ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯನ್ನು ಸಂಪರ್ಕಿಸುವ ಹಳದಿ ಮಾರ್ಗದ ಮೆಟ್ರೋ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಮೆಟ್ರೋ ಬೋಗಿಗಳ ಅಲಭ್ಯತೆಯಿಂದ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಮತ್ತಷ್ಟು ವಿಳಂಬವಾಗಲಿದೆ.
ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಲಭ್ಯವಿರುವ ಮೆಟ್ರೋಗಳನ್ನು ಬಳಸಿಕೊಂಡು ಕೆಲ ನಿಲ್ದಾಣಗಲ್ಲಿ ಮಾತ್ರ ನಿಲುಗಡೆ ನೀಡುವ ಮೂಲಕ ಮೆಟ್ರೋ ಸೇವೆ ಆರಂಭಿಸುವ ಬಗ್ಗೆ ಬೆಂಗಳೂರು ಮೆಟ್ರೋ ನಿಗಮದ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ಆರಂಭವಾಗಿದೆ.
ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರವನ್ನು ಸಂಪರ್ಕಿಸುವ 19 ಕಿ.ಮೀ. ಉದ್ದದ ಮೆಟ್ರೋ ಮಾರ್ಗವು ಮಾಹಿತಿ ತಂತ್ರಜ್ಞಾನದ ಹಲವು ದಿಗ್ಗಜ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಹೆಚ್ಚು ಅನುಕೂಲಕರವಾಗಿದೆ. ಆದರೆ, ಈ ಮಾರ್ಗದಲ್ಲಿ ಮೆಟ್ರೋ ಸೇವೆ ಆರಂಭಗೊಳ್ಳಲಿದೆ ಎಂದು ಪ್ರಯಾಣಿಕರು ಹಲವು ತಿಂಗಳಿನಿಂದ ಕಾಯುತ್ತಿದ್ದಾರೆ.
ಇದೀಗ ಕಾಮಗಾರಿ ಪೂರ್ಣಗೊಳ್ಳುತ್ತ ಬಂದಿದ್ದರೂ ಪೂರ್ಣ ಪ್ರಮಾಣದಲ್ಲಿ ಸೇವೆ ನೀಡಲು ತಕ್ಕಷ್ಟು ಮೆಟ್ರೋ ಸೆಟ್‌ಗಳಿಲ್ಲದಿರುವುದು ಮತ್ತು ಸದ್ಯಕ್ಕೆ ಅಗತ್ಯ ಮೆಟ್ರೋ ಸೆಟ್‌ಗಳು ಸಿಗುವ ಸಾಧ್ಯತೆಗಳಿ ಲ್ಲದಿರುವುದರಿಂದ ‘ಅಲ್ಪ ಸೇವೆ’ಯನ್ನಾದರೂ ಆರಂಭಿಸಿ ಬಿಡೋಣ ಎಂಬ ಅಭಿಪ್ರಾಯ ಮೆಟ್ರೋ ನಿಗಮದಲ್ಲಿದೆ.
ಆರ್.ವಿ. ರೋಡ್, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಬಡಾವಣೆ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ (ಎಚ್‌ಎಸ್‌ಆರ್ ಬಡಾವಣೆ), ಹೊಂಗಸಂದ್ರ, ಕುಡ್ಲು ಗೇಟ್, ಸಿಂಗಸಂದ್ರ, ಹೊಸ ರಸ್ತೆ, ಬೆರಟೆನ ಅಗ್ರಹಾರ, ಇಲೆಕ್ಟ್ರಾನಿಕ್ ಸಿಟಿ, ಕೊನಪ್ಪನ ಅಗ್ರಹಾರ, ಹುಸ್ಕೂರ್ ರೋಡ್, ಹೆಬ್ಬಗೋಡಿ ಮತ್ತು ಬೊಮ್ಮಸಂದ್ರ ಹೀಗೆ 16 ನಿಲ್ದಾಣಗಳಿವೆ. ಪ್ರತಿ ನಿಲ್ದಾಣದಲ್ಲೂ ಮೆಟ್ರೋಗೆ ನಿಲುಗಡೆ ನೀಡುತ್ತ ಹೋಗುವ ಸೆಟಲ್ ಸೇವೆಗಿಂತ ಕೆಲ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ನೀಡುವ ಎಕ್ಸ್ ಪ್ರಸ್ ಸೇವೆಯನ್ನು ತಾತ್ಕಾಲಿಕವಾಗಿ ಆರಂಭಿಸಿದರೆ ಇಡೀ ಮಾರ್ಗದಲ್ಲಿ ಮೆಟ್ರೋ ಸಂಚರಿಸಲು ತೆಗೆದುಕೊಳ್ಳುವ ಸಮಯ ಕಡಿಮೆ ಆಗುವುದರಿಂದ ಕಡಿಮೆ ಸಂಖ್ಯೆಯಲ್ಲೇ ತಾತ್ಕಾಲಿಕವಾಗಿ ಮೆಟ್ರೋ ಸಂಚಾರ ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಕಾರ್ಯಪ್ರವತ್ತರಾಗಿರುವ ಮೆಟ್ರೋ ಅಧಿಕಾರಿಗಳು 7 ನಿಲ್ದಾಣಗಳಲ್ಲಿ ಮಾತ್ರ ಆರಂಭದಲ್ಲಿ ನಿಲುಗಡೆ ನೀಡಿ ಮೆಟ್ರೋ ಸೇವೆ ನೀಡಿದರೆ ಹೇಗೆ ಎಂಬುದರ ಬಗ್ಗೆ ಕಾರ್ಯಪ್ರವತ್ತರಾಗಿದ್ದಾರೆ.
