ಎಲಾನ್ ಮಸ್ಕ್, ಜೆಫ್ ಬೆಜೋಸ್, ಗೌತಮ್ ಅದಾನಿ, ಮುಕೇಶ್ ಅಂಬಾನಿಯಂತಹ ಜಗತ್ತಿನ ಶ್ರೀಮಂತ ವ್ಯಕ್ತಿಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ 500-600 ವರ್ಷಗಳ ಹಿಂದೆ ಬದುಕಿದ್ದ ಆಗರ್ಭ ಶ್ರೀಮಂತ ವ್ಯಕ್ತಿಯ ಬಗ್ಗೆ ಗೊತ್ತಾ…ಈತ ಜಗತ್ತಿನ ಸಾರ್ವಕಾಲಿಕ ಶ್ರೀಮಂತ ವ್ಯಕ್ತಿಯಾಗಿದ್ದ. ಪ್ರಜಾಪ್ರಭುತ್ವ ಜನ್ಮತಳೆಯುವುದಕ್ಕೂ ಮೊದಲು ರಾಜರು, ಚಕ್ರವರ್ತಿಗಳು ಜಗತ್ತನ್ನು, ದೇಶವನ್ನು ಆಳುತ್ತಿದ್ದರು. ನಾವೀಗ ತಿಳಿದುಕೊಳ್ಳಲು ಹೊರಟಿರುವ ಈ ರಾಜನ ಬಳಿ ಅಂದು ಜಗತ್ತಿನ ಅರ್ಧದಷ್ಟು ಭಾಗ ಚಿನ್ನವನ್ನು ಹೊಂದಿದ್ದ ಎಂಬುದು ಕುತೂಹಲದ ಸಂಗತಿಯಾಗಿದೆ.
ಯಾರೀತ ಹಳದಿ ಲೋಹದ ಕುಬೇರ!
ಈ ಶ್ರೀಮಂತ ದೇಶದ ರಾಜನ ದೇಶ ಇದೀಗ ಜಗತ್ತಿನ ಬಡ ರಾಷ್ಟ್ರಗಳಲ್ಲಿ ಒಂದಾಗಿದೆ ಎಂಬುದು ವಿಪರ್ಯಾಸ. ಒಂದು ಕಾಲದಲ್ಲಿ ಮಾಲಿ ಎಂಬ ದೇಶವನ್ನು ಮನ್ಸಾ ಮೂಸಾ ಎಂಬಾತ ಆಳುತ್ತಿದ್ದ. ಕ್ರಿ.ಶ. 1312ರಿಂದ 1337ರವರೆಗೆ ಮನ್ಸಾ ಮೂಸಾ ಮಾಲಿಯನ್ನು ಆಳಿದ್ದ. ಹಲವು ಇತಿಹಾಸಕಾರರು ಉಲ್ಲೇಖಿಸಿದ ಪ್ರಕಾರ, ಈತ ಜಗತ್ತಿನ ಸಾರ್ವಕಾಲಿಕ ಶ್ರೀಮಂತ ವ್ಯಕ್ತಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ಇತಿಹಾಸಕಾರರ ಪ್ರಕಾರ, ಅಂದು ಜಗತ್ತಿನಾದ್ಯಂತ ವ್ಯಾಪಾರಿಗಳು ಚಿನ್ನವನ್ನು ಖರೀದಿಸಲು ಮಾಲಿಗೆ ಬರುತ್ತಿದ್ದರಂತೆ. ಚಿನ್ನವನ್ನು ತುಂಬಿಡಲು ಮೂಸಾ ಅರಮನೆಗಳನ್ನು ಕಟ್ಟಿಸಿದ್ದ. ಬೃಹತ್ ಅರಮನೆಯಲ್ಲಿ ದೊಡ್ಡ ಪ್ರಮಾಣದ ಚಿನ್ನವನ್ನು ಶೇಖರಿಸಿಟ್ಟಿರುವುದಾಗಿ ಇತಿಹಾಸಕಾರರು ಉಲ್ಲೇಖಿಸಿದ್ದಾರೆ. ವರದಿಯ ಪ್ರಕಾರ, ಆ ಕಾಲದಲ್ಲಿ ಮನ್ಸಾ ಮೂಸಾನ ಬಳಿ ಇದ್ದ ಸಂಪತ್ತಿನ ಮೌಲ್ಯ ಎಷ್ಟು ಗೊತ್ತಾ? ಬರೋಬ್ಬರಿ 400 ಬಿಲಿಯನ್ ಅಮೆರಿಕನ್ ಡಾಲರ್. (33,00,000 ಲಕ್ಷ ಕೋಟಿ) ಆಗಿತ್ತು.
