Advertisement

“ದೈವತ್ತಿಂಡೆ’ನಾಡಲ್ಲಿ ಯಾರಿಗೆ ಜಯ?

07:02 PM Mar 23, 2019 | |

ದೈವತ್ತಿಂಡೆ ಸ್ವಂತಂ ನಾಡ್‌ (ದೇವರ ಸ್ವಂತ ರಾಜ್ಯ) ಎಂಬ ಖ್ಯಾತಿ ಕೇರಳಕ್ಕಿದೆ. ಈ ಖ್ಯಾತಿ ಪಡೆದಿರುವ ರಾಜ್ಯದಲ್ಲೀಗ ಚುನಾವಣೆ ಸಿದ್ಧತೆ, ಪ್ರಚಾರ ಬಿರುಸಾಗಿಯೇ ಇದೆ. ಅಲ್ಲಿ ಒಟ್ಟು 20 ಲೋಕಸಭಾ ಕ್ಷೇತ್ರಗಳಿವೆ, ಲೋಕಸಭೆಗೆ ಏ.23ರಂದು ಒಂದೇ ದಿನ ಮತದಾನ ನಡೆಯಲಿದೆ. 

Advertisement

ಹಾಗಿದ್ದರೆ ಅಲ್ಲಿ ಗೆಲ್ಲುವವರು ಯಾರು? ಸದ್ಯಕ್ಕಂತೂ ಕಾಂಗ್ರೆಸ್‌ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಯುಡಿಎಫ್) ಮತ್ತು ಸಿಪಿಎಂ-ಸಿಪಿಐ ನೇತೃತ್ವದ ಎಡಪ್ರಜಾಸತ್ತಾತ್ಮಕ ಮೈತ್ರಿತೂಟ (ಎಲ್‌ಡಿಎಫ್) ಆ ರಾಜ್ಯದ ಪ್ರಧಾನ ರಾಜಕೀಯ ಶಕ್ತಿಗಳು. 2014ರ ಬಳಿಕ ಬಿಜೆಪಿ 14 ಜಿಲ್ಲೆಗಳಲ್ಲಿ ಪ್ರವರ್ಧಮಾನಕ್ಕೆ ಬಂದಿದೆ. ತಿರುವನಂತಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನೆಮಮ್‌ ಕ್ಷೇತ್ರದಲ್ಲಿ ಕೇಂದ್ರದ ಮಾಜಿ ಸಚಿವ ಓ.ರಾಜಗೋಪಾಲ್‌ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದಾರೆ. ಇನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕ್ಷೇತ್ರದಲ್ಲಿ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ 89 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ಅನುಭವಿಸಿದ್ದರು. ಇದಿಷ್ಟು ಬಿಜೆಪಿಯ ಬಲವರ್ಧನೆಯ ಕಥೆ.

ಒಟ್ಟು 20 ಸ್ಥಾನಗಳ ಪೈಕಿ ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಯುಡಿಎಫ್ 12, ಎಲ್‌ಡಿಎಫ್ 8 ಸ್ಥಾನಗಳಲ್ಲಿ ಗೆದ್ದಿವೆ. ಬಿಜೆಪಿ ಅಥವಾ ಎನ್‌ಡಿಎ ಕೇರಳದಲ್ಲಿ ಖಾತೆ ತೆರೆಯಲೇ ಇಲ್ಲ. ತಿರುವನಂತಪುರ ಕ್ಷೇತ್ರದಲ್ಲಿ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಬಿಜೆಪಿ ಅಭ್ಯರ್ಥಿಯಾಗಿದ್ದ ಓ.ರಾಜ ಗೋಪಾಲ್‌ ವಿರುದ್ಧ 15,570 ಮತಗಳ ಅಂತರದಿಂದ ಗೆದ್ದಿದ್ದರು. ಹೀಗಾಗಿ ಈ ಕ್ಷೇತ್ರದ ಬಗ್ಗೆ ಬಿಜೆಪಿ ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿದೆ. ಅದಕ್ಕಾಗಿಯೇ ಮಿಜೋರಾಂ ರಾಜ್ಯಪಾಲರ ಹುದ್ದೆಯಲ್ಲಿದ್ದ ಕುಮ್ಮನಂ ರಾಜಶೇಖರನ್‌ ಅವರನ್ನು ರಾಜೀನಾಮೆ ಕೊಡಿಸಿ, ಚುನಾವಣಾ ಅಖಾಡಕ್ಕೆ ಇಳಿಸುವ ಸಿದ್ಧತೆಯಲ್ಲಿದೆ. ಗುರುವಾರವಷ್ಟೇ ದಶಕಗಳ ಕಾಲ ಕಾಂಗ್ರೆಸ್‌ ಸಖ್ಯ ತೊರೆದ ಟಾಮ್‌ ವಡಕ್ಕನ್‌ ಬಿಜೆಪಿ ಸೇರಿದ್ದಾರೆ. ಅವರೂ ಕೂಡ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುವುದು ಖಚಿತ.

