ಕನ್ನಡ ಪ್ರೇಕ್ಷಕನಿಗೆ ಮತ್ತೂಂದು ಸಿನಿಮಾ ಹಬ್ಬ. ಕಳೆದ ಕೆಲವು ತಿಂಗಳುಗಳಿಂದ ಕ್ರಿಕೆಟ್, ಚುನಾವಣೆ ಅಂತ ಚಿತ್ರಗಳ ಬಿಡುಗಡೆ ಸ್ವಲ್ಪ ಕಡಿಮೆಯಾಗಿತ್ತು. ಚುನಾವಣೆ ಕಾವು ಮುಗಿದು, ಒಂದು ಸರ್ಕಾರ ಬಂದು, ಇನ್ನೊಂದು ಸರ್ಕಾರವೂ ಶುರುವಾಗುತ್ತಿದೆ. ಎಲ್ಲಾ ಗೊಂದಲಗಳ ನಡುವೆಯೇ ಚಿತ್ರಮಂದಿರಗಳಲ್ಲಿ ಹೊಸ ಚಿತ್ರಗಳು ಪ್ರೇಕ್ಷಕರನ್ನು ಸೆಳೆಯಲು ತಾನು ಮುಂದೆ ಅಂತ ಬರಲು ಸಜ್ಜಾಗಿವೆ. ಹಾಗಾಗಿ ಈ ವಾರ ಒಂದಲ್ಲ, ಎರಡಲ್ಲ, ಮೂರಲ್ಲ ಬರೋಬ್ಬರಿ ಏಳು ಚಿತ್ರಗಳು ತೆರೆಗೆ ಬರುತ್ತಿವೆ. ಆ ಚಿತ್ರಗಳ ಕುರಿತು ಒಂದು ರೌಂಡಪ್.
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ: ಅನಂತ್‌ನಾಗ್ ಅಭಿನಯದ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ ಈ ವಾರ ತೆರೆಕಾಣುತ್ತಿದೆ. ಶೀರ್ಷಿಕೆಯೇ ಚಿತ್ರದ ಆಕರ್ಷಣೆ. ಅದರಲ್ಲೂ ಅನಂತ್‌ನಾಗ್ ಹೈಲೆಟ್. ಕನಕದಾಸರ ಪದವನ್ನೇ ಶೀರ್ಷಿಕೆಯನ್ನಾಗಿಸಿರುವ ಚಿತ್ರತಂಡ, ಚಿತ್ರದ ಮೇಲೆ ನಂಬಿಕೆ ಇಟ್ಟುಕೊಂಡಿದೆ. ನರೇಂದ್ರ ಬಾಬು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಗೀತೆ ಬರೆದು ಚಿತ್ರ ನಿರ್ದೇಶನ ಮಾಡಿದ್ದಾರ. ಆನೇಕಲ್ ಸುದರ್ಶನ್, ರಾಮಮೂರ್ತಿ, ಹರೀಶ್ ಶೇರೀಗಾರ್ ಚಿತ್ರ ನಿರ್ಮಿಸಿದ್ದಾರೆ. ಅನಂತ್‌ನಾಗ್ ಜೊತೆ ರಾಧಿಕಾ ಚೇತನ್ ಅಭಿನಯಿಸಿದ್ದಾರೆ. ಇದು ಸಂಬಂಧಗಳ ನಡುವಿನ ಕಥೆ. ದುಬೈನ ಬುರ್ಜ್ ಖಲೀಫಾ ಕಟ್ಟಡದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಚಿತ್ರವಿದು. ಪಿ.ಕೆ.ಎಚ್.ದಾಸ್ ಛಾಯಾಗ್ರಹಣವಿದೆ. ರಾಮಚಂದ್ರ ಹಡಪದ ಸಂಗೀತವಿದೆ.
