Advertisement

ತಮಿಳುನಾಡಲ್ಲಿ ಯಾರಾಗಲಿದ್ದಾರೆ ತಾರೆ?

01:00 AM Mar 05, 2019 | Harsha Rao |

39 ಲೋಕಸಭಾ ಸ್ಥಾನಗಳನ್ನು ಹೊಂದಿರುವ ತಮಿಳುನಾಡಿನಲ್ಲಿ ಚುನಾವಣೆಗಾಗಿ ಭರದ ತಯಾರಿ ನಡೆದಿದೆ. ಎಐಎಡಿಎಂಕೆ, ಬಿಜೆಪಿ ಮತ್ತು ಪಿಎಂಕೆ ಇತ್ತೀಚೆಗಷ್ಟೇ ಮೈತ್ರಿ ಮಾಡಿಕೊಂಡಿವೆ. ಎಐಎಡಿಎಂಕೆ ಮತ್ತು ಡಿಂಎಂಕೆಯ ನಡುವೆ ಸನಿಹದ ಪೈಪೋಟಿ ಇದೆ. ಒಂದೆಡೆ ಬಿಜೆಪಿ ಎಐಎಡಿಎಂಕೆಯ ಜೊತೆ ಹೆಜ್ಜೆಯಿಟ್ಟರೆ, ಅತ್ತ ಕಾಂಗ್ರೆಸ್‌ ಡಿಎಂಕೆಯ ಬೆನ್ನೇರಿದೆ. ಸೂಪರ್‌ಸ್ಟಾರ್‌ ರಜನಿಕಾಂತ್‌ ಈ ಸಂಘರ್ಷದಿಂದ ದೂರ ಉಳಿದರೆ, ಕಮಲ್‌ ಹಾಸನ್‌ ಡಿಎಂಕೆಯ ಆಟಕ್ಕೆ ಅಡ್ಡಗಾಲಾಗಲು ಸಿದ್ಧರಾಗಿದ್ದಾರೆ. 

Advertisement

ತಮಿಳುನಾಡಿನ ಇತಿಹಾಸದಲ್ಲೇ ಇದೇ ಮೊದಲ ಬಾರಿ ಲೋಕಸಭಾ ಚುನಾವಣೆಯೊಂದು ಜನಪ್ರಿಯ ನಾಯಕರಿಲ್ಲದೇ ನಡೆಯುತ್ತಿದ್ದೆ. ಈಗ ಜಯಲಲಿತಾ ಅವರೂ ಇಲ್ಲ, ಕರುಣಾನಿಧಿಯವರೂ ಇಲ್ಲ. ಹೀಗಾಗಿ, ಡಿಎಂಕೆಗೆ, ಅದರಲ್ಲೂ  ಸ್ಟಾಲಿನ್‌ ಅವರಿಗೆ ಈ ಚುನಾವಣೆ ಮಾಡು ಅಥವಾ ಮಡಿ ಎಂಬಂತಾಗಿದೆ. ಇಲ್ಲಿ ಅವರು ತೋರಿಸುವ ಪ್ರದರ್ಶನ, ಅವರ ಸಾಮರ್ಥ್ಯವನ್ನು ನಿರ್ಧರಿಸಲಿದೆ. 

ಪಿಎಂಕೆಯೊಂದಿಗಿನ ಲಾಭ
ಈ ಬಾರಿ ಅತ್ಯಂತ ಲಾಭಪಡೆದ ಪಾರ್ಟಿಯಾಗಿ ಹೊರ ಹೊಮ್ಮಿರು ವುದು ಎಸ್‌. ರಾಮದಾಸ್‌ ಸ್ಥಾಪಿತ ಪಿಎಂಕೆ ಪಕ್ಷ.  ಚಿಕ್ಕ ಪಕ್ಷವಾದರೂ ಪಿಎಂಕೆಯು ಡಿಎಂಕೆ ಮತ್ತು ಎಐಎಡಿಎಂಕೆಯೊಂದಿಗೆ ಭರ್ಜರಿಯಾಗಿಯೇ ಚೌಕಾಶಿ ನಡೆಸಿ, ಕೊನೆಗೆ ಮುಖ್ಯಮಂತ್ರಿ ಪಳನಿಸ್ವಾಮಿಯವರತ್ತ ತೆರಳಿತು. ಲೋಕಸಭಾ ಚುನಾವಣೆಯ ನಂತರವೂ ಪಳನಿಸ್ವಾಮಿ ಸರ್ಕಾರಕ್ಕೆ ಪಿಎಂಕೆಯೊಂದಿಗಿನ ಹೊಸ ದೋಸ್ತಿ ಲಾಭ ತಂದುಕೊಡಲಿದೆ. ಲೋಕಸಭಾ ಚುನಾವಣೆಯ ನಂತರ ತಮಿಳುನಾಡಿನಲ್ಲಿ 21 ವಿಧಾನಸಭಾ ಸೀಟುಗಳಿಗೆ ಚುನಾವಣೆ ನಡೆಯಲಿದೆ. ಗಮನಾರ್ಹ ಸಂಗತಿಯೆಂದರೆ ಇದರಲ್ಲಿ 10 ಸೀಟುಗಳ ಮೇಲೆ ಪಿಎಂಕೆಗೆ ಹಿಡಿತವಿದೆ. ಎಐಎಡಿಎಂಕೆ ಪಿಎಂಕೆಯೊಂದಿಗೆ ದೋಸ್ತಿ ಮಾಡಿಕೊಂಡಿರುವುದಕ್ಕೆ ಇದೇ ಮುಖ್ಯ ಕಾರಣ. ಒಂದು ವೇಳೆ ಡಿಎಂಕೆ ವಿಧಾನಸಭಾ ಚುನಾವಣೆಯಲ್ಲಿ 5 ರಿಂದ 8 ಸ್ಥಾನಗಳನ್ನು ಗೆದ್ದರೂ, ಪಳನಿಸ್ವಾಮಿಯವರ ಸರ್ಕಾರ ಬದುಕುಳಿಯುತ್ತದೆ. 

