Advertisement

ನಮ್ಮ ಮೆಟ್ರೋ ಹೊಸ ಎಂಡಿ ಯಾರು?

11:35 AM Nov 29, 2017 | |

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪ್ರದೀಪ್‌ಸಿಂಗ್‌ ಖರೋಲ ವರ್ಗಾವಣೆ ಬೆನ್ನಲ್ಲೇ ಅವರ ವರ್ಗಾವಣೆಯಿಂದ ತೆರವಾಗಿರುವ ಹುದ್ದೆಗೆ ಯಾವ ಅಧಿಕಾರಿ ಬರಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ.

Advertisement

ಖರೋಲಾ ಅವರನ್ನು ಏರ್‌ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೇ ಮಾಡಲಾಗಿದ್ದು, ಈ ಮೂಲಕ ಕೆಲವು ದಿನಗಳಿಂದ ಕೇಳಿಬರುತ್ತಿದ್ದ ವರ್ಗಾವಣೆ ಊಹಾಪೋಹಗಳಿಗೆ ತೆರೆಬಿದ್ದಿದೆ. ಇದೇ ವೇಳೆ ತೆರವಾದ ಸ್ಥಾನಕ್ಕೆ ರಾಜ್ಯ ಸರ್ಕಾರ ಮತ್ತೂಬ್ಬ ಐಎಎಸ್‌ ಅಧಿಕಾರಿಯನ್ನು ನಿಯೋಜಿಸಲಿದ್ದು, ಅಲ್ಲಿಯವರೆಗೆ ಪ್ರದೀಪ್‌ಸಿಂಗ್‌ ಖರೋಲ ಮುಂದುವರಿಯಲಿದ್ದಾರೆ.

2013ರ ಆಗಸ್ಟ್‌ನಲ್ಲಿ “ನಮ್ಮ ಮೆಟ್ರೋ’ ಯೋಜನೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಪ್ರದೀಪ್‌ಸಿಂಗ್‌ ಖರೋಲ ನೇಮಕಗೊಂಡಾಗ, ಕೇವಲ 6 ಕಿ.ಮೀ. ದೂರದ ರೀಚ್‌-1 (ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ)ರಲ್ಲಿ ಮಾತ್ರ ಮೆಟ್ರೋ ಕಾರ್ಯಾಚರಣೆ ಆರಂಭಿಸಿತ್ತು. ನಂತರದ ಈ ನಾಲ್ಕು ವರ್ಷಗಳಲ್ಲಿ ಮೆಟ್ರೋ ಸಾಕಷ್ಟು ದೂರ ಕ್ರಮಿಸಿದೆ.

ಈ ಪೈಕಿ 42 ಕಿ.ಮೀ. ಉದ್ದದ ಮೊದಲ ಹಂತದ ಯೋಜನೆ ಲೋಕಾರ್ಪಣೆಗೊಂಡಿದ್ದು ಅವರ ಅವಧಿಯಲ್ಲಿನ ಪ್ರಮುಖ ಮೈಲಿಗಲ್ಲು. ಅಷ್ಟೇ ಅಲ್ಲ, “ನಮ್ಮ ಮೆಟ್ರೋ’ ಸಂಪೂರ್ಣವಾಗಿ ನಮ್ಮದಾಗಿದ್ದು ಖರೋಲ ಅವರ ಅವಧಿಯಲ್ಲಿ. “ನಮ್ಮ ಮೆಟ್ರೋ’ಗೆ ಈ ಮೊದಲು ರೈಟ್ಸ್‌, ಫ್ರಾನ್ಸ್‌ನ ಸಿಸ್ಟ್ರಾ, ಜಪಾನಿನ ಓರಿಯಂಟಲ್‌, ಅಮೆರಿಕದ ಪಾರ್ಸನ್‌ ಕನ್ಸಲ್ಟಂಟ್‌ಗಳಾಗಿದ್ದರು.

