Advertisement

ಸಾರುಬಳೆ ಹಿಡಿದಾಗಿದೆ ಎದುರಾಳಿ ಯಾರಾದರೇನು?

05:09 PM Mar 30, 2019 | pallavi |

ದಾವಣಗೆರೆ: ಸಂಸದ, ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್‌ ಈಗಾಗಲೇ ಸಾರುಬಳೆ ಹಿಡಿದು ಆಖಾಡದಲ್ಲಿ ಅಡ್ಡಾಡುತ್ತಿದ್ದಾರೆ. ಎದುರಾಳಿ ಯಾರಾದರೇನು, ಸ್ಪರ್ಧೆಗೆ ಹಿಂಜರಿಕೆ ಇಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಹೇಳಿದ್ದಾರೆ.

Advertisement

ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಂಬಂಧ ನಿರ್ಮಾಣವಾಗಿರುವ ಗೊಂದಲದ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ, ನಮ್ಮ ಪೈಲ್ವಾನ್‌ (ಜಿ.ಎಂ.ಸಿದ್ದೇಶ್ವರ್‌) ಆಖಾಡದಲ್ಲಿ ಸಾರುಬಳೆ ಹಿಡಿದಿದ್ದಾರೆ. ಎದುರಾಳಿ ಯಾರಾದರೇನು? ಅವರಂತೂ ಸ್ಪರ್ಧೆಗೆ ಅಣಿಯಾಗಿದ್ದಾರೆ. ಹಾಗಾಗಿ ನಾವು ಪ್ರತಿಸ್ಪರ್ಧಿ ಬಗ್ಗೆ ಆಲೋಚನೆಯನ್ನೆ ಮಾಡುವುದಿಲ್ಲ ಎಂದು ಕುಸ್ತಿ ಭಾಷೆಯಲ್ಲೇ ಅವರು ಪ್ರತಿಕ್ರಿಯಿಸಿದರು.

ನಾವು ದುಗ್ಗಮ್ಮನ ಜಾತ್ರೆಯಲ್ಲಿ ನಡೆಯೋ ಕುಸ್ತಿ ಪಂದ್ಯಕ್ಕೆ ತಯಾರಾಗುವ ಪೈಲ್ವಾನರಲ್ಲ. ವರ್ಷದ 365 ದಿನವೂ ತಾಲೀಮು ಮಾಡೋರು. ಹಾಗಾಗಿ ಪ್ರತಿಸ್ಪರ್ಧಿ ಬಗ್ಗೆ ಚಿಂತಿಸಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಇಲ್ಲವೇ ಜೆಡಿಎಸ್‌ ಅಭ್ಯರ್ಥಿ ಯಾರಾದರೂ ನಾವು ಸಿದ್ಧವಾಗಿದ್ದೇವೆ ಎಂದು ಮಾರ್ಮಿಕವಾಗಿ ಹೇಳಿದರು.

ನಮ್ಮ ಅಭ್ಯರ್ಥಿ ಕ್ಷೇತ್ರದಲ್ಲಿ ನಿರಂತರವಾಗಿ ಮೂರು ಬಾರಿ ಗೆದ್ದಿದ್ದಾರೆ. ಈ ಬಾರಿಯೂ ಗೆಲ್ಲುವ ವಿಶ್ವಾಸ ಇದೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿನ ಎಲ್ಲಾ ಹಳ್ಳಿಗಳನ್ನು ಸುತ್ತೋದು ಕಷ್ಟ. ಅಂತಹದರಲ್ಲಿ ನಮ್ಮ ಸಂಸದರು ಲೋಕಸಭಾ ಕ್ಷೇತ್ರದಲ್ಲಿನ 1800 ಹಳ್ಳಿಗಳಲ್ಲೂ ಪ್ರವಾಸ ಮಾಡಿದ್ದಾರೆ. ಸಾರ್ವಜನಿಕರ ಕೈಗೆ ಹೇಳಿದ ಸಮಯದಲ್ಲಿ ಸಿಗುತ್ತಾರೆ. ನಾವು ಈ ಬಾರಿಯೂ ಗೆಲ್ಲುವ ವಿಶ್ವಾಸ ಹೊಂದುವಲ್ಲಿ ಅವರ ಶ್ರಮವೂ ಇದೆ ಎಂದು ಜಾಧವ್‌ ಪ್ರತಿಪಾದಿಸಿದರು.

ಈ ಹಿಂದೆ ಅನುಕಂಪ, ಆಶೀರ್ವಾದ, ಅಲೆ ಸಿದ್ದೇಶ್ವರ್‌ ಗೆಲುವಿಗೆ ಕಾರಣವಾದ ಒಂದು ಭಾಗವಷ್ಟೆ. ಆದರೆ, ಅವರು ಕ್ಷೇತ್ರದಲ್ಲಿ ಕೈಗೊಂಡ ಕೆಲಸವೂ ಜಯಕ್ಕೆ ನಾಂದಿಯಾಗಲಿದೆ. ಜನರು ಎಲ್ಲವನ್ನೂ ಗಮನಿಸಿದ್ದು, ಈ ಬಾರಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಭವಿಷ್ಯ ನುಡಿದರು.

Advertisement

ನಮ್ಮ ಪಕ್ಷದ ಅಭ್ಯರ್ಥಿ ಇಷ್ಟೇ ಮತಗಳ ಅಂತರದಿಂದ ಜಯ ಸಾಧಿಸಲಿದ್ದಾರೆ ಹಾಗೂ ಎದುರಾಳಿ ಠೇವಣಿ ಕಳೆಯುತ್ತೇವೆ ಎಂಬುದಾಗಿ ನಾವು ಹೇಳಲ್ಲ. ಏಕೆಂದರೆ ನಾವು ಯಾವ ಮತದಾರರನ್ನು ಖರೀದಿಸಿಲ್ಲ. ಸ್ಲಮ್‌ ಜನರೂ ಸೇರಿದಂತೆ ಎಲ್ಲೆಡೆ ನರೇಂದ್ರ ಮೋದಿ ಪರ ಒಲವು ತೋರುತ್ತಿರುವುದರಿಂದ ಈ ಬಾರಿಯೂ ಗೆಲ್ಲುತ್ತೇವೆ ಎಂಬುದು ನಮ್ಮ ವಿಶ್ವಾಸ ಎಂದು ತಿಳಿಸಿದರು.

ಏಪ್ರಿಲ್‌ 4ರಂದು ಜಿ.ಎಂ.ಸಿದ್ದೇಶ್ವರ್‌ ನಾಮಪತ್ರ ಸಲ್ಲಿಸಲಿದ್ದು, ಅಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪನವರಿಗೂ ಆಗಮಿಸುವಂತೆ ಮನವಿ ಮಾಡಿದ್ದೇವೆ ಎಂದು ಅವರು ತಿಳಿಸಿದರು.

ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಎಚ್‌. ಎನ್‌.ಶಿವಕುಮಾರ್‌, ಎನ್‌.ರಾಜಶೇಖರ್‌, ಖಜಾಂಚಿ ಹೇಮಂತಕುಮಾರ್‌, ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಜಗದೀಶ್‌ ಗೌಳಿ, ಅಭಿಲಾಷ್‌, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next