Advertisement

ಕಾಡಿನ ಸ್ಪರ್ಧೆಯಲ್ಲಿ ಗೆದ್ದವರಾರು?

09:39 AM Nov 22, 2019 | mahesh |

ಮಳೆಯ ಮುನ್ಸೂಚನೆ ಕೊಡಲು ಸೂಕ್ತ ವ್ಯಕ್ತಿಯನ್ನು ಕಾಡಿನ ರಾಜ ಆನೆ ಹುಡುಕುತ್ತಿತ್ತು. ಅದಕ್ಕೆ ಅಭ್ಯರ್ಥಿಗಳನ್ನು ಆಹ್ವಾನಿಸಿ ಅವುಗಳಿಗೆ ಸ್ಪರ್ಧೆಯನ್ನು ಒಡ್ಡಿತು. ಅದರಲ್ಲಿ ಗೆದ್ದವರಾರು?

Advertisement

ಹಿಂದೆ ಕಾಡಿನ ಪ್ರಾಣಿಗಳು ಹಾಗೂ ನಾಡಿನ ಜನರೆಲ್ಲಾ ಬಹಳ ಅನ್ಯೋನ್ಯದಿಂದ ಬದುಕುತ್ತಿದ್ದರು. ಆಗ ಆನೆ ಕಾಡಿನ ರಾಜನಾಗಿತ್ತು. ಅದು ಪ್ರಜೆಗಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿತ್ತು. ಒಂದು ದಿನ ರಾಜ ಆನೆಗೆ ಮಳೆಗಾಲ ಪ್ರಾರಂಭವಾಗುವ ಮುನ್ಸೂಚನೆ ಕೊಡಲು ಯಾರಾದರೂ ಒಬ್ಬರು ಜವಾಬ್ದಾರಿಯುತ ವ್ಯಕ್ತಿಯನ್ನು ನೇಮಿಸುವ ಮನಸ್ಸಾಯಿತು. ಹೀಗಾಗಿ ಅದು ಕೆರೆ ನದಿ ಹಳ್ಳಗಳಿಗೂ ಒಬ್ಬ ರಾಜನನ್ನು ನೇಮಿಸಲು ನಿರ್ಧರಿಸಿತು. ಅಂತೆಯೇ ತನ್ನ ಸೇವಕ ಹುಂಜವನ್ನು ಕರೆದು “ನದಿ, ಕೆರೆ, ಹಳ್ಳಗಳಿಗೆ ರಾಜನಾಗಲು ಆರ್ಹತೆಯಿರುವವರು ಹಾಗೂ ಇಚ್ಛೆಯುಳ್ಳವರು ನಾಳೆ ಬೆಳಗ್ಗೆ ಅರಮನೆಯ ಅಂಗಳದಲ್ಲಿ ಜಮಾಯಿಸಬೇಕು’ ಎಂದು ಡಂಗುರ ಸಾರುವಂತೆ ಹೇಳಿತು. ಬೆಳಗ್ಗೆ ತಿಂಡಿ ತಿಂದ ನಂತರ ಆನೆ ಹೊರಗೆ ಬಂದು ನೋಡಿದರೆ, ಕಾಡಿನ ಎಲ್ಲಾ ಪ್ರಾಣಿಗಳು ಜಲರಾಜನಾಗಲು ತಾ ಮುಂದು ನಾಮುಂದು ಎಂದು ಜಮಾಯಿಸಿದ್ದವು. ಅದರಲ್ಲಿ ಮಂಗ, ಬೆಕ್ಕು, ಆಮೆ, ಬಾತುಕೋಳಿ ಅಲ್ಲದೇ ಏಡಿ ಕೂಡ ಬಂದಿತ್ತು. ಆನೆ ಅಲ್ಲಿ ನೆರೆದ ಪ್ರಾಣಿಗಳ ಅರ್ಹತೆ ಗುರುತು ಮಾಡಲು ಆರಂಭಿಸಿತು.