ಆದ್ದರಿಂದ ಕೊನಪ್ಪನ ಅಗ್ರಹಾರ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಬಡಾವಣೆ, ಜಯದೇವ ಆಸ್ಪತ್ರೆ ಸೇರಿದಂತೆ ಆರಂಭದ ಮತ್ತು ಕೊನೆಯ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ನೀಡಿ ಈ ವರ್ಷಾಂತ್ಯಕ್ಕೆ ಈ ಮಾರ್ಗದಲ್ಲಿ ಮೆಟ್ರೋ ಸೇವೆ ಆರಂಭಿಸುವುದು ಉಳಿದಂತೆ ಹೊಸ ಮೆಟ್ರೋ ಸೆಟ್‌ಗಳು ಸೇರ್ಪಡೆ ಆಗುತ್ತಿರುವಂತೆ ನಿಲುಗಡೆ ನಿಲ್ದಾಣಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಸ್ತಾಪ ಮೆಟ್ರೋ ನಿಗಮದ ಮುಂದಿದೆ.
ಹಳದಿ ಮಾರ್ಗಕ್ಕೆ ಮೆಟ್ರೋ 90 ಬೋಗಿಗಳು ಅಗತ್ಯ : ಹಳದಿ ಮಾರ್ಗಕ್ಕೆ 15 ಮೆಟ್ರೋ ಸೆಟ್ (90 ಬೋಗಿ)ಗಳನ್ನು ನಿಗದಿ ಪಡಿಸಲಾಗಿದೆ. ಈ ಪೈಕಿ ಕನಿಷ್ಠ 5 ಮೆಟ್ರೋ ಬೋಗಿಗಳು ಲಭ್ಯವಾದರೆ ಹಳದಿ ಮಾರ್ಗದಲ್ಲಿ ತಕ್ಕ ಮಟ್ಟಿಗೆ ಮೆಟ್ರೋ ಸಂಪರ್ಕ ಸರಾಗವಾಗಲಿದೆ. ಆದರೆ ಈ ವರ್ಷದ ಅಂತ್ಯದ ಹೊತ್ತಿಗೆ ಮೂರು ಬೋಗಿಗಳು ಮಾತ್ರ ಲಭ್ಯವಾಗಬಹುದು. ನಮ,¾ ಆರಂಭಿಕ ಗಡುವಿನ ಪ್ರಕಾರ 2021ರ ಡಿಸೆಂಬರ್‌ಗೆ ಹಳದಿ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಬೇಕಿತ್ತು. ಆದರೆ ಈಗಾಗಲೇ ಮೂರು ವರ್ಷ ತಡವಾಗಿದ್ದು ಇನ್ನಷ್ಟು ವಿಳಂಬ ಮಾಡದೆ ಲಭ್ಯ ಸಂಪನ್ಮೂಲ ಬಳಸಿಕೊಂಡೇ ರೈಲು ಸಂಚಾರ ಆರಂಭಿಸಲು ಮೆಟ್ರೋ ಅಧಿಕಾರಿಗಳು ಉತ್ಸುಕರಾಗಿದ್ದಾರೆ.