ್ ನಿರ್ಣಾಯಕ. ಈ ನಾಲ್ವರೂ ಐಪಿಎಲ್‌ನಲ್ಲಿ ಮಿಂಚಿರುವುದು ವಿಶೇಷ. ಸೆಮಿಫೈನಲ್‌ ತನಕ ಓಕೆ. ಮುಂದೆ ಹೇಗೆ ಎಂಬುದೇ ಪ್ರಶ್ನೆ.
-ಬಲ: ಡಿ ಕಾಕ್‌, ಡು ಪ್ಲೆಸಿಸ್‌ ಫಾರ್ಮ್; ರಬಾಡ, ತಾಹಿರ್‌ ಪ್ರಚಂಡ ಬೌಲಿಂಗ್‌.
-ದೌರ್ಬಲ್ಯ: ನಿರ್ಣಾಯಕ ಹಂತದಲ್ಲಿ ಸೋತು ಹೊರಬೀಳುವುದು.
-ವಿಶ್ವಕಪ್‌ ಸಾಧನೆ: 1992, 1999, 2007, 2015ರಲ್ಲಿ ಸೆಮಿಫೈನಲ್‌.

Advertisement

ನ್ಯೂಜಿಲ್ಯಾಂಡ್‌-5/10
* ಆರಕ್ಕೇರದ, ಮೂರಕ್ಕಿಳಿಯದ ಕಿವೀಸ್‌
ವಿಶ್ವಕಪ್‌ ಮಟ್ಟಿಗೆ ನ್ಯೂಜಿಲ್ಯಾಂಡ್‌ ಆರಕ್ಕೇರದ, ಮೂರಕ್ಕಿಳಿಯದ ತಂಡ. 1992ರಲ್ಲಿ ಉತ್ತಮ ಅವಕಾಶ ಇದ್ದಿತಾದರೂ ಇದನ್ನು ಕಳೆದುಕೊಂಡಿತು. ಕಳೆದ ಸಲ ಫೈನಲಿಗೆ ಬಂದು ಪವಾಡ ಸಾಧಿಸಬಹುದೆಂಬ ನಿರೀಕ್ಷೆಯೂ ಹುಸಿಯಾಯಿತು. ಬ್ಲ್ಯಾಕ್‌ ಕ್ಯಾಪ್‌ಸಗೆ ಅದೃಷ್ಟ ಕೈಹಿಡಿಯುವುದೇ ಇಲ್ಲ. ಹೀಗಾಗಿ ಅದಕ್ಕೆ ಇದುವರೆಗೆ ಕಪ್‌ ಗೆಲ್ಲಲು ಸಾಧ್ಯವಾಗಿಲ್ಲ.

ಈ ಸಲ ಕೇನ್‌ ವಿಲಿಯಮ್ಸನ್‌ ನೇತೃತ್ವದಲ್ಲಿ ಕಣಕ್ಕಿಳಿಯುತ್ತಿರುವ ಕಿವೀಸ್‌ ಕಠಿನ ಎದುರಾಳಿಯೇನಲ್ಲ. ಡಾರ್ಕ್‌ ಹಾರ್ಸ್‌ ಕೂಡ ಅಲ್ಲ. ಸೆಮಿಫೈನಲ್‌ ಪ್ರವೇಶಿಸುವ ಸಾಧ್ಯತೆ ಕೂಡ ಅನುಮಾನ. ತನ್ನದೇ ನೆಲದಲ್ಲಿ ಪ್ರವಾಸಿ ಭಾರತದ ವಿರುದ್ಧ ಜನವರಿಯಲ್ಲಿ ಆಡಿದ್ದ 5 ಏಕದಿನ ಪಂದ್ಯಗಳ ಸರಣಿಯಲ್ಲಿ 4-1 ಅಂತರದ ಹೀನಾಯ ಸೋಲನುಭವಿಸಿತ್ತು. ಆದರೆ ಮಾರ್ಚ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದಿದ್ದ 4 ಪಂದ್ಯಗಳ ಏಕದಿನ ಸರಣಿಯನ್ನು 4-0 ಅಂತರದಿಂದ ಗೆದ್ದು ಆತ್ಮವಿಶ್ವಾಸ ಗಳಿಸಿಕೊಂಡಿದೆ.
ಬಲ: ಬ್ಯಾಟಿಂಗ್‌ ಹಾಗೂ ಉತ್ತಮ ಮಟ್ಟದ ಆಲ್‌ರೌಂಡರ್.
ದೌರ್ಬಲ್ಯ: ದೊಡ್ಡ ಕೂಟದಲ್ಲಿ ಛಾತಿಗೆ ತಕ್ಕ ಪ್ರದರ್ಶನ ನೀಡಲು ವಿಫ‌ಲವಾಗುವುದು.
ವಿಶ್ವಕಪ್‌ ಸಾಧನೆ: 1975, 1979, 1992, 1999, 2007, 2011 ಸೆಮಿಫೈನಲ್‌; 2015 ರನ್ನರ್‌ ಅಪ್‌.

