ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಂದಿನ ಮೇಯರ್ ಯಾರು ಎನ್ನುವುದು ಇಂದು (ಮಂಗಳವಾರ) ಸ್ಪಷ್ಟವಾಗಲಿದೆ. ಈ ಬಾರಿ ಬಿಬಿಎಂಪಿಯಲ್ಲಿ ಬಿಜೆಪಿಗೆ ಅಧಿಕಾರ ಸಿಗುವುದು ಬಹುತೇಕ ಖಚಿತವಾದರೂ, ಬಿಜೆಪಿಯಿಂದ ಮೇಯರ್ ಅಭ್ಯರ್ಥಿ ಯಾರು ಎನ್ನುವುದು ತಡರಾತ್ರಿವರೆಗೂ ಅಂತಿಮವಾಗಿಲ್ಲ. ಬಿಜೆಪಿಯಲ್ಲಿ ಮೇಯರ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಕಾಚರಕನಹಳ್ಳಿ ವಾರ್ಡ್‌ನ ಪದ್ಮನಾಭ ರೆಡ್ಡಿ ಪ್ರಬಲ ಆಕಾಂಕ್ಷಿಯಾಗಿದ್ದು, ಕುಮಾರಸ್ವಾಮಿ ಬಡಾವಣೆಯ ಎಲ್.ಶ್ರೀನಿವಾಸ್, ಗೋವಿಂದರಾಜ ನಗರ ವಾರ್ಡ್‌ನ ಉಮೇಶ್ ಶೆಟ್ಟಿ, ಕಾಡು ಮಲ್ಲೇಶ್ವರ ವಾರ್ಡ್‌ನ ಮಂಜುನಾಥ ರಾಜು ಅವರು ರೇಸ್‌ನಲ್ಲಿದ್ದಾರೆ.
ಜಕ್ಕೂರು ವಾರ್ಡ್‌ನ ಮುನೀಂದ್ರ ಕುಮಾರ್, ನಾಗರಬಾವಿ ವಾರ್ಡ್‌ನ ಮೋಹನ್ ಕುಮಾರ್, ಕತ್ರಿಗುಪ್ಪೆಯ ವೆಂಕಟೇಶ್ (ಸಂಗಾತಿ), ಜೋಗುಪಾಳ್ಯದ ಗೌತಮ್ ಕುಮಾರ್ ಅವರೂ ಆಕಾಂಕ್ಷಿಗಳಾಗಿದ್ದಾರೆ. ನಗರದ ಬಹುತೇಕ ಶಾಸಕರು ಪದ್ಮನಾಭ ರೆಡ್ಡಿ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ, ಅವರೇ ಮುಂದಿನ ಮೇಯರ್ ಎಂದು ಹೇಳಲಾಗುತ್ತಿದೆ. ಪಕ್ಷದಿಂದ ಯಾರೊಬ್ಬರ ಹೆಸರನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.
ಕಾಂಗ್ರೆಸ್‌ನಿಂದ ಗುರಪ್ಪನಪಾಳ್ಯದ ಮಹಮದ್ ರಿಜ್ವಾನ್ ನವಾಬ್ ಹಾಗೂ ದತ್ತಾತ್ರೆಯ ವಾರ್ಡ್‌ನ ಆರ್.ಎಸ್.ಸತ್ಯನಾರಾಯಣ ಅವರು ಮೇಯರ್ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಿಬಿಎಂಪಿಯಲ್ಲಿ ಈ ಬಾರಿಯೂ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ್ದು, ಮೇಯರ್ ಚುನಾವಣೆಯಲ್ಲಿ ಬಹುಮತ ಗಳಿಸಿದರೆ, ಜೆಡಿಎಸ್‌ನಿಂದ ಉಪಮೇಯರ್ ಆಯ್ಕೆಯಾಗುವ ಸಾಧ್ಯತೆ ಇದೆ. ಉಪ ಮೇಯರ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಪಾದರಾಯನಪುರ ವಾರ್ಡ್‌ನ ಇಮ್ರಾನ್ ಪಾಷ ಅಥವಾ ಶಕ್ತಿ ಗಣಪತಿ ವಾರ್ಡ್‌ನ ಗಂಗಮ್ಮ ರಾಜಣ್ಣ ಅವರಿಗೆ ಜೆಡಿಎಸ್ ಮನಾಯಕರು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ವಿಪ್ ಅಸ್ತ್ರ ಬಳಸಲು ನಿರ್ಧಾರ: ಬಿಬಿಎಂಪಿ ಚುನಾವಣೆಯಲ್ಲಿ ಕಳೆದ ಬಾರಿಯ ಮೇಯರ್ ಚುನಾವಣೆಯಲ್ಲಿ ತಟಸ್ಥವಾಗಿರುವ ಮೂಲಕ ತಮ್ಮ ಅಸಮಾಧಾನ ತೋರಿಸಿದ್ದರು. ಹೀಗಾಗಿ, ಈ ಬಾರಿ ವಿಪ್ ಜಾರಿ ಮಾಡಲು ಮೂರೂ ಪಕ್ಷಗಳು ಮುಂದಾಗಿವೆ. ಈ ಮಧ್ಯೆ ಅನರ್ಹ ಶಾಸಕರ ಬೆಂಬಲಿಗರು ಗೈರು ಹಾಜರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಪಾಲಿಕೆಯ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನ ಸದಸ್ಯರು ಆಯಾ ಪಕ್ಷಗಳ ಚಿಹ್ನೆಯಡಿಯಲ್ಲಿ ಗೆದ್ದಿದ್ದು ಬೇರೆ ಪಕ್ಷದ ಸದಸ್ಯರ ಪರವಾಗಿ ಮತ ಚಲಾಯಿಸಿದರೆ ಅಥವಾ ತಟಸ್ಥವಾಗಿ ಉಳಿದರೆ, ವಿಪ್ ಉಲ್ಲಂ ಸಿದರೆ ಸದಸ್ಯತ್ವ ರದ್ದಾಗಲಿದೆ.