ಮೊದಲು ಬೆಕ್ಕಿನ ಬಳಿ ಬಂದು “ನಿನಗೆ ನೀರೆಂದರೆ ಭಯ, ಮಳೆ ಬಂದರೆ ಸಾಕು ಬೆಚ್ಚಗಿನ ಜಾಗವನ್ನು ಹುಡುಕಿಕೊಂಡು ಓಡುತ್ತಿ. ಹಾಗಾಗಿ ನಿನಗೆ ಜಲರಾಜನಾಗುವ ಅರ್ಹತೆ ಇಲ್ಲ!’ ಎಂದಿತು. ನಂತರ ಮಂಗನ ಬಳಿ ಬಂದ ಆನೆ, “ನೀನು ಯಾವಾಗಲೂ ಆಟದಲ್ಲೇ ಮುಳುಗಿರುತ್ತಿಯಾ, ಅಲ್ಲಿ ಮೈಮರೆತು ನಿನ್ನ ಕರ್ತವ್ಯವನ್ನು ಮರೆಯಬಹುದೆಂಬ ಭಯ. ಹಾಗಾಗಿ ನೀನು ಸಹ ಈ ಸ್ಥಾನಕ್ಕೆ ಯೋಗ್ಯನಲ್ಲ’ ಎಂದಿತು. ಮುಂದಿನ ಸರದಿ ಬಾತುಕೋಳಿಯದು. “ನಿನ್ನ ಪಾದ ಚಪ್ಪಟೆಯಾಗಿದೆ. ನಿನಗೆ ವೇಗವಾಗಿ ಓಡಲು ಆಗುವುದಿಲ್ಲ ಎಂದು ಹೇಳಿತು.

ಏಡಿಯ ಕಡೆ ತಿರುಗಿ, “ಓ ನನ್ನ ಏಡಿಯೇ, ನಿನ್ನನ್ನು ಹೇಗೆ ಜಲರಾಜನನ್ನಾಗಿ ಮಾಡುವುದು? ನಿನಗೆ ತಲೆಯೇ ಇಲ್ಲ! ನಾನು ಹೇಗೆ ನಿನಗೆ ಕಿರೀಟವನ್ನು ತೊಡಿಸಲಿ? ನೀನು ಈ ಸ್ಥಾನಕ್ಕೆ ಯೋಗ್ಯನಲ್ಲ!’ ಎಂದು ನಿರಾಸೆ ಮಾಡಿತು.

ಕೊನೆಗೆ ಉಳಿದದ್ದು ಒಂದು ಮಿಡತೆ ಮತ್ತು ಕಪ್ಪೆ ಮಾತ್ರ. ಇವರಿಬ್ಬರನ್ನು ನೋಡಿದ ರಾಜ ಆನೆ ಒಂದು ನಿಮಿಷ ಸೊಂಡಿಲಿನಿಂದ ತಲೆ ಕೆರೆದುಕೊಂಡು, “ಗೆಳೆಯರೆ, ಉಳಿದಿರುವ ಇವರಿಬ್ಬರಿಗೂ ಒಳ್ಳೆಯ ಧ್ವನಿ ಇದೆ. ಇಬ್ಬರೂ ಈ ಕೆಲಸವನ್ನು ಚೆನ್ನಾಗಿ ಮಾಡಬಲ್ಲಿರಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ನಿಮ್ಮಿಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂದು ತೋಚುತ್ತಿಲ್ಲ’!ಎಂದಾಗ ಮಧ್ಯೆ ಬಾಯಿ ಹಾಕಿದ ಹುಂಜ ಇವರಿಬ್ಬರಿಗೂ ಓಟದ ಸ್ಪರ್ಧೆಯನ್ನು ಏರ್ಪಡಿಸೋಣ, ಎಂದಾಗ ಎಲ್ಲಾರೂ ಅದೇ ಸರಿ ಎಂಬ ನಿರ್ಧಾರಕ್ಕೆ ಬಂದರು. ರಾಜ, “ಹಾಗೆಯೇ ಆಗಲಿ, ಯಾರು ಮೊದಲು ನದಿತೀರವನ್ನು ತಲುಪುತ್ತಾರೋ ಅವರೇ ಗೆದ್ದು ರಾಜನಾಗುತ್ತಾರೆ’ ಎಂದಿತು.

