ಜಿನನ ಮೈಮನದಲ್ಲಿ ಎಲ್ಲರನ್ನೂ ಹಿಂದಿಕ್ಕಿ ಓಡಬೇಕೆಂಬ ಭಾವ ಕಾರಂಜಿಯಾಗಿ ಚಿಮ್ಮುತ್ತಿತ್ತು, ಒಮ್ಮೆಲೇ ಸೀಟಿಯ ಸದ್ದಾಯಿತು. ಸ್ಪರ್ಧಾಳುಗಳು ಕಿಡಿ ತಾಕಿಸಿಕೊಂಡ ಸಿಡಿಮದ್ದಿನಂತೆ ಸಿಡಿದು ಓಡತೊಡಗಿದರು. ಜಿನನ ಮಿಂಚಿನಂಥ ಓಟ ಕಂಡು ಅಲ್ಲಿದ್ದವರೆಲ್ಲ ಬೆರಗಾದರು. ತನ್ನ ಪ್ರತಿಸ್ಪರ್ಧಿಗಳ ಹೆಜ್ಜೆಗಳು ತನ್ನ ಹೆಜ್ಜೆಗಳಿಗಿಂತ ಹಿಂದುಳಿದಿದ್ದನ್ನು ಗ್ರಹಿಸಿದ ಜಿನ ಆಕಾಶವನ್ನು ಮುಟ್ಟಿಸುವವನಂತೆ ಜಿಗಿಜಿಗಿದು ಓಡಿ ಗುರಿ ಮುಟ್ಟಿದ. ಅವನು ಎಣಿಸಿದಂತೆಯೇ ಸ್ಪರ್ಧೆಯಲ್ಲಿ ಗೆದ್ದ. ಆ ಬಹುದೊಡ್ಡ ಸಮಾರಂಭದಲ್ಲಿ ಚಪ್ಪಾಳೆಯ ಸುರಿಮಳೆಯೊಂದಿಗೆ ಜಿನನನ್ನು ಅದ್ಧೂರಿಯಾಗಿ ಸನ್ಮಾನಿಸಲಾಯಿತು. ಆ ಸನ್ಮಾನವನ್ನು ಗಂಭೀರವಾಗಿ ತೆಗೆದುಕೊಂಡ ಜಿನನ ಪುಟ್ಟ ಮನಸು ಪ್ರತಿಯೊಬ್ಬರಿಗಿಂತ ತಾನಿನ್ನು ಮುಂದಿರಬೇಕು ಎಂದು ಸಂಕಲ್ಪ ಮಾಡಿಯಾಗಿತ್ತು!
Advertisement
ಅಂದಿನಿಂದ ಜಿನನ ಗುರಿಯೆಂದರೆ ಬೇರೆಯವರನ್ನು ಸೋಲಿಸುವುದು! ಇದರಿಂದಾಗಿ ವಿದ್ಯೆ- ಉದ್ಯೋಗ- ಆಸ್ತಿ- ಅಂತಸ್ತುಗಳ ಗಳಿಕೆಯಲ್ಲೂ ಜಿನ ಎಲ್ಲರಿಗಿಂತ ಮುಂದಿದ್ದ. ಅವನ ಅತ್ಯಾಧುನಿಕ ಜೀವನ ಶೈಲಿ ಸರ್ವವನ್ನೂ ನೀಡುವುದರ ಜೊತೆಗೆ ಒತ್ತಡ, ಕೋಪ, ಖನ್ನತೆಯಂಥ ಮನೋರೋಗಗಳನ್ನೂ ಬಳುವಳಿಯಾಗಿ ಕೊಟ್ಟಿತ್ತು. ಇದೆಲ್ಲ ಅವನಿಗೆ ಗೌಣವಾಗಿತ್ತು.
Related Articles
Advertisement
ಅದೊಂದು ದಿನ ಗುರುಗಳು ಜಿನನ ಮನೆಯನ್ನು ಪ್ರವೇಶ ಮಾಡಿದಾಗ ಜಿನ ಇನ್ನೂ ಹಾಸಿಗೆ ಬಿಟ್ಟು ಎದ್ದಿರಲಿಲ್ಲ. ಏನನ್ನೋ ಲೆಕ್ಕ ಹಾಕುತ್ತಿರುವವನಂತೆ ಛಾವಣಿಯೆಡೆಗೆ ದೃಷ್ಟಿ ನೆಟ್ಟಿದ್ದ. ಗುರು ಅವನ ಪಕ್ಕಕ್ಕೆ ಬಂದು ನಿಂತರು. ತನ್ನ ಬಳಿ ಬೆಳಕಿನ ತೇಜ ಪುಂಜವೊಂದು ಹರಿದಂತಾಗಿ ದೃಷ್ಟಿ ಬದಲಿಸಿದ ಜಿನ, ಗುರುವನ್ನು ಕಂಡೊಡನೆ ದಿಗ್ಗನೆ ಎದ್ದು ಕುಳಿತ. ಅವರ ಮುಖಕಾಂತಿಗೆ ಮಾರುಹೋಗಿ, ಜಿನ, ಕುತ್ತಿಗೆಯನ್ನು ತಿರುಗಿಸಿ ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಂಡ. ಸೋತು ಬಾಡಿದ್ದ ಮುಖ ಮತ್ತಷ್ಟು ಜಿಗುಪ್ಸೆ ಮೂಡಿಸಿತು.