ಬಿಜೆಪಿ-ಕಾಂಗ್ರೆಸ್‌ ಸ್ಥಿತಿ ಹೇಗಿದೆ?
ಬಿಜೆಪಿಯು ಎಐಎಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಹಿಂದೂ ಮತದಾರರನ್ನಂತೂ ಪ್ರಭಾವಿಸಲಿದೆ. ಒಂದು ವೇಳೆ ಬಿಜೆಪಿಯೇನಾದರೂ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿಂದ ಎರಡರಿಂದ-ನಾಲ್ಕು ಸೀಟು ಗೆದ್ದರೂ ನರೇಂದ್ರ ಮೋದಿಯವರಿಗೆ ಇದು ಬೋನಸ್‌ ಆಗಲಿದೆ. ಆದರೆ ಶಿವಸೇನೆ-ಬಿಜೆಪಿ ಮೈತ್ರಿಯ ವಿಚಾರದಲ್ಲಿ ತೋರಿಸಿದ ಉತ್ಸಾಹ ಅಥವಾ ಆನಂದವನ್ನು ಟೀಂ ಮೋದಿಯು ಬಿಜೆಪಿ-ಎಐಎಡಿಎಂಕೆಯ ವಿಚಾರದಲ್ಲಿ ತೋರಿಸಿಲ್ಲ. ಬಹುಶಃ ತಮಿಳುನಾಡಿಂದ ಹೆಚ್ಚು “ಸ್ಥಾನ’ ನಿರೀಕ್ಷೆ ಇಲ್ಲದಿರುವುದೇ ಈ ನೀರಸ ಪ್ರತಿಕ್ರಿಯೆಗೆ ಕಾರಣವೇನೋ. ಇನ್ನು ಕಾಂಗ್ರೆಸ್‌ನ ಸ್ಥಿತಿಯೂ ಭಿನ್ನವಾಗಿಲ್ಲ. ಇತ್ತೀಚಿನವರೆಗೂ ರಾಹುಲ್‌ ಗಾಂಧಿಯವರನ್ನು ಪ್ರಧಾನಿ ಹುದ್ದೆಗೆ ಅರ್ಹ ವ್ಯಕ್ತಿ ಎಂದು ಹೊಗಳುತ್ತಿದ್ದ ಡಿಎಂಕೆ, ಈಗ ಕಾಂಗ್ರೆಸ್‌ ಕುರಿತ ತನ್ನ ಧ್ವನಿಯನ್ನು ತಗ್ಗಿಸಿಬಿಟ್ಟಿದೆ. ಈ ಬಾರಿಯ ಚುನಾವಣೆಯಲ್ಲಿ ಅದು ತಮಿಳು ಪರ ಭಾವನೆಯ ಮೇಲೆ ಪೈಪೋಟಿಗೆ ಇಳಿಯಲಿದೆ, ಮತ್ತು ಬಹಳಷ್ಟು ತಮಿಳಿಗರು, 2009ರಲ್ಲಿ ಶ್ರೀಲಂಕಾದಲ್ಲಾದ ತಮಿಳರ ಹತ್ಯೆ ವಿಷಯದಲ್ಲಿ ಯುಪಿಎ ಮತ್ತು ಕಾಂಗ್ರೆಸ್‌ ಅನ್ನೇ ದೋಷಿ ಎಂದು ಭಾವಿಸುವುದರಿಂದ, ಕಾಂಗ್ರೆಸ್‌ಗೆ ಅಷ್ಟು ಅಂಟಿಕೊಳ್ಳದಿರಲು ಅದು ನಿಶ್ಚಯಿಸಿರಬಹುದು. 

