Advertisement

ಮೊದಲಗಟ್ಟಿ ಸಂತ್ರಸ್ತರ ಗೋಳು ಕೇಳ್ಳೋರ್ಯಾರು?

02:40 PM Aug 13, 2019 | Suhan S |

ಹೂವಿನಹಡಗಲಿ: ತಾಲೂಕಿನ ಮೊದಲಗಟ್ಟಿ ಗ್ರಾಮ ನೆರೆ ಹಾವಳಿಯಿಂದಾಗಿ ಗ್ರಾಮದ ಜನರನ್ನು ಸ್ಥಳಾಂತರ ಮಾಡಲಾಗಿದ್ದು, ಆ ಸ್ಥಳಾಂತರ ಪ್ರದೇಶದಲ್ಲಿಯೂ ಸಹ ಹತ್ತು ಹಲವಾರು ಸಮಸ್ಯೆ ಎದುರಿಸುವ ಪರಿಸ್ಥಿತಿ ನೆರೆ ಸಂತ್ರಸ್ತರದ್ದಾಗಿದೆ.

Advertisement

ಶನಿವಾರ ದಿವಸ ನೆರೆ ಹಾವಳಿ ಹಿನ್ನೆಲೆಯಲ್ಲಿ ಇಡೀ ಗ್ರಾಮದವರೇ ಗ್ರಾಮ ಬಿಟ್ಟು ನವ ಗ್ರಾಮದತ್ತ ತೆರಳಿದ್ದಾರೆ. ನವ ಗ್ರಾಮಕ್ಕೆ ಬಂದು ಮೂರು ದಿನಗಳಾದರೂ ಯಾವೊಂದು ಮೂಲ ಸೌಕರ್ಯವಿಲ್ಲದೆ ಜನ ಪರದಾಡುವ ಸ್ಥಿತಿಯಲ್ಲಿದ್ದಾರೆ. ಇಷ್ಟು ದಿವಸ ಹಾಳು ಬಿದ್ದಿರುವ ಗ್ರಾಮಕ್ಕೆ ಅನಿವಾರ್ಯ ಎನ್ನುವ ಸ್ಥಿತಿಯಲ್ಲಿ ಬಂದು ಸೇರಿಕೊಂಡಿದ್ದಾರೆ. ಇಲ್ಲಿ ವಿದ್ಯುತ್‌ ಸೌಕರ್ಯವಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಗ್ರಾಮದಲ್ಲಿರುವ ಕೆಲ ಮನೆ ಸುತ್ತಲೂ ಜಾಲಿ ಬೆಳೆದಿದೆ. ಹಾವು, ಚೇಳುಗಳ ಭಯದಿಂದ ರಾತ್ರಿ ಹೊತ್ತು ಕಾಲ ಕಳೆಯಬೇಕಾಗಿದೆ.

ಕೆಲ ಮನೆಗಳಿಗೆ ಬಾಗಿಲು ಇಲ್ಲ. ಇನ್ನೂ ಕೆಲ ಮನೆಗಳಿಗೆ ಕಿಟಕಿ ಇಲ್ಲ. ರಾತ್ರಿ ಸಂದರ್ಭದಲ್ಲಿ ಮನೆಯಲ್ಲಿ ದೊಡ್ಡ ದೊಡ್ಡ ಇರುವೆಗಳ ಕಾಟ ಬೇರೆ ಹೆಚ್ಚಾಗಿದೆ ಎಂದು ಅಳಲು ತೋಡಿಕೊಂಡರು.