ಮನ್ಸಾ ಮೂಸಾನ ಸಾಮ್ರಾಜ್ಯ ಅಟ್ಲಾಂಟಿಕ್ ಸಾಗರದಿಂದ ಹಿಡಿದು 2000 ಮೈಲುಗಳವರೆಗೆ ವಿಸ್ತರಿಸಿತ್ತು. ಇಂದಿನ ನೈಗರ್, ಸೆನೆಗಲ್, ಮಾರಿಷಾನಿಯಾ, ಮಾಲಿ, ಬುರ್ಕಿನಾ ಫಾಸೋ, , ದಿ ಗಾಂಬಿಯಾ, ಗ್ಯುನಿಯಾ ಮತ್ತು ಐವರಿ ಕೋಸ್ಟ್ ವರೆಗೂ ಮೂಸಾ ಸಾಮ್ರಾಜ್ಯ ಹಬ್ಬಿತ್ತು. ಈ ಬೃಹತ್ ಭೂ ಭಾಗದಲ್ಲಿ ಚಿನ್ನ ಮತ್ತು ಉಪ್ಪಿನ ಅಗಾಧ ನಿಕ್ಷೇಪ ಹೊಂದಿದ್ದವು. ಬ್ರಿಟಿಷ್ ಮ್ಯೂಸಿಯಂ ಮಾಹಿತಿ ಪ್ರಕಾರ, ಅಂದಿನ ಮಾಲಿಯಲ್ಲಿ ಜಗತ್ತಿನ ಅರ್ಧದಷ್ಟು ಭಾಗ ಚಿನ್ನದ ನಿಕ್ಷೇಪ ಹೊಂದಿದ್ದು, ಇವೆಲ್ಲವೂ ಮನ್ಸಾ ಮೂಸಾನ ಅಧೀನಕ್ಕೊಳಪಟ್ಟಿತ್ತು.
ಇಷ್ಟೆಲ್ಲಾ ಚಿನ್ನದ ನಿಕ್ಷೇಪವನ್ನು ಹೊಂದಿದ್ದ ಮಾಲಿ ಸಾಮ್ರಾಜ್ಯ ಹೆಚ್ಚು ಚಿರಪರಿಚಿತವಾಗಿರಲಿಲ್ಲವಾಗಿತ್ತು. ಇದರ ಪರಿಣಾಮ ಇಸ್ಲಾಂ ಧರ್ಮನಿಷ್ಠನಾಗಿದ್ದ ಅ ಮನ್ಸಾ ಮೂಸಾ ಸಹರಾ ಮರುಭೂಮಿ, ಈಜಿಪ್ಟ್ ಮೂಲಕ ಮೆಕ್ಕಾ ಯಾತ್ರೆಗೆ ತೆರಳಲು ನಿರ್ಧರಿಸಿದ್ದ. ಅದರಂತೆ ಮಾಲಿ ರಾಜ ಮನ್ಸಾ ಮೂಸಾ ಬರೋಬ್ಬರಿ 60 ಸಾವಿರ ಜನರ ತಂಡ(ಕಾರವಾನ್)ದೊಂದಿಗೆ ಮಾಲಿಯಿಂದ ಹೊರಟು ಬಿಟ್ಟಿದ್ದ. ಈ ತಂಡದಲ್ಲಿ ಅರಮನೆಯಲ್ಲಾ ಎಲ್ಲಾ ಅಧಿಕಾರಿಗಳು, ಸೈನಿಕರು, ವಿದೂಷಕರು, ವ್ಯಾಪಾರಿಗಳು, 12 ಸಾವಿರ ಗುಲಾಮರು ಹಾಗೂ ಆಡು, ಕುರಿ, ಆಹಾರಗಳು ಸೇರಿದ್ದವು ಎಂದು ವರದಿ ತಿಳಿಸಿದೆ.
