Advertisement
ಘಿಏನಿದು ಆರ್21/ಮ್ಯಾಟ್ರಿಕ್ಸ್-ಎಂ ?ಮಲೇರಿಯಾ ರೋಗಪೀಡಿತರ ಚಿಕಿತ್ಸೆಗಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಜೆನ್ನರ್ ಇನ್‌ಸ್ಟಿಟ್ಯೂಟ್ ಹಾಗೂ ಭಾರತದ ಸೀರಮ್ ಇನ್‌ಸ್ಟಿಟ್ಯೂಟ್ ಜತೆಗೂಡಿ ಯುರೋಪಿಯನ್ ಹಾಗೂ ಅಭಿವೃದ್ಧಿ ಹೊಂದಿದ ದೇಶಗಳ ಕ್ಲಿನಿಕಲ್ ಟ್ರಯಲ್ ಪಾರ್ಟ್ನನರ್‌ಶಿಪ್, ದಿ ವೆಲ್‌ಕಮ್ ಟ್ರಸ್ಟ್ ಹಾಗೂ ಯುರೋಪಿಯನ್ ಇನ್‌ವೆಸ್ಟ್ ಮೆಂಟ್ ಬ್ಯಾಂಕ್‌ನ ಬೆಂಬಲದೊಂದಿಗೆ ಈ ಲಸಿಕೆಯನ್ನು ಸಂಶೋಧಿಸಿ ಅಭಿವೃದ್ಧಿಪಡಿಸಿದೆ. ಪ್ರಸ್ತುತ ವಿವಿಧ ಆರೋಗ್ಯ ಸಂಸ್ಥೆಗಳು ಈ ಲಸಿಕೆಯನ್ನು ಪರಿಶೀಲಿಸುತ್ತಿವೆ. ಈಗ ವಿಶ್ವ ಆರೋಗ್ಯ ಸಂಸ್ಥೆಯು ಆರ್21/ಮ್ಯಾಟ್ರಿಕ್ಸ್-ಎಂ ಲಸಿಕೆಯ ಅಗತ್ಯತೆ, ಸುರಕ್ಷತೆ ಹಾಗೂ ಪರಿಣಾಮವನ್ನು ಪರೀಕ್ಷಿಸಿ ತನ್ನ ಒಪ್ಪಿಗೆ ನೀಡಿದೆ. ಡಬ್ಲ್ಯುಎಚ್‌ಒನ ಈ ನಿರ್ಧಾರ, ತಯಾರಕರಿಂದ ಲಸಿಕೆಯನ್ನು ಖರೀದಿಸಲು ಜಾಗತಿಕ ಲಸಿಕೆ ಒಕ್ಕೂಟ ಹಾಗೂ ಯುನಿಸೆಫ್ಗೆ ಅನುವು ಮಾಡಿಕೊಡಲಿದೆ.
