Advertisement
ಕಳೆದ ಹಲವು ವರ್ಷಗಳಿಂದಲೂ ಫೇಸ್‌ಬುಕ್ ತಾನೇ ಒಂದು ಕ್ರಿಪ್ಟೋಕರೆನ್ಸಿಯನ್ನು ಅಂದರೆ ಬಿಟ್‌ಕಾಯ್ನ ರೀತಿ ಕರೆನ್ಸಿಯನ್ನು ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ ಎಂಬ ಸುದ್ದಿ ಹರಿದಾಡುತ್ತಲೇ ಇತ್ತು. ಅದಕ್ಕೆ ಗ್ಲೋಬಲ್ ಕಾಯ್ನ ಹಾಗೂ ಫೇಸ್‌ಬುಕ್ ಕಾಯ್ನ ಅಂತೆಲ್ಲ ಹೆಸರುಗಳೂ ಓಡಾಡಿದ್ದವು. ಕಳೆದ ವರ್ಷ ಕೇಂಬ್ರಿಜ್ ಅನಾಲಿಟಿಕಾ ಪ್ರಕರಣದ ನಡೆದ ಮೇಲಂತೂ ಕೆಲವರು ಫೇಸ್‌ಬುಕ್ ಕಾಯ್ನ ಅನ್ನೋದನ್ನು ತಮಾಷೆ ಮಾಡಿದ್ದೂ ಆಯಿತು. ಆದರೆ ಕೆಲವೇ ದಿನಗಳ ಹಿಂದೆ, ಕ್ರಿಪ್ಟೋಕರೆನ್ಸಿಯ ರೂಪುರೇಷೆಯನ್ನು ಫೇಸ್‌ಬುಕ್ ಕೆಲವೇ ದಿನಗಳ ಹಿಂದೆ ಬಿಡುಗಡೆ ಮಾಡಿದಾಗ ಈ ಊಹಾಪೋಹಕ್ಕೆ ಕೊನೆ ಬಿದ್ದಿದೆ. ಇದಕ್ಕೆ ಲಿಬ್ರಾ ಎಂದು ನಾಮಕರಣವನ್ನೂ ಮಾಡಲಾಗಿದೆ.
Related Articles
Advertisement
ಅದೇನೇ ಇದ್ದರೂ, ಫೇಸ್‌ಬುಕ್ ಈ ನಿರ್ಧಾರವೇ ಅತ್ಯಂತ ಕ್ರಾಂತಿಕಾರಿ. ವಿಶ್ವಾದ್ಯಂತ 220 ಕೋಟಿ ಜನರು ಫೇಸ್‌ಬುಕ್ ಬಳಸುತ್ತಿದ್ದಾರೆ. ಇದರಲ್ಲಿನ ಕೆಲವೇ ಕೋಟಿ ಜನರು ಲಿಬ್ರಾ ಬಳಸಲು ಆರಂಭಿಸಿದರೂ ಫೇಸ್‌ಬುಕ್‌ನ ಯತ್ನಕ್ಕೆ ಯಶಸ್ಸು ಸಿಗುತ್ತದೆ. ಬ್ಯಾಂಕ್ ಅಕೌಂಟ್ ಹೊಂದಿಲ್ಲದ ಕುಗ್ರಾಮದಲ್ಲಿ ಇರುವ ಜನರೂ ಇಂಟರ್‌ನೆಟ್ ಮೊಬೈಲಿಗೆ ಬಂದಾಕ್ಷಣ ಫೇಸ್‌ಬುಕ್ ಅಕೌಂಟ್ ಹೊಂದಿರುತ್ತಾರೆ. ಹೀಗಾಗಿ ಫ್ರೆಂಡಿÕಗೆ ತಕ್ಷಣ ಹಣ ಕಳುಹಿಸುವುದಕ್ಕೋ ಅಥವಾ ಇತರರಿಗೆ ಹಣ ಕಳುಹಿಸುವುದಕ್ಕೋ ಇದು ಅತ್ಯಂತ ಅನುಕೂಲಕರ ವಿಧಾನವಾಗಿ ಪರಿಣಮಿಸುವ ಕಾಲ ದೂರವಿಲ್ಲ.
