Advertisement

ಆ ಸರ್‌ಪ್ರೈಸ್‌ ಗಿಫ್ಟ್ ಕಳುಹಿಸಿದವರು ಯಾರು ಅಂದರೆ…

10:17 AM Dec 11, 2019 | mahesh |

ವರ್ಷದ ಹಿಂದೆ ನಡೆದ ಘಟನೆ. ತರಗತಿಯಲ್ಲಿ ಪಾಠ ಮಾಡುತ್ತಿದ್ದಾಗ ಪೋಸ್ಟ್‌ ಮ್ಯಾನ್‌ ಬಂದು, “ಸಾರ್‌, ನಿಮಗೊಂದು ಪಾರ್ಸೆಲ್‌ ಬಂದಿದೆ’ ಎಂದರು. ನಾನೊಬ್ಬನೆ ಪುಸ್ತಕ ಪ್ರೇಮಿಯಾಗಿರುವುದರಿಂದ ಒಳ್ಳೊಳ್ಳೆಯ ಪುಸ್ತಕಗಳು ಸಿಗುವ ಕಡೆಗೆಲ್ಲ ಆರ್ಡರ್‌ ಮಾಡುತ್ತಿರುತ್ತೇನೆ. ಹಾಗಾಗಿ, ನನಗೆ ಪಾರ್ಸೆಲ್‌ ಬರುವುದು ಹೊಸದೇನಲ್ಲ. ಜೊತೆಗೆ ಬರಹಗಾರನೂ ಆಗಿರುವುದರಿಂದ, ನನ್ನ ಬರಹಗಳು ಪ್ರಕಟವಾದಾಗಲೆಲ್ಲ ಆಯಾ ನಿಯತಕಾಲಿಕೆಗಳು ನನಗೆ ಪೋಸ್ಟೆಲ್‌ನಲ್ಲಿ ಬರುವುದೂ ಸಾಮಾನ್ಯವಾಗಿತ್ತು. ಅದರಲ್ಲಿ ಅಚ್ಚರಿಯೇನೂ ಇರಲಿಲ್ಲ. ಆದರೆ ಆ ದಿನ ಪೋಸ್ಟ್‌ ಮ್ಯಾನ್‌ ತಂದುಕೊಟ್ಟದ್ದು ವಿಶೇಷವಾಗಿತ್ತು. ಅದು ಸಾಮಾನ್ಯವಾಗಿ ಬರುತ್ತಿದ್ದ ಪಾರ್ಸೆಲ್‌ ತುಂಬಾ ದೊಡ್ಡದಾಗಿತ್ತು.

Advertisement

ಯಾವುದೇ ಪಾರ್ಸೆಲ್‌ ಬಂದರೂ ಮೊದಲು ಎಲ್ಲಿಂದ ಬಂದಿದೆಯೆಂದು ತಿಳಿದುಕೊಳ್ಳುವುದು ನನ್ನ ಅಭ್ಯಾಸ. ಈ ಪಾರ್ಸೆಲ್‌ನಲ್ಲಿ ಕಳುಹಿಸಿದವರ ಹೆಸರಾಗಲೀ, ವಿಳಾಸವಾಗಲೀ ಇರಲಿಲ್ಲ. ಇದರಿಂದ ಇದರ ಬಗ್ಗೆ ಆಸಕ್ತಿ ಹೆಚ್ಚಿತು. ಅದರಲ್ಲಿ ಏನಿರಬಹುದು, ಪೋಸ್ಟ್‌ ಮ್ಯಾನರಿಂದ ಪಡೆದು, ಬದಿಗಿರಿಸಿ, ಪಾರ್ಸೆಲ್‌ ಏನಾಗಿರಬಹುದು, ಯಾರು ಕಳಿಸಿರಬಹುದು ಎಂಬ ಆಲೋಚನೆಯಲ್ಲಿಯೇ ತರಗತಿ
ಮುಂದುವರೆಸಿದೆ.

ಸಂಜೆ ಮನೆಗೆ ಬಂದವನೇ ಕುತೂಹಲದಿಂದ ಆ ಪಾರ್ಸೆಲ್‌ ಬಿಚ್ಚಿ ನೋಡಿದರೆ ಆಶ್ಚರ್ಯ ಕಾದಿತ್ತು. ಒಳಗೆಲ್ಲ ಪೇಪರ್‌, ಥರ್ಮಾಕೋಲಿನಿಂದ ಆವೃತವಾಗಿದ್ದ ನನ್ನ ಬಾಲ್ಯದಿಂದ ಇಲ್ಲಿಯವರೆಗಿನ ಜೀವನವನ್ನು ನೆನಪಿಸುವ ನನ್ನ ಚಿತ್ರಗಳೇ ತುಂಬಿರುವ ದೊಡ್ಡದೊಂದು ಪೋಟೋ ಇತ್ತು. ಅದನ್ನು ನೋಡಿ ಸಿಕ್ಕಾಪಟ್ಟೆ ಖುಷಿಯಾಯಿತು. ಈಗ ಕೈಯಲ್ಲಿ ಸದಾ ಮೊಬೈಲ್‌ ಇರುವುದರಿಂದ ಸೆಲ್ಫಿ ತೆಗೆದುಕೊಳ್ಳುವುದು, ನಮ್ಮ ಫೋಟೋಗಳನ್ನು ತೆಗೆದುಕೊಳ್ಳುವುದು ವಿಶೇಷವೇನಲ್ಲ. ಆದರೆ, ಕೆಲವು ವರ್ಷಗಳ ಹಿಂದೆ ಸ್ಟುಡಿಯೋಗೆ ಹೋಗಿಯೋ ಅಥವಾ ಮದುವೆ ಮನೆಗಳಲ್ಲಿ ಫೋಟೋಗ್ರಾಫ‌ರ್‌ ಎದುರು ಹಲ್ಲುಕಿರಿದು ನಿಂತೋ ಫೋಟೋ ತೆಗೆಸಿಕೊಂಡು ಆ ಮದುವೆಯ ಆಲ್ಬಮ್ಮಿನಲ್ಲಿ ನಮ್ಮ ನಮ್ಮ ಫೋಟೋ ನೋಡಿ, ಖುಷಿಪಟ್ಟ ನೆನಪು. ಇನ್ನೂ ಹಿಂದೆ ಹೋದರೆ ಆಗಿನ ನನ್ನ ಬಾಲ್ಯದ ಫೋಟೋಗಳೊಂದೂ ಇಂದು ನನ್ನಲ್ಲಿಲ್ಲ. ಪಾರ್ಸೆಲ್‌ನಲ್ಲಿ ಬಂದ ಈ ಫೋಟೋ ಆ ಎಲ್ಲ ಚಿತ್ರಗಳನ್ನೂ ತೆರೆದಿಟ್ಟು, ನನ್ನ ಇಡೀ ಜೀವನವನ್ನೊಮ್ಮೆ ಮೆಲುಕುಹಾಕುವಂತೆ ಮಾಡಿತ್ತು.