ಪ್ರತಿ ಒಂಟೆಯ ಮೇಲೆ ನೂರಾರು ಪೌಂಡ್ಸ್ ಮೊತ್ತದ ಶುದ್ಧ ಚಿನ್ನದ ಮೂಟೆಗಳಿದ್ದು, ಹೀಗೆ ನೂರಾರು ಒಂಟೆಗಳನ್ನು ಚಿನ್ನ ಹೊತ್ತೊಯ್ಯಲು ಬಳಸಲಾಗಿತ್ತಂತೆ. ಮರಳುಗಾಡಿನಲ್ಲಿ ಪ್ರಯಾಣಿಸುತ್ತಾ ಸಾಗಿದ್ದ ಕಾರವಾನ್ ಈಜಿಪ್ಟ್ ನ ಕೈರೋ ತಲುಪಿತ್ತು. ಈಜಿಪ್ಟ್ ನ ಕೈರೋದಲ್ಲಿ ಮೂರು ತಿಂಗಳ ಕಾಲ ವಾಸ್ತವ್ಯ ಹೂಡಿದ್ದ ಮೂಸಾನ ಬಗ್ಗೆ ಜನರು ಹೇಗೆ ಮಾತನಾಡಿಕೊಳ್ಳುತ್ತಿದ್ದರು ಎಂಬುದನ್ನು 12 ವರ್ಷಗಳ ನಂತರ ಕೈರೋಗೆ ಭೇಟಿ ನೀಡಿದ್ದ ಇತಿಹಾಸಕಾರರು ದಾಖಲಿಸಿದ್ದಾರೆ.
ಕೈರೋದಲ್ಲಿ ಮನ್ಸಾ ಮೂಸಾ ಚಿನ್ನವನ್ನು ಯಥೇಚ್ಛವಾಗಿ ಹಂಚಿದ್ದರು. ಇದರ ಪರಿಣಾಮ ಹತ್ತು ವರ್ಷಗಳ ಕಾಲ ಚಿನ್ನದ ಬೆಲೆ ಕುಸಿದಿದ್ದು, ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿತ್ತು. ಮನ್ಸಾ ಮೂಸಾನ ಯಾತ್ರೆಯಿಂದಾಗಿ ಮಧ್ಯಪ್ರಾಚ್ಯದಾದ್ಯಂತ ಅಂದಾಜು 1.5 ಬಿಲಿಯನ್ ಡಾಲರ್ ಆರ್ಥಿಕ ನಷ್ಟಕ್ಕೆ ಕಾರಣವಾಗಿತ್ತಂತೆ.
ಕೆಲವು ವರದಿ ಪ್ರಕಾರ, ಮೂಸಾ ಮೆಕ್ಕಾದಿಂದ ಈಜಿಪ್ಟ್ ಮೂಲಕ ವಾಪಸ್ ಮರಳುವ ಸಂದರ್ಭದಲ್ಲಿ ಈಜಿಪ್ಟ್ ಆರ್ಥಿಕತೆಗೆ ನೆರವು ನೀಡುವ ಉದ್ದೇಶದಿಂದ ದೊಡ್ಡ ಮೊತ್ತದ ಬಡ್ಡಿ ದರಕ್ಕೆ ಈಜಿಪ್ಟ್ ಲೇವಾದೇವಿದಾರರಿಂದ ವಸ್ತುಗಳನ್ನು ಖರೀದಿ ಮಾಡಿದ್ದ. ಇದರಿಂದಾಗಿ ಕೊನೆಗೆ ಮೂಸಾ ಬಳಿ ಚಿನ್ನವೇ ಇಲ್ಲದಂತಾಗಿತ್ತು!
