ಬೆಂಗಳೂರು: ರಾಜ್ಯದ ಇತಿಹಾಸದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 25 ಸ್ಥಾನ ಗೆದ್ದು ಐತಿಹಾಸಿಕ ದಾಖಲೆ ಸೃಷ್ಟಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಅತ್ಯುನ್ನತ ಸಾಧನೆ ತೋರಲು ರಾಜ್ಯವು ಮಹತ್ತರ ಕೊಡುಗೆ ನೀಡಿದೆ. ಅದರ ಬೆನ್ನಲ್ಲೇ ಹೊಸ ಕೇಂದ್ರ ಸಂಪುಟದಲ್ಲಿ ರಾಜ್ಯದ ಯಾರಿಗೆಲ್ಲಾ ಸಚಿವ ಸ್ಥಾನ ಸಿಗಬಹುದು ಎಂಬ ಚರ್ಚೆ ಶುರುವಾಗಿದೆ.
2014ರ ಲೋಕಸಭಾ ಚುನಾವಣೆ ಬಳಿಕ ರಚನೆಯಾದ ಕೇಂದ್ರ ಸಂಪುಟದಲ್ಲಿ ದಿವಂಗತ ಅನಂತ ಕುಮಾರ್, ಡಿ.ವಿ.ಸದಾನಂದಗೌಡ, ಜಿ.ಎಂ.ಸಿದ್ದೇಶ್ವರ ಸಚಿವರಾಗಿದ್ದರು. ನಂತರದ ಸಂಪುಟ ಪುನಾರಚನೆಯಲ್ಲಿ ಸಿದ್ದೇಶ್ವರ ಸಚಿವ ಸ್ಥಾನ ಕಳೆದುಕೊಂಡರೆ ಅನಂತ್ ಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ ಕೇಂದ್ರ ಸಚಿವ ಸ್ಥಾನ ಪಡೆದಿದ್ದರು. ಅನಂತ ಕುಮಾರ್ ವಿಧಿವಶರಾದ ಬಳಿಕ ಕೆಲ ಖಾತೆಯ ಜವಾಬ್ದಾರಿಯನ್ನು ಸದಾನಂದಗೌಡರಿಗೆ ವಹಿಸಲಾಗಿತ್ತು.
ಈ ಬಾರಿ ರಾಜ್ಯದಲ್ಲಿ ಬರೋಬ್ಬರಿ 25 ಸ್ಥಾನಗಳನ್ನು ಬಿಜೆಪಿ ಗೆದ್ದಿರುವ ಹಿನ್ನೆಲೆಯಲ್ಲಿ ಕೇಂದ್ರ ಸಂಪುಟದಲ್ಲೂ ಹೆಚ್ಚಿನ ಸ್ಥಾನಮಾನ ಸಿಗುವ ನಿರೀಕ್ಷೆ ಮೂಡಿದೆ. ಕಳೆದ ಕೇಂದ್ರ ಸಂಪುಟದಲ್ಲಿ ಸಚಿವರಾಗಿದ್ದ ಡಿ.ವಿ.ಸದಾನಂದಗೌಡ, ಅನಂತ ಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ ಅವರಿಗೆ ಮತ್ತೆ ಸಚಿವ ಸ್ಥಾನ ಒಲಿಯಬಹುದು. ಬ್ರಾಹ್ಮಣ ಸಮುದಾಯದ ಅನಂತ ಕುಮಾರ್ ನಿಧನರಾದ ಬಳಿಕ ಆ ಸಮುದಾಯದ ಸಂಸದರೊಬ್ಬರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಹಾಗಾಗಿ ಈ ಬಾರಿ ಹಿರಿಯ ಸಂಸದ ಪ್ರಹ್ಲಾದ್ ಜೋಷಿಯವರನ್ನು ಪರಿಗಣಿಸಬಹುದು ಎಂಬ ಮಾತುಗಳು ಕೇಳಿಬಂದಿವೆ.
ಇನ್ನು ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳ ಪೈಕಿ ಇಬ್ಬರು ಸಂಸದರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆ ಹಿನ್ನೆಲೆಯಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಇಲ್ಲವೇ ಯುವ ಸಂಸದ ತೇಜಸ್ವಿ ಸೂರ್ಯ ಅವರಿಗೆ ಸಚಿವ ಸ್ಥಾನ ಒಲಿಯುವುದೆ ಎಂಬ ಚರ್ಚೆ ಶುರುವಾಗಿದೆ. ಬಿಜೆಪಿಯ ಭದ್ರಕೋಟೆ ಎಂದೇ ಹೆಸರಾಗಿರುವ ಕರಾವಳಿ ಭಾಗ ಹಾಗೂ ರಾಜ್ಯ ಬಿಜೆಪಿಯ ಮತ ಬ್ಯಾಂಕ್‌ನಲ್ಲಿ ಪ್ರಧಾನವೆನಿಸಿರುವ ಲಿಂಗಾಯಿತ ಸಮುದಾಯಕ್ಕೂ ಆದ್ಯತೆ ಸಿಗುವುದೇ ಎಂಬ ಕುತೂಹಲ ಮೂಡಿದೆ. ಜತೆಗೆ, ಮಹಿಳಾ ಪ್ರಾತಿನಿಧ್ಯವಾಗಿ ಶೋಭಾ ಕರಂದ್ಲಾಜೆ ಅವರಿಗೂ ಅವಕಾಶ ಸಿಗಬಹುದು ಎಂಬ ಮಾತುಗಳು ಇವೆ.
ಮೀಸಲು ಕ್ಷೇತ್ರಗಳಲ್ಲಿ ಅರಳಿದ ಕಮಲ: ರಾಜ್ಯದ ಐದು ಪರಿಶಿಷ್ಟ ಜಾತಿ ಹಾಗೂ ಎರಡು ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಗಳಲ್ಲಿ ಈ ಬಾರಿ ಕಮಲ ಅರಳಿದೆ. ಹಾಗಾಗಿ ಪರಿಶಿಷ್ಟ ಜಾತಿ, ಪಂಗಡದ ಸಂಸದರಿಗೂ ಆದ್ಯತೆ ಸಿಗುವುದೇ ಎಂಬ ಲೆಕ್ಕಾಚಾರ ಶುರುವಾಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ವಿ.ಶ್ರೀನಿವಾಸ ಪ್ರಸಾದ್, ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರನ್ನು ಪರಾಭವಗೊಳಿಸಿದ ಡಾ.ಉಮೇಶ್ ಜಾಧವ್ ಅವರಿಗೆ ಅವಕಾಶ ಸಿಗುವುದೇ ಎಂಬ ನಿರೀಕ್ಷೆ ಮೂಡಿದೆ. ಇನ್ನು ಪ್ರಖರ ಹಿಂದುತ್ವ, ವಾಕಟುತ್ವದಿಂದಲೇ ಜನಪ್ರಿಯರಾಗಿರುವ ಪ್ರತಾಪ್ ಸಿಂಹ, ಯುವ ಸಂಸದ ತೇಜಸ್ವಿ ಸೂರ್ಯ ಅವರಿಗೂ ಅವಕಾಶ ಸಿಗುವುದೇ ಎಂದು ಕಾದು ನೋಡಬೇಕಿದೆ.
* ಎಂ.ಕೀರ್ತಿಪ್ರಸಾದ್