ಹೊಸದಿಲ್ಲಿ : ಆಧುನಿಕ ವಿಜ್ಞಾನದಲ್ಲಿನ ಕೃತಕ ಜ್ಞಾನದ ಮಹತ್ವಕ್ಕೆ ಒತ್ತು ನೀಡಿರುವ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು, “ಕೃತಕ ಜ್ಞಾನದ ಮೇಲೆ ಯಾರಿಗೆ ಪಾರಮ್ಯ ಸಿಗುವುದೋ ಅವರೇ ವಿಶ್ವವನ್ನು ಆಳುತ್ತಾರೆ’ ಎಂದು ಎಚ್ಚರಿಸಿದ್ದಾರೆ.
“ಕೃತಕ ಜ್ಞಾನ ಭವಿಷ್ಯದ ವಿಜ್ಞಾನವಾಗಿದೆ; ಅದು ಕೇವಲ ರಶ್ಯಕ್ಕೆ ಮಾತ್ರವಲ್ಲ; ಇಡಿಯ ಮನುಕುಲಕ್ಕೆ ಸಂಬಂಧಿಸಿದ್ದಾಗಿದೆ’ ಎಂದು ಪುತಿನ್ ಅವರು ರಶ್ಯದಲ್ಲಿ ಶಾಲಾ ವರ್ಷ ಆರಂಭದ ಸೆಪ್ಟಂಬರ್ 1ರಂದು 16,000 ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಉದ್ದೇಶಿಸಿ ಮಾಡಿದ 45 ನಿಮಿಷಗಳ ಮುಕ್ತ ಪಾಠದಲ್ಲಿ ಹೇಳಿದರು.
ಕೃತಕ ಜ್ಞಾನದ ಮೇಲೆ ಪಾರಮ್ಯ ಹೊಂದಿದವರಿಗೆ ಅತ್ಯದ್ಭುತ ಅವಕಾಶಗಳು ತೆರೆದುಕೊಳ್ಳುತ್ತವೆ; ಆದರೆ ಅದೇ ರೀತಿ ಬೆದರಿಕೆಗಳು ಕೂಡ ಕಾಣಿಸಿಕೊಳ್ಳುತ್ತವೆ ಮತ್ತು ಅವುಗಳನ್ನು ಮುಂಗಾಣುವುದು ಕೂಡ ಕಷ್ಟಕರವೇ ಆಗಿರುತ್ತದೆ. ಆದುದರಿಂದ ಕೃತಕ ಜ್ಞಾನವನ್ನು ಕರಗತ ಮಾಡಿಕೊಳ್ಳುವವರು ವಿಶ್ವವನ್ನೇ ಆಳಬಲ್ಲವರಾಗುತ್ತಾರೆ’ ಎಂದು ಪುತಿನ್ ಹೇಳಿರುವುದನ್ನು ಉಲ್ಲೇಖೀಸಿ ರಶ್ಯನ್ ಟಿವಿ ಚ್ಯಾನಲ್ ಆರ್‌ಟಿ ವರದಿ ಮಾಡಿದೆ.
“ಹಾಗಿದ್ದರೂ ಕೃತಕ ಜ್ಞಾನವೆನ್ನುವುದು ಏಕಸ್ವಾಮ್ಯಕ್ಕೆ ಗುರಿಯಾಗುವುದನ್ನು ನಾನು ಬಯಸುವುದಿಲ್ಲ. ಒಂದೊಮ್ಮೆ ನಾವೇ ಅದರಲ್ಲಿ ಪಾರಮ್ಯ ಪಡೆದರೆ ನಾವು ಆ ಜ್ಞಾನವನ್ನು, ಪರಮಾಣು ತಂತ್ರಜ್ಞಾನವನ್ನು ನಾವಿಂದು ಹಂಚಿಕೊಳ್ಳುತ್ತಿರುವಂತೆ, ಇಡಿಯ ವಿಶ್ವದೊಡನೆ ಹಂಚಿಕೊಳ್ಳುತ್ತೇವೆ’ ಎಂದು ಪುತಿನ್ ಹೇಳಿದರು.
ಪುತಿನ್ ಅವರು ತಮ್ಮ ಭಾಷಣದಲ್ಲಿ ಬಾಹ್ಯಾಕಾಶ, ಔಷಧ, ಮತ್ತು ಮಾನವ ಮೆದುಳಿನ ಸಾಮರ್ಥ್ಯ ಮುಂತಾದ ವಿಷಯಗಳನ್ನು ಚರ್ಚಿಸಿದರು.
“ಇಂದು ಮನುಷ್ಯನು ತನ್ನ ಕಣ್ಣುಗಳ ಚಲನೆಯ ಮೂಲಕ ಅನೇಕ ಬಗೆಯ ಸಂಕೀರ್ಣ ವಿದ್ಯುನ್ಮಾನ ಉಪಕರಣಗಳನ್ನು, ವ್ಯವಸ್ಥೆಗಳನ್ನು ನಡೆಸಬಹುದಾಗಿದೆ. ಅದೇ ರೀತಿ ಬಾಹ್ಯಾಕಾಶದಲ್ಲಿ ಮಾನವನ ಸಹಿತ ಎಲ್ಲೆಡೆಯ ಮನುಷ್ಯನು ವಿಪರೀತ ಸನ್ನಿವೇಶಗಳಲ್ಲಿ ತೋರುವ ವರ್ತನೆ, ನಡತೆಯನ್ನು ಕೂಡ ವಿಶ್ಲೇಷಿಸುವ ಸಾಧ್ಯತೆ ಇದೆ’ ಎಂದು ಪುತಿನ್ ಹೇಳಿದರು.