ಇನ್ನು ಆಡಳಿತಾರೂಡ ಎಲ್‌ಡಿಎಫ್ ವಿಚಾರಕ್ಕೆ ಬಂದರೆ, ಪಿಣರಾಯಿ ವಿಜಯನ್‌ ನೇತೃತ್ವದ ಸರ್ಕಾರ ಅಧಿಕಾರದಲ್ಲಿ ಮೂರು ವರ್ಷಗಳನ್ನು ಪೂರ್ತಿಗೊಳಿಸಿ ನಾಲ್ಕನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಹೀಗಾಗಿ, 20ರ ಪೈಕಿ ಎಷ್ಟು ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದೆ. ಸಿಪಿಎಂ ಕೇರಳದ ಘಟಕದ ಪ್ರಧಾನ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್‌ “ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಜ್ಯಕ್ಕೇನೂ ಸಹಾಯ ಮಾಡಿಲ್ಲ. ಜತೆಗೆ ಪಿಣರಾಯಿ ನೇತೃತ್ವದ ಸರ್ಕಾರ ಉತ್ತಮ ಕೆಲಸ ಮಾಡಿದೆ. ಹೀಗಾಗಿ 2004ರಲ್ಲಿ 20 ಸ್ಥಾನಗಳ ಪೈಕಿ 18ನ್ನು ಗೆದ್ದಂತೆ ಈ ಬಾರಿಯೂ ಆ ಸಾಧನೆ ಮರುಕಳಿಸಲಿದೆ’ ಎನ್ನುತ್ತಾರೆ.

ಸಿಪಿಎಂ, ಸಿಪಿಐ ಕೆಲ ಕ್ಷೇತ್ರಗಳಿಗೆ ಈಗಾಗಲೇ ಸಂಭಾವ್ಯರನ್ನು ಪ್ರಕಟಿಸಿದೆ. ಅದರ ಪ್ರಕಾರ ಕಣ್ಣೂರು ಕ್ಷೇತ್ರದಿಂದ ಪಿ.ಕೆ.ಶ್ರೀಮತಿ, ಪಾಲಕ್ಕಾಡ್‌ನಿಂದ ಎಂ.ಬಿ.ರಾಜೇಶ್‌, ಪಿ.ಕೆ.ಬಿಜು ಅಳತ್ತೂರ್‌ನಿಂದ, ಅಟ್ಟಿಂಗಲ್‌ನಿಂದ ಎ.ಸಂಪತ್‌ ಕಣಕ್ಕಿಳಿಯಲಿದ್ದಾರೆ. ಇನ್ನು ಕರ್ನಾಟಕಕ್ಕೆ ಸಮೀಪ ಇರುವ ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಗೆದ್ದಿರುವ ಪಿ.ಕರುಣಾಕರನ್‌ ಸ್ಥಾನದಲ್ಲಿ ಮಾಜಿ ಶಾಸಕ ಕೆ.ಪಿ.ಸತೀಶ್ಚಂದ್ರನ್‌ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.