ರಾಜ ಮತ್ತು ರಾಧೆ: ವಿಜಯ್ ರಾಘವೇಂದ್ರ, ರಾಧಿಕಾ ಪ್ರೀತಿ ಅಭಿನಯದ “ರಾಜ ಲವ್ಸ್ ರಾಧೆ’ ಈ ವಾರ ಬಿಡುಗಡೆಯಾಗುತ್ತಿದೆ. ಎಂ.ರಾಜಶೇಖರ್ ನಿರ್ದೇಶಿಸಿರುವ ಈ ಚಿತ್ರವನ್ನು ಹೆಚ್.ಎಲ್.ಎನ್. ಎಂಟರ್‌ಟ್ರೆ„ನರ್ ಬ್ಯಾನರ್‌ನಲ್ಲಿ ಹೆಚ್.ಎಲ್.ಎನ್.ರಾಜ್ ನಿರ್ಮಾಣ ಮಾಡಿದ್ದಾರೆ. ಸ್ಲಂ ಹುಡುಗ, ಶ್ರೀಮಂತೆ ಹುಡುಗನ ನಡುವಿನ ಲವ್‌ಸ್ಟೋರಿ ಹೊಂದಿದೆ. ಮನರಂಜನೆಯ ಅಂಶಗಳೇ ತುಂಬಿರುವ ಚಿತ್ರದಲ್ಲಿ ಹಾಸ್ಯ ಕಲಾವಿದರ ದಂಡೇ ಇದೆ. ರವಿಶಂಕರ್, ತಬಲನಾಣಿ, ಕುರಿ ಪ್ರತಾಪ್, ಪವನ್, ಶೋಭರಾಜ್, ಮಿತ್ರ, ರಾಕೇಶ್ ಅಡಿಗ, ಪೆಟ್ರೋಲ್ ಪ್ರಸನ್ನ, ಶುಭ ಪೂಂಜಾ, ನಿರಂಜನ್ ದಾವಣಗೆರೆ, ಭವ್ಯಾ, ಮೋಹನ್ ಜುನೇಜಾ, ರಂಗತೇಜ, ಮೂಗು ಸುರೇಶ್ ನಟಿಸಿದ್ದಾರೆ. ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತವಿದೆ. ಚಿದಾನಂದ್ ಛಾಯಾಗ್ರಹಣವಿದೆ.
ರಾಮಧಾನ್ಯ: ರೂಪಾಂತರ ಸಂಸ್ಥೆ ಯ ಜನಪ್ರಿಯ ನಾಟಕವಾದ “ರಾಮ ಧಾನ್ಯ’ ಇದೀಗ ಚಲನಚಿತ್ರವಾಗಿದೆ. ದಶಮುಖ ವೆಂಚರ್ಸ್‌ನಡಿ, ವೆಂಕಟೇಶ್ ಸವಣುರ್, ಜಂಬಣ್ಣ ಬಿ ಹವಳದ, ಸಂತೋಷ್ ಅಂಗಡಿ, ಅನಿಲಕುಮರ ಪವಳಿ, ಆರ್ ಗೋವಿಂದರಾಜು, ಮಲ್ಲೇಶ್ ರಾಜ ಗಂಧರ್ವ, ಎಸ್ ಎನ್ ರಾಜಶೇಖರ್ ಬೂದಲ್ ಹಾಗೂ ಮಹಂತೇಶ್ ನಿರ್ಮಾಣ ಮಾಡಿದ್ದಾರೆ. ಇದು ಮೂರು ಕಾಲಘಟ್ಟದಲ್ಲಿ ಸಾಗುವ ಕಥೆ. ಟಿ.ಎನ್. ನಾಗೇಶ್ ನಿರ್ದೇಶಿಸಿದ್ದಾರೆ. ಯಶಸ್ ಸೂರ್ಯ ಹಾಗೂ ನಿಮಿಕಾ ರತ್ನಾಕರ್ ನಾಯಕ, ನಾಯಕಿಯಾಗಿದ್ದಾರೆ. ದೇಸೀ ಮೋಹನ್ ಸಂಗೀತವಿದೆ. ಬೆನಕ ರಾಜು ಛಾಯಾಗ್ರಹಣ ಮಾಡಿದರೆ, ಬಸವರಾಜ್ ಸೂಳೆರಿಪಾಳ್ಯ ಸಂಭಾಷಣೆ ಇದೆ.