ಲಿಬ್ರಾ ಮೇಲ್ನೋಟಕ್ಕೆ ಬಿಟ್‌ಕಾಯ್ನ ರೀತಿ ಕಂಡುಬಂದರೂ, ಅದರ ಬಳಕೆ ಪೇಪಾಲ್ ಅಥವಾ ಪೇಟಿಎಂ ರೀತಿ. ಅಂದರೆ ನಾವು ಗಳಿಸಿದ ರೂಪಾಯಿಯನ್ನೋ, ಡಾಲರನ್ನೋ ಲಿಬ್ರಾಗೆ ಪರಿವರ್ತಿಸುತ್ತೇವೆ. ಒಂದು ರೂಪಾಯಿಗೆ ಅಥವಾ ಒಂದು ಡಾಲರಿಗೆ ಒಂದೋ ಅಥವಾ ಹತ್ತೋ ಲಿಬ್ರಾ ಕೊಡುತ್ತಾರೆ. ಒಂದು ವೇಳೆ ನಮಗೆ ಲಿಬ್ರಾ ಬೇಡ, ರೂಪಾಯಿಯೇ ಬೇಕು ಎಂದರೆ ಅದನ್ನು ನಮ್ಮ ರೂಪಾಯಿಗೆ ಕನ್ವರ್ಟ್ ಮಾಡಿಕೊಂಡು ಬ್ಯಾಂಕಿನ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಪೇಪಾಲ್ ಅಥವಾ ಪೇಟಿಎಂ ಅಥವಾ ಇತರ ಡಿಜಿಟಲ್ ವಾಲೆಟ್‌ಗಳು ತಮ್ಮದೇ ಕರೆನ್ಸಿ ಹೊಂದಿರುವುದಿಲ್ಲ. ಅವು ನಮ್ಮ ರೂಪಾಯಿಯಲ್ಲೋ ಅಥವಾ ಅಮೆರಿಕದ ಡಾಲರಿನಲ್ಲೋ ಹಣವನ್ನು ಇಟ್ಟಿರುತ್ತವೆ.
ಆದರೆ ಇಲ್ಲಿ ಒಂದು ದೊಡ್ಡ ಆತಂಕವೂ ಇದೆ. ಹಲವು ದೇಶಗಳ ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕ್‌ಗಳು ಈ ಬಗ್ಗೆ ಆಕ್ಷೇಪ ಎತ್ತಲು ಆರಂಭಿಸಿವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಫ್ರಾನ್ಸ್ ನ ಹಣಕಾಸು ಸಚಿವ ಬ್ರುನೋ ಲೆ ಮಾಯೆÅ ಅಂತೂ,ದೇಶಿ ಕರೆನ್ಸಿಗೆ ಲಿಬ್ರಾ ಪರ್ಯಾಯವಾಗುವಂತಿಲ್ಲ. ಹೀಗಾಗಲು ನಾವು ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಇದೆಲ್ಲಕ್ಕಿಂತ ಮೊದಲು ಈ ಬಗ್ಗೆ ಮುಂದಿನ ತಿಂಗಳಲ್ಲಿ ಏಳು ಕೇಂದ್ರೀಯ ಬ್ಯಾಂಕ್‌ಗಳ ಮುಖ್ಯಸ್ಥರು ಸಭೆ ಸೇರಿ ಚರ್ಚೆ ನಡೆಸಲಿದ್ದಾರೆ. ಇನ್ನೊಂದೆಡೆ ಅಮೆರಿಕದ ಸಂಸತ್ತು ಕೂಡ ಮುಂದಿನ ತಿಂಗಳು ಈ ಬಗ್ಗೆ ಚರ್ಚೆ ನಡೆಸಲಿದೆ.
