Advertisement
ತಾಲೂಕಿನಲ್ಲಿ ಒಟ್ಟು 1,06,795 ಪುರುಷರು, 1,03,811 ಮಹಿಳೆಯರು ಒಟ್ಟು 2,10,606 ಮತದಾರರಿದ್ದಾರೆ. 2013ರಲ್ಲಿ 1,82911 ಒಟ್ಟು ಮತದಾರರಿದ್ದು ಈ ಬಾರಿ ಶೇ.15.15ರಷ್ಟು ಏರಿಕೆಯಾಗಿದೆ. ಕಳೆದ ಚುನಾವಣೆಗಿಂತಲೂ ಮತದಾರರ ಆಧಾರದ ಮೇಲೆ 40 ಮತಗಟ್ಟೆಗಳನ್ನು ಹೆಚ್ಚಾಗಿ ಸ್ಥಾಪಿಸಲಾಗಿದ್ದು 142 ಸೂಕ್ಷ್ಮ, 58 ಅತಿಸೂಕ್ಷ್ಮ, 86 ಸಾಮಾನ್ಯ ಸೇರಿ ಒಟ್ಟು 286 ಮತಕೇಂದ್ರ ಹೊಂದಿದೆ.
Related Articles
Advertisement
ಹಿಂದಿನ ಚುನಾವಣೆ ನಡೆದ ಸಂದರ್ಭಕ್ಕೂ ಪ್ರಸ್ತುತ ಸನ್ನಿವೇಶಕ್ಕೂ ಬಹಳಷ್ಟು ವ್ಯತ್ಯಾಸಗಳು ಕಂಡುಬರುತ್ತಿದೆ. ತಾಲೂಕಿನಲ್ಲಿ ಪ್ರತಿ ಹಂತದಲ್ಲೂ ರಾಜಕೀಯದ ವಾಸನೆ ಪರೋಕ್ಷವಾಗಿ ಕಾಣುತ್ತಿದೆ. ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವುದು ಗ್ರಾಮಸ್ಥರಿಗೆ ಉಚಿತವಾಗಿ ತಮ್ಮ ಹೆಸರುಳ್ಳ ವಾಟರ್ ಕ್ಯಾನ್‌ಗಳನ್ನು ನೀಡುವುದು ಸಾಮಾನ್ಯವಾಗುತ್ತಿದೆ. ಮತ್ತೂಂದೆಡೆ ಬಹಳಷ್ಟು ಸಾರ್ವಜನಿಕ ಸಮಾರಂಭಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಸೀರೆಗಳನ್ನು ವಿತರಿಸಲಾಗುತ್ತಿದೆ.
ಪಕ್ಷಾಂತರ: ಕಳೆದ ಸುಮಾರು 6 ತಿಂಗಳುಗಳಿಂದಲೂ ಪಕ್ಷಾಂತರ ನಿರಂತರವಾಗಿ ನಡೆಯುತ್ತಿದ್ದು ಕೆಲವು ಸಂದರ್ಭಗಳಲ್ಲಿ ಹಣದ ಆಮಿಷಗಳಿಗೆ ಒಳಗಾಗಿರುವ ಸಂಶಯ ಬರುತ್ತಿದೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಜಿಗಿಯುತ್ತಿರುವವರೇ ಹೆಚ್ಚಾಗಿದ್ದು ಚುನಾವಣೆ ಘೋಷಣೆ ನಂತರ ಇನ್ನೂ ಹೆಚ್ಚಿನ ಪ್ರಭಾವಶಾಲಿ ಮುಖಂಡರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹಾಲಿ ಶಾಸಕ ಕಾಂಗ್ರೆಸ್‌ನ ಎನ್. ನಾಗರಾಜ್ ಹಾಗೂ ಬಿಜೆಪಿಯ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ನಡುವೆ ನೇರ ಸ್ಪರ್ಧೆ ಏರ್ಪಡಬಹುದೆಂದು ಊಹಿಸಲಾಗಿದೆ. ಇದೀಗ ಬಚ್ಚೇಗೌಡರ ಮಗ ಶರತ್ ಬಚ್ಚೇಗೌಡ ಅಭ್ಯರ್ಥಿಯೆಂದು ಘೋಷಣೆ ಯಾಗಿರುವುದು ಎರಡೂ ಪಕ್ಷಗಳಲ್ಲೂ ಸಂಚಲನ ಮೂಡಿಸಿದೆ. ಶರತ್ ಬಚ್ಚೇಗೌಡ ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಘಟನೆಯಲ್ಲಿ ನಿರತವಾಗಿ ದ್ದಾರೆ. ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ನ ಮುಖಂಡರು, ಕಾರ್ಯಕರ್ತರು ಬಹಳಷ್ಟು ಗ್ರಾಮಗಳಲ್ಲಿ, ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.
