Advertisement
ಬಹುತೇಕ ಘಟಾನುಘಟಿ ನಾಯಕರು ಗೆಲುವು ಸಾಧಿಸಿದ್ದು, ಸಚಿವ ಸ್ಥಾನಕ್ಕಾಗಿ ಲಾಬಿ ಪ್ರಾರಂಭಿಸಿದ್ದಾರೆ. ಹೀಗಾಗಿ ಮತ್ತೂಂದು ಬಿಕ್ಕಟ್ಟು ಎದುರಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಸಂಪುಟದ ಗಾತ್ರ 34ಕ್ಕೆ ಸೀಮಿತವಾಗಿದ್ದು, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ನೇಮಕಗೊಂಡಿರುವುದರಿಂದ ಉಳಿದ 32 ಸ್ಥಾನಗಳಿಗೆ ಭಾರೀ ಪೈಪೋಟಿ ನಡೆದಿದೆ.
Related Articles
Advertisement
ಒಂದು ಡಜನ್ ಶಾಸಕರು ಸಚಿವರಾಗುತ್ತಾರೋ ಅಥವಾ 2 ಡಜನ್ ಶಾಸಕರಿಗೆ ಅವಕಾಶ ಸಿಗು ತ್ತದೋ ಎಂಬುದು ಶುಕ್ರವಾರ ರಾತ್ರಿ ತಿಳಿಯಲಿದೆ.ಶುಕ್ರವಾರ ಬೆಳಗ್ಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ದಿಲ್ಲಿಗೆ ತೆರಳಲಿದ್ದು, ಸಂಪುಟಕ್ಕೆ ಸೇರಿಸಿಕೊಳ್ಳುವವರ ಪಟ್ಟಿಗೆ ವರಿಷ್ಠರ ಒಪ್ಪಿಗೆ ಪಡೆದು ಬರಲಿದ್ದಾರೆ. ಬೆಂಗಳೂರಿಗೆ ತೆರಳಿದ ಬಳಿಕ ಎಐಸಿಸಿ ಅನುಮೋದಿತ ಸಂಭವನೀಯ ಸಚಿವರ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಗುವುದು. ಹೀಗಾಗಿ ಮೊದಲ ಕಂತಿನಲ್ಲೇ ಸಂಪುಟ ಸೇರ್ಪಡೆಗೆ ಹಿರಿಯ ತಲೆಗಳು ಭಗೀರಥ ಪ್ರಯತ್ನ ನಡೆಸಿವೆ. ಸ್ಪೀಕರ್ ಯಾರು?
ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್, ಟಿ.ಬಿ.ಜಯಚಂದ್ರ, ಬಸವರಾಜ ರಾಯರೆಡ್ಡಿ , ಕೆ.ಎಚ್.ಮುನಿಯಪ್ಪ ಹೆಸರುಗಳು ಸ್ಪೀಕರ್ ಸ್ಥಾನಕ್ಕೆ ಕೇಳಿಬರುತ್ತಿದೆ. ಇವರೆಲ್ಲರೂ ಸಚಿವ ಸ್ಥಾನದ ಆಕಾಂಕ್ಷಿಗಳೂ ಆಗಿದ್ದಾರೆ. ಈ ಹಿಂದೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕೆಲಸ ಮಾಡಿದ ಅನುಭವವುಳ್ಳ ಟಿ.ಬಿ.ಜಯಚಂದ್ರ, ಎಚ್.ಕೆ.ಪಾಟೀಲ್ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಒಂದೇ ವಿಮಾನದಲ್ಲಿ ಬಂದಿಳಿದ ಜೋಡೆತ್ತುಗಳು
ಬೆಂಗಳೂರು: ನಗರದ ಎಚ್‌ಎಎಲ್ ವಿಮಾನ ನಿಲ್ದಾಣ ಗೇಟ್ ಹೊರಗೆ ಗುರುವಾರ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹಬ್ಬದ ವಾತಾವರಣ ಮೇಳೈಸಿತ್ತು. ಕುಮಾರ ಕೃಪಾ ರಸ್ತೆಯಲ್ಲಿರುವ ಸಿದ್ದರಾಮಯ್ಯ ಅವರ ಸರಕಾರಿ ನಿವಾಸ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸದಾಶಿವ ನಗರದ ಖಾಸಗಿ ನಿವಾಸದಲ್ಲಿ ಹಬ್ಬದ ಸಂಭ್ರಮ ಸೃಷ್ಟಿಯಾಗಿತ್ತು. ಅಭಿಮಾನಿಗಳು