ಧಾರವಾಡ: ಇಂದು ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಮೊದಲು ಪ್ರೇರಣೆಯಾಗಿದ್ದು 12ನೇ ಶತಮಾನದ ಶರಣ ವಿಶ್ವಗುರು ಬಸವಣ್ಣನವರು ಎಂದು ಅಕ್ಕ ಪ್ರಶಸ್ತಿ ಪುರಸ್ಕೃತ ಪ್ರೇಮಕ್ಕಾ ಬಿಂಕದಕಟ್ಟಿ ಹೇಳಿದರು. ಇಲ್ಲಿನ ಅಕ್ಕನ ಬಳಗದಲ್ಲಿ ಸಚಿವ ವಿನಯ ಕುಲಕರ್ಣಿ ಅವರ ತಾಯಿ ಸುವರ್ಣಮ್ಮ ಕುಲಕರ್ಣಿ ಸ್ಮರಣಾರ್ಥ ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಅಕ್ಕ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಮಹಿಳೆಯರು ನಾಲ್ಕು ಗೋಡೆಗಳ ಧ್ಯೆ ಕಾಲ ಕಳೆದು ಜೀವನ ತ್ಯಜಿಸುವಂತಹ ಘಟನೆಗಳು ಶತಮಾನಗಳ ಹಿಂದೆ ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ವಿಶ್ವಗುರು ಬಸವಣ್ಣನವರು ಮಹಿಳೆಯರ ನೋವುಗಳನ್ನು ಕಣ್ಣಾರೆ ಕಂಡು ಪುರುಷರಿಗಷ್ಟೇ ಯಾಕೆ ಸ್ತ್ರೀಯರಿಗೂ ಸ್ವಾತಂತ್ರ ಸಿಗಬೇಕು ಎಂದರು.
ಸ್ತ್ರೀ ಸ್ವಾತಂತ್ರ್ಯ ಕೊಡಿಸಿದ ಕಾರಣ ಇಂದು ಮಹಿಳೆಯರು ಅನೇಕ ಕ್ಷೇತ್ರದಲ್ಲಿ ಹೆಜ್ಜೆಯನ್ನಿಡುತ್ತಿದ್ದಾರೆ. ಮಹಿಳೆ ಆಧುನಿಕ ಯುಗದಲ್ಲಿ ಧರ್ಮದ ಹಾದಿ ಬಿಟ್ಟು ವೈಚಾರಿಕತೆ ಹಾಗೂ ವೈಜ್ಞಾನಿಕ ಹಾದಿಯಲ್ಲಿ ನಡೆಯಬೇಕು. ಮೂಢ ನಂಬಿಕೆಯಂತಹ ಕಟ್ಟುಪಾಡುಗಳನ್ನು ಮುರಿದು ಮಹಿಳೆ ಶಿಕ್ಷಣ ಪಡೆದು,ಶರಣರ ಕಾಲದಿಂದಲೂ ಮಹಿಳೆಯ ಸಬಲೀಕರಣ, ಮಹಿಳಾ ಹಕ್ಕುಗಳ ಕುರಿತು ಚರ್ಚೆಗಳು ನಡೆಯುತ್ತಿವೆಯೇ ಹೊರತು ಅನುಷ್ಠಾನಗಳಾಗುತ್ತಿಲ್ಲ ಎಂದರು.
ಜಿಲ್ಲಾಧಿಕಾರಿ ಡಾ| ಎಸ್. ಬಿ.ಬೊಮ್ಮನಹಳ್ಳಿ ಮಾತನಾಡಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಉತ್ತಮ ಸಾಧನೆ ಮಾಡಿದ್ದರೂ ಇನ್ನೂ ಅನೇಕ ಮಹಿಳೆಯರಿಗೆ ಪ್ರಶಸ್ತಿ ಮತ್ತು ಗೌರವಗಳು ಸಿಗುತ್ತಿಲ್ಲ. ಮಹಿಳಾ ಸಬಲೀಕರಣ ತುಂಬಾ ಬಹಳ ಪ್ರಾಮುಖ್ಯತೆ ಪಡೆಯುತ್ತಿದ್ದು ಸರಕಾರದ ಜೊತೆಗೆ ಸಂಘ-ಸಂಸ್ಥೆಗಳು ಮಹಿಳೆಯರಿಗೆ ಮಾರ್ಗದರ್ಶನ ಮಾಡಬೇಕಿದೆ ಎಂದರು.
ವೈಶುದೀಪ ಫೌಂಡೇಶನ್ ಕಾರ್ಯದರ್ಶಿ ಶಿವಲೀಲಾ ವಿನಯ ಕುಲಕರ್ಣಿ ಮಾತನಾಡಿ, ಯಾವುದೇ ಉತ್ತಮ ಕಾರ್ಯ ಮಾಡುವಾಗ ಸಾಕಷ್ಟು ವಿರೋಧ ಬರುವುದು ಸಹಜ. ಅವೆಲ್ಲವನ್ನು ಮೀರಿ ಮಹಿಳೆ ಸಮಾಜದಲ್ಲಿ ಸಾಧನೆ ಮಾಡಲು ಮುಂದಾಗಬೇಕು. ಮಹಿಳೆ ಸಮಾಜ ಸುಧಾರಕಿಯಾಗಿ ಸಾಕಷ್ಟು ಕೆಲಸ ಮಾಡಿ ಮಹಿಳಾ ಸಾಧಕಿಯರಾಗಬೇಕು ಎಂದರು.
ಅಕ್ಕನ ಬಳಗದ ಅಧ್ಯಕ್ಷೆ ಭಾರತಿದೇವಿ ರಾಜಗುರು ಅಧ್ಯಕ್ಷತೆ ವಹಿಸಿದ್ದರು. ಕುಸಮಾ ಓತಗೇರಿ, ಭಾಗ್ಯವತಿ ನಡಕಟ್ಟಿ, ಶಶಿಕಲಾ ಬಸವರಡ್ಡಿ, ಮುಕ್ತಾ ಸವಡಿ ಉಪಸ್ಥಿತರಿದ್ದರು. ಗೌರಾ ಹಾಲಭಾವಿ ನಿರೂಪಿಸಿದರು. ಸುನಂದಾ ಗುಡ್ಡದ ವಂದಿಸಿದರು.