ಯಾದಗಿರಿ: ಜಿಪಂ ಅಧ್ಯಕ್ಷ ಸ್ಥಾನದ ಉಳಿದ ಅವಧಿಗೆ ಅಧ್ಯಕ್ಷರ ಚುನಾವಣೆ ಶುಕ್ರವಾರ ನಡೆಯಲಿದ್ದು, ಈ ಮಧ್ಯೆಯೇ ಗುರುವಾರವಷ್ಟೇ ಕಾಂಗ್ರೆಸ್ ಮುಖಂಡರು ತನ್ನ ಪಕ್ಷದ ಜಿಪಂ ಸದಸ್ಯರ ಸಭೆ ನಡೆಸಿದ್ದಾರೆ. ಆದರೆ ಸಭೆಗೆ ಇಬ್ಬರು ಸದಸ್ಯರು ಗೈರಾಗಿರುವುದು ಚರ್ಚೆಗೆ ಎಡೆಮಾಡಿದೆ.
ಜಿಪಂ ಕಾಂಗ್ರೆಸ್ 12, ಬಿಜೆಪಿ 11 ಹಾಗೂ ಜೆಡಿಎಸ್ ಒಬ್ಬರನ್ನು ಒಳಗೊಂಡಂತೆ 24 ಸದಸ್ಯರ ಬಲ ಹೊಂದಿದೆ. ಕಾಂಗ್ರೆಸ್‌ನ ಅಶೋಕರಡ್ಡಿ ಗೋನಾಲ ಮತ್ತು ಬಿಜೆಪಿಯ ಭೀಮರೆಡ್ಡಿ ಕೂಡ್ಲೂರ ನಿಧನದಿಂದ ಒಟ್ಟು ಸದಸ್ಯರ ಬಲ 22ಕ್ಕೆ ಕುಸಿದಿದೆ. ಪ್ರಸ್ತುತ ಬಿಜೆಪಿ 10, ಕಾಂಗ್ರೆಸ್ 11, ಜೆಡಿಎಸ್‌ನ ಒಬ್ಬರು ಸದಸ್ಯರಿದ್ದಾರೆ.
ಕಾಂಗ್ರೆಸ್‌ನ ಬಹುತೇಕ ಸದಸ್ಯರು ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರೆ. ಅವರನ್ನು ಹೊರತುಪಡಿಸಿ ಉಳಿದ ಸದಸ್ಯರಿಗೆ ಅವಕಾಶ ಮಾಡಿಕೊಡುವ ಕುರಿತು ಚಿಂತನೆ ನಡೆಸಿ ಅದರಂತೆ ಅಧ್ಯಕ್ಷ ಸ್ಥಾನಕ್ಕೆ ಶಹಾಪುರ ತಾಲೂಕು ಸಗರ ಕ್ಷೇತ್ರದ ಶರಣಮ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪುಟಪಾಕ್ ಕ್ಷೇತ್ರದ ರಾಜಶ್ರೀರಡ್ಡಿ ಅವರ ಹೆಸರನ್ನು ಅಂತಿಮಗೊಳಿಸಿತ್ತು. ಈ ನಡುವೆ ಕಾಂಗ್ರೆಸ್‌ನ ಇಬ್ಬರು ಸದಸ್ಯರು ಬಿಜೆಪಿ ಮುಖಂಡರ ಸಂಪರ್ಕದಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಇರುವುದರಿಂದ ಜಿಪಂ ಗದ್ದುಗೆ ಏರಲು ಬಿಜೆಪಿ ನಾಯಕರು ಆಪರೇಷನ್ ಮಾಡುತ್ತಿದ್ದಾರಾ? ಎನ್ನುವ ಅಂಶ ಚರ್ಚೆಗೆ ಬಂದಿತ್ತು. ಈ ಬಗ್ಗೆ ಮುಖಂಡರು ಸಹ ಈಗ ಏನು ಹೇಳಲ್ಲ. ಕಾದು ನೋಡಿ ಎನ್ನುವ ಮಾತುಗಳನ್ನಾಡಿದ್ದರು.