Advertisement

ಹುಂಜ ರೆಡಿ, ಸ್ಟೆಡಿ ಸ್ಟಾರ್ಟ್‌ ಎಂದಿದ್ದೆ ತಡ, ಮಿಡತೆ ಚಿಮ್ಮುತ್ತಾ ಸಾಗಿದರೆ, ಕಪ್ಪೆ ಹಿಂಬದಿ ಪಾದದಿಂದ ನೆಗೆಯುತ್ತಾ, ತಾಮುಂದು ನಾಮುಂದು ಎಂದು ಸಾಗಿತು. ಮಿಡತೆ ಕಪ್ಪೆಗಿಂತ ಒಂದು ಹೆಜ್ಜೆ ಮುಂದೆಯೇ ಇತ್ತು. ಅದರೆ ಒಂದು ಹಂತದಲ್ಲಿ ಮಿಡತೆ ನಿಂತುಬಿಟ್ಟಿತು, ಮುಂದೆ ದೊಡ್ಡನೆಯ ಕೆಸರುಗುಂಡಿ ಇತ್ತು. ಅಷ್ಟರಲ್ಲಿ ಹಿಂದೆ ಬಂದ ಕಪ್ಪೆ ಚಂಗನೆ ಕೆಸರಿನ ಮೇಲೆ ನೆಗೆದು ಮುಂದೆ ಹೋಗಿಯೇ ಬಿಟ್ಟಿತು. ಮಿಡತೆಯೂ ಸಹ ಅಗಿದ್ದು ಆಗಲಿ ಎಂದು ಕಪ್ಪೆಯನ್ನು ಹಿಂಬಾಲಿಸಿದಾಗ, ಕೆಸರಿನಲ್ಲಿ ಬಿದ್ದು ಒದ್ದಾಡತೊಡಗಿತು. ಅಷ್ಟರಲ್ಲಿ ಕಪ್ಪೆ ನದಿ ತೀರವನ್ನು ತಲುಪಿಯಾಗಿತ್ತು. ಕಪ್ಪೆಯನ್ನು ರಾಜ ಮತ್ತು ಅಲ್ಲಿ ನೆರೆದಿದ್ದ ಎಲ್ಲಾ ಪ್ರಾಣಿಗಳು ಅಭಿನಂದಿಸಿದರು. ರಾಜ ಕಪ್ಪೆಯನ್ನು ಕೆರೆ, ನದಿ, ಹಳ್ಳಗಳ ರಾಜನೆಂದು ಘೋಷಿಸಿತು. ಅಲ್ಲದೇ ಕಪ್ಪೆಯನ್ನು ಉದ್ದೇಶಿಸಿ “ಇನ್ನು ಮುಂದೆ ನೀನು ಜನರಿಗೆ ಮಳೆಯ ಮುನ್ಸೂಚನೆಯನ್ನು ಕೊಡಬೇಕು. ಇದರಿಂದ ನಮಗೆ ಮುಂಚಿತವಾಗಿ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲು ಯಹಾಯವಾಗುತ್ತದೆ’ ಎಂದಿತು. ಅಂದಿನಿಂದ ಮಳೆಗಾಲ ಪ್ರಾರಂಭವಾಗುವ ಮುನ್ನ ಕಪ್ಪೆಗಳು ವಟ ವಟ ಎಂದು ಕೂಗುತ್ತವೆ.

– ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next