ಫೇಸ್‌ಬುಕ್‌ನ ಮೂಲ ಸಮಸ್ಯೆಯೇ ವಿಶ್ವಾಸದ್ದು. ಮೊನ್ನೆಯಷ್ಟೇ ಡೇಟಾ ಕಳ್ಳತನದ ವಿಚಾರದಲ್ಲಿ ಹಲವು ದೇಶಗಳ ಆಕ್ರೋಶವನ್ನು ಫೇಸ್‌ಬುಕ್ ಎದುರಿಸಬೇಕಾಯಿತು. ಇದರಲ್ಲಿ ಫೇಸ್‌ಬುಕ್‌ನ ನಿರ್ಲಕ್ಷ್ಯವೇ ಅತ್ಯಂತ ಟೀಕೆಗೆ ಒಳಗಾಗಿತ್ತು. ಭಾರತದಲ್ಲೂ ಇದೇ ವಿಚಾರಕ್ಕೆ ಫೇಸ್‌ಬುಕ್ ಭಾರಿ ಟೀಕೆಗೆ ಗುರಿಯಾಗಿತ್ತು. ಇಂಥಾ ಫೇಸ್‌ಬುಕ್ ತನ್ನದೇ ಕರೆನ್ಸಿಯನ್ನು ಜಾರಿಗೊಳಿಸಲು ಹೊರಟರೆ ಅದನ್ನು ಎಷ್ಟರ ಮಟ್ಟಿಗೆ ವಿಶ್ವಾಸಾರ್ಹ ಎಂದು ನಾವು ಪರಿಗಣಿಸಬೇಕು ಎಂಬ ಪ್ರಶ್ನೆ ಮೂಡುತ್ತದೆ. ಅದರಾಚೆಗೆ, ಯಾವುದೇ ಹೊಸ ಕರೆನ್ಸಿ ಚಾಲ್ತಿಗೆ ಬಂದರೂ ಅದು ಅಕ್ರಮ ವಹಿವಾಟಿಗೆ ಬಳಕೆಯಾಗುತ್ತದೆ ಎಂಬುದನ್ನು ಇತಿಹಾಸ ನಮಗೆ ಹೇಳುತ್ತದೆ. ಬಿಟ್‌ಕಾಯ್ನ ಅಂತೂ ಈಗಲೂ ಕಳ್ಳ ವ್ಯವಹಾರಗಳಿಗೇ ಮೀಸಲಾಗಿದೆ. ಹಲವು ದೇಶಗಳು ಇದೇ ಕಾರಣಕ್ಕೆ ಬಿಟ್‌ಕಾಯ್ನ ಅನ್ನು ಪರೋಕ್ಷವಾಗಿ ನಿಷೇಧಿಸಿದ್ದೂ ಆಗಿದೆ. ಉಗ್ರರಿಗೆ ಹಣಕಾಸು ವಹಿವಾಟು ನಡೆಸಲು, ಕಪ್ಪುಹಣ ವರ್ಗಾವಣೆಗೆ ಇದು ಬಳಕೆಯಾದರೆ ಅದನ್ನು ನಿಯಂತ್ರಿಸುವುದು ಹೇಗೆ ಎಂಬ ಪ್ರಶ್ನೆಗೆ ಸದ್ಯಕ್ಕೆ ಫೇಸ್‌ಬುಕ್ ಬಳಿಯೂ ಉತ್ತರವಿದ್ದಂತಿಲ್ಲ.
