Advertisement

ಯಾರು ಏನೇ ಹೇಳಿದ್ರೂ ನಾವೇ ಗೆಲ್ಲೋದು

09:07 AM Oct 07, 2017 | Team Udayavani |

ಬೆಂಗಳೂರು: “ಯಾರು ಏನೇ ಹೇಳಿದರೂ, 2018ರ ಚುನಾವಣೆಯಲ್ಲಿ ನಾವೇ ಗೆಲ್ಲೋದು’ -ಹೀಗಂತ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸದಿಂದ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಶುಕ್ರವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರನ್ನುದ್ದೇಶಿಸಿ ಮಾತನಾಡಿದ ಅವರು, “ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ತೃಪ್ತಿಯಾಗಿದೆ. ಸರ್ಕಾರದ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳುತ್ತಿದ್ದಾರೆ. ಈಗಿನ ವಾತಾವರಣ ನೋಡಿದರೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ. ಶಾಸಕರು ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು’ ಎಂದರು. “ಬಿಜೆಪಿ ಸರ್ಕಾರದ ವೈಫ‌ಲ್ಯಗಳನ್ನೂ ಜನರಿಗೆ ತಲುಪಿಸಬೇಕು. ಪಕ್ಷದ ಜಿಲ್ಲಾ ಘಟಕಗಳಲ್ಲಿನ ಗೊಂದಲಗಳನ್ನು ನಿವಾರಿಸಲು ಈಗಾಗಲೇ ಸಮನ್ವಯ ಸಮಿತಿ ರಚನೆ ಮಾಡಲಾಗಿದೆ. ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ’ ಎಂದು ಹೇಳಿದರು.

“ಪ್ರಧಾನಿ ಮೋದಿ ಅವರ ಬಾಯಿ ಬಡಾಯಿ, ಸಾಧನೆ ಶೂನ್ಯ. ಆದರೆ, ನಾವು ಸುಳ್ಳು ಹೇಳುವ ಅಗತ್ಯವಿಲ್ಲ. ಸರ್ಕಾರದ ಸಾಧನೆಗಳನ್ನು ತಿಳಿಸಿದರೆ ಸಾಕು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವು ಸಾಧಿಸಲು ಪೂರಕ ವಾತಾವರಣ ಇದೆ. ಅದನ್ನು ಎಲ್ಲರೂ ಸೇರಿ ಪರಿಣಾಮಕಾರಿಯಾಗಿ ಬಳಿಸಿಕೊಳ್ಳೋಣ’ ಎಂದು ಸಿಎಂ ಕಿವಿಮಾತು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಶಾಸಕಾಂಗ ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಮಾಜಿ 
ಮುಖ್ಯಮಂತ್ರಿ ಧರ್ಮಸಿಂಗ್‌ ಹಾಗೂ ಮಾಜಿ ಸಚಿವ ಖಮರುಲ್‌ ಇಸ್ಲಾಂ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. 

ಮುಖ್ಯಮಂತ್ರಿ ಅಭ್ಯರ್ಥಿ ಗೊಂದಲ ಬೇಡ
ಮುಂದಿನ ಮುಖ್ಯಮಂತ್ರಿ ಯಾರು ಎಂದು ಗೊಂದಲ ಸೃಷ್ಠಿಸುವ ಪ್ರಯತ್ನ ಮಾಡದಂತೆ ವೆಣುಗೋಪಾಲ ಶಾಸಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಚುನಾವಣೆ ನಡೆಸುವುದಾಗಿ ಹೈಕಮಾಂಡ್‌ ಸ್ಪಷ್ಟವಾಗಿ ಹೇಳಿದೆ. ಚುನಾವಣೆಯಲ್ಲಿ ಬಹುಮತ ಪಡೆದ ನಂತರ ಶಾಸಕಾಂಗ ಪಕ್ಷದ ನಾಯಕರು ಯಾರಾಗಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿ ಅನಗತ್ಯ ಗೊಂದಲ ಸೃಷ್ಠಿ ಮಾಡಬೇಡಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next