ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಯೇ ಸಿದ್ಧ ಎಂದು ರಾಹುಲ್ ಗಾಂಧಿ ಪಟ್ಟು ಹಿಡಿದು ಕುಳಿತಿರುವುದು, ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಗಾಂಧಿ ಕುಟುಂಬದ ಹೊರತಾದವರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವಂತೆ ಸ್ವತಃ ರಾಹುಲ್ ಅವರೇ ಸೂಚಿಸಿರುವುದು ಮತ್ತೂಂದು ಸಂದಿಗ್ಧತೆ ಸೃಷ್ಟಿಸಿದೆ. ಒಂದು ವೇಳೆ ರಾಹುಲ್ ಪಟ್ಟು ಸಡಿಲಿಸದೇ ಇದ್ದರೆ, ಕಾಂಗ್ರೆಸ್‌ನ ಚುಕ್ಕಾಣಿಯನ್ನು ಹಿಡಿಯುವ ಸಾಮರ್ಥ್ಯ ಯಾರಿಗಿದೆ ಎಂಬ ಮಾಹಿತಿ ಇಲ್ಲಿದೆ.
1. ಶಶಿ ತರೂರ್: 63 ವರ್ಷ ವಯಸ್ಸು. ಲೇಖಕ, ವಿಶ್ವಸಂಸ್ಥೆಯ ಉನ್ನತ ಅಧಿಕಾರಿಯಾದ ಅನುಭವ, ನಿರ್ವಸಿತರ ಪರ, ಮಾನವ ಹಕ್ಕುಗಳ ಪರ ಹೋರಾಟಗಾರ, ವಿದೇಶಾಂಗ ಇಲಾಖೆಯ ಮಾಜಿ ಸಹಾಯಕ ಸಚಿವ, ತಿರುವನಂತಪುರ ಕ್ಷೇತ್ರದಿಂದ 3 ಬಾರಿ ಆಯ್ಕೆಯಾದ ಸಂಸದ. ವೃತ್ತಿಪರ ಸಾಧನೆಯೂ ಇವರಿಗೆ ಪೂರಕವಾಗಿ ನಿಲ್ಲಲಿದೆ. ರಾಜಕೀಯ ಮಹತ್ವದ ವಿಚಾರಗಳಲ್ಲಿ ಸ್ಪಷ್ಟ ನಿಲುವು ತಳೆದವರು. ಆಂಗ್ಲ ಭಾಷೆ ಮೇಲೆ ಹಿಡಿತವಿದ್ದು, ಪಕ್ಷದ ಅಧ್ಯಕ್ಷ ಸ್ಥಾನಕ್ಕೇರಲು ಸೂಕ್ತ ವ್ಯಕ್ತಿ.
2. ಅಧೀರ್ ರಂಜನ್ ಚೌಧರಿ: 63 ವರ್ಷ ವಯಸ್ಸು. ಪಶ್ಚಿಮ ಬಂಗಾಲದ ಬಹರಾಂಪುರ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ವಿರುದ್ಧ ಭರ್ಜರಿ ಜಯ ಸಾಧಿಸಿದ ಕಾಂಗ್ರೆಸ್‌ನ ಏಕೈಕ ಅಭ್ಯರ್ಥಿ. ಬಂಗಾಲದಲ್ಲಿ ಎಲ್ಲ ಸವಾಲುಗಳನ್ನೂ ಎದುರಿಸಿ ಯಶಸ್ಸು ಗಳಿಸಿದವರು. ಇವರಂಥ ಪ್ರಾದೇಶಿಕ ನಾಯಕರನ್ನು ಅಧ್ಯಕ್ಷ ಸ್ಥಾನಕ್ಕೇರಿಸಿದರೆ, ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧೆ ಒಡ್ಡಲು ಕಾಂಗ್ರೆಸ್‌ಗೆ ಸಹಕಾರಿಯಾಗಲಿದೆ.
3. ಕ್ಯಾ|ಅಮರೀಂದರ್ ಸಿಂಗ್: 77 ವರ್ಷ ವಯಸ್ಸು. ಈ ಚುನಾವಣೆಯಲ್ಲಿ ಪಕ್ಷಕ್ಕೆ ಅತ್ಯುತ್ತಮ ಸ್ಥಾನಗಳನ್ನು ತಂದುಕೊಟ್ಟ ಪಂಜಾಬ್‌ನ ಕ್ಯಾಪ್ಟನ್. ದೇಶಾದ್ಯಂತ ಮೋದಿ ಅಲೆಯಿದ್ದರೂ, ಪಂಜಾಬ್‌ನಲ್ಲಿ ಅಮರೀಂದರ್ ಮುಂದೆ ಈ ಅಲೆ ಕೆಲಸ ಮಾಡಲಿಲ್ಲ. 2014ರಲ್ಲಿ ಅಮೃತಸರ ಕ್ಷೇತ್ರದಲ್ಲಿ ಅರುಣ್ ಜೇಟ್ಲಿಯವರನ್ನೇ ಸೋಲಿಸಿದ್ದರು ಅಮರೀಂದರ್. ನೇರ ನಡೆ-ನುಡಿ, ದಿಟ್ಟ ವ್ಯಕ್ತಿತ್ವ. ಸೇನೆಯ ಹಿನ್ನೆಲೆ ಇರುವ ಕಾರಣ ರಾಷ್ಟ್ರೀಯವಾದದ ವಿಚಾರ ಬಂದಾಗ ಇವರ ಧ್ವನಿಗೆ ಹೆಚ್ಚು ಮಹತ್ವವೂ ಇರುತ್ತದೆ.