ಹೀಗಾಗಿ, 2020ರಲ್ಲಿ ಲಿಬ್ರಾ ಅಧಿಕೃತವಾಗಿ ಜಾರಿಗೆ ಬರುವುದಕ್ಕೂ ಮುನ್ನ ಫೇಸ್‌ಬುಕ್ ಉತ್ತರಿಸಬೇಕಾದ ಹಲವು ಪ್ರಶ್ನೆಗಳಿವೆ. ಒಂದು ಕರೆನ್ಸಿಯನ್ನು ಕಾರ್ಪೊರೇಟ್ ಕಂಪನಿಗಳ ಒಂದು ಸಮೂಹ ನಿಯಂತ್ರಿಸಬಹುದೇ? ಯಾಕೆಂದರೆ, ಎಲ್ಲ ದೇಶಗಳಲ್ಲೂ ನಿಯೋಜಿತ ಹಾಗೂ ಪರಿಣಿತ ಆರ್ಥಿಕ ತಜ್ಞರು ಕೇಂದ್ರೀಯ ಮಂಡಳಿಯಲ್ಲಿ ಕರೆನ್ಸಿಯ ಮೌಲ್ಯ ಮತ್ತು ವಹಿವಾಟನ್ನು ನಿರ್ಧರಿಸುತ್ತವೆ. ಭಾರತದಲ್ಲಿ ಆರ್‌ಬಿಐ ಈ ಕೆಲಸವನ್ನು ಮಾಡಿದರೆ, ಅಮೆರಿಕದಲ್ಲಿ ಫೆಡ್ ಈ ಕೆಲಸ ಮಾಡುತ್ತವೆ. ಆರ್‌ಬಿಐ ರೂಪಾಯಿಯ ವಿನಿಮಯ ದರ ಸೇರಿದಂತೆ ಎಲ್ಲ ನಿರ್ವಹಣೆಯನ್ನೂ ನಿಷ್ಪಕ್ಷಪಾತವಾಗಿ ಮಾಡುತ್ತದೆ. ಯಾಕೆಂದರೆ, ಆರ್‌ಬಿಐ ಲಾಭೋದ್ದೇಶದ ಸಂಸ್ಥೆಯಲ್ಲ. ಆದರೆ ಫೇಸ್‌ಬುಕ್ ಹಾಗಲ್ಲ. ಫೇಸ್‌ಬುಕ್‌ಗೆ ಕಂಪನಿಯ ಮೌಲ್ಯದ ಬಗ್ಗೆ ಚಿಂತೆ ಇರುತ್ತದೆ. ಇದು ಕರೆನ್ಸಿಯ ಮೇಲೆ ಪರಿಣಾಮ ಉಂಟು ಮಾಡಬಹುದು. ಅಷ್ಟಕ್ಕೂ, ಲಿಬ್ರಾ ನಿರ್ವಹಣೆ ಮಾಡುವ ಫೇಸ್‌ಬುಕ್ ಸಿಇಒ ಗಳನ್ನು ಜನರು ಆಯ್ಕೆ ಮಾಡಿರುವದಿಲ್ಲ.
