ವಾಷಿಂಗ್ಟನ್:ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ನೂರಾರು ದೇಶಗಳಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ನಿರ್ಬಂಧಗಳನ್ನು ತುಂಬಾ ಎಚ್ಚರಿಕೆಯಿಂದ ತೆರವುಗೊಳಿಸಬೇಕು. ಯಾಕೆಂದರೆ ಲಾಕ್ ಡೌನ್ ನಿರ್ಬಂಧ ತುಂಬಾ ಸಡಿಲಿಕೆಯಾದಲ್ಲಿ ಸೋಂಕು ಮತ್ತೆ ಉಲ್ಬಣಿಸುವ ಸಾಧ್ಯತೆ ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ತಜ್ಞರಾದ ಡಾ.ಮೈಕ್ ರಯಾನ್ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ದೇಶಗಳಲ್ಲಿ ಜಾರಿಯಲ್ಲಿರುವ ನಿರ್ಬಂಧಗಳನ್ನು ತೆರವುಗೊಳಿಸುವ ವೇಳೆ ತುಂಬಾ ಮುಖ್ಯವಾಗಿ ಗಮನಿಸಬೇಕಾದದ್ದು ಸೋಂಕಿನ ಪ್ರಮಾಣ ಹೆಚ್ಚಳವಾಗದಂತೆ ಕ್ರಮ ತೆಗೆದುಕೊಳ್ಳಬೇಕಾಗಿದೆ. ಇದರಲ್ಲಿಯೂ ವೈರಸ್ ಸಮುದಾಯದ ಹಂತಕ್ಕೆ ತಲುಪದಂತೆ ನೋಡಿಕೊಳ್ಳುವ ಜವಾಬ್ದಾರಿ ಹೆಚ್ಚಿದೆ ಎಂದು ತಿಳಿಸಿದ್ದಾರೆ.
ಲಾಕ್ ಡೌನ್ ನಿರ್ಬಂಧ ಸಡಿಲಿಕೆಯಾದರೂ ಕೂಡಾ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕಾಗಿದೆ. ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಶಂಕಿತ ಪ್ರಕರಣಗಳ ಪರೀಕ್ಷೆಯನ್ನು ಮುಂದುವರಿಸಲೇಬೇಕಾಗಿದೆ ಎಂದು ಮೈಕ್ ವಿವರಿಸಿದ್ದಾರೆ.
ಕೆಲವು ದೇಶಗಳು ಆರಂಭದಲ್ಲಿ ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಿಕೆ ಮಾಡಿದ್ದವು. ಅದರಲ್ಲಿ ಹಲವು ಆಫ್ರಿಕ ಮತ್ತು ಮಧ್ಯ ಏಷ್ಯಾದ ದೇಶಗಳು ಅಪಾಯಕಾರಿ ಬೆಳವಣಿಗೆಗೆ ಸಾಕ್ಷಿಯಾಗಿವೆ. ಸೂಡಾನ್, ದಕ್ಷಿಣ ಸೂಡಾನ್, ಸಿರಿಯಾ, ಯೆಮೆನ್, ಅಫ್ಘಾನಿಸ್ತಾನ, ಸಿಯೆರ್ರಾ ಲಿಯೋನ್, ಸೆಂಟ್ರಲ್ ಆಫ್ರಿಕಾ ರಿಪಬ್ಲಿಕ್ ಗಂಭೀರ ಪರಿಣಾಮ ಎದುರಿಸುತ್ತಿವೆ ಎಂದು ಮೈಕ್ ತಿಳಿಸಿದ್ದಾರೆ.
ಈ ನೂತನ ಕೋವಿಡ್ 19 ವೈರಸ್ ಚೀನಾದ ವುಹಾನ್ ಪ್ರಾಂತ್ಯದಲ್ಲಿ 2019ರ ಡಿಸೆಂಬರ್ ನಲ್ಲಿ ಮೊದಲು ಪತ್ತೆಯಾಗಿತ್ತು. ವೈರಸ್ ಹಾಗೂ ಅದರ ಹರಡುವಿಕೆ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ. ಇದೊಂದು ನೈಸರ್ಗಿಕವಾದ ವೈರಸ್ ಆಗಿದ್ದು, ಈ ಬಗ್ಗೆ ಸಂಶೋಧನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.