“ದಚ್ಚು ದೀಪು…’ ಕನ್ನಡ ಚಿತ್ರರಂಗದಲ್ಲಿ ದರ್ಶನ್ ಹಾಗೂ ಸುದೀಪ್ ಅವರನ್ನು ಎಲ್ಲರು ಪ್ರೀತಿಯಿಂದ ಹೀಗೇ ಕರೆಯೋದು. ಈಗ “ದಚ್ಚು-ದೀಪು’ ಹೆಸರಿನ ಚಿತ್ರವೊಂದು ಸದ್ದಿಲ್ಲದೆಯೇ ಮುಹೂರ್ತ ಕಂಡಿದೆ. ಹಾಗಂತ, ಈ ಚಿತ್ರದಲ್ಲಿ ದರ್ಶನ್, ಸುದೀಪ್ ನಟಿಸುತ್ತಿಲ್ಲ. ಅವರ ಯಾವ ಛಾಯೆ ಕೂಡ ಇರಲ್ಲ. ಆದರೆ, ಅವರ ಆಶೀರ್ವಾದ ಪಡೆದುಕೊಂಡೇ ಚಿತ್ರ ಮಾಡಲಾಗುತ್ತಿದೆ. ಬಹುತೇಕ ಹೊಸಬರೇ ಸೇರಿ ಮಾಡುತ್ತಿರುವ ಚಿತ್ರವಿದು.
ರಂಜಿತ್ ತಿಗಡಿ ಈ ಚಿತ್ರದ ನಿರ್ದೇಶಕರು. ಈ ಹಿಂದೆ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಆ ಅನುಭವದ ಮೇಲೆ “ದಚ್ಚು ದೀಪು’ ಚಿತ್ರಕ್ಕೆ ಕೈ ಹಾಕಿದ್ದಾರೆ. ಇನ್ನು, ಚಿತ್ರಕ್ಕೆ ಚಂದು ನಾಯ್ಕ ಬಂಜಾರ ಮತ್ತು ಆನಂದ್ ನಾಯಕರಾದರೆ, ಅವರಿಗೆ ನಿಷ್ಕಲ ಹಾಗು ಅರ್ಚನಾ ಸಿಂಗ್ ನಾಯಕಿಯರು. ಇದು ದರ್ಶನ್ ಮತ್ತು ಸುದೀಪ್ ಅವರ ಕಥೆಯಲ್ಲ, ಆದರೆ, ಅವರ ಅಭಿಮಾನಿಗಳ ಕಥೆ. ಹಳ್ಳಿಯಲ್ಲಿ ಒಂದು ಘಟನೆ ನಡೆಯುತ್ತೆ.
ಆ ಘಟನೆಗೆ ಭಯಗೊಂಡು ಇಬ್ಬರು ಹುಡುಗರು ಊರು ಬಿಟ್ಟು ಬೆಂಗಳೂರು ಸೇರುತ್ತಾರೆ. ಅವರೇ ಚಿತ್ರದ ನಾಯಕರು. ಆಮೇಲೆ ಅವರ ಲೈಫಲ್ಲಿ ಏನೆಲ್ಲಾ ಆಗುತ್ತೆ ಅನ್ನೋದು ಚಿತ್ರದ ಸಾರಾಂಶ. ನಾಯಕ ಚಂದು ನಾಯ್ಕ ಬಂಜಾರ ಇದಕ್ಕೂ ಮುನ್ನ ಮರಾಠಿ ಮತ್ತು ಬಂಜಾರ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ರಿಯಲ್ ಲೈಫಲ್ಲೂ ಅವರು ಸುದೀಪ್ ಅಭಿಮಾನಿಯಂತೆ.
ರೀಲ್‌ನಲ್ಲೂ ಅಂಥದ್ದೇ ಪಾತ್ರ ಸಿಕ್ಕಿದ್ದರಿಂದ ಅವರಿಗೆ ಎಲ್ಲಿಲ್ಲದ ಖುಷಿ. ಆನಂದ್ ಇಲ್ಲಿ ದರ್ಶನ್ ಅಭಿಮಾನಿ ಪಾತ್ರ ಮಾಡುತ್ತಿದ್ದಾರೆ. ಇವರೂ ಸಹ ರಿಯಲ್ ಲೈಫ್ನಲ್ಲಿ ದರ್ಶನ್ ಅಭಿಮಾನಿ. ಚಿತ್ರದಲ್ಲೂ ಅವರ ಅಭಿಮಾನಿ ಪಾತ್ರ ಸಿಕ್ಕಿರುವುದರಿಂದ ಪಾತ್ರಕ್ಕೆ ನ್ಯಾಯ ಸಲ್ಲಿಸಬೇಕೆಂಬ ಅದಮ್ಯ ಉತ್ಸಾಹ ಅವರದು. ನಾಯಕಿ ನಿಷ್ಕಲ ಅವರು ಈ ಹಿಂದೆ “3.0′ ಚಿತ್ರ ಮಾಡಿದ್ದಾರೆ.
ಈ ಚಿತ್ರದಲ್ಲಿ ಅವರದು ಎನ್‌ಜಿಓ ಪಾತ್ರ. ಅನಾಥ ಮಕ್ಕಳನ್ನು ನೋಡಿಕೊಳ್ಳುವ ಹುಡುಗಿಯಾಗಿ ಕಾಣಿಸಿಕೊಂಡಿದ್ದು, ದಚ್ಚು ಜೊತೆ ಲವ್ವಿಡವ್ವಿ ಇರುವಂತಹ ಪಾತ್ರವಂತೆ. ಅರ್ಚನಾ ಸಿಂಗ್ ಕೂಡ ಕನ್ನಡದಲ್ಲಿ ಎರಡೂರು ಚಿತ್ರ ಮಾಡಿ, ತಮಿಳಿನಲ್ಲೂ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರಿಲ್ಲಿ ಮಾಡೆಲ್ ಆಗಿ ನಟಿಸುತ್ತಿದ್ದಾರೆ. “ದಚ್ಚು-ದೀಪು’ ಚಿತ್ರವನ್ನು ಉದಯ್ ನಿರ್ಮಿಸುತ್ತಿದ್ದಾರೆ.
ಉಳಿದಂತೆ ಒಂದಷ್ಟು ಮಂದಿ ಸಹ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಸಿದ್ಧರಾಜು, ಛಾಯಾಗ್ರಹಣವಿದೆ. ಅಭಿಮನ್ ರಾಯ್ ಸಂಗೀತವಿದೆ. ಸಕಲೇಶಪುರ, ಚಿಕ್ಕಮಗಳೂರು, ಕೇರಳ ಇತರೆಡೆ ಚಿತ್ರೀಕರಣ ನಡೆಯಲಿದೆ. ತ್ರಿಭುವನ್ ಚಿತ್ರದ ನಾಲ್ಕು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದರೆ, ಡಿಫರೆಂಟ್ ಡ್ಯಾನಿ ನಾಲ್ಕು ಭರ್ಜರಿ ಸಾಹಸ ನಿರ್ದೇಶನ ಮಾಡಲಿದ್ದಾರೆ. ಮಂಜಣ್ಣ ಸಂಭಾಷಣೆ ಬರೆದು, ಸಹ ನಿರ್ದೇಶನ ಮಾಡುತ್ತಿದ್ದಾರೆ.