Advertisement

ಕಾಂಗ್ರೆಸ್‌ನ ಹುರಿಯಾಳುಗಳ ವಿಚಾರಕ್ಕೆ ಬಂದರೆ ಕರ್ನಾ ಟಕದಲ್ಲಿ ಕಾಂಗ್ರೆಸ್‌ ಉಸ್ತುವಾರಿಯಾಗಿರುವ ಕೆ.ಸಿ.ವೇಣುಗೋಪಾಲ್‌ ಆಲಪ್ಪುಳ  ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಅವರು ಪಕ್ಷದ ಸಂಘಟನೆಯ ಕಾರಣವನ್ನು ನೀಡಿದ್ದಾರೆ. ಇನ್ನುಳಿದಂತೆ ಕಾಂಗ್ರೆಸ್‌ ವತಿಯಿಂದ ಅಭ್ಯರ್ಥಿಗಳ ಆಯ್ಕೆಗೆ ಲಾಬಿ, ಪ್ರಕ್ರಿಯೆ ನಡೆದಿದೆ.

ಶಬರಿಮಲೆ ವಿವಾದ
ಶಬರಿಮಲೆ ವಿಚಾರವನ್ನು ಪಿಣರಾಯಿ ವಿಜಯನ್‌ ಸರ್ಕಾರ ನಿಭಾಯಿಸಿದ ರೀತಿ ಬಿಜೆಪಿ ಪರವಾಗಿ ಕೆಲಸ ಮಾಡುತ್ತದೆಯೋ ಗಮನಿಸಬೇಕಾಗಿದೆ. ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಚಾರದಲ್ಲೀಗ ಕೇರಳ ಇಬ್ಭಾಗವಾಗಿದೆ. ಪಿಣರಾಯಿ ಸರ್ಕಾರ ಹಿಂದೂಗಳನ್ನು ಟಾರ್ಗೆಟ್‌ ಮಾಡುತ್ತಿದೆ ಎನ್ನುವ ಆಪಾದನೆ ಯಿದೆ. ಮಹಿಳೆಯರ ದೇಗುಲ ಪ್ರವೇಶವನ್ನು ವಿರೋಧಿಸಿದ ನೂರಾರು ಭಕ್ತರನ್ನು ಜೈಲಿಗೆ ತಳ್ಳಿದ್ದು, ಶಬರಿಮಲೆಯಲ್ಲಿ ಪೊಲೀಸರ ದುಂಡಾವರ್ತನೆಯೆಲ್ಲ, ಅಯ್ಯಪ್ಪ ಸ್ವಾಮಿಯ ಅಪಾರ ಭಕ್ತವೃಂದವನ್ನು ಕೆರಳಿಸಿರು ವುದಂತೂ ಸುಳ್ಳಲ್ಲ. ಹೀಗಾಗಿ, ಸರ್ಕಾರದ ವಿರುದ್ಧದ ಈ ಅಸಹನೆ ಲೋಕಸಭೆಯ ದಿಕ್ಕನ್ನೇ ಬದಲಿಸಬಲ್ಲದೇ ಎನ್ನುವುದು ಸದ್ಯದ ಪ್ರಶ್ನೆ.

ಈಗಾಗಲೇ ಹೇಳಿರುವಂತೆ ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಪಿಣರಾಯಿ ಸರ್ಕಾರ ಪಟ್ಟುಹಿಡಿದು ಅವಕಾಶ ಮಾಡಿಕೊಟ್ಟದ್ದು ಪ್ರಮುಖ ವಿಚಾರವಾಗಲಿರುವುದಂತೂ ಖಚಿತ. ಈ ವಿಷಯವನ್ನು ಪ್ರಚಾರಕಾರ್ಯಗಳಲ್ಲಿ ಉಲ್ಲೇಖೀಸಬಾರದೆಂದು ಚುನಾವಣಾ ಆಯೋಗ ಹೇಳಿದ್ದರೂ, ಬಿಜೆಪಿ ನಾಯಕ ಕುಮ್ಮನಂ ರಾಜ ಶೇಖರನ್‌ ತಿರುಗೇಟು ನೀಡಿ ಅದನ್ನು ಪ್ರಸ್ತಾಪ ಮಾಡಿಯೇ ಮಾಡಲಾಗುತ್ತದೆ ಎಂದಿದ್ದಾರೆ. ಇದರ ಜತೆಗೆ 2018ರಲ್ಲಿ ಕಂಡು ಕೇಳರಿಯದ ಪ್ರವಾಹ ಸ್ಥಿತಿ ಉಂಟಾದ ಬಳಿಕದ ಪರಿಹಾರ ಕಾರ್ಯಾಚರಣೆಯಲ್ಲಿನ ವೈಫ‌ಲ್ಯವೂ ಈ ಬಾರಿ ಪ್ರತಿಪಕ್ಷಗಳಿಗೆ ಮುಖ್ಯ ಪ್ರಚಾರ ವಿಷಯವಾಗಲಿದೆ.