ಪರಿಧಿ: ಕನ್ನಡದಲ್ಲಿ ಮತ್ತೂಂದು ಮಾತಿಲ್ಲದ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. “ಪರಿಧಿ’ ಈ ಚಿತ್ರವನ್ನು ಬಿ.ಶ್ರೀನಿವಾಸ್ ನಿರ್ದೇಶಿಸಿದ್ದಾರೆ. ನಂದಕುಮಾರ್ ನಿರ್ಮಾಣ ಮಾಡಿದ್ದಾರೆ. ನಾಯಕ ಐಷಾರಾಮಿ ಜೀವನದ ಆಸೆಗೆ ಬಲಿಯಾಗಿ ಗೊತ್ತಿಲ್ಲದ ಹಾಗೆ ಅಪರಾದ ಜಗತ್ತಿಗೆ ಕಾಲಿಡುತ್ತಾನೆ. ಅಲ್ಲಿ ಆಗುವ ಸನ್ನಿವೇಶಗಳೇ ಚಿತ್ರದ ಕಥಾವಸ್ತು. ಜೀವ ಆಂಟೋನಿ ಛಾಯಾಗ್ರಹಣ ಮಾಡಿದರೆ, ಸೂರಜ್ ಮಹಾದೇವ್ ಸಂಗೀತವಿದೆ. ನಿತಿಶ್ ಕುಮಾರ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ರಾಜ್ ಕಿರಣ್, ದಿವ್ಯ, ನಿಶಾ, ಅಮರನಾಥ್, ಚಂದ್ರಶೇಖರ್, ಭದ್ರಾವತಿ ಶ್ರೀನಿವಾಸ್, ಮಂಜುಳ ನಟಿಸಿದ್ದಾರೆ.
ಯಾರ್‌ಯಾರೋ ಗೋರಿ ಮೇಲೆ: ಹೊಸಬರ “ಯಾರ್‌ಯಾರೋ ಗೋರಿ ಮೇಲೆ’ ಚಿತ್ರವನ್ನು ರಾಘು ಚಾಂದ್ ನಿರ್ದೇಶಿಸಿದ್ದಾರೆ. ಎ. ಪುಟ್ಟರಾಜು ನಿರ್ಮಿಸಿರುವ ಈ ಚಿತ್ರದಲ್ಲಿ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶಗಳಿವೆ. ಚಿತ್ರಕ್ಕೆ ಪ್ರದೀಪ್ ಗಾಂಧಿ ಛಾಯಾಗ್ರಹಣವಿದೆ. ಲೋಕಿ ಸಂಗೀತ ನೀಡಿದ್ದಾರೆ. ರಾಜ್, ಅಭಿ, ವರ್ಷ, ಮಾರುತಿ, ತಿಪ್ಪೇಶ್, ವರುಣ್, ಹೇಮಾವತಿ, ದತ್ತಾತ್ರೇಯ, ರಾಜು, ಕಿರಣ್, ಸಿದ್ದು, ಚೇತನ್ ನಟಿಸಿದ್ದಾರೆ.
ಓಳ್ ಮುನ್ಸಾಮಿ: ಕಾಶಿನಾಥ್ ಅಭಿನಯದ ಕೊನೆಯ ಚಿತ್ರ “ಓಳ್ ಮುನ್ಸಾಮಿ’ ಕೂಡ ತೆರೆಗೆ ಬರುತ್ತಿದೆ. ಆನಂದ ಪ್ರಿಯ ನಿರ್ದೇಶನದ ಈ ಚಿತ್ರದಲ್ಲಿ ನಿರಂಜನ್ ಒಡೆಯರ್, ಅಖೀಲಾ ಇತರರು ನಟಿಸಿದ್ದಾರೆ.
ನವಿಲ ಕಿನ್ನರಿ: ಹುಲಿಕಲ್ ಸ್ಟುಡಿಯೋಸ್‌ನಡಿ ನಿರ್ಮಾಣವಾಗಿರುವ “ನವಿಲ ಕಿನ್ನರಿ’ ಈ ವಾರ ಬಿಡುಗಡೆಯಾಗುತ್ತಿರುವ ಮತ್ತೂಂದು ಚಿತ್ರ. ಈ ಚಿತ್ರವನ್ನು ವೆಂಕಿ ಚೆಲ್ಲಾ ಎನ್ನುವವರು ನಿರ್ದೇಶಿಸಿದ್ದು, ಹುಲಿಕಲ್ ನಟರಾಜ್, ಶ್ರೀನಿವಾಸ ಪ್ರಭು ಮುಂತಾದವರು ನಟಿಸುತ್ತಿದ್ದಾರೆ.