Advertisement

ಕಾರ್ಪೋರೇಟರ್‌ ಆಗಲೂ ತಾಕತ್ತಿಲ್ಲದವರು ಮಂತ್ರಿ ಹೇಗಾದ್ರು?

09:57 AM Oct 06, 2017 | |

ಹಾಸನ: “ಬಿಬಿಎಂಪಿ ಸದಸ್ಯನಾಗಲೂ ತಾಕತ್ತಿಲ್ಲದ ಜಮೀರ್‌ ಅಹಮದ್‌ ಅವರನ್ನು ನಾವು ಶಾಸಕ, ಮಂತ್ರಿ ಮಾಡಿದೆವು. ಕುಮಾರಣ್ಣ ಮುಖ್ಯಮಂತ್ರಿಯಾಗಿದ್ದಾಗ ಚೆನ್ನಾಗಿ ಮೇಯ್ದ ಜಮೀರ್‌ ಹಾಗೂ ಚೆಲುವರಾಯಸ್ವಾಮಿ ಈಗ ಕಾಂಗ್ರೆಸ್‌ನ ಹುಲ್ಲುಗಾವಲಿನಲ್ಲಿ ಮೇಯಲು ಹೋಗುತ್ತಿದ್ದಾರೆ’ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ವ್ಯಂಗ್ಯವಾಡಿದರು.

Advertisement

“ಜಮೀರ್‌ ಅಹಮದ್‌ ಮುಸ್ಲಿಂ ನಾಯಕ, ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ
ಡಾ.ಜಿ.ಪರಮೇಶ್ವರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, “ದೇವೇಗೌಡರಿಗೆ ಜಮೀರ್‌ರನ್ನು ಪರಿಚಯಿಸಿದವನೇ ನಾನು. ದೇವೇಗೌಡರು ಚಾಮರಾಜಪೇಟೆಯಲ್ಲಿ ದರಿದ್ರ ನಾರಾಯಣ ರ್ಯಾಲಿ ಮಾಡದಿದ್ದರೆ ಜಮೀರ್‌ ಶಾಸಕನೂ ಆಗುತ್ತಿರಲಿಲ್ಲ ಎಂದರು. “ಆರ್‌.ವಿ. ದೇವರಾಜ್‌ ಸಾರಿಗೆ ಸಚಿವರಾಗಿದ್ದಾಗ ಅವರಿಗೆ ಟೋಪಿ ಹಾಕಿದ್ದ ಜಮೀರ್‌ ಈಗ ಜೆಡಿಎಸ್‌ನಲ್ಲಿ ಮೇಯಲು ಮೇವಿಲ್ಲವೆಂದು ಕಾಂಗ್ರೆಸ್‌ನ ಹುಲ್ಲುಗಾವಲಿಗೆ ಹೋಗುತ್ತಿದ್ದಾರೆ. ಚೆನ್ನಾಗಿ ಮೇಯ್ದು ದನ ಬೆದೆಗೆ ಬಂದಾಗ ಯಾರ ಮೇಲೆ ಬೇಕಾದರೂ ಎರಗುತ್ತವೆ. ಅದೇ ಬುದ್ಧಿ ಜಮೀರ್‌ಗೂ ಇದೆ’ ಎಂದರು.

ಮೂಲ ಕಾಂಗ್ರೆಸ್‌ನ ಮುಸ್ಲಿಮರೆಲ್ಲ ವಿಫ‌ಲರಾಗಿದ್ದಾರೆ. ಅವರಿಗೆ ಶಕ್ತಿಯಿಲ್ಲವೆಂದು ಜಮೀರ್‌ ಅಂಥವರನ್ನು ಕಾಂಗ್ರೆಸ್‌ಗೆ ಪರಮೇಶ್ವರ್‌ ಸೇರಿಸಿಕೊಳ್ಳುತ್ತಿದ್ದಾರೆ. ರೋಷನ್‌ಬೇಗ್‌, ಮೊಹಿದ್ದೀನ್‌, ಇಬ್ರಾಹಿಂ ಸೇರಿ ಹಲವು ಮುಸ್ಲಿಂ ನಾಯಕರು ಜನತಾ ಪರಿವಾರದಿಂದಲೇ ಹೋದವರು. ಜೆಡಿಎಸ್‌ ರಾಜಕೀಯ ತರಬೇತಿ ಕೊಟ್ಟು ಕಳುಹಿಸಿದೆ ಎಂದೂ ರೇವಣ್ಣ ಹೇಳಿದರು.