ಈ ಕನ್ಸಲ್ಟಂಟ್‌ ಏಜೆನ್ಸಿಗಳೇ ಮೆಟ್ರೋ ಯೋಜನೆಯ ಪ್ರಮುಖ ಮೇಲ್ವಿಚಾರಣೆ ನಡೆಸುತ್ತಿದ್ದವು. ಆದರೆ, ಈಗ ಯೋಜನೆ ನಿರ್ಮಾಣದಿಂದ ಅಂತಿಮ ಹಂತದವರೆಗೂ ಬಿಎಂಆರ್‌ಸಿ ಸುಪರ್ದಿಯಲ್ಲೇ ನಡೆಯುತ್ತದೆ. ಜತೆಗೆ ಖರೋಲ ಈಗಾಗಲೇ ಎರಡನೇ ಹಂತದ ಮೆಟ್ರೋ ಯೋಜನೆಯ ಎಲ್ಲ ಮಾರ್ಗಗಳ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್‌ ಪ್ರಕ್ರಿಯೆ ಬಹುತೇಕ ಪೂರ್ಣಗೊಳಿಸಿದ್ದಾರೆ.

Advertisement

ಯೋಜನೆ ಪ್ರಗತಿ ಆಮೆಗತಿ: ಆದರೆ, ಒಟ್ಟಾರೆ ಯೋಜನೆಯ ಪ್ರಗತಿ ಅವಲೋಕನ ಮಾಡಿದರೆ, “ನಮ್ಮ ಮೆಟ್ರೋ’ ಯೋಜನೆಯ ವೇಗ ಮಂದಗತಿಯಲ್ಲಿ ಸಾಗಿತು. ಮೊದಲ ಹಂತದ ಲೋಕಾರ್ಪಣೆ ಗಡುವು ಹಲವಾರು ಬಾರಿ ವಿಸ್ತರಣೆಗೊಂಡಿತು. ಅಂತಿಮವಾಗಿ ಐದು ತಿಂಗಳ ಹಿಂದೆ ಲೋಕಾರ್ಪಣೆಗೊಂಡಿತು.

ಇನ್ನು 2014ರಲ್ಲೇ ಎರಡನೇ ಹಂತದ ಯೋಜನೆಗೆ ಅನುಮೋದನೆ ದೊರೆತರೂ, ಇನ್ನೂ ಟೆಂಡರ್‌ ಹಂತದಲ್ಲೇ ಸಾಗಿದೆ. ಇದೆಲ್ಲವೂ ಯೋಜನಾ ವೆಚ್ಚದ ಮೇಲೆ ಪರಿಣಾಮ ಬೀರಿತು. ಅಲ್ಲದೆ, ಮೆಟ್ರೋ ಮಾರ್ಗಗಳ ಬದಲಾವಣೆಯಿಂದಲೂ ಪ್ರದೀಪ್‌ಸಿಂಗ್‌ ಖರೋಲ ಸುದ್ದಿಯಾದರು. ಜಯನಗರ ಲಕ್ಷ್ಮಣ್‌ರಾವ್‌ ಉದ್ಯಾನದಲ್ಲಿ ಹಾದುಹೋಗಲಿರುವ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ಎದುರಿಸಬೇಕಾಯಿತು.

ಆದರೆ, ವಾಸ್ತವವಾಗಿ ಈ ಮಾರ್ಗ ಬದಲಾವಣೆ ಹಿಂದಿನ ವ್ಯವಸ್ಥಾಪಕ ನಿರ್ದೇಶಕರು ಮಾಡಿದ್ದರು. ಅದೇ ರೀತಿ, ಕಂಟೋನ್ಮೆಂಟ್‌ ಮಾರ್ಗ ಬದಲಾವಣೆಯಿಂದಾಗಿ ರೈಲ್ವೆ ಹೋರಾಟಗಾರರ ಕೆಂಗಣ್ಣಿಗೆ ಖರೋಲ ಗುರಿಯಾದರು. ಈ ಸಂಬಂಧದ ಪರ-ವಿರೋಧ ಈಗಲೂ ಮುಂದುವರಿದಿದೆ. ಅಷ್ಟರಲ್ಲಿ ಖರೋಲ ನಿರ್ಗಮಿಸುತ್ತಿದ್ದಾರೆ. 

