Advertisement

ಸಾಯಲೆಂದೇ ಹೂ ಬಿಟ್ಟ ಸೆಂಚುರಿ ಪಾಮ್‌

12:04 PM Feb 02, 2017 | |

ಬೆಂಗಳೂರು: ದೀಪ ನಂದಿ ಹೋಗುವ ಮುನ್ನ ಜೋರಾಗಿ ಉರಿಯುತ್ತದೆ ಎಂಬ ಗಾದೆ ಮಾತು ಅಕ್ಷರಶಃ “ಸೆಂಚೂರಿ ಪಾಮ್‌’ ಮರಕ್ಕೆ ಅನ್ವಯಿಸುತ್ತದೆ. ಸೆಂಚೂರಿ ಪಾಮ್‌ ಮರ ಹೂವು ಬಿಟ್ಟು ಸುಂದರವಾಗಿ ಕಂಗೊಳಿಸುತ್ತಿದೆ ಎಂದರೆ ಆ ಮರಕ್ಕೆ ಅದುವೇ ಕೊನೆಗಾಲ. ಹೌದು. ನಗರದಲ್ಲಿ ಬೇರೆಲ್ಲೂ ಕಾಣ  ಸಿಗದ ಈ ಸೆಂಚೂರಿ ಪಾಮ್‌ ಮರ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಮಾತ್ರ ಇದೆ.

Advertisement

ಹೆಸರೇ ಹೇಳುವಂತೆ ಈ ಮರದ ಆಯಸ್ಸು ನೂರು ವರ್ಷ. ಲಾಲ್‌ ಬಾಗ್‌ನಲ್ಲಿ ಈ ಜಾತಿಯ ಸುಮಾರು 15 ಮರಗಳಿದ್ದು ಈಗ ಬ್ಯಾಂಡ್‌ಸ್ಟಾಂಡ್‌, ಲಾಲ್‌ಬಾಗ್‌ ನಿರ್ದೇಶಕ ಕಚೇರಿ ಮತ್ತು ಕೃಂಬಿಗಲ್‌ ಹಾಲ್‌ ಸಮೀಪವಿರುವ ಮೂರು ಸೆಂಚೂರಿ ಪಾಮ್‌ ಮರಗಳು  ಹೂವು ಬಿಟ್ಟಿವೆ. ಒಂದೆಡೆ ಹೂವು ಕಂಡು ಸಂತಸವಾದರೆ, ಮತ್ತೂಂದೆಡೆ ಮರಗಳ ಅವಸಾನ ಪರಿಸರ ಪ್ರೇಮಿಗಳಲ್ಲಿ ನಿರಾಸೆ ಮೂಡಿಸುತ್ತದೆ.

ತಮ್ಮ ಜೀವಿತಾವಧಿಯಲ್ಲಿ ಕೇವಲ ಒಂದು ಬಾರಿ ಮಾತ್ರ ಹೂವು ಬಿಟ್ಟರು ಅದು ವರ್ಷವಿಡೀ ಮರದಲ್ಲಿ ಕಂಗೊಳಿಸುತ್ತದೆ. ಹಳದಿ ಮಿಶ್ರಿತ ತಿಳಿ ಬಣ್ಣದ ಹೂವುಗಳ ಗೊಂಚಲು ನೋಡಲು ಬಲು ಆಕರ್ಷಣೀಯ. ಮರದ ತುಂಬಾ ಹೂವಿದ್ದು, ಗಾಳಿಗೆ ಉದುರಿದ ಪುಷ್ಪಗಳು ಹೂವಿನ ಹಾಸಿಗೆಯನ್ನೇ ಹಾಸಿದಂತೆ ಕಂಗೊಳಿಸಿ ಸೆಳೆಯುತ್ತವೆ. ಆದರೆ, ನಂತರ ಮರದ ಅವಸಾನ ಪ್ರಾರಂಭವಾಗುತ್ತದೆ. 

ಶ್ರೀಲಂಕಾದ ರಾಷ್ಟ್ರೀಯ ಮರ ಇದು: ಶ್ರೀಲಂಕಾ ಮೂಲದ ಈ ಮರಗಳು ಪಾಮ್‌ ಜಾತಿಗೆ ಸೇರಿದವು. ಸುಮಾರು 80 ರಿಂದ 100 ವರ್ಷ ಆಯಸ್ಸು. ಈ ಮರ ನಿಜಕ್ಕೂ ಸಸ್ಯಶಾಸ್ತ್ರದ ಅದ್ಭುತ ಎಂದು ವರ್ಣಿಸಲಾಗಿದೆ. ಸುಮಾರು 50ರಿಂದ 75 ಅಡಿಗಳವರೆಗೆ ಬೆಳೆಯುವ ಸೆಂಚುರಿ ಪಾಮ್‌ ಶ್ರೀಲಂಕಾದ ರಾಷ್ಟ್ರೀಯ ಮರ. ಇದರ ವೈಜ್ಞಾನಿಕ ಹೆಸರು ಕೊರಿಫಾ ಅಂಬ್ರಾಕ್ಯುಲಿಫೆರಾ. ಇಷ್ಟೊಂದು ವೈವಿಧ್ಯಮಯವಾದ ಮರಗಳನ್ನು ಲಾಲ್‌ಬಾಗ್‌ನಲ್ಲಿ ನೂರಾರು ವರ್ಷಗಳ ಹಿಂದೆಯೇ ಬೆಳೆಸಲಾಗಿದ್ದು, ಮೂರು ಮರಗಳಿಗೆ ಶತಾಯಸ್ಸು. 

ಲಾಲ್‌ಬಾಗ್‌ನಲ್ಲಿ ಸುಮಾರು 15 ಸೆಂಚೂರಿ ಪಾಮ್‌ ಗಿಡಗಳಿವೆ. ಅವುಗಳನ್ನು ಸೀತಾಳೆ ಎಂದು ಕೂಡ ಕರೆಯುತ್ತಾರೆ. ನೋಡಲು ತಾಳೆ ಮರದಂತೆ ಕಂಡರೂ ಅತ್ಯಂತ ವಿಶಿಷ್ಟವಾದ ಮರ. ಗೊಂಚಲು ಗೊಂಚಲು ಹೂವು ಬಿಟ್ಟು ಸೆಳೆಯುವ ಈ ಮರ ನಂತರ ಸಾಯುತ್ತದೆ ಎನ್ನುವುದೇ ವಿಪರ್ಯಾಸ. ಇಂತಹ ವಿಶಿಷ್ಟ ಗಿಡಗಳನ್ನು ಲಾಲ್‌ಬಾಗ್‌ನಲ್ಲಿ ಕಾಣಬಹುದು.
-ಚಂದ್ರಶೇಖರ್‌, ಉಪ ನಿರ್ದೇಶಕ, ಲಾಲ್‌ಬಾಗ್‌.

Advertisement

* ಸಂಪತ್‌ ತರೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next