ಇಲ್ಲಿಗೆ ಬಂದು ಮೂರು ದಿನವಾದರೂ ಯಾರೊಬ್ಬರು ಇಲ್ಲಿ ನಮ್ಮ ನೆರವಿಗೆ ಬಂದಿಲ್ಲ. ಇವತ್ತು ಬೆಳಗ್ಗೆಯಿಂದ ಗ್ರಾಪಂ ವತಿಯಿಂದಾಗಿ ಅಂಗನವಾಡಿ ಶಾಲೆಯಲ್ಲಿ ಉಪಾಹಾರ ಮಾಡುತ್ತಿದ್ದಾರೆ ಅಷ್ಟೇ. ನಾವು ಏನಾದರು ಕೇಳಿದಲ್ಲಿ ಪಕ್ಕದ ಕೊಂಬಳಿ ಗ್ರಾಮದಲ್ಲಿ ಪರಿಹಾರ ಕೇಂದ್ರ ತೆರೆಯುತ್ತೇವೆ. ಅಲ್ಲಿಗೆ ಹೋಗಿ ಊಟ ಮಾಡಿಕೊಂಡು ಬನ್ನಿ ಇಲ್ಲದಿದ್ದರೆ ಅಲ್ಲಿಗೆ ಹೋಗಿ ಎನ್ನುತ್ತಾರೆ. ಮೊದಲಗಟ್ಟಿ ಮೂಲ ಗ್ರಾಮದಿಂದ ಮನೆಯ ಸಾಮಾನುಗಳನ್ನು ಕಟ್ಟಿಕೊಂಡು ಇಲ್ಲಿಗೆ ಬರಬೇಕಾದಲ್ಲಿ 600-700 ರೂ. ಖರ್ಚು ಮಾಡಿಕೊಂಡು ಬಂದಿದ್ದೇವೆ. ಈಗ ಇಲ್ಲಿಂದ ಅಲ್ಲಿಗೆ ಹೋಗಿ ಎಂದರೆ ನಾವು ಹೇಗೆ ಹೋಗುವುದು ಎಂದು ಸಂತ್ರಸ್ತ ತಿರುಕಪ್ಪ ನೊಂದು ನುಡಿಯುತ್ತಾರೆ.

ಮೊದಲಗಟ್ಟಿ ಗ್ರಾಮ ಸಿಂಗಟಾಲೂರು ಗ್ರಾಮ ಮುಳುಗಡೆಯಾಗುತ್ತದೆ ಎಂದು ಗ್ರಾಮ ಸ್ಥಳಾಂತರ ಮಾಡಿ ಬೇರೆ ಕಡೆ ನವ ಗ್ರಾಮ ನಿರ್ಮಾಣ ಮಾಡಿದ್ದಾರೆ. ಆದರೆ ಆ ನವಗ್ರಾಮದ, ಕೆಲ ಮನೆಗಳಿಗೂ ಸಹ ಪ್ರವಾಹ ತಾಗಿದ್ದು, ಜನತೆ ಇಲ್ಲಿಯು ಸಹ ನೆಮ್ಮದಿ ಕಳೆದುಕೊಳ್ಳುವಂತಾಗಿದೆ.

Advertisement

ಮೊದಲಗಟ್ಟಿ ಗ್ರಾಮ ಯೋಜನೆಯಿಂದಾಗಿ ಮುಳುಗಡೆಯಾಗಿದೆ. ಇವರಿಗೆ ನವಗ್ರಾಮದಲ್ಲಿ ಮನೆ ಕಟ್ಟಿಕೊಟ್ಟರು ಜನತೆ ಅಲ್ಲಿಗೆ ಹೋಗುತ್ತಿಲ್ಲ. ಹೀಗಾಗಿ ತುಂಬಾ ವರ್ಷಗಳ ಹಿಂದೆ ಕಟ್ಟಿರುವ ಮನೆಗಳಾಗಿರುವುದರಿಂದಾಗಿ ಸಣ್ಣಪುಟ್ಟ ರಿಪೇರಿ ಕೆಲಸಗಳು ಇವೆ. ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಇನ್ನೂ ಅಲ್ಲಿ ಇಂದೇ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗುವುದು.•ಕೆ. ರಾಘವೇಂದ್ರ ರಾವ್‌, ತಹಶೀಲ್ದಾರ್‌

 

•ವಿಶ್ವನಾಥ ಹಳ್ಳಿಗುಡಿ

Advertisement

Udayavani is now on Telegram. Click here to join our channel and stay updated with the latest news.

Next