ಬಾಗಲಕೋಟೆ:ಸಮ್ಮಿಶ್ರ ಸರ್ಕಾರದಲ್ಲಿ ನನ್ನನ್ನು ಕಡೆಗಣಿಸಲಾಗಿದೆ ಅಂತ ಯಾರು ಹೇಳಿದ್ದು ಎಂದು ಮಾಜಿ ಮುಖ್ಯಮಂತ್ರಿ,ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಶಾಸಕರಾಗಿ ಪ್ರತಿನಿಧಿಸುತ್ತಿರುವ ಬಾದಾಮಿ ಕ್ಷೇತ್ರಕ್ಕೆ ಗೆಲುವಿನ ಬಳಿಕ ಗುರುವಾರ ಮೊದಲ ಭೇಟಿ ನೀಡಿದ ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬಾದಾಮಿಯ ಜನತೆಗೆ ನನ್ನ ಹೃತ್‌ಪೂರ್ವಕ ಕೃತಜ್ಞತೆಗಳು ಸಲ್ಲಿಸಿದರು. ಕ್ಷೇತ್ರ ಪ್ರವಾಸಿ ತಾಣವನ್ನಾಗಿ ಇನ್ನಷ್ಟು ಅಭಿವೃದ್ಧಿ ಪಡಿಸುವ ಗುರಿ ನನ್ನದು ಎಂದರು.
ನಾನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ.ನನ್ನನ್ನು ಕಡೆಗಣಿಸಲಾಗಿಲ್ಲ. ಸರ್ಕಾರ ರಚನೆ ವೇಳೆ ನನ್ನ ಸಲಹೆಗಳನ್ನೂ ಪಡೆಯಲಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನಗಳು ಸಾಮಾನ್ಯ . ನನ್ನ ಆಪ್ತರು, ಪರಮಾಪ್ತರು ಯಾರನ್ನೂ ಕಡೆಗಣಿಸಿಲ್ಲ ಮುಂದೆ ಸಚಿವ ಸಂಪುಟ ವಿಸ್ತರಣೆ ವೇಳೆ ಅವಕಾಶ ನೀಡುತ್ತೇವೆ ,ಸಾಮಾಜಿಕ ನ್ಯಾಯದ ಅಡಿ ಎಲ್ಲರಿಗೂ ನ್ಯಾಯ ಒದಗಿಸುತ್ತೇವೆ ಎಂದರು.
ಸಚಿವರಾದವರು ,ಸಚಿವ ಸ್ಥಾನ ಸಿಗದವರೂ ಎಲ್ಲರೂ ನನ್ನ ಆಪ್ತರು ಎಂದರು.
ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ. ಹೋಗುತ್ತೇನೆ ಎಂದು ಯಾರು ಹೇಳಿದವರು ಎಂದು ಪ್ರಶ್ನಿಸಿದರು.