ಸ್ಟಾರ್‌ ನಾಯಕತ್ವದ ಅಭಾವ 
ತಮಿಳುನಾಡು ಮೊದಲ ಬಾರಿಗೆ ದಿಗ್ಗಜ ನಾಯಕರ ಅಭಾವವನ್ನು ಎದುರಿಸುತ್ತಿದೆ. ಜಯಲಲಿತಾ ಮತ್ತು ಕರುಣಾನಿಧಿಯವರ ಸ್ಥಾನವನ್ನು ತುಂಬುವ ಯಾವ ನಾಯಕನೂ ಅಲ್ಲಿಲ್ಲ. ರಜನಿಕಾಂತ್‌ ಅವರನ್ನು ತಮ್ಮವರೆಂದು ಒಪ್ಪಲು “ತಮಿಳು ರಾಜಕೀಯ’ ಸಿದ್ಧವಿಲ್ಲ, ಕಮಲ್‌ ಹಾಸನ್‌ ನಿಜಕ್ಕೂ ಎಷ್ಟು ಮ್ಯಾಜಿಕ್‌ ಮಾಡುತ್ತಾರೋ ನೋಡಬೇಕು. ಡಿಡಿಎಂಕೆಯ ನಾಯಕ ವಿಜಯಕಾಂತ್‌ ಅಸ್ವಸ್ಥರಾಗಿದ್ದಾರೆ. ಟಿಟಿವಿ ದಿನಕರನ್‌ ಅವರ ಹೊಸ ರಾಜಕೀಯ ಪಾರ್ಟಿ ಅಮ್ಮಾಮಕ್ಕಳ ಮುನ್ನೇತ್ರ ಕಳಗಂ(ಎಎಎನ್‌ಎನ್‌ಕೆ) ಈ ಸಂಘರ್ಷದಲ್ಲಿ ಬದುಕುಳಿಯುತ್ತದೋ ಅಥವಾ ಚುನಾವಣೆಯಲ್ಲಿ ಕೊಚ್ಚಿಹೋಗುತ್ತದೋ ಎನ್ನುವ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ದೊರೆಯಲಿದೆ. 

Advertisement

ಹೇಗಿರಬಹುದು ಫ‌ಲಿತಾಂಶ?
ಈ ಬಾರಿ ಮತದಾನ ಎಐಡಿಎಂಕೆಗೆ ಆಗಲಿ ಅಥವಾ ಡಿಎಂಕೆ ಯಾಗಲಿ, ಒಂದೇ ಪಕ್ಷದ ಪರವಾಗಿ ಇರುವುದಿಲ್ಲ. ಎಲ್ಲಾ ಪಕ್ಷ ಗಳಿಗೂ ಸ್ಥಾನಗಳು ಹರಿದುಹಂಚಿಹೋಗಬಹುದು ಎನ್ನಲಾಗುತ್ತದೆ. 20 ಲೋಕಸಭಾ ಸ್ಥಾನಗಳಿಗಾಗಿ (ತಮಿಳು ನಾಡು-39, ಪುದು ಚೆರಿ-1). ಆದರೆ ಇತ್ತೀಚೆಗೆ ಭಾರತ-ಪಾಕ್‌ ಬಿಕ್ಕಟ್ಟನಲ್ಲಿ ಮೋದಿ ಸರ್ಕಾರ ತೆಗೆದುಕೊಂಡಿರುವ ದಿಟ್ಟ ನಿರ್ಧಾರಗಳು, ಅಭಿನಂದನ್‌ರ ಕುರಿತ ಪ್ರಧಾನಿಗಳ ಮಾತುಗಳು(ಅಭಿನಂದನ್‌ ತಮಿಳುನಾಡಿನ ವರೆಂಬ ಹೆಮ್ಮೆ ಇಡೀ ದೇಶಕ್ಕಿದೆ) ತಮಿಳು ಮತದಾರರ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆಯೋ ನೋಡಬೇಕು. ಆದರೂ ಈ ಲೋಕಸಭಾ ಚುನಾವಣೆಯಲ್ಲೂ ರಾಷ್ಟ್ರೀಯ ಪಕ್ಷಗಳ ಪ್ರದರ್ಶನ ಎಂದಿನಂತೆಯೇ ನೀರಸವಾಗಿಯೇ ಇರಲಿದೆ ಎಂದು ಅಂದಾಜಿ ಸಲಾಗುತ್ತಿದೆ. ಇನ್ನು ಎಐಎಡಿಎಂಕೆಗಿಂತ ಡಿಎಂಕೆಗೇ ಹೆಚ್ಚು ಸ್ಥಾನಗಳು ಸಿಗಬಹುದು ಎನ್ನುವುದು ಬಹುತೇಕ ಸಮೀಕ್ಷೆಗಳ ಅಂಬೋಣ.

Advertisement

Udayavani is now on Telegram. Click here to join our channel and stay updated with the latest news.

Next