ಹಾಗೂ ಕಾರ್ಯಕರ್ತರು ಇಬ್ಬರು ನಾಯಕ ರಿಗೂ ಹೂಮಳೆಗೈದು ಸ್ವಾಗತ ಕೋರಿದರು. ಇದಕ್ಕೂ ಮೊದಲು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಸ್ವಾಗತಿಸಲು ಕಾರ್ಯಕರ್ತರ ದೊಡ್ಡ ದಂಡು ವಿಮಾನ ನಿಲ್ದಾಣದ ರಸ್ತೆ ಇಕ್ಕೆಲಗಳಲ್ಲಿ ನೆರೆದಿತ್ತು. ಇವರ ಸಂಭ್ರಮಕ್ಕೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಮೆರಗು ಮತ್ತಷ್ಟು ಕಳೆ ತಂದಿತು. ಇಬ್ಬರು ನಾಯಕರೂ ಒಂದೇ ವಿಮಾನದಲ್ಲಿ ದಿಲ್ಲಿಯಿಂದ ಬಂದಿಳಿದಾಗ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಬಳಿಕ ಅವರಿಬ್ಬರೂ ಪ್ರತ್ಯೇಕ ಕಾರುಗಳಲ್ಲಿ ತಮ್ಮ ನಿವಾಸದತ್ತ ತೆರಳಿದರು. ಸಿದ್ದರಾಮಯ್ಯ ನಿವಾಸದಲ್ಲೂ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಶಾಸಕ ಶಿವಲಿಂಗೇಗೌಡ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಬೈರತಿ ಸುರೇಶ್ ಮುಂತಾದ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ಉಪಸ್ಥಿತರಿದ್ದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಸಿದ್ದು ತಮ್ಮ ಬೆಂಬಲಿಗರೊಂದಿಗೆ ಕೆಪಿಸಿಸಿ ಕಚೇರಿಯತ್ತ ನಡೆದರು. ಡಿಕೆಶಿ ನಿವಾಸದಲ್ಲೂ ಬೆಂಬಲಿಗರ ದಂಡು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರ ನಿವಾಸದಲ್ಲೂ ಕಾರ್ಯಕರ್ತರು ಮತ್ತು ಅಭಿಮಾನಿಗಳು ನೆರೆದಿದ್ದರು. ಶಿವಕುಮಾರ್ ಅವರ ಬೆಂಬಲಿಗ ಶಾಸಕರೂ ಇದ್ದರು. ಅಭಿಮಾನಿಗಳಿಂದ ಸ್ವಾಗತ ಸ್ವೀಕರಿಸಿದ ಬಳಿಕ ಡಿಕೆಶಿ ಅವರು ಕೆಪಿಸಿಸಿ ಕಚೇರಿಯತ್ತ ತೆರಳಿದರು. ಕಾರು ಚಲಾಯಿಸಿದ ಬೈರತಿ ಸುರೇಶ್
ಸಿದ್ದರಾಮಯ್ಯ ಅವರು ಕಪ್ಪು ಬಣ್ಣದ ಮರ್ಸಿಡಿಸ್ ಜಿ ವ್ಯಾಗನ್ (ಎಸ್‌ಯುವಿ) ಕಾರಿನಲ್ಲಿ ವಿಮಾನ ನಿಲ್ದಾಣದಿಂದ ಮನೆಯತ್ತ ಸಾಗಿದ್ದು, ಈ ಕಾರನ್ನು ಸಿದ್ದರಾಮಯ್ಯ ಅವರ ಆಪ್ತ ಶಾಸಕ ಬೈರತಿ ಸುರೇಶ್ ಚಲಾಯಿಸಿದ್ದು ವಿಶೇಷವಾಗಿತ್ತು. ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಕೂಡ ಜತೆಗಿದ್ದರು. ಎಚ್‌ಎಎಲ್ ರಸ್ತೆ ಇಕ್ಕೆಲಗಳಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಿದ್ದರಾಮಯ್ಯ ಕಾರಿಗೆ ಹೂವಿನ ಮಳೆಗೆರೆದರು. ಅವರ ಪರ ಘೋಷಣೆ ಮೊಳಗಿಸಿದರು. ಪ್ರತ್ಯೇಕ ಕಾರಿನಲ್ಲಿ ಮಾಜಿ ಸಚಿವ ಕೆ.ಜೆ.ಜಾರ್ಜ್ ತೆರಳಿದರು.