* ವೆಸ್ಟ್‌ ಇಂಡೀಸ್‌-5/10
ಮತ್ತೆ ಇತಿಹಾಸ ಬರೆಯುವ ತವಕದಲ್ಲಿ ವಿಂಡೀಸ್‌
ಮೊದಲೆರಡು ಬಾರಿಯ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ 1983ರಲ್ಲಿ ಭಾರತದ ಕೈಯಿಂದ ಹೊಡೆತ ತಿಂದು ಮಲಗಿದ ಬಳಿಕ ಇನ್ನೂ ಮೇಲೆದ್ದಿಲ್ಲ. “ಕೆರಿಬಿಯನ್‌ ದೈತ್ಯರು’ ಎಂಬ ಪಟ್ಟ ಎಂದೋ ಕಳಚಿ ಹೋಗಿದೆ. ಆದರೆ ಈ ಬಾರಿ ಏಕದಿನಕ್ಕೆ ಹೇಳಿಮಾಡಿಸಿದ ತಂಡವನ್ನು ಹೊಂದಿದೆ. ಸ್ಫೋಟಕ ಬ್ಯಾಟಿಂಗ್‌ ಪಡೆಯನ್ನು ಹೊಂದಿದೆ. ಆದರೆ ಸಮಸ್ಯೆ ಸಾಕಷ್ಟಿದೆ. ತಂಡವಾಗಿ ಆಡುತ್ತಿಲ್ಲ. ಸೀರಿಯಸ್‌ನೆಸ್‌ ಮೊದಲೇ ಇಲ್ಲ. ಬದ್ಧತೆ ಹಾಗೂ ಗೆಲ್ಲಲೇಬೇಕೆಂಬ ಇಚ್ಚಾಶಕ್ತಿಯ ಕೊರತೆ ತೀವ್ರವಾಗಿದೆ. ಗತಕಾಲದ ಒಗ್ಗಟ್ಟು ಮಾಯವಾಗಿದೆ. ಯುನಿವರ್ಸಲ್‌ ಬಾಸ್‌ ಕ್ರೀಸ್‌ ಗೇಲ್‌ಗೆ ಇದು ಕೊನೆಯ ವಿಶ್ವಕಪ್‌. ಈ ಸಲ ಕಪ್‌ ಗೆದ್ದು ಅವಿಸ್ಮರಣೀಯವನ್ನಾಗಿಸಲು ಜಾಸನ್‌ ಹೋಲ್ಡರ್‌ ಪಡೆ ಟೊಂಕಕಟ್ಟಿ ನಿಂತಿದೆ. ವರ್ಷದ ಆರಂಭದಲ್ಲಿ ವಿಂಡೀಸ್‌ ತನ್ನ ನೆಲದಲ್ಲಿ ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಸರಣಿಯನ್ನು 2-2 ರಿಂದ ಸಮಸಾಧಿಸಿತ್ತು. ಇತ್ತೀಚಿನ ತ್ರಿಕೋನ ಸರಣಿಯಲ್ಲಿ ಬಾಂಗ್ಲಾದೇಶಕ್ಕೆ ಶರಣಾಗಿದೆ. ತಂಡದ ಆತ್ಮವಿಶ್ವಾಸ ಸ್ವಲ್ಪ ಮಟ್ಟಿಗೆ ಕುಗ್ಗಿದೆ.
ಬಲ: ಗೇಲ್‌, ರಸೆಲ್‌, ಹೋಪ್‌, ಹೆಟ್‌ಮೈರ್‌ ಅವರ ಸಿಡಿಯುವ ಸಾಮರ್ಥ್ಯ.
ದೌರ್ಬಲ್ಯ: ಅಸ್ಥಿರ ಪ್ರದರ್ಶನ, ಘಾತಕ ಬೌಲರ್‌ಗಳ ಅಭಾವ.
ವಿಶ್ವಕಪ್‌ ಸಾಧನೆ: 1975, 1979-ಚಾಂಪಿಯನ್‌; 1983-ರನ್ನರ್‌ಅಪ್‌, 1996-ಸೆಮಿಫೈನಲ್‌.