ಜೆಡಿಎಸ್‌ನವರು ಯಾವ ಮಣ್ಣಿನ ಮಕ್ಕಳು?
ಕೆ.ಆರ್‌.ಪೇಟೆ: “ಜೆಡಿಎಸ್‌ನವರು ಯಾವಾಗಲೂ ಮಣ್ಣಿನ ಮಕ್ಕಳು ಅಂತಾರೆ. ಹಾಗಿದ್ದರೆ ಅವರು ಯಾವ ಮಣ್ಣಿನ ಮಕ್ಕಳು. ಕೆಂಪು ಮಣ್ಣಾ ಅಥವಾ ಕಪ್ಪು ಮಣ್ಣಾ?’ - ಹೀಗೆಂದು ವ್ಯಂಗ್ಯವಾಡಿದವರು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌. ಪಟ್ಟಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ  ಕಾರ್ಯಕರ್ತರ ಬೃಹತ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. “ದೇವೇಗೌಡರು ಪ್ರಧಾನಿಯಾಗಿದ್ದಾಗ ನಾವು ಖುಷಿಪಟ್ಟಿದ್ದೆವು. ಆದರೆ, ಅವರು ರೈತರಿಗಾಗಿ ಏನು ಮಾಡಿದ್ರು? 9 ತಿಂಗಳು ಪ್ರಧಾನಿಯಾಗಿದ್ದ ದೇವೇಗೌಡರಿಗೆ ರೈತರ ಸಾಲ ನೆನಪಿಗೆ ಬರಲೇ ಇಲ್ಲ’ ಎಂದು ಪರಮೇಶ್ವರ್‌ ಹೇಳಿದರು.

ಮುಂದೆ ಪರಮೇಶ್ವರ್‌ ಅವರದ್ದೇ ಸರಕಾರ!
ನಾನು ಜೆಡಿಎಸ್‌ನಲ್ಲೇ ಇದ್ದಿದ್ದರೂ ಮುಸ್ಲಿಂ ಸಮುದಾಯದ ಮತಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಆ ದೇವರೇ ನನಗೆ ಜೆಡಿಎಸ್‌ ಬಿಡಿಸಿ ಕಾಂಗ್ರೆಸ್‌ ಸೇರಿಸಿದ್ದಾನೆ. ನಾವೆಲ್ಲರೂ ಒಂದಾಗಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರುವ ಮೂಲಕ ಡಾ.ಜಿ.ಪರಮೇಶ್ವರ್‌ ಅವರನ್ನು ಗೆಲ್ಲಿಸಿ ಕಳುಹಿಸಬೇಕು. ಮುಂದೆ ಪರಮೇಶ್ವರ್‌
ಅವರದ್ದೇ ಸರಕಾರ.
●ಜಮೀರ್‌ ಅಹಮದ್‌, ಶಾಸಕ

Advertisement

ನನ್ನ ಮತ್ತು ಮುಖ್ಯಮಂತ್ರಿ ನಡುವೆ ಯಾವುದೇ ಗೊಂದಲವಿಲ್ಲ. ಅವರ ನೇತೃತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಒಳ್ಳೆಯ ಕಾರ್ಯಕ್ರಮ, ಉತ್ತಮ ಯೋಜನೆ ನೀಡಿದ್ದಾರೆ. ಅದೆಲ್ಲವನ್ನೂ ಅವರು ಜನಸಮುದಾಯಕ್ಕೆ ತಿಳಿಸಬೇಕಾಗುತ್ತದೆ. ಅದಕ್ಕಾಗಿ ಅವರ ನೇತೃತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ. ಇದನ್ನು ಎಐಸಿಸಿ ಕೂಡ ಹೇಳಿದೆ.
●ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ

ಜಮೀರ್‌ ಅಹಮದ್‌ ರಾಜ್ಯದ ಸಮರ್ಥ ಮುಸ್ಲಿಂ ನಾಯಕ ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಹೇಳಿದ್ದಾರೆ. ಪರಮೇಶ್ವರ್‌ ಅವರು ಸಂಪುಟ ಸೇರುವ ಮೊದಲು, ಸೇರಿದ ನಂತರ ಮತ್ತು ಸಂಪುಟದಿಂದ ಹೊರಗಿರುವ ಸಂದರ್ಭಗಳಲ್ಲಿ ಆಡಿರುವ ಮಾತುಗಳನ್ನು ಕೇಳಿದ್ದೇನೆ. ಅವರ ಮಾತು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ.
●ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next