ಇದೆಲ್ಲಕ್ಕಿಂತ ಮುಖ್ಯವಾಗಿ ಫೇಸ್‌ಬುಕ್‌ಗೆ ಈ ಕರೆನ್ಸಿಯಿಂದ ಯಾವ ಲಾಭವಿದೆ? ಸದ್ಯಕ್ಕೆ ಈ ಪ್ರಶ್ನೆಗೆ ಉತ್ತರವಿಲ್ಲ. ಯಾಕೆಂದರೆ ಲಿಬ್ರಾ ಅಸೋಸಿಯೇಶನ್‌ನಲ್ಲಿ ಫೇಸ್‌ಬುಕ್ ಕೇವಲ ಒಂದು ಮತದ ಸದಸ್ಯನಷ್ಟೇ. ಹೀಗಾಗಿ ಈ ಕರೆನ್ಸಿಯ ವಿನ್ಯಾಸ, ಸಂಶೋಧನೆಗೆ ಮಾಡಿದ ವೆಚ್ಚವನ್ನು ಫೇಸ್‌ಬುಕ್ ಯಾವ ಮೂಲದಿಂದ ವಸೂಲಿ ಮಾಡಿಕೊಳ್ಳುತ್ತದೆಯೋ ಗೊತ್ತಿಲ್ಲ. ಸದ್ಯದ ಮಟ್ಟಿಗೆ ಇತ್ತೀಚಿನ ಹಗರಣಗಳಿಂದ ಫೇಸ್‌ಬುಕ್ ಕಳೆದುಕೊಂಡ ವಿಶ್ವಾಸಾರ್ಹತೆಯನ್ನು ಗಳಿಸುವುದೊಂದೇ ಫೇಸ್‌ಬುಕ್‌ನ ಧ್ಯೇಯ. ಸಾಮಾನ್ಯವಾಗಿ ಬ್ಲಾಕ್‌ಚೈನ್ ಟೆಕ್ನಾಲಜಿಯ ವೈಶಿಷ್ಟéವೇ ವಿಶ್ವಾಸಾರ್ಹತೆಯಾಗಿದ್ದು, ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಮಧ್ಯಪ್ರವೇಶವಿಲ್ಲದೇ ಒಂದು ವಹಿವಾಟನ್ನು ಸುರಕ್ಷಿತವಾಗಿ ನಡೆಸುವ ವಿಶಿಷ್ಟ ವ್ಯವಸ್ಥೆ ಇದರಲ್ಲಿದೆ. ಒಂದು ವೇಳೆ ಫೇಸ್‌ಬುಕ್ ಯಶಸ್ವಿಯಾಗಿ ಈ ತಂತ್ರಜ್ಞಾನವನ್ನು ಬಳಸಿಕೊಂಡು ಲಿಬ್ರಾವನ್ನು ಒಂದು ಕರೆನ್ಸಿಯನ್ನಾಗಿ ಜನಪ್ರಿಯಗೊಳಿಸಿದರೆ ಈವರೆಗೆ ಕಳೆದುಕೊಂಡಿದ್ದ ವಿಶ್ವಾಸಾರ್ಹತೆಯನ್ನು ಗಳಿಸಬಹುದು. ಆದರೆ ಆ ದಾರಿಯಲ್ಲಿ ಹಲವು ಅಡೆ ತಡೆಗಳಿವೆ. ತಮ್ಮ ನಿಯಂತ್ರಣದಲ್ಲಿಲ್ಲದ ಯಾವುದೇ ಕರೆನ್ಸಿ ವ್ಯವಸ್ಥೆಯನ್ನೂ ಯಾವ ದೇಶವೂ ಸುಲಭವಾಗಿ ಸಮ್ಮತಿಸುವುದಿಲ್ಲ. ಹೀಗಾಗಿ ಇದನ್ನು ಮಾನ್ಯವಾದ ಒಂದು ಹಣಕಾಸು ವ್ಯವಸ್ಥೆಯನ್ನಾಗಿ ರೂಪಿಸುವುದು ಫೇಸ್‌ಬುಕ್‌ಗೆ ಸವಾಲು. ಒಂದು ವೇಳೆ ಅಡ್ಡಿಯನ್ನು ದಾಟಿ ಕರೆನ್ಸಿ ನಮ್ಮ ಮೊಬೈಲಿಗೆ ಬಂದರೂ, ಅದನ್ನು ಅಕ್ರಮ ವಹಿವಾಟಿಗೆ ಬಳಸುವುದನ್ನು ತಡೆದು ವಿಶ್ವಾಸಾರ್ಹ ಕರೆನ್ಸಿಯನ್ನಾಗಿ ರೂಪಿಸುವ ದಾರಿಯಲ್ಲಿ ಫೇಸ್‌ಬುಕ್ ಮತ್ತಿನ್ನೇನನ್ನು ಕಳೆದುಕೊಳ್ಳುತ್ತದೆಯೋ ಗೊತ್ತಿಲ್ಲ.
-ಕೃಷ್ಣ ಭಟ್