ಬಾಂಗ್ಲಾದೇಶ-5/10
* ಅಪಾಯಕಾರಿ ಬಾಂಗ್ಲಾ ಹುಲಿಗಳು
ಕೂಟದ ಅತ್ಯಂತ ಅಪಾಯಕಾರಿ ತಂಡ. ವಿಶ್ವ ಕ್ರಿಕೆಟಿನ ದೈತ್ಯ ತಂಡಗಳಿಗೆ ಅದೆಷ್ಟೋ ಸಲ ಶಾಕ್‌ ನೀಡಿದೆ. ವಿಶ್ವಕಪ್‌ನಲ್ಲಿ ಒಂದೆರಡು ಅದ್ಭುತ ಪ್ರದರ್ಶನ ನೀಡಿ ಕೂಟದ ದಿಕ್ಕನ್ನೇ ಬದಲಾಯಿಸಿದ ಹೆಗ್ಗಳಿಕೆ ಇದೆ. 2007ರ ವಿಶ್ವಕಪ್‌ನಲ್ಲಿ ಭಾರತವನ್ನು ಲೀಗ್‌ ಹಂತದಲ್ಲೇ ಹೊರದಬ್ಬಿದ್ದನ್ನು ಮರೆಯುವಂತಿಲ್ಲ. ವೀರೋಚಿತ ಪ್ರದರ್ಶನಕ್ಕೆ ಹೆಸರುವಾಸಿ. ಈ ಸಲವೂ ಬಲಿಷ್ಠ ಪಡೆಯನ್ನು ಹೊಂದಿದ್ದು, ಎದುರಾಳಿಗಳು ಹೆಚ್ಚು ಎಚ್ಚರದಿಂದ ಇರಬೇಕಿದೆ.ಮಾರ್ಚ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ 3-0 ಅಂತರದಿಂದ ಸರಣಿ ಸೋತಿತ್ತು. ಇದೀಗ ತ್ರಿಕೋನ ಸರಣಿಯಲ್ಲಿ ವಿಂಡೀಸ್‌, ಐರ್ಲೆಂಡ್‌ ತಂಡಗಳನ್ನು ಮಣಿಸಿ ಪ್ರಶಸ್ತಿ ಗೆದ್ದ ಉಮೇದಿನಲ್ಲಿದೆ.
ಬಲ: ಅನುಭವಿ ಆಟಗಾರರ ಶಕ್ತಿ, ತುಂಬಿ ತುಳುಕುವ ಜೋಶ್‌.
ದೌರ್ಬಲ್ಯ: ಹಠಾತ್‌ ಬ್ಯಾಟಿಂಗ್‌ ಕುಸಿತಕ್ಕೆ ಸಿಲುಕುವುದು.
ವಿಶ್ವಕಪ್‌ ಸಾಧನೆ: 2007-ಸೂಪರ್‌ 8, 2015-ಕ್ವಾರ್ಟರ್‌ ಫೈನಲ್‌.

ಶ್ರೀಲಂಕಾ-4/10
* 10 ತಂಡಗಳಲ್ಲೇ ಅತ್ಯಂತ ದುರ್ಬಲ!
ಅನುಮಾನವೇ ಇಲ್ಲ, ಈ ಬಾರಿಯ 10 ತಂಡಗಳಲ್ಲೇ ಶ್ರೀಲಂಕಾ ಅತ್ಯಂತ ದುರ್ಬಲ. ಬಾಂಗ್ಲಾ, ಅಫ್ಘಾನ್‌ಗಿಂತ ಕಳಪೆಯಾಗಿದೆ ಈ ದ್ವೀಪರಾಷ್ಟ್ರದ ಪಡೆ. ಕೊನೆಯ ಸ್ಥಾನಕ್ಕೆ ಕುಸಿದರೂ ಅಚ್ಚರಿ ಇಲ್ಲ. ತಂಡದಲ್ಲಿ ಸ್ಟಾರ್‌ ಆಟಗಾರರೇ ಇಲ್ಲ. ಕೆಲವು ಅನುಭವಿಗಳಿದ್ದರೂ ಫಾರ್ಮ್ ತೀರಾ ಕಳಪೆ. ಸಂಗಕ್ಕರ, ಜಯವರ್ಧನ, ಮುರಳೀಧರನ್‌ ಇರುವಾಗಲೇ ಕಪ್‌ ಗೆಲ್ಲದ ಲಂಕಾ, ಈಗಂತೂ ಲೆಕ್ಕದ ಭರ್ತಿಗೆ ಎಂಬಂತಿದೆ. ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ 5 ಪಂದ್ಯಗಳ ಸರಣಿಯನ್ನು 5-0 ಅಂತರದಿಂದ ಕಳೆದುಕೊಂಡಿತ್ತು. ತಂಡದ ಬ್ಯಾಟಿಂಗ್‌ ವಿಭಾಗ ಸಾಮಾನ್ಯ. ಬೌಲಿಂಗ್‌ ತೀರಾ ದುರ್ಬಲ.

ಬಲ: ಬ್ಯಾಟಿಂಗ್‌ನಲ್ಲಿ ಒಂದಿಬ್ಬರು ಆಟಗಾರರ ಫಾರ್ಮ್.
ದೌರ್ಬಲ್ಯ: ವಿಶ್ವ ಮಟ್ಟದ ಆಟಗಾರರ ತೀವ್ರ ಕೊರತೆ.
ವಿಶ್ವಕಪ್‌ ಸಾಧನೆ: 1996-ಚಾಂಪಿಯನ್‌, 2003-ಸೆಮಿಫೈನಲ್‌; 2007, 2011-ರನ್ನರ್‌ ಅಪ್‌.

Advertisement

Udayavani is now on Telegram. Click here to join our channel and stay updated with the latest news.

Next