ಇನ್ನು ಎಲ್‌ಡಿಎಫ್ ಹೊಸ ಮಾದರಿಯ ಸಾಮಾಜಿಕ ಸಮೀಕರಣ ಮತ್ತು ಪಿಣರಾಯಿ ಸರ್ಕಾರದ ಸಾಧನೆಗಳನ್ನು ಬಿಂಬಿಸಲಿದೆ. ಜತೆಗೆ ಈಳವ ಸಮುದಾಯದ ಧ್ರುವೀಕರಣ ಅದರ ಆದ್ಯತೆಯಾಗಿದೆ. ಒಟ್ಟಿನಲ್ಲಿ ಈ ಚುನಾವಣೆಯಲ್ಲಿ ಎಲ್‌ಡಿಎಫ್, ಯುಡಿಎಫ್ ಎಷ್ಟು ಸ್ಥಾನ ಗೆಲ್ಲಲಿದೆ ಎನ್ನುವುದಕ್ಕಿಂತ ಬಿಜೆಪಿ ಎಷ್ಟರಲ್ಲಿ ಪ್ರಕಾಶಿಸಲಿದೆ ಎನ್ನುವುದೇ ಕುತೂಹಲದ ವಿಷಯ.

ಲೋಕಸಭಾ ಸ್ಥಾನಗಳು 20
ಯುಡಿಎಫ್ 12
ಎಲ್‌ಡಿಎಫ್ 08

ಯುಡಿಎಫ್
ಕಾಂಗ್ರೆಸ್‌
ಇಂಡಿಯನ್‌ ಯೂನಿಯನ್‌
ಮುಸ್ಲಿಂ ಲೀಗ್‌
ಕೇರಳ ಕಾಂಗ್ರೆಸ್‌ (ಎಂ)
ಕೇರಳ ಕಾಂಗ್ರೆಸ್‌ (ಜೇಕಬ್‌)
ರೆವೊಲ್ಯೂಷನರಿ ಸೋಶಿಯಲಿಸ್ಟ್‌ ಪಾರ್ಟಿ
ಆಲ್‌ ಇಂಡಿಯಾ ಫಾರ್ವರ್ಡ್‌ ಬ್ಲಾಕ್‌

ಎಲ್‌ಡಿಎಫ್
ಸಿಪಿಎಂ
ಸಿಪಿಐ
ಜೆಡಿಎಸ್‌
ಎನ್‌ಸಿಪಿ
ಸಿಎಂಪಿ
(ಅರವಿಂದಾಕ್ಷನ್‌)
ಕಾಂಗ್ರೆಸ್‌ (ಸೋಶಿಯಲಿಸ್ಟ್‌)
ಕೇರಳ ಕಾಂಗ್ರೆಸ್‌ (ಬಿ)
ನ್ಯಾಷನಲ್‌ ಸೆಕ್ಯುಲರ್‌ ಕಾನ್ಫರೆನ್ಸ್‌

ಮತ ಗಣಿತ
20.1ಲಕ್ಷ ಪ.ಬಂಗಾಳದಲ್ಲಿ ದೇಶದಲ್ಲೇ ಅತಿಹೆಚ್ಚು ಸಂಖ್ಯೆಯ “ಮೊದಲ ಬಾರಿಯ ಮತದಾರರು’ ಇದ್ದಾರೆ.

ಈ ಬಾರಿ
ಉಮಾ ಭಾರತಿ 
ಬಿಜೆಪಿ ನಾಯಕಿ, ಕೇಂದ್ರದ ಮಾಜಿ ಸಚಿವೆ ಉಮಾಭಾರತಿಯವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗುವೆ ಎಂದು ಹೇಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬದಲಾಗಿರುವ ಸನ್ನಿವೇಶದಲ್ಲಿ ಅವರು ಸ್ಪರ್ಧಿಸುವ ಮಾತಾಡಿದ್ದಾರೆ. ಈ ಬಾರಿ ಝಾನ್ಸಿಯಿಂದ ಅವರು ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

