Advertisement

ಲಂಕಾ ಟಿ20 ಸರಣಿಗೆ ಭಾರತ ತಂಡ ಯಾರು ಪ್ರಕಟಿಸುವವರು?

12:18 AM Dec 23, 2019 | Team Udayavani |

ಹೊಸದಿಲ್ಲಿ: ಪ್ರವಾಸಿ ವೆಸ್ಟ್‌ ಇಂಡೀಸ್‌ ಎದುರಿನ ಸರಣಿ ಮುಗಿಸಿರುವ ಭಾರತದ ಮುಂದಿನ ಕ್ರಿಕೆಟ್‌ ಕಾರ್ಯಕ್ರಮ ಶ್ರೀಲಂಕಾ ವಿರುದ್ಧದ ಟಿ20 ಸರಣಿ. 3 ಪಂದ್ಯಗಳ ಈ ಮುಖಾಮುಖೀ ಜ. 5ರಂದು ಗುವಾಹಾಟಿಯಲ್ಲಿ ಆರಂಭವಾಗಲಿದೆ. ಇಂದೋರ್‌ ಮತ್ತು ಪುಣೆಯಲ್ಲಿ ಉಳಿದೆರಡು ಪಂದ್ಯಗಳನ್ನು ಆಡಲಾಗುವುದು.

Advertisement

ಆದರೆ ಈ ಸರಣಿಗಾಗಿ ಭಾರತ ತಂಡವನ್ನು ಯಾರು ಪ್ರಕಟಿಸುವವರು ಎಂಬ ಗೊಂದಲವೊಂದು ಬಿಸಿಸಿಐಗೆ ಎದುರಾಗಿದೆ. ಎಂ.ಎಸ್‌.ಕೆ. ಪ್ರಸಾದ್‌ ನೇತೃತ್ವದ ಆಯ್ಕೆ ಸಮಿತಿಯ ಕಾರ್ಯಾವಧಿ ಈಗಾಗಲೇ ಮುಗಿದಿದೆ. ನೂತನ ಆಯ್ಕೆ ಸಮಿತಿಯನ್ನು ರಚಿಸಬೇಕಿರುವ “ಕ್ರಿಕೆಟ್‌ ಸಲಹಾ ಸಮಿತಿ’ಯೇ (ಸಿಎಸಿ) ಇನ್ನೂ ನೇಮಕಗೊಂಡಿಲ್ಲ. ಡಿ. 25ರೊಳಗೆ ತಂಡವನ್ನು ಪ್ರಕಟಿಸಬೇಕಾದ ಅನಿವಾರ್ಯತೆ ಬಿಸಿಸಿಐ ಮುಂದಿದೆ.

ಸಿಎಸಿ ರಚನೆ ವಿಳಂಬ?
ಡಿ. ಒಂದರ ಹೇಳಿಕೆಯೊಂದರಲ್ಲಿ, ಇನ್ನೊಂದು ವಾರ ಅಥವಾ 10 ದಿನಗಳಲ್ಲಿ ನೂತನ ಆಯ್ಕೆ ಸಮಿತಿ ರಚನೆಯಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದರು. ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಬೆಳವಣಿಗೆ ಸಂಭವಿಸಿಲ್ಲ.

ಸಿಎಸಿ ಒಂದೆರಡು ದಿನಗಳಲ್ಲಿ ರಚನೆ ಯಾಗಲಿದೆ, ಇದಕ್ಕಾಗಿ ಶೀಘ್ರದಲ್ಲೇ ಸಂದರ್ಶನ ಪ್ರಕ್ರಿಯೆ ನಡೆಯಲಿದೆ ಎಂದು ಶುಕ್ರವಾರ ಸೌರವ್‌ ಗಂಗೂಲಿ ಹೇಳಿದ್ದರು. ಆದರೆ ಇದರ ಸದಸ್ಯೆಯಾಗಿದ್ದ ಶಾಂತಾ ರಂಗಸ್ವಾಮಿ ಸ್ವಹಿತಾಸಕ್ತಿ ಪ್ರಕರಣದಲ್ಲಿ ಡಿ. 28ರಂದು ವಿಚಾರಣೆ ಎದುರಿಸಬೇಕಿದೆ. ಹೀಗಾಗಿ ಸಿಎಸಿ ರಚನೆಯಲ್ಲಿ ವಿಳಂಬವಾಗುವ ಸಾಧ್ಯತೆ ಇದೆ.

ಅಂತಾರಾಷ್ಟ್ರೀಯ ಸರಣಿಯೊಂದಕ್ಕೆ 10 ದಿನಗಳ ಮೊದಲು ತಂಡವನ್ನು ಅಂತಿಮಗೊಳಿಸ ಬೇಕೆಂಬುದು ಐಸಿಸಿ ನಿಯಮ. ಅದರಂತೆ ಡಿ. 25ರ ಒಳಗೆ ಭಾರತ ತಂಡ ಪ್ರಕಟವಾಗಲೇಬೇಕು. ಉಳಿದ 2-3 ದಿನಗಳಲ್ಲಿ ಸಿಎಸಿ ರಚನೆಯಾಗಿ, ಇದು ಆಯ್ಕೆ ಸಮಿತಿಯನ್ನು ರಚಿಸಿ, ಅದು ತಂಡವನ್ನು ಅಂತಿಮಗೊಳೀಸಿತೇ ಎಂಬ ಚಿಂತೆ ಬಿಸಿಸಿನದ್ದು! ಅಕಸ್ಮಾತ್‌ ಇದು ಸಾಧ್ಯವಾಗದೇ ಹೋದರೆ, ಪ್ರಸಾದ್‌ ನೇತೃತ್ವದ ಆಯ್ಕೆ ಸಮಿತಿಯೇ ತಂಡವನ್ನು ಪ್ರಕಟಿಸಬೇಕಾಗುತ್ತದೆ.

Advertisement

ರವಿವಾರ ರಾತ್ರಿಯ ವರದಿ ಪ್ರಕಾರ ಸೋಮವಾರ ಪ್ರಸಾದ್‌ ನೇತೃತ್ವದಲ್ಲೇ ಭಾರತ ತಂಡ ಪ್ರಕಟಗೊಳ್ಳಲಿದೆ ಎಂದು ತಿಳಿದು ಬಂದಿದೆ.

ಭಾರತದ ಸರಣಿಗಳು
ಶ್ರೀಲಂಕಾ ಎದುರಿನ ಟಿ20 ಸರಣಿ ಮುಗಿದ ಬೆನ್ನಲ್ಲೇ ಆಸ್ಟ್ರೇಲಿಯ ತಂಡ 3 ಏಕದಿನ ಪಂದ್ಯಗಳನ್ನಾಡಲು ಭಾರತಕ್ಕೆ ಆಗಮಿಸಲಿದೆ. ಜ. 14, 17 ಮತ್ತು 19ರಂದು ಈ ಪಂದ್ಯಗಳು ನಡೆಯಲಿವೆ. ಬಳಿಕ ಟೀಮ್‌ ಇಂಡಿಯಾ 5 ಟಿ20, 3 ಏಕದಿನ, 2 ಟೆಸ್ಟ್‌ ಪಂದ್ಯಗಳ ಸರಣಿಗಾಗಿ ನ್ಯೂಜಿಲ್ಯಾಂಡಿಗೆ ಪ್ರವಾಸಗೈಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next