ಜೆಡಿಎಸ್‌ನಲ್ಲಿ ಗೊಂದಲ: ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ತಾಲೂಕಿನ ವಿ.ಶ್ರೀಧರ್ ಈ ಬಾರಿಯೂ ಅಭ್ಯರ್ಥಿಯೆಂದು ಘೋಷಿಸಿಲ್ಲವಾದರೂ ಪಟ್ಟಣ ಸಮೀಪದ ಬಿದರಹಳ್ಳಿ ಹೋಬಳಿಯ ಜಿಂಕತಿಮ್ಮನ ಹಳ್ಳಿಯ ಕೃಷಮೂರ್ತಿ ಪಟೇಲ್ ಈಗಾಗಲೇ ತಾನೇ ಅಭ್ಯರ್ಥಿಯೆಂದು ಪ್ರಚಾರ ಕಾರ್ಯ ಕೈಗೊಂಡಿರುವ ಕಾರಣ ಗೊಂದಲ ನಿರ್ಮಾಣಗೊಂಡಿದೆ. ಈ ಬಾರಿ ಗರಿಷ್ಠ 5 ಅಭ್ಯರ್ಥಿಗಳು ಸ್ಪರ್ಧಿಸಬಹುದೆಂದು ನಿರೀಕ್ಷಿಸಲಾಗಿದೆ.
ಸಾಲ ತೀರಿಸಿದರೆ ಮತ!ತಾಲೂಕಿನಲ್ಲಿ ಬಹಳಷ್ಟು ರೈತರು ಮಾಡಿಕೊಂಡಿರುವ ಸಾಲವನ್ನು ಯಾವ ಪಕ್ಷದವರು ತೀರಿಸುತ್ತಾರೋ ಅವರಿಗೆ ಮತ ಎಂದು ಷರತ್ತು ವಿಧಿಸುತ್ತಿದ್ದಾರೆ. ಇದರಿಂದ ರಾಜಕೀಯ ಪಕ್ಷದ ಮುಖಂಡರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಮತ್ತೂಂದೆಡೆ ಅಕ್ರಮ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿರುವವರು ಇದೇ ರಾಗ ಹಾಡುತ್ತಿದ್ದು, ಈಗಾಗಲೇ ಒಂದು ರಾಜಕೀಯ ಪಕ್ಷದ ಮುಖಂಡ ರೊಬ್ಬರು ನಂದಗುಡಿ ಹೋಬಳಿ ಯಲ್ಲಿ ಸುಮಾರು 2.58 ಲಕ್ಷ ರೂ.ಗಳ ಶುಲ್ಕ ಪಾವತಿಸಿರುವುದನ್ನು ಅರಿತುಕೊಂಡಿ ರುವ ಇತರೆ ಹೋಬಳಿಗಳವರು ಇದೇ ರೀತಿ ಆಗಬಹುದೆಂದು ನಿರೀಕ್ಷಿಸಿ ಶುಲ್ಕ ಪಾವತಿಸಲು ನಿರಾಸಕ್ತಿ ತೋರುತ್ತಿದ್ದಾರೆ. ರಾಜಕಾರಣಿಗಳು ಮತ ಪಡೆಯಲು ಚಾಪೆ ಕೆಳಗೆ ನುಸುಳಿದರೆ ಮತದಾರರು ಇವರನ್ನೂ ಮೀರಿ ತಮ್ಮ ಆಕಾಂಕ್ಷೆಗಳನ್ನು ಈಡೇರಿಸುವ ಷರತ್ತುಗಳನ್ನು ಹಾಕುವ ಮೂಲಕ ರಂಗೋಲಿ ಕೆಳಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ.