ಹರಿಯಾಣ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಗಮನ ಸೆಳೆಯುತ್ತಿರುವವರು ಯುವ ನಾಯಕ, ಜೆಜೆಪಿ ಮುಖ್ಯಸ್ಥ ದುಶ್ಯಂತ್ ಚೌಟಾಲ (31ವರ್ಷ). ಯುವ ಸಂಸದರಾಗಿ ಲೋಕಸಭೆ ಪ್ರವೇಶಿಸಿದ್ದ ಚೌಟಾಲ ಇದೀಗ ಹೊಸ ಪಕ್ಷ ಸ್ಥಾಪಿಸಿ ರಾಜಕೀಯದ ಅಖಾಡಕ್ಕಿಳಿದಿದ್ದಾರೆ.
ಯಾರು ಈ ಚೌಟಾಲ?
ಹರಿಯಾಣದ ಹಿಸಾರ್ ಜಿಲ್ಲೆಯ ಡಾರೋಲಿಯಲ್ಲಿ 1988ರ ಏಪ್ರಿಲ್ 3ರಂದು ದುಶ್ಯಂತ್ ಚೌಟಾಲ ಜನಿಸಿದ್ದರು. ತಂದೆ ಅಜಯ್ ಚೌಟಾಲ, ತಾಯಿ ನೈನಾ ಸಿಂಗ್ ಚೌಟಾಲ, ದುಶ್ಯಂತ್ ಓಂ ಪ್ರಕಾಶ್ ಚೌಟಾಲ ಅವರ ಮೊಮ್ಮಗ, ಹಿಸಾರ್ ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದ ದುಶ್ಯಂತ್ ಹಿಮಾಚಲ್ ಪ್ರದೇಶದಲ್ಲಿ ಕಾಲೇಜು ಶಿಕ್ಷಣ. ಬಿಎಸ್ಸಿ ಪದವೀಧರರಾಗಿರುವ ಅವರು ಕ್ಯಾಲಿಫೋರ್ನಿಯಾ ಯೂನಿರ್ವಸಿಟಿಯಲ್ಲಿ ಕಾನೂನು ಪದವಿ ಪಡೆದಿದ್ದರು. 2017ರಲ್ಲಿ ಮೇಘಾ ಚೌಟಾಲ ಜತೆ ವಿವಾಹವಾಗಿದ್ದರು.
2014ರಲ್ಲಿ ದುಶ್ಯಂತ್ ಚೌಟಾಲ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಸಂಸತ್ ನ ಅತೀ ಕಿರಿಯ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಲ್ಲದೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿತ್ತು. 2018ರಲ್ಲಿ ಇಂಡಿಯನ್ ನ್ಯಾಶನಲ್ ಲೋಕ್ ದಳ್ ಪಕ್ಷದಿಂದ ದುಶ್ಯಂತ್ ಅವರನ್ನು ಉಚ್ಚಾಟಿಸಲಾಗಿತ್ತು. 2018ರ ಡಿಸೆಂಬರ್ 9ರಂದು ದುಶ್ಯಂತ್ ಜನನಾಯಕ್ ಜನತಾ ಪಕ್ಷವನ್ನು ಸ್ಥಾಪಿಸಿದ್ದರು.