ಒಳಗೆ ಮಡದಿ ಏನೋ ಮಾಡುತ್ತಿದ್ದಳು. ತುಂಬಾ ಸಂತೋಷದಿಂದ, “ಇಲ್ನೋಡು, ಯಾರು ಅಂತ ಗೊತ್ತಾಗ್ತಿಲ್ಲ. ನಂಗೊಂದು ಫೋಟೋ ಗಿಫ್ಟ್ ಕಳುಹಿಸಿದ್ದಾರೆ. ಎಷ್ಟು ಚೆನ್ನಾಗಿದೆ ‘ ಅಂದೆ. ಅವಳಿಗೂ ಖುಷಿಯಾಗೋಯ್ತು. ಆದರೂ, ನನ್ನ ಈ ಎಲ್ಲಾ ಫೋಟೋಗಳು ಯಾರಿಗೆ ಸಿಕ್ಕಿದವು. ನಾನು ಫೇಸ್‌ಬಕ್‌ನಲ್ಲೂ ಅಪ್‌ಲೋಡ್‌ ಮಾಡಿಲ್ಲ ಎಂದೆ. ಬೆಳಗ್ಗೆಯಿಂದ ಸುಮ್ಮನಿದ್ದ ಹೆಂಡತಿ “ವಿಷ್‌ ಯು ಮೆನಿ ಮೋರ್‌ ಹ್ಯಾಪಿ ರಿಟರ್ನ್ಸ್ ಆಫ್ ದ ಡೇ ಕಣ್ರೀ’ ಎಂದಾಗ ಬೆಳಗ್ಗೆಯಿಂದ ಶಾಲೆಯ ಮಕ್ಕಳೆಲ್ಲ ನನ್ನ ಜನ್ಮದಿನವನ್ನು ತಿಳಿದುಕೊಂಡು ಶುಭ ಹಾರೈಸಿದರೂ ನನ್ನ ಪತ್ನಿ ಯಾಕೆ ವಿಷ್‌ ಮಾಡಿಲ್ಲ ಎಂದು ಸ್ವಲ್ಪ ಬೇಜಾರುಗೊಂಡಿದ್ದೆ. ಈಗ ನನ್ನ ಜನ್ಮದಿನದ ಶುಭಾಶಯ ಕೋರಿದ ತಕ್ಷಣ ನನಗೆ ಅರ್ಥವಾಯ್ತು, ಬಂದಿರುವ ಈ ಪಾರ್ಸೆಲ್‌ ಹಿಂದಿರುವ ವ್ಯಕ್ತಿ ಯಾರೆಂದು. ಆ ದಿನಕ್ಕಿಂತ ಒಂದು ವಾರದ ಹಿಂದೆ ಎರಡು ದಿನಗಳ ಮಟ್ಟಿಗೆ ತವರು ಮನೆಗೆ ಹೋಗಿದ್ದ ನನ್ನ ಮಡದಿ, ಗುಟ್ಟಾಗಿ ನನ್ನ ಹಳೆಯ ಫೋಟೋಗಳನ್ನೆಲ್ಲ ಎಲ್ಲೆಲ್ಲಿಂದಲೋ ಹುಡುಕಿ ತೆಗೆದು, ಮದುವೆಯಾದ ಮೊದಲ ವರ್ಷದ ನನ್ನ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಉಡುಗೊರೆಯಾಗಿ, ತುಂಬಾ ಗುಟ್ಟಾಗಿ, ಒಂಚೂರೂ ಗೊತ್ತಾಗದಂತೆ ನನ್ನೊಟ್ಟಿಗೇ ಇದ್ದು, ಊರಿಗೆ ಹೋದಾಗಲೇ ಫೋಸ್ಟ್‌ ಮಾಡಿದ್ದು ಸರಿಯಾಗಿ ನನ್ನ ಜನ್ಮದಿನದಂದೇ ನನಗೆ ಅದು ತಲುಪಿತ್ತು. ಇದು ಬದುಕಿನ ಮರೆಯಲಾಗದ ನೆನಪು.

-ರಾಘವೇಂದ್ರ ಈ ಹೊರಬೈಲು

Advertisement
Advertisement

Udayavani is now on Telegram. Click here to join our channel and stay updated with the latest news.

Next