ಇಂದಿನ ಕೋಟ್‌
ಬಿಜೆಪಿ ರಾಮಮಂದಿರ ಕಟ್ಟಲು ಇಟ್ಟಿಗೆ, ಹಣ ಸಂಗ್ರಹಿಸಿತ್ತು. ಜನರ ಹಣ ಬಿಜೆಪಿಯವರ ಜೇಬು ಸೇರಿತ್ತು. ಇದುವರೆಗೂ ರಾಮ ಮಂದಿರ ಕಟ್ಟಲು ಸಂಗ್ರಹಿಸಿದ್ದ ಹಣದ ಲೆಕ್ಕ ಕೊಟ್ಟಿದ್ದಾರೆಯೇ?
ಸಿದ್ದರಾಮಯ್ಯ

ಬಾಲಕೋಟ್‌ನ ಮೇಲೆ ನಮ್ಮ ವಾಯುಪಡೆ ದಾಳಿ ಮಾಡಿದಾಗ ಇಡೀ ದೇಶಕ್ಕೆ ಹೆಮ್ಮೆಯಾಗಬೇಕಿತ್ತು. ದೌರ್ಭಾಗ್ಯವೆಂದರೆ, ಮೋದಿ ವಿರೋಧಿಗಳು ಅಂದು ಪಾಕಿಸ್ತಾನದ ಅಸ್ತ್ರಗಳಾಗಿ ಬದಲಾದರು. 
ಅರುಣ್‌ ಜೇಟ್ಲಿ

ಪ್ರಜೆಗಳ ಆರೋಗ್ಯಕ್ಕೆ ಪ್ರಜಾಪ್ರಭುತ್ವ ಪೂರಕ!
ಪ್ರಜಾಪ್ರಭುತ್ವವು ದೇಶಕ್ಕೆ ಮಾತ್ರವಲ್ಲ ಸಾರ್ವಜನಿಕರ ಆರೋಗ್ಯಕ್ಕೂ ಉತ್ತಮ. ಇದು ಯಾವುದೇ ಔಷಧ ಕಂಪನಿಯ ಜಾಹೀರಾತು ಅಲ್ಲ.  170 ದೇಶಗಳಲ್ಲಿ “ದ ಲ್ಯಾನ್ಸೆಟ್‌’ ವೈದ್ಯಕೀಯ ಪತ್ರಿಕೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ಉಲ್ಲೇಖೀಸಲಾಗಿದೆ. ಒಂದು ದೇಶದ ಜನರ ಆರೋಗ್ಯ ಮತ್ತು ಆಯಾ ದೇಶಗಳಲ್ಲಿನ ಉತ್ತಮ ಸರ್ಕಾರದ ನಡುವೆ ಅವಿನಾ ಭಾವ ನಂಟು ಇರುವುದು ಈ ಅಧ್ಯಯನದಲ್ಲಿ ಕಂಡು ಕೊಳ್ಳಲಾಗಿದೆ.  ಪ್ರಜಾಸತ್ತಾತ್ಮಕ ವ್ಯವಸ್ಥೆಯ ಆಡಳಿತ ಇರುವ ದೇಶಗಳಲ್ಲಿ ಜನರು ಹೆಚ್ಚು ಆರೋಗ್ಯವಂತರಾಗಿ ಜೀವಿಸುತ್ತಿದ್ದಾರೆ. ಅವರಿಗೆ ಹೃದಯ ಸಂಬಂಧಿ ಕಾಯಿಲೆಗಳು, ರಸ್ತೆ ಅಪಘಾತ ದಲ್ಲಿ ಉಂಟಾಗುವ ಸಾವುಗಳು, ಪಾರ್ಶ್ವವಾಯು (ಸ್ಟ್ರೋಕ್‌) ಸಮಸ್ಯೆಗಳು ಬಾಧಿಸುವುದಿಲ್ಲ. “ಚುನಾವಣೆ ಮತ್ತು ಆರೋಗ್ಯ ಒಂದಕ್ಕೊಂದು ಸಂಬಂಧಪಟ್ಟ ವಿಚಾರ. ನಿರಂಕುಶ ವಾದಿ ಆಡಳಿತವು ಆರೋಗ್ಯ ವ್ಯವಸ್ಥೆ ಅಭಿವೃದ್ಧಿಪಡಿ ಸಲು ಹಣಕಾಸಿನ ನೆರವು ನೀಡುವುದಿಲ್ಲ. ಇದರಿಂದ  ಆ ದೇಶದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು, ವಿವಿಧ ರೀತಿಯ ಕ್ಯಾನ್ಸರ್‌ಗಳು ಮತ್ತು ಇತರ ಗಂಭೀರ ಕಾಯಿಲೆಗಳು ವೃದ್ಧಿಸುತ್ತವೆ’ ಎಂದು ಅಧ್ಯಯನದಲ್ಲಿ ಉಲ್ಲೇಖೀಸಲಾಗಿದೆ.