ಅಧ್ಯಕ್ಷರ ಚುನಾವಣೆಗೆ ಒಂದು ದಿನ ಮುಂಚಿತವಾಗಿ ಜಿಪಂ ಸದಸ್ಯರ ಸಭೆ ಕರೆದಿದ್ದರು. ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆಯಬೇಕಿದ್ದ ಸಭೆ ಏಕಾಏಕಿ ಅತಿಥಿಗೃಹಕ್ಕೆ ಶಿಫ್ಟ್ ಆಗಿತ್ತು. ಸಭೆಗೆ ಇಬ್ಬರು ಸದಸ್ಯರು ಗೈರಾಗಿದ್ದು, ಎಲ್ಲವೂ ಸರಿಯಿಲ್ಲ ಎನ್ನುವ ಸನ್ನೆ ತೋರಿದೆ. ಒಟ್ಟಿನಲ್ಲಿ ಜಿಪಂ ಅಧ್ಯಕ್ಷರ ಚುನಾವಣೆ ಕುತೂಹಲ ಮೂಡಿಸಿದ್ದು, ಕೊನೆ ಗಳಿಗೆಯಲ್ಲಿ ಏನು ಬೇಕಾದರೂ ರಾಜಕೀಯ ಬದಲಾವಣೆ ನಡೆಯುವ ಸಾಧ್ಯತೆ ಕಂಡು ಬಂದಿದ್ದು, ಶುಕ್ರವಾರವೇ ಅಂತಿಮವಾಗಿ ಗದ್ದುಗೆ ಏರುವವರು ಯಾರು ಎನ್ನುವುದು ತಿಳಿಯಲಿದೆ.
ಅಧ್ಯಕ್ಷರಾಗುವುದು ಪ್ರತಿಷ್ಠೆ : ಜಿಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿರುವುದರಿಂದ ಮೊದಲ ಅವಧಿಗೆ ಕೊಂಕಲ್ ಕ್ಷೇತ್ರದ ಬಸರೆಡ್ಡಿ ಅನಪೂರ 30 ತಿಂಗಳ ಅಧ್ಯಕ್ಷ ಅವಧಿ ಪೂರ್ಣಗೊಳಿಸಿದ್ದಾರೆ. ಎರಡನೇ ಅವಧಿಗೆ ಬಸನಗೌಡ ಪಾಟೀಲ್ ಯಡಿಯಾಪುರ ಮತ್ತು ದೇವತ್ಕಲ್ ಕ್ಷೇತ್ರದ ರಾಜಶೇಖರಗೌಡ ವಜ್ಜಲ ಮಧ್ಯೆ ಪೈಪೋಟಿಯಿತ್ತು. ಕೊನೆಗೆ ಕಾಂಗ್ರೆಸ್ ಹೈಕಮಾಂಡ್ ಯಡಿಯಾಪುರ ಅವರನ್ನು ಸೈಡ್‌ಲೈನ್ ಮಾಡಿ ವಜ್ಜಲ್ ಆವರನ್ನು 18 ತಿಂಗಳ ಅವಧಿಗೆ ಗಾದಿಗೇರಿಸಿತ್ತು. ಇದೀಗ ಉಳಿದ 10 ತಿಂಗಳ ಅವಧಿಗೆ ಕಾಂಗ್ರೆಸ್ ಚುಕ್ಕಾಣಿ ಹಿಡಿಯುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಜಿಪಂ ಅಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಜಿಪಂ ಸದಸ್ಯರ ಸಭೆ ಕರೆಯಲಾಗಿತ್ತು. ಇಬ್ಬರು ಸದಸ್ಯರು ಗೈರಾಗಿದ್ದರು. ನಾಳೆ ಚುನಾವಣೆಯಲ್ಲಿ ಹಾಜರಾಗುವ ವಿಶ್ವಾಸವಿದೆ. ಈ ಹಿಂದೆಯೂ ನಮ್ಮವರೇ ಅಧ್ಯಕ್ಷರಾಗಿದ್ದರು. ಈಗ ಉಳಿದ ಅವಧಿಯನ್ನು ನಮ್ಮವರೇ ಪೂರೈಸಲಿದ್ದಾರೆ.
-ಮರಿಗೌಡ ಪಾಟೀಲ ಹುಲಕಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ
ಕಾಂಗ್ರೆಸ್ ಜಿಪಂ ಸದಸ್ಯರು ಬಿಜೆಪಿಗೆ ಬೆಂಬಲ ನೀಡಲು ಮುಂದೆ ಬಂದಿದ್ದಾರೆ. ಸುರಪುರ ಕ್ಷೇತ್ರದವರು ಅಧ್ಯಕ್ಷರಾಗಲಿದ್ದಾರೆ. ಈಗಲೇ ಏನು ಹೇಳಲು ಆಗಲ್ಲ. ನಮ್ಮವರು ಅಧ್ಯಕ್ಷರಾದರು ಅಚ್ಚರಿಯಿಲ್ಲ.
– ವೆಂಕಟರೆಡ್ಡಿ ಮುದ್ನಾಳ, ಶಾಸಕರು ಯಾದಗಿರಿ