ಎರಡು ವರ್ಷಗಳ ಹಿಂದೆ ಅಭಿವೃದ್ಧಿ ಪಡಿಸಿದ ಆರ್‌ಟಿಎಸ್, ಎಸ್ ಲಸಿಕೆಗೆ ಬೇಡಿಕೆ ಹೆಚ್ಚಿದ್ದು ಇದು ಇದರ ಪೂರೈಕೆಯ ಪ್ರಮಾಣವನ್ನು ಮೀರಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ. ಹಾಗಾಗಿ ಲಸಿಕೆಯ ಬೇಡಿಕೆಯನ್ನು ಪೂರೈಸಲು ಹೊಸ ಲಸಿಕೆಗೆ ಅನುಮತಿಯನ್ನು ನೀಡಲಾಗಿದೆ. ಜತೆಗೆ ಈ ಲಸಿಕೆಯು 10ರಲ್ಲಿ 4ಜನರನ್ನು ಮಲೇರಿಯಾದಿಂದ ರಕ್ಷಿಸಬಲ್ಲದು ಎಂದೂ ಅದು ಹೇಳಿದೆ. ಆಫ್ರಿಕಾದ ರಾಷ್ಟ್ರಗಳ ಸಹಿತ ಪ್ರಪಂಚದ ಅರ್ಧಕ್ಕೂ ಹೆಚ್ಚಿನ ಜನಸಂಖ್ಯೆಯು ಮಲೇರಿಯಾ ಸೋಂಕಿತ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ. ಲಸಿಕೆ ಪೂರೈಸಲು ಡಬ್ಲ್ಯುಎಚ್‌ಒ ಹರಸಾಹಸ
2021ರಲ್ಲಿ ಡಬ್ಲ್ಯುಎಚ್‌ಒ ಮಲೇರಿಯಾದ ಮೊದಲ ಲಸಿಕೆ ಆರ್‌ಟಿಎಸ್, ಎಸ್/ಎಎಸ್01 ಕ್ಕೆ ಒಪ್ಪಿಗೆ ಸೂಚಿಸಿತ್ತು. ಇದೀಗ ಪ್ರಪಂಚದಾದ್ಯಂತ ಲಸಿಕೆ ಲಭ್ಯವಾಗುವಂತೆ ಡಬ್ಲ್ಯುಎಚ್‌ಒ ಕಾರ್ಯ ನಿರ್ವಹಿಸುತ್ತಿದೆ. ಡಬ್ಲ್ಯುಎಚ್‌ಒನ ಪ್ರಕಾರ ಎರಡೂ ಲಸಿಕೆಗಳು ತಮ್ಮ ಪರಿಣಾಮದ ಪ್ರಮಾಣದಲ್ಲಿ ಸಮಾನಾಂತರವಾಗಿದೆ. ಆದರೆ ಆರ್21 ಲಸಿಕೆಯನ್ನು ತಯಾರಿಸಲು ದೊಡ್ಡ ಪ್ರಮಾಣದ ಬೆಂಬಲ ಹಾಗೂ ಸಾಮರ್ಥ್ಯದ ಅಗತ್ಯವಿದೆ. ಭಾರತದ ಸೀರಮ್ ಇನ್‌ಸ್ಟಿಟ್ಯೂಟ್ ಈಗಾಗಲೇ ತನ್ನ ಉತ್ಪಾದನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದು ಪ್ರತೀ ವರ್ಷ 100 ಮಿಲಿಯನ್ ಡೋಸ್‌ಗಳಷ್ಟು ಲಸಿಕೆ ತಯಾರಿಸಲಿದೆ.
Related Articles
2024ರ ಮಧ್ಯ ಭಾಗದಲ್ಲಿ ಈ ಲಸಿಕೆ ಜಾಗತಿಕ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಸದ್ಯದ ಅಂದಾಜಿನ ಪ್ರಕಾರ ಈ ಲಸಿಕೆಯ ಬೆಲೆ 166-333ರೂ.ಗಳಾಗಿರಬಹುದು ಎಂದು ಡಬ್ಲ್ಯುಎಚ್‌ಒ ಹೇಳಿದೆ.
Advertisement
ಆಫ್ರಿಕಾದ ದೇಶಗಳಲ್ಲಿ ಮಲೇರಿಯಾ ಅತೀ ಹೆಚ್ಚಾಗಿ ಜನರನ್ನು ಬಲಿ ತೆಗೆದುಕೊಳ್ಳುತ್ತಿದ್ದು, ಆದ್ಯತೆಯ ಮೇಲೆ ಮೊದಲು ಆಫ್ರಿಕನ್ ದೇಶಗಳಿಗೆ ಈ ಲಸಿಕೆ ಪೂರೈಕೆಯಾಗಲಿದೆ. ಅನಂತರದ ದಿನಗಳಲ್ಲಿ ಉಳಿದ ದೇಶಗಳಲ್ಲಿ ಲಭ್ಯವಾಗಲಿದೆ.
ವಿಧಾತ್ರಿ ಭಟ್, ಉಪ್ಪುಂದ