ಹೊಸದಿಲ್ಲಿ: ಕಳೆದ ವಾರ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ರಿಷಭ್ ಪಂತ್ ಅವರು ಈ ಸೀಸನ್ ನ ಐಪಿಎಲ್ ನಲ್ಲಿ ಆಡುವುದು ಬಹುತೇಕ ಕಷ್ಟ ಎನ್ನಲಾಗಿದೆ. ಲಭ್ಯವಾದರೂ ಮೊದಲಾರ್ಧಕ್ಕೆ ಡೌಟ್ ಎಂದು ವರದಿಯಾಗಿದೆ. ಹೀಗಾಗಿ ರಿಷಭ್ ಪಂತ್ ನಾಯಕರಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇದೀಗ ಹಂಗಾಮಿ ನಾಯಕನ ಹುಡುಕಾಟದಲ್ಲಿದೆ.
ಶುಕ್ರವಾರ ಬೆಳಿಗ್ಗೆ ಭೀಕರ ಅಪಘಾತಕ್ಕೊಳಗಾದ ಪಂತ್ ಗೆ ಯಾವುದೇ ಮೂಳೆ ಮುರಿತ ಅಥವಾ ಗಂಭೀರ ಆಂತರಿಕ ಗಾಯಗಳಾಗಿಲ್ಲ. ಆದರೆ ಅಸ್ಥಿರಜ್ಜು ಹರಿದ ಕಾರಣ ಅವರು ಮೂರರಿಂದ ಆರು ತಿಂಗಳ ಕಾಲ ವಿಶ್ರಾಂತಿ ಪಡೆಯಬೇಕಾಗಿದೆ.
ನಾಯಕತ್ವದ ಅನುಭವ ಹೊಂದಿರುವ ಕ್ಯಾಪಿಟಲ್ಸ್ ತಂಡದ ಅತ್ಯಂತ ಹಿರಿಯ ಆಟಗಾರ ಡೇವಿಡ್ ವಾರ್ನರ್ ಅವರಿಗೆ ನಾಯಕತ್ವ ನೀಡಲಾಗುತ್ತದೆ ಎನ್ನುತ್ತಿವೆ ವರದಿಗಳು. ಇದೇ ರೀತಿ ಕನ್ನಡಿಗ ಮನೀಶ್ ಪಾಂಡೆ ಕೂಡಾ ಮತ್ತೊಂದು ಆಯ್ಕೆಯಾಗಿದೆ. ಆದರೆ ಪಾಂಡೆ ಈ ಬಾರಿಯ ಹರಾಜಿನಲ್ಲಿ ತಂಡವನ್ನು ಸೇರಿಕೊಂಡಿರುವುದು ಅವರ ಆಯ್ಕೆ ಕಷ್ಟ. ಎಪ್ರಿಲ್ ಮೊದಲ ವಾರದಲ್ಲಿ ಐಪಿಎಲ್ ಆರಂಭವಾಗುವ ಕಾರಣ ಈಗಲೇ ಹಂಗಾಮಿ ನಾಯಕನ ಘೋಷಣೆ ಮಾಡುವುದು ಕಷ್ಟ.
ಪೃಥ್ವಿ ಶಾ, ಮನೀಷ್ ಪಾಂಡೆ ಮತ್ತು ಮಿಚೆಲ್ ಮಾರ್ಷ್ ಅವರು ನಾಯಕತ್ವದ ಅನುಭವವನ್ನು ಹೊಂದಿದ್ದರೂ ಡೇವಿಡ್ ವಾರ್ನರ್ ಅವರೇ ಈ ರೇಸ್ ನಲ್ಲಿ ಮುಂದಿದ್ದಾರೆ. ಒಂದು ವೇಳೆ ಪಂತ್ ಐಪಿಎಲ್ 2023 ರಲ್ಲಿ ಭಾಗವಹಿಸದಿದ್ದರೆ, ಸುದೀರ್ಘ ಅನುಪಸ್ಥಿತಿಯ ನಂತರ ವಾರ್ನರ್ ಮತ್ತೆ ನಾಯಕನಾಗಿ ಅಧಿಕಾರ ವಹಿಸಿಕೊಳ್ಳಬಹುದು.