Advertisement

ಕಾಂಗ್ರೆಸ್‌ಗೆ ಗಾಂಧಿಯೇತರ ಅಧ್ಯಕ್ಷ ಬೇಕೆ? ಯೋಚನೆ ಬದಲಾಗಲಿ

01:36 AM May 29, 2019 | sudhir |

ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಹೀನಾಯವಾಗಿ ಸೋತಿರುವ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿಯವರು ತಮ್ಮ ಹುದ್ದೆಯನ್ನು ಬಿಟ್ಟುಕೊಡುವ ವಿಚಾರದಲ್ಲಿ ಪಟ್ಟುಬಿಡುತ್ತಿಲ್ಲ. ಮಂಗಳವಾರ ಕೂಡ ಕಾಂಗ್ರೆಸ್‌ನ ಹಿರಿಯ ನಾಯಕರು ರಾಹುಲ್‌ ಗಾಂಧಿಯವರ ಮನವೊಲಿಸಲು ಪ್ರಯತ್ನಿಸಿದ್ದಾರೆ.

Advertisement

ಈ ಬಾರಿ ಕಾಂಗ್ರೆಸ್‌ನ ಸ್ಥಿತಿ ಶೋಚನೀಯವಾಗಿದೆ. 543 ಸಂಸದರ ಲೋಕಸಭೆಯಲ್ಲಿ ಕೇವಲ 52 ಸ್ಥಾನಗಳಲ್ಲಷ್ಟೇ ಗೆದ್ದಿರುವ ಈ ಪಕ್ಷವು, 18 ರಾಜ್ಯಗಳಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲೂ ವಿಫ‌ಲವಾಗಿದೆ. ಪ್ರಮುಖ ಪ್ರತಿಪಕ್ಷವಾಗಿ ಗುರುತಿಸಿಕೊಳ್ಳುವ ಅರ್ಹತೆಯನ್ನೂ ಅದು ಕಳೆದುಕೊಂಡಿದೆ(55 ಸ್ಥಾನಗಳು ಇರಬೇಕು). ಐದು ತಿಂಗಳ ಹಿಂದೆ, ಅಂದರೆ ಕಳೆದ ಡಿಸೆಂಬರ್‌ನಲ್ಲಿ ರಾಜಸ್ಥಾನ, ಛತ್ತೀಸ್‌ಗಢ‌ ಮತ್ತು ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದ ಕಾಂಗ್ರೆಸ್‌ ಈ ಬಾರಿ ಆ ರಾಜ್ಯಗಳಲ್ಲೂ ಸೋತಿದೆ. ಕಳೆದ ಮೇ ತಿಂಗಳಿಂದ ಕರ್ನಾಟಕದಲ್ಲಿ ಅದು ಮೈತ್ರಿ ಸರ್ಕಾರ ನಡೆಸುತ್ತಿದ್ದು, ಇಲ್ಲೂ ಕೂಡ ಹೀನಾಯ ಸ್ಥಿತಿ ಅನುಭವಿಸಿದೆ. ಕಾಂಗ್ರೆಸ್‌ನ ಅನೇಕ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳಷ್ಟೇ ಅಲ್ಲದೆ, ಖುದ್ದು ರಾಹುಲ್‌ ಗಾಂಧಿಯವರೂ ತಮ್ಮ ಸಾಂಪ್ರದಾಯಿಕ ಕ್ಷೇತ್ರ ಅಮೇಠಿಯಲ್ಲಿ ಸೋತಿದ್ದಾರೆ.

ಮತ್ತೂಂದೆಡೆ ಕಾಂಗ್ರೆಸ್‌ ಎದುರು ಇನ್ನೊಂದು ಬೃಹತ್‌ ಸಂಕಟ ಎದುರಾಗಲಿದೆ. ಬಿಜೆಪಿಯು ಮುಂದಿನ ವರ್ಷದೊಳಗೆ ರಾಜ್ಯ ಸಭೆಯಲ್ಲಿ ಪೂರ್ಣಬಹುಮತ ಪಡೆ ಯುವ ಸಾಧ್ಯತೆ ನಿಚ್ಚಳವಾಗುತ್ತಿದ್ದು, ತದನಂತರ ಕಾಂಗ್ರೆಸ್‌ನ ಶಕ್ತಿಯಂತೂ ಪೂರ್ಣ ಕುಸಿಯುತ್ತದೆ. ಡಾ.ಮನ ಮೋಹನ್‌ ಸಿಂಗ್‌ರನ್ನೂ ಅಸ್ಸಾಂನಿಂದ ರಾಜ್ಯಸಭೆಗೆ ಕಳುಹಿಸುವ ಶಕ್ತಿ ಈ ಬಾರಿ ಕಾಂಗ್ರೆಸ್‌ಗೆ ಉಳಿದಿಲ್ಲ. ಪರಿಸ್ಥಿತಿ ಇಷ್ಟೊಂದು ವಿಷಯಮವಾಗಿರುವ ಸಂದರ್ಭದಲ್ಲಿ, ಆ ಪಕ್ಷಕ್ಕೆ ನವ ರೂಪ ಕೊಡುವ ನಾಯಕತ್ವದ- ದಿಟ್ಟ ನಿರ್ಧಾರಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ನೋಡಿದಾಗ, ಗಾಂಧಿಯೇತರ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು ಎನ್ನುವ ರಾಹುಲ್‌ ಗಾಂಧಿ ಮಾತನ್ನು ಕಾಂಗ್ರೆಸ್ಸಿಗರೂ ಗಂಭೀರವಾಗಿ ಅವಲೋಕಿಸಬೇಕಿದೆ. ಇದು ಪಕ್ಷದ ಅಳಿವು ಉಳಿವಿನ ಪ್ರಶ್ನೆಯೇ ಸರಿ. ಭಾರತೀಯ ಜನತಾ ಪಾರ್ಟಿಯು ಕೆಲವೇ ತಿಂಗಳಲ್ಲಿ ಹರ್ಯಾಣ, ಜಾರ್ಖಂಡ್‌ ಮತ್ತು ಮಹಾರಾಷ್ಟ್ರದಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಗಳಿಗೆ ಸಿದ್ಧತೆ ನಡೆಸಿದೆ. ಈ ಮೂರೂ ರಾಜ್ಯಗಳಲ್ಲೂ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಆಡಳಿತವಿದೆ. ರಾಜ್ಯಪಾಲರ ಆಡಳಿತವಿರುವ ಜಮ್ಮು-ಕಾಶ್ಮೀರದಲ್ಲೂ ಈ ವರ್ಷ ವಿಧಾನಸಭಾ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಪರಿಸ್ಥಿತಿ ಹೀಗಿರುವಾಗ, ಸ್ಪಷ್ಟ ನಿರ್ಧಾರಕ್ಕೆ ಬರದೇ, ಗೊಂದಲದಲ್ಲೇ ಮುಂದುವರಿದರೆ ಕಾಂಗ್ರೆಸ್‌ ಸ್ಥಿತಿ ಇನ್ನಷ್ಟ ಬಿಗಡಾಯಿಸದೇ ಇರದು.

ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ರಾಹುಲ್‌ ಗಾಂಧಿ, ಪಕ್ಷದ ಹಿತಾಸಕ್ತಿಯನ್ನು ಮರೆತು ಸ್ವಹಿತಾಸಕ್ತಿಗಾಗಿ ಕುಟುಂಬ ರಾಜಕಾರಣಕ್ಕೆ ಆದ್ಯತೆ ನೀಡಿದ್ದಕ್ಕಾಗಿ ಕೆಲ ಹಿರಿಯ ನಾಯಕರಿಗೂ ತಪರಾಕಿ ಹಾಕಿದ್ದಾರೆ. ಆದರೆ ಈ ಮಾತು ಖುದ್ದು ಅವರ ಕುಟುಂಬಕ್ಕೂ ಅನ್ವಯಿಸಬೇಕಿದೆ. ದುರಂತವೆಂದರೆ, ಗಾಂಧಿಯೇತರ ಅಧ್ಯಕ್ಷರನ್ನು ಊಹಿಸಿಕೊಳ್ಳುವುದಕ್ಕೂ ಆಗದಂಥ ಸ್ಥಿತಿಯಲ್ಲಿ ಕಾಂಗ್ರೆಸ್‌ ನಾಯಕರಿದ್ದಾರೆ. ರಾಹುಲ್‌ ಅಲ್ಲದಿದ್ದರೆ ಮತ್ಯಾರು ಎನ್ನುವ ಪ್ರಶ್ನೆಯೂ ಇದೆ.

ಅದನ್ನು ನಿರ್ಧರಿಸಬೇಕಾದದ್ದು ಕಾಂಗ್ರೆಸ್‌ ನಾಯಕರೇ. ಪಕ್ಷಕ್ಕಾಗಿ ದಶಕಗಳಿಂದ ದುಡಿದ ಅನೇಕ ನಿಷ್ಠಾವಂತ, ಮುತ್ಸದ್ದಿ ನಾಯಕರಿದ್ದಾರೆ, ಯುವ ತಲೆಮಾರಿನ ಟೆಕ್‌ ಸೇವಿ ರಾಜಕಾರಣಿಗಳೂ ಪಕ್ಷದಲ್ಲಿದ್ದಾರೆ. ಪಕ್ಷಕ್ಕೆ ನವಚೈತನ್ಯ ಕೊಡಬಹುದಾದ ಶಕ್ತಿ ಅವರಿಗಿದೆ. ಆದರೆ, ಅಧ್ಯಕ್ಷರಾದವರಿಗೆ ಸ್ವಾತಂತ್ರÂ ನೀಡಲೇಬೇಕು, ಸೀತಾರಾಮ್‌ ಕೇಸರಿಯಂಥ ಕಾಂಗ್ರೆಸ್ಸೇತರ ಅಧ್ಯಕ್ಷರಿಗೆ ಎದುರಾದ ಸ್ಥಿತಿ ಇವರಿಗೆ ಎದುರಾಗಬಾರದು. ಈ ವಿಷಯದಲ್ಲಿ ಕಾಂಗ್ರೆಸ್‌ಗೆ ಬಿಜೆಪಿ ಮಾದರಿಯಾಗಲಿ, ಅಲ್ಲಿ ಪಕ್ಷದ ಅಧ್ಯಕ್ಷರಾಗಿರುವವರೇ ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿತವಾಗುವುದಿಲ್ಲ. ಈ ವಿಷಯದಲ್ಲಿ ಕಾಂಗ್ರೆಸ್‌ ನಿಜಕ್ಕೂ ಗಂಭೀರವಾಗಿ ಚಿಂತಿಸಲೇಬೇಕಿದೆ. ಪ್ರಜಾಪ್ರಭುತ್ವದ ಬಲಿಷ್ಠ ಆಡಳಿತದಷ್ಟೇ ಪ್ರಬಲ ಪ್ರತಿಪಕ್ಷವೂ ಬೇಕು ಎನ್ನುವ ಮಾತು ಬರೀ ಮಾತಾಗಿಯೇ ಉಳಿಯದಿರಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next