Advertisement

ಯಾರಿಗೆ ಒಲಿಯಲಿದೆ ಅಧ್ಯಕ್ಷ ಗಾದಿ?

10:49 AM Jun 04, 2019 | Suhan S |

ಇಂಡಿ: 23 ಸದಸ್ಯ ಬಲದ ಇಂಡಿ ಪುರಸಭೆಯಲ್ಲಿ ಮತದಾರರು ನೀಡಿದ ತೀರ್ಪು ಅತಂತ್ರ ಸ್ಥಾನಕ್ಕೆ ನಿಂತಿದೆ. ಹಾಗಾದರೆ ಅಧಿಕಾರದ ಗದ್ದುಗೆ ಬಿಜೆಪಿಗೋ ಕಾಂಗ್ರೆಸ್‌ ತೆಕ್ಕೆಗೋ ಎಂಬುದು ಜನರಲ್ಲಿ ಕುತೂಹಲ ಮೂಡಿಸಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸಂಖ್ಯಾಬಲ ಬಿಜೆಪಿ ಹೊಂದಿದ್ದರೂ ಅದಕ್ಕೆ ಅಧಿಕಾರದ ಗದ್ದುಗೆ ಏರಲಾಗಲಿಲ್ಲ, ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವಂತಾಯಿತು. ಹಾಗೆ ಇಂಡಿ ಪುರಸಭೆ ಅಧಿಕಾರವೂ ಸಹ ಹೆಚ್ಚು ಸ್ಥಾನ ಪಡೆದ ಬಿಜೆಪಿಗೆ ಲಭಿಸುವುದೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

Advertisement

ಭಾರತೀಯ ಜನತಾ ಪಕ್ಷ 11 ಸ್ಥಾನ, ಕಾಂಗ್ರೆಸ್‌ 8 ಸ್ಥಾನ, ಜಾತ್ಯತೀತ ಜನತಾದಳ 2, ಪಕ್ಷೇತರರು 2 ಸ್ಥಾನ ಗಳಿಸಿದ್ದಾರೆ. ಬಹುಮತಕ್ಕೆ ಓರ್ವ ಸದಸ್ಯರ ಬಲ ಬಿಜೆಪಿಗೆ ಬೇಕಾದರೆ ಕಾಂಗ್ರೆಸ್‌ ಪಕ್ಷಕ್ಕೆ 4 ಸದಸ್ಯರ ಬಲ ಬೇಕು. ಓರ್ವ ಸದಸ್ಯರ ಬಲ ಪಡೆದು ಪುರಸಭೆಯಲ್ಲಿ ಕೇಸರಿ ಧ್ವಜ ಹಾರುವುದೋ 4 ಸದಸ್ಯರ ಬೆಂಬಲ ಪಡೆದು ಕೈ ಮೇಲುಗೈ ಸಾಧಿಸುತ್ತದಾ ಗೊತ್ತಿಲ್ಲ.

ಹಿಂದಿನ ಅವಧಿ ಚುನಾವಣೆಯಲ್ಲಿ ಬಿಜೆಪಿ 8 ಸ್ಥಾನ ಪಡೆದರೆ ಕೆಜೆಪಿ 3 ಸ್ಥಾನ ಪಡೆದಿತ್ತು. ಕಾಂಗ್ರೆಸ್‌ ಪಕ್ಷ 7 ಸ್ಥಾನ, ಜೆಡಿಎಸ್‌ 3 ಸ್ಥಾನ, ಪಕ್ಷೇತರರು 2 ಸ್ಥಾನ ಪಡೆದಿದ್ದರು. ಆದರೆ 7 ಸ್ಥಾನ ಪಡೆದ ಕಾಂಗ್ರೆಸ್‌ ಪಕ್ಷ ಶಾಸಕ ಯಶವಂತರಾಯಗೌಡ ಪಾಟೀಲರ ಶತಪ್ರಯತ್ನದಿಂದ ಪಕ್ಷೇತರರ ಹಾಗೂ ಇತರರ ಬೆಂಬಲ ಪಡೆದು 5 ವರ್ಷವೂ ಅಧಿಕಾರ ನಡೆಸಿದರೆ ಬಿಜೆಪಿ ವಿರೋಧ ಪಕ್ಷದಲ್ಲಿ ಕೂಡಬೇಕಾಯಿತು.

ಈ ಬಾರಿ 11 ಸದಸ್ಯ ಬಲ ಹೊಂದಿರುವ ಬಿಜೆಪಿಗೆ ಓರ್ವ ಅಭ್ಯರ್ಥಿ ಬೆಂಬಲ ಬೇಕಷ್ಟೆ. ಅದು ಸರಳವೆಂದು ಮೇಲ್ನೋಟಕ್ಕೆ ಕಂಡರೂ ಕಾರ್ಯರೂಪಕ್ಕೆ ಬರುವುದು ಕಠಿಣವಾಗಿ ತೋರುತ್ತಿದೆ. ಅಕಾರದ ಗದ್ದುಗೆಗೆ ಏರಲು ಎರಡು ಜನ ಪಕ್ಷೇತರರಲ್ಲಿ ಓರ್ವರನ್ನು ಅಥವಾ ಜೆಡಿಎಸ್‌ ಪಕ್ಷದ ಇಬ್ಬರಲ್ಲಿ ಒಬ್ಬರ ಬೆಂಬಲ ಬಿಜೆಪಿ ಪಡೆಯಲೇಬೇಕು. 4 ಸದಸ್ಯರ ಬೆಂಬಲ ಪಡೆದು ಕಾಂಗ್ರೆಸ್‌ ಪಕ್ಷ ಅಧಿಕಾರದ ಗದ್ದುಗೆ ಏರಲು ತೆರೆ ಮರೆಯಲ್ಲಿ ಪ್ರಯತ್ನಿಸುತ್ತಿದೆ. ಓರ್ವ ಅಭ್ಯರ್ಥಿ ಬೆಂಬಲ ಪಡೆದು ಬಿಜೆಪಿ ಅಧಿಕಾರ ಹಿಡಿಯುವುದೋ ಅಥವಾ ಕಾಂಗ್ರೆಸ್‌ ಪಕ್ಷ ಅಧಿಕಾರದ ಗದ್ದುಗೆಗೆ ಏರುವುದೋ ಕಾದು ನೋಡಬೇಕು.

•ಉಮೇಶ ಬಳಬಟ್ಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next