“ನಮ್ಮ ಮೆಟ್ರೋ’ ಸಾರಥ್ಯ ಯಾರಿಗೆ?: ತೆರವಾದ ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಐಟಿ-ಬಿಟಿ ಮತ್ತು ವಿಜ್ಞಾನ-ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತ ಸೇರಿದಂತೆ ಹಲವರ ಹೆಸರುಗಳು ಕೇಳಿಬರುತ್ತಿವೆ. ಆದರೆ, ಇನ್ನೂ ಅಂತಿಮಗೊಂಡಿಲ್ಲ. ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಸರ್ಕಾರ ಈ ಹಿಂದೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಮಂಜುಳಾ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಪಿ. ಮಣಿವಣ್ಣನ್‌ ಅವರ ಹೆಸರು ಸೂಚಿಸಿತ್ತು ಎಂದೂ ಮೂಲಗಳು ತಿಳಿಸಿವೆ. 

ಹಿಂದಿ ವಿವಾದದಿಂದ ಕೆಂಗಣ್ಣಿಗೆ ಗುರಿ: ನಿಲ್ದಾಣದಲ್ಲಿ ಹಿಂದಿಗೆ ಮಣೆ ಹಾಕಿದ ಹಿನ್ನೆಲೆಯಲ್ಲಿ ಪ್ರದೀಪ್‌ಸಿಂಗ್‌ ಖರೋಲ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದರು. ಈ ಸಂಬಂಧ ವಿವಿಧ ಕನ್ನಡಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಯು ಹಿಂದಿ ನಾಮಫ‌ಲಕಗಳಿಗೆ ಮಸಿ ಬಳಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಒಂದು ಹೆಜ್ಜೆ ಮುಂದೆಹೋಗಿ, “ಹಕ್ಕುಚ್ಯುತಿಗೆ ಶಿಫಾರಸು ಮಾಡುವುದಾಗಿ’ ಎಚ್ಚರಿಕೆ ನೀಡಿತ್ತು.

ಮೆಟ್ರೋ ಯೋಜನೆಯ ವ್ಯವಸ್ಥಾಪಕ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದು ತೃಪ್ತಿ ತಂದಿದೆ. ನನ್ನ ಅವಧಿಯಲ್ಲಿ ಮೊದಲ ಹಂತ ಲೋಕಾರ್ಪಣೆಗೊಂಡಿತು. ಇದೆಲ್ಲವೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಇತರೆ ಏಜೆನ್ಸಿಗಳ ಸಹಕಾರ ಮತ್ತು ಜನರ ಸಹಕಾರದಿಂದ ಸಾಧ್ಯವಾಯಿತು. ಯೋಜನೆ ತುಸು ವಿಳಂಬವಾಗಿದ್ದು ನಿಜ. ಆದರೆ, ಇದಕ್ಕೆ ಹಲವು ಕಾರಣಗಳು ಮತ್ತು ಸವಾಲುಗಳಿವೆ. ಅವೆಲ್ಲವನ್ನೂ ನಾವು ನಿಭಾಯಿಸಿ ಪೂರ್ಣಗೊಳಿಸಿದ್ದೇವೆ. ಖುಷಿ ತಂದಿದೆ.
-ಪ್ರದೀಪ್‌ಸಿಂಗ್‌ ಖರೋಲ, ಬಿಎಂಆರ್‌ಸಿಎಲ್‌ ಎಂಡಿ

Advertisement

Udayavani is now on Telegram. Click here to join our channel and stay updated with the latest news.

Next