ಹಾವೇರಿ: ಜಿಲ್ಲೆಯವರೇ ಆಗಿರುವ ಬಸವರಾಜ ಬೊಮ್ಮಾಯಿ ಅವರು 30ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ಜಿಲ್ಲೆಯಲ್ಲೂ ಸಚಿವ ಸ್ಥಾನದ ನಿರೀಕ್ಷೆ ಗರಿಗೆದರಿದ್ದು, ಸಂಪುಟ ರಚನೆ ಸಂದರ್ಭದಲ್ಲಿ ಮಂತ್ರಿಗಿರಿ ಭಾಗ್ಯ ಯಾರಿಗೆ ಸಿಗಲಿದೆ ಎಂಬ ಕುತೂಹಲ ಹೆಚ್ಚಿದೆ.
ಈ ಹಿಂದಿನ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಪ್ರಭಾವಿ ಗೃಹ ಖಾತೆ ಪಡೆದಿದ್ದ ಜಿಲ್ಲೆಯ ಬಸವರಾಜ ಬೊಮ್ಮಾಯಿ ಅವರೇ ಇದೀಗ ಮುಖ್ಯಮಂತ್ರಿಗಳಾಗಿದ್ದಾರೆ. ಸಿಎಂ ತವರು ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಕನಿಷ್ಟ ಒಬ್ಬರಿಗೆ ಇಲ್ಲವೇ ಇಬ್ಬರಿಗೆ ಸಚಿವ ಸ್ಥಾನ ನೀಡುವ ಮಾತುಗಳು ಕೇಳಿ ಬರುತ್ತಿವೆ.
ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಹಿರೇಕೆರೂರ ಕ್ಷೇತ್ರದ ಶಾಸಕ ಬಿ.ಸಿ. ಪಾಟೀಲ ಹಾಗೂ ಹಾವೇರಿ ಶಾಸಕ ನೆಹರು ಓಲೇಕಾರ ಹಾಗೂ ವಿಪ ಸದಸ್ಯ ಆರ್. ಶಂಕರ ಅವರಲ್ಲಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬ ಕುತೂಹಲ ಚರ್ಚೆಗೆ ಗ್ರಾಸವಾಗಿದೆ.
ಬಿ.ಸಿ. ಪಾಟೀಲ ಮುಂಚೂಣಿಯಲ್ಲಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯಲು ಜಿಲ್ಲೆಯ ಬಿ.ಸಿ. ಪಾಟೀಲ ಹಾಗೂ ಆರ್. ಶಂಕರ ತಮ್ಮ ಶಾಸಕ ಸ್ಥಾನವನ್ನು ತ್ಯಾಗ ಮಾಡಿದ್ದರು. ಅದರಲ್ಲಿ ಬಿ.ಸಿ. ಪಾಟೀಲ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿ ಬಿಎಸ್‌ವೈ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಈವರೆಗೆ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅಲ್ಲದೇ ಆರ್. ಶಂಕರ ವಿಧಾನಸಭಾ ಕ್ಷೇತ್ರವನ್ನು ತ್ಯಾಗ ಮಾಡಿ ವಿಪ ಸದಸ್ಯರಾಗಿ ಆಯ್ಕೆಯಾಗಿ ತೋಟಗಾರಿಕೆ ಹಾಗೂ ರೇಷ್ಮೆ ಖಾತೆ ಸಚಿವರಾಗಿದ್ದರು. ಇದೀಗ ಇವರಿಬ್ಬರು ಮಾಜಿಗಳಾಗಿದ್ದು, ಶೀಘ್ರದಲ್ಲಿಯೇ ರಚನೆಯಾಗಲಿರುವ ಬೊಮ್ಮಾಯಿ ಅವರ ಸಂಪುಟದಲ್ಲಿ ಮರಳಿ ಸಚಿವ ಸ್ಥಾನ ಭದ್ರಪಡಿಸಿಕೊಳ್ಳಬೇಕಿದೆ. ಇವರಿಬ್ಬರಲ್ಲಿ ಸದ್ಯ ಬಿ.ಸಿ. ಪಾಟೀಲ ಮುಂಚೂಣಿಯಲ್ಲಿದ್ದು, ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ. ವಿಪ ಸದಸ್ಯ ಆರ್. ಶಂಕರ ಅವರು ಸಚಿವ ಸ್ಥಾನದಿಂದ ವಂಚಿತವಾಗುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದು, ಕಾಯ್ದು ನೋಡಬೇಕಿದೆ.
ಹೊಸಬರಿಗೆ ಅವಕಾಶ ನೀಡಿದರೆ ಓಲೇಕಾರಗೆ ಯೋಗ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ, ಹಾವೇರಿ ಶಾಸಕ ನೆಹರು ಓಲೇಕಾರ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ದಲಿತ ಅದರಲ್ಲಿಯೂ ಬಲಗೈ ಸಮುದಾದಿಂದ ಉತ್ತರ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಶಾಸಕರಾಗಿದ್ದು, ಅಲ್ಲದೇ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಹಿರಿತನ ಹೊಂದಿದ್ದಾರೆ. ಈ ಹಿನ್ನೆಲೆ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕು ಎಂಬುದು ಚಲವಾದಿ ಮಹಾಸಭಾದ ಆಗ್ರಹವಾಗಿದೆ. ಅಲ್ಲದೇ ಆ ಕೋಟಾದಲ್ಲಿ ನನಗೆ ಸಚಿವ ಸ್ಥಾನ ನೀಡಬೇಕು ಎಂದು ಹೈಕಮಾಂಡ್ ಮೂಲಕ ಪ್ರಭಾವ ಬೀರುತಿದ್ದು, ಸಚಿವ ಸ್ಥಾನ ಸಿಗುವ ನಿರೀಕ್ಷೆಯೊಂದಿಗೆ ಅವರು ಸದ್ಯ ಬೆಂಗಳೂರಿನಲ್ಲಿಯೇ ಬೀಡು ಬಿಟ್ಟಿದ್ದಾರೆ. ಒಂದೊಮ್ಮೆ ಪಕ್ಷದ ಹೈಕಮಾಂಡ್ ಹೊಸಬರಿಗೆ ಅವಕಾಶ ಕಲ್ಪಿಸಲು ಮುಂದಾದರೆ ಓಲೇಕಾರ ಅವರಿಗೂ ಮಂತ್ರಿಗಿರಿಯ ಭಾಗ್ಯ ಒಲಿಯುವ ಸಾಧ್ಯತೆಗಳಿವೆ.
ಸದ್ಯಕ್ಕೆ ಬಿಜೆಪಿ ಸರ್ಕಾರ ರಚಿಸಲು ಕಾರಣೀಕರ್ತರಾಗಿರುವವರಿಗೆ ಮೊದಲ ಆದ್ಯತೆ ನೀಡುವ ಮಾತುಗಳು ಕೇಳಿ ಬರುತ್ತಿದ್ದು, ಅದು ಸಾಧ್ಯವಾದರೆ ನೆಹರು ಓಲೇಕಾರ ಅವರು ಸಚಿವ ಸ್ಥಾನಕ್ಕಾಗಿ ಇನ್ನಷ್ಟು ದಿನ ಕಾಯುವುದು ಅನಿವಾರ್ಯವಾಗಲಿದೆ. ಈ ವಾರಾಂತ್ಯದಲ್ಲಿ ಸಂಪುಟ ರಚನೆಯಾಗಲಿದ್ದು, ಜಿಲ್ಲೆಯ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಕುತೂಹಲಕ್ಕೂ ತೆರೆಬೀಳಲಿದೆ.