ಮೆಕ್ಕಾದಿಂದ ಮರಳುವ ವೇಳೆ ಮನ್ಸಾ ತನ್ನೊಂದಿಗೆ ಪ್ರವಾದಿ ಮುಹಮ್ಮದ್ ಪೈಗಂಬರರ ವಂಶಸ್ಥರು, ಕವಿಗಳನ್ನು, ಇಸ್ಲಾಮ್ ಪಂಡಿತರನ್ನು ಹಾಗೂ ಶಿಲ್ಪಿಗಳನ್ನು ಕರೆತಂದಿದ್ದ. ಈ ಸಂದರ್ಭದಲ್ಲಿ ಕವಿಗೆ ಮೂಸಾ 200 ಕೆಜಿ ಚಿನ್ನವನ್ನು ನೀಡಿರುವುದಾಗಿ ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೇ ಕಲೆ, ವಾಸ್ತುಶಿಲ್ಪ, ಸಾಹಿತ್ಯ, ಲೈಬ್ರರಿ, ಮಸೀದಿ, ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡಲು ಮೂಸಾ ಆರ್ಥಿಕ ನೆರವು ನೀಡಿದ್ದ. ಹೀಗೆ ಟಿಂಬಕ್ಟು ಶಿಕ್ಷಣ ಕೇಂದ್ರವಾಗಿ ಬೆಳೆದಿತ್ತು. ಇಷ್ಟೆಲ್ಲಾ ಸಾಹಸಗಾಥೆಯ ನಡುವೆ 1337ರಲ್ಲಿ ಮನ್ಸಾ ಮೂಸಾ ಕೊನೆಯುಸಿರೆಳೆದಿದ್ದ. ನಂತರ ಮಗ ರಾಜನಾಗಿ ನೇಮಕಗೊಂಡಿದ್ದರು ಕೂಡಾ ಈ ಸಾಮ್ರಾಜ್ಯ ತುಂಡು, ತುಂಡಾಗುವ ಮೂಲಕ ಸಾಮ್ರಾಟನ ಶವದ ಪಟ್ಟಿಗೆಗೆ ಕೊನೆಯ ಮೊಳೆ ಎಂಬಂತೆ ಯುರೋಪಿಯನ್ನರು ಆಗಮಿಸಿದ್ದರಿಂದ ಮೂಸಾ ಸಾಮ್ರಾಜ್ಯ ಕೊನೆಗೊಂಡಿತ್ತು.
ತನ್ನ ಮೆಕ್ಕಾ ಯಾತ್ರೆ ವೇಳೆ ಮನ್ಸಾ ಮೂಸಾ ಅಪಾರ ಪ್ರಮಾಣದ ಚಿನ್ನವನ್ನು ದಾನವಾಗಿ ನೀಡಿದ್ದ. ಇದರ ಪರಿಣಾಮ ಮಾಲಿ ದೇಶ ನಿರ್ಗತಿಕವಾಗಲು ಕಾರಣವಾಯ್ತು ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು ಸತ್ಯ. ಆದರೆ ಆತನ ದಾನ-ಧರ್ಮ ಜಗತ್ತಿನ ಗಮನ ಸೆಳೆದಿತ್ತು. ಚಿನ್ನದ ತುಂಡೊಂದನ್ನು ಹಿಡಿದು ಚಿನ್ನದ ಸಿಂಹಾಸನದ ಮೇಲೆ ಕುಳಿತ ಮನ್ಸಾ ಚಿತ್ರವೊಂದು 1375ರಲ್ಲಿ ಅಟ್ಲಾಸ್ ನಕ್ಷೆಯಲ್ಲಿ ಛಾಪು ಮೂಡಿಸಿತ್ತು.
*ನಾಗೇಂದ್ರ ತ್ರಾಸಿ