ವಾಷಿಂಗ್ಟನ್‌ ಡಿ.ಸಿ.ಯಲ್ಲಿರುವ ಕೌನ್ಸಿಲ್‌ ಆನ್‌ ಫಾರಿನ್‌ ರಿಲೇಷನ್ಸ್‌ನ ಜಾಗತಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ನಿರ್ದೇಶಕ ಥಾಮಸ್‌ ಬೊಲ್ಲಿಕಿ ನೇತೃತ್ವದಲ್ಲಿ ಈ ಅಧ್ಯಯನ ನಡೆದಿದೆ. ಕೆಲವು ಮಾರಕ ಕಾಯಿಲೆಗಳನ್ನು ಜಗತ್ತಿನಲ್ಲಿ ನಿಯಂತ್ರ ಣಕ್ಕೆ ತಂದ ಬಳಿಕ ಜಗತ್ತಿನಲ್ಲಿ ಜೀವಿತಾವಧಿ ಪ್ರಮಾಣ ವೃದ್ಧಿಯಾಗಿದೆ. ಅದೂ 1970 ಮತ್ತು 2015ರ ಅವಧಿಯಲ್ಲಿ. ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದೇ ಇರುವ ದೇಶಗಳಲ್ಲಿ ಈ ರೀತಿಯ ಯಶಸ್ಸನ್ನು ಸಾಧಿಸಲಾಗಿಲ್ಲ.

“ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಯುವ ಚುನಾವಣೆಯಿಂದ ಹಿರಿಯ ನಾಗರಿಕರಿಗೆ ನೀಡುವ ಆರೋಗ್ಯ ವ್ಯವಸ್ಥೆಯೂ ಸುಧಾರಣೆಯಾಗುತ್ತದೆ. ಸರ್ಕಾರದ ಉತ್ತರದಾಯಿತ್ವತೆ ಹೆಚ್ಚಾಗುವುದರಿಂದ ಮತ್ತು ಸಮಸ್ಯೆಗಳಿಗೆ ಸೂಕ್ತ ರೀತಿಯಿಂದ ಸ್ಪಂದಿಸುವುದರಿಂದ ಅದು ಸಾಧ್ಯವಾಗುತ್ತದೆ’ ಎಂದು ಅಧ್ಯಯನದಲ್ಲಿ ಅಭಿಪ್ರಾಯ ಪಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಸರಿಯಾದ ರೀತಿಯಲ್ಲಿ ನಡೆದಾಗ ಒಟ್ಟಾರೆ ದೇಶಿಯ ಉತ್ಪನ್ನ (ಜಿಡಿಪಿ) ಹೆಚ್ಚಾಗುತ್ತದೆ. ಸರಿಯಾದ ರೀತಿಯಲ್ಲಿ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ನೀತಿಗಳು ಜಾರಿಯಾಗುತ್ತವೆ, ಜತೆಗೆ ಜನರಿಗೆ ಅನುಕೂಲವಾಗುವ ಇತರ ಕ್ಷೇತ್ರಗಳಿಗಾಗಿ ಸೂಕ್ತ ಕಾನೂನುಗಳೂ ಬರುತ್ತವೆ ಎಂದು ಪಬ್ಲಿಕ್‌ ಹೆಲ್ತ್‌ ಫೌಂಡೇಷನ್‌ ಆಫ್ ಇಂಡಿಯಾದ ಅಧ್ಯಕ್ಷ ಡಾ.ಕೆ.ಶ್ರೀನಾಥ ರೆಡ್ಡಿ ಅಭಿಪ್ರಾಯಪಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next