ವಾಷಿಂಗ್ಟನ್: ಕಳೆದ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಉಪಾಧ್ಯಕ್ಷೆ ಅಭ್ಯರ್ಥಿಯಾಗಿ ಭಾರತೀಯ ಮೂಲದ ಕಮಲಾ ಹ್ಯಾರೀಸ್ ಸಾಕಷ್ಟು ಗಮನಸೆಳೆದಿದ್ದರು. 2024ರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿರುವ ಜೆಡಿ ವ್ಯಾನ್ಸ್ ಅವರ ಪತ್ನಿ ಉಷಾ ಚಿಲುಕುರಿ ವ್ಯಾನ್ಸ್ ಭಾರತೀಯ ಮೂಲದವರಾಗಿರುವುದು ವಿಶೇಷವಾಗಿದೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ರಿಪಬ್ಲಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಜೆಡಿ ವ್ಯಾನ್ಸ್ ಅವರನ್ನು ಆಯ್ಕೆ ಮಾಡಿರುವುದಾಗಿ ವರದಿ ತಿಳಿಸಿದೆ. ವ್ಯಾನ್ಸ್ ದಂಪತಿಗೆ ಮೂವರು(ಪುತ್ರ ಇವಾನ್ 6ವರ್ಷ, ವಿವೇಕ್ 4 ವರ್ಷ, ಮಿರಾಬೆಲ್ 2ವರ್ಷ) ಮಕ್ಕಳು.
ನಾನು ಕ್ರಿಶ್ಚಿಯನ್ ಧರ್ಮದಲ್ಲಿ ಹುಟ್ಟಿ ಬೆಳದವನು, ನಾನ್ಯಾವತ್ತೂ ಬ್ಯಾಪ್ಟಿಸ್ಟ್ ಆಗಿರಲಿಲ್ಲ. ಉಷಾ ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದು, ನನ್ನ ಪ್ರತಿಯೊಂದು ಕೆಲಸಕ್ಕೂ ಬೆಂಬಲವಾಗಿ ನಿಲ್ಲುತ್ತಿರುವುದಾಗಿ ಜೆಡಿ ವ್ಯಾನ್ಸ್ ತಿಳಿಸಿದ್ದಾರೆ.
ಉಷಾ ಅವರು ಭಾರತೀಯ ವಲಸಿಗ ದಂಪತಿಯ ಪುತ್ರಿಯಾಗಿದ್ದು, ಭಾರತೀಯ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಂಡಿರುವುದಾಗಿ ವರದಿ ಹೇಳಿದೆ. ಜೆಡಿ ವ್ಯಾನ್ಸ್ ಮತ್ತು ಉಷಾ 2014ರಲ್ಲಿ ಅಮೆರಿಕದ ಕೆಂಟುಕಿಯಲ್ಲಿ ಹಿಂದೂ ಪುರೋಹಿತರ ನೇತೃತ್ವದಲ್ಲಿ ವಿವಾಹವಾಗಿದ್ದರು.
ವರದಿಯ ಪ್ರಕಾರ, ಉಷಾ ವ್ಯಾನ್ಸ್ ಯಾಲೆ ಯೂನಿರ್ವಸಿಟಿಯಲ್ಲಿ ಇತಿಹಾಸದ ಪದವಿ ಪಡೆದಿದ್ದು, ನಂತರ ಕೇಂಬ್ರಿಡ್ಜ್ ವಿವಿಯಿಂದ ಮಾಸ್ಟರ್ ಆಫ್ ಫಿಲೋಸಫಿಯಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದರು. ಸ್ಯಾನ್ ಡಿಯಾಗೋ, ಕ್ಯಾಲಿಫೋರ್ನಿಯಾದಲ್ಲಿ ಬೆಳೆದ ಉಷಾ, ಯಾಲೆ ಜರ್ನಲ್ ಆಫ್ ಲಾ & ಟೆಕ್ನಾಲಜಿಯ ಕಾರ್ಯನಿರ್ವಾಹಕ ಸಂಪಾದಕರಾಗಿ ಹಾಗೂ ದ ಯಾಲೆ ಲಾ ಜರ್ನಲ್ ನ ಎಕ್ಸಿಕ್ಯೂಟಿವ್ ಡೆವಲಪ್ ಮೆಂಟ್ ಎಡಿಟರ್ ಆಗಿ ಕಾರ್ಯನಿರ್ವಹಿಸಿದ್ದರು.