ಇಂಥ ಸಮಯದಲ್ಲೂ ಹೋಲಿಸಿ ನೋಡುವ ಅವನ ವರ್ತನೆಯನ್ನು ಕಣ್ಣುಗಳಲ್ಲಿ ಓದಿಕೊಂಡ ಗುರು ಸದ್ದಿಲ್ಲದೆ ನಕ್ಕರು. ಆ ನಗು ಜಿನನಿಗೆ ಕತ್ತಲಲ್ಲಿ ದೀಪವೊಂದು ಕಂಡಂತೆ ಭಾಸವಾಯಿತು. ಗುರುಗಳೇ, ನನಗೇಕೆ ಇಂದು ಈ ಗತಿ ಬಂದಿದೆ?ಎಲ್ಲರನ್ನೂ ಸೋಲಿಸಿದವನು ನಾನು! ಪುಟ್ಟ ಮಗು ಅಮ್ಮನ ಬಳಿ ವರದಿಯೊಪ್ಪಿಸಿದಂತೆ ಜಿನ ನುಡಿದ.
ಗುರು ಕೇಳಿದರು, “ಗೆದ್ದೆಯಾ?’ “ಹೌದು ಗುರುಗಳೇ’
“ಹೌದಾ? ಹಾಗಾದರೆ ನಿನ್ನಲ್ಲಿ ಗೆದ್ದ ಸಂಭ್ರಮವೇ ಇಲ್ಲ ಏಕೆ?’
“ಇದೇನು ಹೇಳುತ್ತಿದ್ದೀರಿ? ನಾನು ಗೆಲ್ಲುತ್ತಾ ಬಂದದ್ದು ಸುಳ್ಳೆ?’ “ನಿಜ ! ತನ್ನನ್ನು ತಾನು ಗೆಲ್ಲದೆ ಇರುವುದೆಂದರೆ ಬೇರನ್ನು ಮಣ್ಣಿನಾಳಕ್ಕೆ ಊರದೆ ಮುಗಿಲೆತ್ತರಕ್ಕೆ ಬೆಳೆವ ಮರದಂತೆ.’ “ಅಂದರೆ?’ ಗೊಂದಲಕ್ಕೆ ಬಿದ್ದ ಜಿನ ತಟ್ಟನೆ ಹೊಳೆದವನಂತೆ ಸದಾ ಸಂಭ್ರಮ ತರುವ ಗೆಲುವು ಇದೆಯೇ? ಎಂದ. ಖಂಡಿತ ಇದೆ. ಅದು, ನಿನ್ನನ್ನು ನೀನು ಗೆಲ್ಲುವುದು!’ ಈ ಮಾತು ಕೇಳಿ ಜಿನ ಪಕಪಕನೆ ನಕ್ಕು ಕೇಳಿದ, “ಇದೇನು ಹೇಳುತ್ತಿದ್ದೀರಿ ಗುರುಗಳೆ?’ ಗುರು ಅವನೆಡೆಗೆ ಕನಿಕರದ ನೋಟ ಬೀರಿ, “ಆಯ್ತು. ನಿನಗೊಂದು ಸರಳ ಸ್ಪರ್ಧೆ. ಕಣ್ಣುಮುಚ್ಚಿ ಕುಳಿತುಕೋ ಮಗು. ಕೇವಲ ಉಸಿರಾಟದ ಮೇಲಷ್ಟೆ ನಿನ್ನ ಗಮನವಿರಲಿ. ಮಾತನಾಡದೆ ಮೌನದಿಂದಿರಬೇಕು’ ಅಂದರು. ಜಿನನ ಕಣ್ಣರೆಪ್ಪೆಗಳು ಮುಚ್ಚಿಕೊಂಡವು. ಗುರುಗಳು ತಮ್ಮ ಜೋಳಿಗೆಯಿಂದ ಹಣ್ಣೊಂದನ್ನು ತೆಗೆದು ಅವನ ಮುಂದಿಟ್ಟರು. ಘಮ್ಮನೆ ಪರಿಮಳ ಬೀರುತ್ತಿದ್ದ ಆ ಹಣ್ಣು ಜಿನನ ಬಾಯಲ್ಲಿ ನೀರೂರಿಸಿತು. ಗುರುಗಳು ಶರತ್ತು ವಿಧಿಸಿದರು: “ಈ ಹಣ್ಣನ್ನು ನೀನು ತಿನ್ನಬಾರದು. ನಾನು ಮರಳಿ ಬರುವವರೆಗೂ ನೀನು ಇದೇ ಭಂಗಿಯಲ್ಲಿದ್ದರೆ ಗೆಲುವು ನಿನ್ನದಾಗುತ್ತದೆ’. ಜಿನ ಒಪ್ಪಿದ. ಗುರು ಹೊರಟು ಹೋದರು. ಮೊದ ಮೊದಲು ತಮಾಷೆಯೆನಿಸಿದ ಜಿನನಿಗೆ ಅರ್ಧಗಂಟೆ ಕಳೆಯುವಷ್ಟರಲ್ಲಿ ಉಸಿರುಗಟ್ಟಿದ ಅನುಭವವಾಯಿತು. ಕತ್ತಲ ಪ್ರಪಂಚದಲ್ಲಿ ನೂರಾರು ಚಿತ್ರಗಳು ಬಿತ್ತರಗೊಂಡವು. ಹಣ್ಣಿನ ಪರಿಮಳವಂತೂ ಚಿತ್ರ ವೇದನೆಯನ್ನು ಅವನೊಳಗೆ ಹುಟ್ಟುಹಾಕತೊಡಗಿತು. ಬೇಡ- ಬೇಡ- ಬೇಡ ಎಂಬ ಭಾವ ಸ್ಪ್ರಿಂಗಿನಂತೆ ಮನಸ್ಸನ್ನು ಅದುಮಲ್ಪಡತೊಡಗಿದಂತೆ ಹುಚ್ಚು ಹಿಡಿದಂತಾಗಿ ಮೈ ಪರಚಿಕೊಳ್ಳುವಂತಾಯಿತು. ಜಿನ ತಟ್ಟನೆ ಕಣ್ಣು ಬಿಟ್ಟ! ಎದುರಿಗಿದ್ದ ಹಣ್ಣಿನ ಬಣ್ಣ ಅವನನ್ನು ದಿಗ್ಭ್ರಮೆಗೊಳಿಸಿತು. ನಾಲಗೆಯ ಚಪಲಕ್ಕೆ ಕಟ್ಟುಬಿದ್ದು, ಆ ಹಣ್ಣನ್ನು ಮೆಚ್ಚಿ, ಕಚ್ಚಿ ತಿಂದೇಬಿಟ್ಟ. ಅಂಥ ರುಚಿಯಾದ ಹಣ್ಣನ್ನು ಅವನೆಂದೂ ನೋಡಿರಲಿಲ್ಲ. ಹಣ್ಣು ಹೊಟ್ಟೆ ಸೇರಿಕೊಂಡಿತು. ಜಿನ ಈಗ ಗಂಭೀರನಾದ! ತನ್ನನ್ನು ತಾನು ಗೆಲ್ಲದೆ ಆಯುಷ್ಯವನ್ನು ಕಳೆಯುವ ವ್ಯಕ್ತಿ ಬೇರನ್ನು ಮಣ್ಣಿನಾಳಕ್ಕೆ ಊರದೆ ಮುಗಿಲೆತ್ತರಕ್ಕೆ ಬೆಳೆವ ಮರವಿದ್ದಂತೆ… ಎಂಬ ಗುರುವಿನ ವಿಚಾರ ಲಹರಿ ಅವನೊಳಗೆ ಮಳೆಗರೆಯಿತು. ತಟ್ಟನೆ ಎದ್ದುನಿಂತು ಅಲ್ಲಿ ನಿಲ್ಲದೆ ಓಡ ತೊಡಗಿದ! ಅವನ ಓಟ ಇನ್ನೂ ನಿಂತಿಲ್ಲ. ಇಂದು ಜಿನ ಓಡುತ್ತಿರುವುದು ಯಾರನ್ನೂ ಸೋಲಿಸುವುದಕ್ಕಾಗಿ ಅಲ್ಲ!! ತನ್ನನ್ನು ತಾನು ಗೆಲ್ಲುವುದಕ್ಕಾಗಿ!! – ವಿದ್ಯಾ ಅರಮನೆ