Advertisement
ಪೂಜಾರ ಮತ್ತು ರಹಾನೆ ಟೆಸ್ಟ್ ತಂಡಕ್ಕೆ ಮರಳಲು ಬಾಗಿಲು ತೆರೆದಿರುತ್ತದೆ ಎಂದು ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಒತ್ತಿಹೇಳಿದರೂ, ಟೆಸ್ಟ್ ತಂಡದಲ್ಲಿ ಯುವಕರಿಗೆ ಅವಕಾಶಗಳನ್ನು ನೀಡಲಾಗುತ್ತಿದೆ ಎನ್ನುವುದು ಅಷ್ಟೇ ಸತ್ಯ. ಬಲಿಷ್ಠವೇನೂ ಅಲ್ಲದ ಶ್ರೀಲಂಕಾ ವಿರುದ್ಧದ ತವರಿನ ಸರಣಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಹೊಸ ಮುಖಗಳನ್ನು ಪರೀಕ್ಷಿಸಲು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಮುಂದಾಗಿದ್ದಾರೆ.
Related Articles
Advertisement
ಹನುಮ ವಿಹಾರಿ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚಿನ ಬ್ಯಾಟಿಂಗ್‌ನಲ್ಲಿ ಅನನುಭವದ ಹೊರತಾಗಿಯೂ ನಂ. 3 ಸ್ಥಾನಕ್ಕೆ ಉತ್ತಮ ಆಯ್ಕೆಯಾಗಿದ್ದಾರೆ. ವಿಹಾರಿ ದೇಶೀಯ ಕ್ರಿಕೆಟ್‌ನಲ್ಲಿ ಮೂರನೇ ಕ್ರಮಾಂಕದಲ್ಲೇ ತಮ್ಮ ಹೆಚ್ಚಿನ ರನ್‌ಗಳನ್ನು ಗಳಿಸಿದ್ದಾರೆ.
ಒಂದು ವೇಳೆ ಮೂರನೇ ಕ್ರಮಾಂಕದಲ್ಲಿ ವಿಹಾರಿ ಸ್ಥಾನ ಪಡೆಯದಿದ್ದರೆ, ಆ ಜಾಗದಲ್ಲಿ ಶುಭ್ಮನ್ ಗಿಲ್ ಬರುವ ಸಾಧ್ಯತೆಯಿದೆ. ಇದುವರೆಗೆ ಆರಂಭಿಕಾಗಿ ಕಾಣಿಸಿಕೊಂಡಿರುವ ಗಿಲ್ ಗೆ ಈಗ ಮಯಾಂಕ್ ಮತ್ತು ರೋಹಿತ್ ಕಾರಣದಿಂದ ಆ ಜಾಗವಿಲ್ಲ. ಹೀಗಾಗಿ ಅವರು ಮೂರನೇ ಕ್ರಮಾಂಕದಲ್ಲಿ ಆಡಬಹುದು.
ನ್ಯೂಜಿಲ್ಯಾಂಡ್ ವಿರುದ್ಧದ ತವರಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಶ್ರೇಯಸ್ ಅಯ್ಯರ್ ಕೂಡಾ ರೇಸ್ ನಲ್ಲಿದ್ದಾರೆ. ರಹಾನೆ ಬದಲಿಗೆ ಐದನೇ ಕ್ರಮಾಂಕದಲ್ಲಿ ಅಯ್ಯರ್ ಆಡಬಹುದು ಎನ್ನಲಾಗಿದೆ.
ಇದರೊಂದಿಗೆ ಗಾಯಗೊಂಡಿರುವ ಕೆ.ಎಲ್.ರಾಹುಲ್ ಮತ್ತೆ ತಂಡಕ್ಕೆ ಬಂದಾಗ ಯಾವ ಜಾಗದಲ್ಲಿ ಆಡುತ್ತಾರೆ ಎನ್ನುವುದೂ ನೋಡಬೇಕಿದೆ. ಒಟ್ಟಿನಲ್ಲಿ ಲಂಕಾ ಸರಣಿಯಲ್ಲಿ ಬಹುತೇಕ ಪ್ರಶ್ನೆಗಳಿಗೆ ಉತ್ತರ ಸಿಗಬಹುದು.